ಭ್ರಮಣ – ೧೦

ಭ್ರಮಣ – ೧೦

ಗುಂಡು ತಾತಗೆ ತೇಜಾ ಪಟ್ಟಣದಿಂದ ಒಬ್ಬ ಹಿರಿ ಅಧಿಕಾರಿಯೊಡನೆ ಬಂದಿದ್ದಾನೆಂದು ತಿಳಿದಾಕ್ಷಣ ಅವನು ಯುವಕರನ್ನು ಒಟ್ಟುಗೂಡಿಸಿದ.

ಬಂಡೇರಹಳ್ಳಿಯನ್ನು ಪ್ರವೇಶಿಸುವ ಮಾರ್ಗದಲ್ಲೇ ಕಾರಿನಿಂದಳಿದು ನಡೆಯುತ್ತಾ ಬರುತ್ತಿದ್ದರು ತೇಜಾ ಮತ್ತು ಸ್ಕ್ವಾಡಿನ ಮುಖ್ಯಸ್ಥರು. ಅಕ್ಕಪಕ್ಕದಲ್ಲಿನ ಕೆಲ ಗುಡಿಸಲುಗಳನ್ನು ದಾಟಿದ ಮೇಲೆ ಸುತ್ತೂ ನೋಡುತ್ತಾ ಕೇಳಿದರು ತೇಜಾನ ಅಧಿಕಾರಿ.

“ಕೊಲೆಗಳಾದ ಸೂಳೆಗೇರಿ ಎಲ್ಲಿದೆ?”

“ಅದೇನು ಸರ್ ಸ್ವಲ್ಪ ಮುಂದೆ ಬಲಕ್ಕೆ ನೋಡಿ”

ತೇಜಾ ಹೇಳಿದ ಕಡೆ ಕಣ್ಣು ಹಾಯಿಸಿದರವರು. ಒಬ್ಬ ನಡುವಯಸ್ಕ ಇಬ್ಬರು ಹುಡುಗಿಯರೊಡನೆ ಮಾತಾಡುತ್ತಾ ನಿಂತಿದ್ದ. ಅರೆಕ್ಷಣ ಮಾತ್ರ ಅತ್ತ ನೋಡಿ ತೇಜಾನ ಕಡೆ ತಿರುಗಿ ಕೇಳಿದರವರು.

“ನೀನಿನ್ನೂ ಅವರ ಕಡೆ ಗಮನ ಹರಿಸಿಲ್ಲವೆ?”

“ಸಮಯವೆಲ್ಲಿದೆ ಸರ್! ನಡುವೆ ಈ ಸಿದ್ಧಾನಾಯಕನ ಗೋಳು ಬೇರೆ”

“ರಾಮನಗರಕ್ಕೆ ಹೋದಾಕ್ಷಣ ವ್ಯಾನ್ ಕಳಿಸುತ್ತೇನೆ. ಎಲ್ಲರನ್ನೂ ಅದರಲ್ಲಿ ಹಾಕಿ ಕಳಿಸಿಬಿಡು. ಮತ್ತೆ ಈ ವ್ಯವಹಾರ ಇಲ್ಲಿ ಆರಂಭವಾಗಬಾರದು” ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು.

“ಸರಿ ಸರ್” ಎಂದ ತೇಜ. ಇಬ್ಬರಲ್ಲಿ ಯಾರೂ ಇನ್ನೊಮ್ಮೆ ಆ ಹೆಣ್ಣುಗಳಿರುವ ಗುಡಿಸಲಿನ ಕಡೆ ಕಣ್ಣು ಹಾಯಿಸಲಿಲ್ಲ. ತೇಜಾನನ್ನು ಗುರಿತಿಸಿದ ಆ ನಡುವಯಸ್ಕ ಹುಡುಗಿಯರನ್ನು ಒಳಗೆ ಕಳಿಸಿ ತಾನೂ ಮಾಯವಾದ. ಹಾಗೇ ಅವರಿಬ್ಬರೂ ಇನ್ನೂ ಸ್ವಲ್ಪ ದಾರಿ ಸವಿಸಿದ ಮೇಲೆ ಎದುರಾಯಿತು ಸಾರಾಯಿಖಾನೆ. ರಸ್ತೆಯ ಮೇಲೆ ನಿಂತೇ ಅದರೊಳಗೆ ನೋಟ ಹಾಯಿಸಿದರಿಬ್ಬರು. ಸಂಜೆಯಾಗುತ್ತಿದ್ದುದರಿಂದ ಅಲ್ಲಿ ಸಾಕಷ್ಟು ಜನ ಕುಡುಕರು ಸೇರಿದ್ದರು. ತದೇಕಚಿತ್ತದಿಂದ ಒಳಗಿನ ದೃಶ್ಯವನ್ನೇ ಕೆಲ ಕ್ಷಣಗಳು ನೋಡಿ ಹೇಳಿದರು ಮುಖ್ಯಸ್ಥರು

“ಬಂಡೇರಹಳ್ಳಿ ಸಾಕಷ್ಟು ದೊಡ್ಡದಿರುವ ಹಾಗಿದೆ”

“ಹೌದು ಸರ್! ಈಗಿದು ಸಾಕಷ್ಟು ಬೆಳೆದಿದೆಯಂತೆ ಅದಕ್ಕೂ ಕಲ್ಲಕ್ಕನೇ ಕಾರಣ ಎಂದು ಮಾತಾಡಿಕೊಳ್ಳುತ್ತಾರೆ ಇಲ್ಲಿಯ ಜನ” ಹೇಳಿದ ತೇಜ. ಅದರ ಬಗ್ಗೆಯೇ ಯೋಚಿಸುತ್ತಿರುವ ಹಾಗೆ ಕಪೋಲ ಕರೆಯಲಾರಂಭಿಸಿದರು ಸ್ಕ್ವಾಡಿನ ಮುಖ್ಯಸ್ಥರು.

ಅತ್ತ ಇತ್ತ ನೋಡುತ್ತಾ ಜನ ಸಂಚಾರ ಹೆಚ್ಚಿರುವ ಕಡೆ ಬಂದಾಗ ಒಬ್ಬ ಯುವಕ ತೇಜಾನೆದುರು ಬಂದು ಕೈಜೋಡಿಸಿ ನಮಸ್ಕರಿಸಿ ಹೇಳಿದ

“ನಾವು ನಿಮಗಾಗೇ ಕಾಯುತಿದ್ದೆವು ಸರ್!”

ಆ ಮಾತು ಬೆಳೆಸುವುದು ಬೇಡವೆಂದುಕೊಂಡು ಶ್ರೀವಾಸ್ತವರನ್ನು ಅವನಿಗೆ ಪರಿಚಯಿಸಿದ. ಅವರು ಪಟ್ಟಣದಿಂದ ಬಂದಿರುವ ಸ್ಕ್ವಾಡಿನ ಮುಖ್ಯಸ್ಥರೆಂದು, ಕಮೀಷನರ ಸಾಹೇಬರ ಸಮದರ್ಜೆಯವರೆಂದು ಬಂಡೇರಹಳ್ಳಿಯನ್ನು ನೋಡಲು ಬಂದಿದ್ದಾರೆಂದು ಹೇಳಿದಾಗ ಅವನು ಆದರ ಗೌರವಗಳಿಂದ ಎರಡು ಕೈಗಳನ್ನು ಜೋಡಿಸಲು ಅವನು ಮೇಲೆತ್ತಿದಾಗ ಅವನನ್ನು ಹತ್ತಿರ ಎಳೆದುಕೊಂಡ ಮುಖ್ಯಸ್ಥರು ಹೆಗಲ ಮೇಲೆ ಕೈಹಾಕಿ ಹೇಳಿದರು

“ನಡಿ ನೀನೇ ನನಗೆ ಬಂಡೇರಹಳ್ಳಿಯನ್ನು ತೋರಿಸು”

ಕಮೀಷನರ್‌ರಂತಹ ಅಧಿಕಾರಿ ತನ್ನ ಹೆಗಲ ಮೇಲೆ ಕೈಹಾಕಿ ಆತ್ಮೀಯವಾಗಿ ಮಾತಾಡಿದ್ದು ಆ ಯುವಕನಲ್ಲಿ ಎಲ್ಲಿಲ್ಲದ ಸಂತಸ, ಹೆಮ್ಮೆಗಳನ್ನು ಹುಟ್ಟಿಸಿತು.

“ಖಂಡಿತ ತೂರಿಸುತ್ತೇನೆ ಸರ್! ಈ ಇನ್ಸ್‍ಪೆಕ್ಟರ್ ಸಾಹೇಬರು ಬಂದಾಗಿನಿಂದ ನಮ್ಮ ಹಳ್ಳಿಗೆ ಕಳೆ ಬಂದಿದೆ” ಉತ್ಸಾಹದ ದನಿಯಲ್ಲಿ ಹೇಳಿದನಾ ಯುವಕ.

“ಓ ಹಾಗೋ! ಯಾಕಪ್ಪಾ ನಿಮ್ಮೊಡನೆ ಡಾನ್ಸು ಮಾಡುತ್ತಾರೇನು?” ನಗುತ್ತಾ ಕೇಳಿದರು ಸ್ಕ್ವಾಡಿನ ಮುಖ್ಯಸ್ಥರು.

“ಬಹಳ ಒಳ್ಳೆಯವರು ಸರ್! ಮಾಡೆಂದರೆ ಖಂಡಿತ ಮಾಡುತ್ತಾರೆ. ನೀವು ನಿನ್ನಿನ ಕಾರ್ಯಕ್ರಮ ನೋಡಬೇಕಾಗಿತ್ತು ಸರ್” ಹೆಚ್ಚಿದ ಸಂತಸದ ದನಿಯಲ್ಲಿ ಹೇಳಿದನವ.

“ನಾನೂ ನಿಮ್ಮೊಡನೆ ಡ್ಯಾನ್ಸ್ ಮಾಡಲೇ” ಹಾಸ್ಯದ ದನಿಯಲ್ಲಿ ಕೇಳಿದರವರು

“ಮಾಡುತ್ತಿರಾ ಸರ್!… ನಿಜವಾಗೂ…”

“ಯಾಕಪ್ಪಾ ನನಗೆ ಡ್ಯಾನ್ಸ್ ಬರುವುದಿಲ್ಲವೆಂದುಕೊಂಡೆಯಾ! ಅಥವಾ ನಾನು ಮುದುಕ ಅದಕ್ಕೆ ಲಾಯಕ್ಕಿಲ್ಲ ಎಂದುಕೊಂಡೆಯಾ”

ಅದಕ್ಕೆ ಲಗುಬಗೆಯ ದನಿಯಲ್ಲಿ ತಪ್ಪು ಮಾಡಿದವನಂತೆ ಹೇಳಿದನಾ ಯುವಕ

“ಇಲ್ಲ ಸರ್… ಇಲ್ಲ… ಯಾರು ಸರ್ ನಿಮ್ಮನು ಮುದುಕರೆನ್ನುವವರು. ನೀವಿನ್ನೂ ಸ್ಮಾರ್ಟ್ ಆಗಿದ್ದೀರಿ”

ಮೂವರೂ ಮುಂದೆ ನಡೆದಂತೆ ಕೆಲವರು ಅವರನ್ನು ಅಚ್ಚರಿಯಿಂದ ಕೆಲವರು ಗೌರವದಿಂದ ನೋಡುತ್ತಿದ್ದರು. ಅವರ ಜತೆ ಜತೆಗೆ ಕೆಲ ಯುವಕರು ನಡೆಯತೊಡಗಿದರು. ಅವರು ಪೋಲೀಸ್ ಸ್ಟೇಷನ್ನಿಗೆ ಬರವದರಲ್ಲಿ ಅವರ ಸಂಖ್ಯೆ ಹೆಚ್ಚಾಗಿತ್ತು. ಪೊಲೀಸ್ ಸ್ಟೇಷನ್ನಿನೆದುರು ಗುಂಡುತಾತ ಸುಮಾರು ಮುವತ್ತು, ನಲವತ್ತು ಜನರೊಡನೆ ಕಾಯುತ್ತಿದ್ದ. ಅವನ ಕೈಯಲ್ಲಿ ದಪ್ಪನೆಯ ಹೂವಿನ ಹಾರವಿತ್ತು. ತಮ್ಮ ಕಣ್ಣನ್ನು ತಾವೇ ನಂಬಲಾಗದವರಂತೆ ಸ್ಕ್ವಾಡಿನ ಮುಖ್ಯಸ್ಥರು ತೇಜಾನ ಕಡೆ ನೋಡಿದರು. ಅವನಿಗೂ ಇದೊಂದೂ ಅರ್ಥವಾಗಲಿಲ್ಲ. ಆ ದೃಶ್ಯ ಅವನಲ್ಲಿ ಶಬ್ದಗಳಿಗೆ ನಿಲುಕಲಾರದಂತಹ ಭಾವನೆಗಳನ್ನು ಹುಟ್ಟಿಸಿದವು. ತನಗೇನೂ ಗೊತ್ತಿಲ್ಲ ಎಂಬಂತೆ ಮುಖ್ಯಸ್ಥರ ಕಡೆ ನೋಡಿದ. ಅವರು ಆ ಗುಂಪಿನ ಹತ್ತಿರವಾಗುತ್ತಿದ್ದಂತೆ ಕೂಗಿದ ಒಬ್ಬ

“ಕಮೀಷನರ್ ಸಾಹೇಬರಿಗೆ ಜಯವಾಗಲಿ”

ಪೋಲಿಸ್ ಸ್ಟೇಷನ್‌ನ ಹತ್ತಿರ ತೇಜಾ ಮತ್ತು ಸ್ಕ್ವಾಡ ಮುಖ್ಯಸ್ಥರ ಹಿಂದಿನವರು ಕೂಡ ಆದಕ್ಕೆ ತಮ್ಮ ದನಿಯನ್ನು ಕೂಡಿಸಿದರು. ಎತ್ತರದ ದನಿಯ ಆ ಜಯಕಾರ ಇಡೀ ಬಂಡೇರಹಳ್ಳಿಯಲ್ಲಿ ಪ್ರತಿಧ್ವನಿಸುವಂತಿತ್ತು.

“ಇನ್ಸ್‌ಪೆಕ್ಟರ್ ಸಾಹೇಬರಿಗೆ ಜಯವಾಗಲಿ” ಎಂದು ಕೂಗಿದ ಮತ್ತೊಬ್ಬ. ಅದಕ್ಕೂ ಹಾಗೆ ಎಲ್ಲರೂ ತಮ್ಮ ದನಿಯನ್ನು ಸೇರಿಸಿದರು. ಏನು ಮಾಡಬೇಕು, ಏನು ಮಾತಾಡಬೇಕು ಎಂಬುವುದು ತೋಚದಂತಹ ಸ್ಥಿತಿಯಲ್ಲಿದ್ದ ತೇಜಾ, ಇದು ಪೂರ್ವನಿಯೋಜಿತ ಕಾರ್ಯಕ್ರಮದಂತೆ ಕಾಣುತ್ತಿದ್ದರೂ ಅದು ಹಾಗಲ್ಲ ಏಕಾ‌ಏಕಿ ಸ್ಫೂರ್ತಿಯಿಂದ ಹುಟ್ಟಿಕೊಂಡ ಸಂತಸವೆಂದು ಸ್ಕ್ವಾಡ್‌ನ ಮುಖ್ಯಸ್ಥರಿಗೆ ಗೊತ್ತಾಯಿತು. ಅಸೂಯೆ ಪಡುವಂತೆ ಜನಪ್ರಿಯತೆಯನ್ನು ಸಂಪಾದಿಸಿದ್ದಾನೀ ತೇಜಾ ಎನಿಸಿತು.

ಗುಂಡು ತಾತ ಸ್ಕ್ವಾಡಿನ ಮುಖ್ಯಸ್ಥರಿಗೆ ಹೂವಿನ ಹಾರ ಹಾಕಿದ. ಎಲ್ಲರೂ ಕಿವಿ ಕಿವುಡಾಗುವಂತೆ ಚಪ್ಪಾಳೆ ತಟ್ಟಿದರು. ಹಾರ ತೆಗೆದು ಪಕ್ಕದಲ್ಲಿ ನಿಂತಿದ್ದ ಕಾನ್ಸ್‌ಟೇಬಲ್‌ನಿಗೆ ಕೊಟ್ಟು ತಾತನನ್ನು ಬಿಗಿದಪ್ಪಿದರು ಸ್ಕ್ವಾಡಿನ ಮುಖ್ಯಸ್ಥರು, ಅವನಿಗೆ ಪರಮಾನಂದ. ಅಪ್ಪುವಿಕೆ ಮುಗಿದ ಮೇಲೆ ಮತ್ತೊಮ್ಮೆ ಕೂಗಿದ

“ಕಮೀಶನರ್ ಸಾಹೇಬರಿಗೆ ಜಯವಾಗಲಿ”

ಎಲ್ಲರ ಕಂಠದಿಂದ ಹೊರಟ ಆ ಜಯನಾದ ಸುತ್ತಲೂ ಮಾರ್ದನಿಸಿತ್ತು.

“ನಿಮ್ಮ ಮಾತನ್ನು ಇವರೆಲ್ಲರೂ ಕೇಳುತ್ತಾರೆಯೇ” ತಾತನಿಗೆ ಕೇಳಿದರು ಸ್ಕ್ವಾಡಿನ ಮುಖ್ಯಸ್ಥರು.

“ಕೇಳುತ್ತಾರೆ ಸ್ವಾಮಿ” ಜನರ ಗದ್ದಲದಲ್ಲಿ ಅವರಿಗೆ ಕೇಳಿಸುವಂತೆ ಹೇಳಿದ.

“ನಾನಿನ್ನೂ ಬಹಳ ಹೊತ್ತು ಇರುತ್ತೇನೆ. ಎಲ್ಲರೊಡನೆ ಮಾತಾಡುತ್ತೇನೆ. ಎಲ್ಲವನ್ನೂ ನೋಡುತ್ತೇನೆಂದು ಹೇಳಿ”

ಸ್ಕ್ವಾಡಿನ ಮುಖ್ಯಸ್ಥರ ಮಾತನ್ನು ಎಲ್ಲರಿಗೂ ಕೇಳಿಸುವಂತೆ ಕೂಗಿ ಹೇಳಿದ ಗುಂಡು ತಾತ. ಜನಸಮೂಹದಲ್ಲಿ ಗದ್ದಲ ಕಡಿಮೆಯಾಯಿತು. ಬದಿಯಲ್ಲೇ ನಿಂತಿದ್ದ ತೇಜಾನಿಗೆ ಕಿವಿಯ ಬಳಿ ಬಾಯಿ ತಂದು ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು

“ಒಂದೇ ಒಂದು ಕಡಿಮೆ ಇದೆ”

“ಏನು ಸರ್?” ಕೌತುಕ ದನಿಯಲ್ಲಿ ಕೇಳಿದ ತೇಜಾ.

“ಫೋಟೋಗ್ರಾಫರ್‍ಸ್ ಮತ್ತು ವಿಡಿಯೋ ಕ್ಯಾಮರಾಗಳು”

ಅವರ ಹುಡುಗಾಟಿಕೆಯ ಮಾತನ್ನು ಗಂಭೀರವಾಗಿ ಪರಿಗಣಿಸಿ ಹೇಳಿದ ತೇಜಾ

“ಇದೆಲ್ಲಾ ನನಗೆ ಗೊತ್ತಿಲ್ಲ ಸರ್! ನೀವಿಲ್ಲಿ ಬರುವೀರೆಂಬುವುದೂ ಗೊತ್ತಿರಲಿಲ್ಲ”

ಅವನ ಮಾತನ್ನು ಕೇಳಿಸಿಕೊಳ್ಳದವರಂತೆ ಹೇಳಿದರು ಅಧಿಕಾರಿ

“ಸಿ.ಎಂ. ಸಾಹೇಬರು ವಿಡಿಯೋ, ಫೋಟೋಗಳನ್ನು ನೋಡಿದ್ದರೆ ಅವರು ನನ್ನ ತಮ್ಮ ಪ್ರತಿಸ್ಪರ್ಧಿ ಎಂದು ಭಾವಿಸುತ್ತಾರೆಂಬುವುದರಲ್ಲಿ ಸಂದೇಹವಿಲ್ಲ.”

ಅವರು ಹುಡುಗಾಟದ ಮಾತನ್ನು ಅರ್ಥ ಮಾಡಿಕೊಂಡು ನಕ್ಕ ತೇಜ.

ಹಿರಿಯನೊಬ್ಬನನ್ನು ಒಳಬರುವಂತೆ ಹೇಳಿ ಪೋಲೀಸ್ ಸ್ಟೇಷನ್‌ನೊಳ ನಡೆದರು ಸ್ಕ್ವಾಡಿನ ಮುಖ್ಯಸ್ಥರು. ಅವರ ಹಿಂದೆಯೇ ಅನುಸರಿಸಿದರು ತೇಜಾ ಮತ್ತು ಗುಂಡು ತಾತಾ. ತೇಜಾನ ಕುರ್ಚಿಯಲ್ಲಿ ಆಸೀನರಾದರು ಮುಖ್ಯಸ್ಥರು.

ಅವರೆದುರು ಎರಡು ಕುರ್ಚಿಗಳು ಮಾತ್ರ ಇದ್ದವು ಅಲ್ಲಿ ತೇಜಾ ಮತ್ತು ತಾತ ಕುಳಿತರು. ಎದುರಿಗೆ ಕುಳಿತ ಹಿರಿಯನನ್ನೇ ನೋಡುತ್ತಾ ಕೇಳಿದರು ಶ್ರೀವಾಸ್ತವ

“ನಿಮ್ಮ ಹೆಸರೇನು?”

ಯಾವ ಅಳುಕೂ ಇಲ್ಲದೆ ಕೂಡಲೇ ಹೇಳಿದನಾತ

“ಇವರೆಲ್ಲಾ ನನ್ನ ತಾತ, ಗುಂಡು ತಾತ ಎಂದು ಕರೆಯುತ್ತಾರೆ ನಿಮಗೆ ಸರಿತೋರಿದ ಹಾಗೆ ಕರೆಯಬಹುದು”

“ನೀವಂತೂ ನನ್ನ ತಾತನ ವಯಸ್ಸಿನವರಲ್ಲ.. ಹೋಗಲಿ ಈ ಕಲ್ಲಕ್ಕಳ ಬಗ್ಗೆ ನಿಮ್ಮದೇನು ಅಭಿಪ್ರಾಯ?”

ಇಂತಹ ಪ್ರಶ್ನೆ ಬರಬಹುದೆಂದು ಊಹಿಸಿರಲಿಲ್ಲ ತಾತ. ಅವನ ಮುಖಭಾವ ಒಮ್ಮೆಲೆ ಬದಲಾಯಿತು. ಸಿಟ್ಟಿನ, ವ್ಯಂಗ್ಯ ಮಿಳಿತ ದನಿಯಲ್ಲಿ ಕೇಳಿದ

“ನೀವು ಅವಳನ್ನು ಹಿಡಿಯಲು, ಕೊಲ್ಲಲು ಬಂದಿರುವಿರಾ ಸ್ವಾಮಿ!”

ಅವನ ಮುಖವನ್ನ ಗಮಿಸುತ್ತಿದ್ದ ಮುಖ್ಯಸ್ಥರು ನಕ್ಕು ಹೇಳಿದರು.

“ನೀವು ಆಕೆಯನ್ನು ಎಷ್ಟು ಪ್ರೀತಿಸುತ್ತೀರೆಂದು ಕೇಳಿದೆನಷ್ಟೆ! ಕೋಪ ಬೇಡ. ನಾನೂ ನಿಮ್ಮ ತೇಜಾನಂತಹವನೆ”

ತಾತನ ಮುಖದಲ್ಲಿನ ಸಿಟ್ಟಿನ ಗಂಟುಗಳು ಸಡಿಲಗೊಂಡವು. ಎಲ್ಲೋ ಕಳೆದುಹೋದಂತ ಭಾವುಕ ದನಿಯಲ್ಲಿ ಹೇಳಿದ

“ಕಲ್ಲಕ್ಕ, ಕಾಳಿ, ಜಗದಾಂಭೆ, ಆಕೆ ಸಾಮಾನ್ಯ ಹೆಣ್ಣಲ್ಲ ಸ್ವಾಮಿ ದೇವತೆ, ಆಕೆಯ ಕಾರಣವಾಗೇ ನಾವೀಗ ಇಲ್ಲಿ ಸುಖದಿಂದ ಬಾಳುತ್ತಿದ್ದೇವೆ”

ಆತನ ಭಾವುಕ ಮಾತುಗಳು ಕೇಳಿದ ತೇಜಾ ತಾನು ಅಂತಹವಳ ಪತಿ ಯಾದ್ದದು ಅದೃಷ್ಟ ಎಂದುಕೊಂಡ. ಹಗುರ ದನಿಯಲ್ಲಿ ಕೇಳಿದರು ಮುಖ್ಯಸ್ಥರು.

“ದೇವತೆಯರು ಕೊಲೆಗಳನ್ನು ಮಾಡುತ್ತಾರೆಯೇ?”

“ಕೊಲೆಗಳಲ್ಲ ಸ್ವಾಮಿ ಅವು ಭೂದೇವಿಗೆ ಪಾಪಿಯರ ರಕ್ತ ಬೇಕಾಗಿದೆ. ಅದಕ್ಕೆ ನಮ್ಮ ಕಾಳಿ ಈ ಪಾಪಿಗಳ ರಕ್ತದಿಂದ ತರ್ಪಣ ಕೊಡುತ್ತಿದ್ದಾಳೆ. ಚಂಡಾಲರನ್ನು ಚಚ್ಚಿ ಹಾಕುತ್ತಿದ್ದಾಳೆ. ಕಾಳಿಕಾದೇವಿ ಮಾಡಿದ್ದೇನು ಅದೇ. ಆಕೆ ದೇವತೆ ಅಲ್ಲವೇ! ಹಾಗೇ ನಮ್ಮ ಕಲ್ಲಕ್ಕ ಕಲಿಯುಗದ ದೇವತೆ. ಈ ಕಲಿಯುಗದ ಕಾಳಿ ಯಾವುದಾದರೂ ಒಬ್ಬ ಒಳ್ಳೆಯವನನ್ನು ಬಲಿ ತೆಗೆದುಕೊಂಡ ಉದಾಹರಣೆ ಕೊಡಿ ನೋಡುವ” ಮತ್ತೆ ತಾತನ ಮಾತು ಭಾವಾತಿರೇಕದಿಂದ ತುಂಬಿತ್ತು. ಇನ್ನೊಮ್ಮೆ ಕಲ್ಯಾಣಿ ತನ್ನವಳು, ತನ್ನ ಮಡದಿ ಎಂದು ನೆನಿಸಿಕೊಂಡು ತೇಜಾನ ಎದೆ ಗರ್ವದಿಂದ ಉಬ್ಬಿತು.

“ಆಕೆ ನಿಮಗೆ ಅಂತಹದೇನು ಉಪಕಾರ ಮಾಡಿದ್ದಾಳೆ ಅವನ ಮುಖದಿಂದ ನೋಟ ಸರಿಸದೇ ಕೇಳಿದರು ಅಧಿಕಾರಿ.

“ಕಲ್ಲಕ್ಕ ಬರುವ ಮುನ್ನ ವೈಭವ ಇಲ್ಲಿಯ ಸ್ಥಿತಿಯನ್ನು ನೋಡ ಬೇಕಾಗಿತ್ತು ಸ್ವಾಮಿ! ಹೊಲದಲ್ಲಿ ಕೆಲಸ ಮಾಡುವವರು ಒತ್ತೆ ಆಳುಗಳಾಗಿದ್ದರು. ಭೂಸ್ವಾಯರು ಅವರಿಗೆ ಕೊಟ್ಟ ಸಾಲದ ಬಡ್ಡಿಯಲ್ಲಿಯೇ ಹೋಗುತ್ತಿತ್ತು ಕೆಲಸ ಹಣ. ಅದೂ ಅವರಾಗಿ ಕೊಡುತ್ತಿದ್ದುದು ಬಿಡಿಕಾಸು. ಅಲ್ಪಸ್ವಲ್ಪ ಜಮೀನು ಇರುವವರ ಜಮೀನನ್ನು ಅಡವಾಗಿಟ್ಟುಕೊಂಡು ಕೊಟ್ಟ ಹಣ ರೈತರು ಮರಳಿಸುವ ಸ್ಥಿತಿಯಲ್ಲಿ ಇರಲಿಲ್ಲ. ಬಡ್ಡಿ ಬೆಳೆಯುತ್ತಾ ಹೋಗಿ ಕೊನೆಗೆ ಆ ಹೂಲ ಕೂಡ ಅವರದೇ ಆಗಿಬಿಟ್ಟಿತು. ನಾಲ್ಕಾರು ಎಕರೆ ಹೊಲವಿದ್ದವರು ಕೂಲಿ ಆಳುಗಳಾಗಿದ್ದರು. ಕೂಲಿ ಆಳುಗಳಾದವರಿಗೆ ಎರಡು ಹೊತ್ತಿನ ಊಟ ಸಿಗುವುದು ಕಷ್ಟವಾಗಿತ್ತು. ಒಂದು ದಿನ ಬಂದ ಕಲ್ಲಕ ನಯವಾಗಿ ರೈತರಿಗೆ, ಅದರಲ್ಲಿ ಕೂಲಿ ಮಾಡುವವರಿಗೆ ನ್ಯಾಯ ಒದಗಿಸಬೇಕೆಂದು ಒಬ್ಬ ಜಮೀನುದಾರನಿಗೆ ಹೇಳಿದಳು. ಅವಳನ್ನು ಹುಚ್ಚಿಯನ್ನು ಅಟ್ಟುವಂತೆ ಅಟ್ಟಿಬಿಟ್ಟ ಹಣದ ಮದದಿಂದ ಕೊಬ್ಬಿ ಭೂಸ್ವಾಮಿ. ಅದೇ ದಿನ ಹಾಡುಹಗಲಲ್ಲೇ ಕಲ್ಲಕ್ಕ ಅವನ ರಕ್ತವನ್ನು ಭೂದೇವಿಗೆ ಅರ್ಪಿಸಿ ಮಿಕ್ಕ ಇಂತಹ ಅತ್ಯಾಚಾರಗಳನ್ನು ಮಾಡುತ್ತಿದ್ದ ಜಮೀನುದಾರರಿಗೆ ಎಚ್ಚರಿಸಿ ಹೋದಳು. ಆಗಲೂ ಅವಳ ಮಾತನ್ನು ಯಾರೂ ಕೇಳಲಿಲ್ಲ. ಪೋಲಿಸಿನವರನ್ನು ಕರೆತಂದರು ಅವರು ಬಂದು ಸಿಕ್ಕಸಿಕ್ಕ ಬಡಬಗ್ಗರನ್ನೆಲ್ಲಾ ಹಿಡಿದೊದ್ದು ಚಿತ್ರಹಿಂಸೆ ಕೊಟ್ಟರು. ಅದೇ ದಿನ ಒಬ್ಬ ಪ್ರಮುಖ ಪೋಲೀಸ್ ಅಧಿಕಾರಿಯ ರಕ್ತವನ್ನು ತರ್ಪಣ ಬಿಟ್ಟಳು. ಹೀಗೆ ಇನ್ನೊಂದೆರಡು ಸಲ ಆದನಂತರ ಜಮೀನುದಾರರಿಗೇ ಅಲ್ಲ ಪೋಲಿಸಿನವರಿಗೂ ಅವಳೆಂದರೆ ಭಯ ಹುಟ್ಟಿಬಿಟ್ಟಿತ್ತು. ತಮ್ಮ ರಕ್ತ ತರ್ಪಣ ಎಲ್ಲಿ ಆಗುವುದೋ ಎಂಬ ಭಯದಿಂದ ಭೂಮಾಲಿಕರು ಕಲ್ಲಕ್ಕ ಹೇಳಿದ ಹಾಗೆ ಕೇಳಲಾರಂಭಿಸಿದರು. ಯಾರ್‍ಯಾರು ತಮ್ಮ ತಮ್ಮ ಹೊಲಗಳನ್ನು ಅಡುವಿಟ್ಟು, ಕಳೆದುಕೊಂಡಿದ್ದರೋ ಅದು ಮತ್ತವರಿಗೆ ವಾಪಸು ಸಿಕ್ಕಿತು. ಈಗ ಇಲ್ಲಿ ಎಲ್ಲರಿಗೂ ನ್ಯಾಯವಾದ ಕೂಲಿ ಸಿಗುತ್ತಿದೆ ಎಂದರೆ ಅದು ಆ ದೇವತೆಯ ಕಾರಣವಾಗೇ. ಇನ್ನೇನು ಮಾಡಬೇಕು ಸ್ವಾಮಿ ನಮ್ಮಂತಹ ಬಡರೈತರಿಗೆ! ಇದಕ್ಕಿಂತ ಹೆಚ್ಚಿನದೇನು ಬೇಕು ಸ್ವಾಮಿ! ಈಗ ನೀವೇ ನ್ಯಾಯವಾಗಿ ಹೇಳಿ ಆಕೆ ದೇವತೆಯೇ ಅಲ್ಲವೋ” ಭಾವುಕ ದನಿಯಲ್ಲಿ ಕಲ್ಯಾಣಿಯ ವೃತ್ತಾಂತ ಹೇಳಿದ ತಾತ. ಕಪೋಲವನ್ನು ಕರೆಯುವ ಕೆಲಸ ಆರಭಿಸಿದರು. ಅಧಿಕಾರಿ. ಕಲ್ಯಾಣಿ ಇಷ್ಟೆಲ್ಲಾ ಹೇಗೆ ಮಾಡಿರಬಹುದೆಂಬ ಊಹೆಯಲ್ಲಿ ನಿರತನಾದ ತೇಜ. ತಾತನ ಮಾತುಗಳು ಇನ್ನೂ ಕಿವಿಯಲ್ಲಿ ಹೂಂಗುಟ್ಟುತ್ತಿರುವಂತಿತ್ತು. ಆ ಸ್ವಲ್ಪ ಹೊತ್ತಿನ ಮೌನವನ್ನು ಮುರಿದರು ಅಧಿಕಾರಿ

“ನೀವು ಹೇಳುವುದೇ ಸರಿ ಎನಿಸುತ್ತದೆ. ಕಾಡಿನಲ್ಲಿ ಇಲ್ಲದ ಕಷ್ಟಗಳನ್ನು ಅನುಭವಿಸುತ್ತಾ ಇಂತಹದನ್ನೆಲ್ಲಾ ಮಾಡುವವಳು ದೇವತೆಯೇ ಆಗಿರಬೇಕು”

ಅವರ ಮನದಾಳದಿಂದ ಬಂದಂತಿತ್ತು ಮಾತು.

“ಇವರೂ ಬಹಳ ಒಳ್ಳೆಯವರು ಸ್ವಾಮಿ! ಸಾಯುತ್ತಿರುವ ಒಬ್ಬ ಬಡ ಹೆಣ್ಣಿನ ಪ್ರಾಣ ಕಾಪಾಡಿದ್ದಾರೆ! ತೇಜಾನ ಕಡೆ ನೋಡುತ್ತಾ ಹೇಳಿದ ತಾತ ಅಚ್ಚರಿಯಿಂದ ತೇಜಾನ ಕಡೆ ಪ್ರಶ್ನಾರ್ಥಕವಾಗಿ ನೋಡಿದರು ಅವನ ಅಧಿಕಾರಿ. ಆ ವಿಷಯ ಮರೆತೇ ಹೋಗಿದ್ದ ತೇಜಾ ಹಗುರ ದನಿಯಲ್ಲಿ ಹೇಳಿದ

“ಏನಿಲ್ಲ ಸರ್! ಜ್ವರದಿಂದ ಪರಿತಪಿಸುತ್ತಿದ್ದ ಒಬ್ಬಳನ್ನು ನಮ್ಮ ಜೀಪಿನಲ್ಲಿ ರಾಮನಗರಕ್ಕೆ ಕಳಿಸಿದ್ದೇ ಅಷ್ಟೆ”

ಆ ಮಾತು ಅಷ್ಟು ಮುಖ್ಯವಲ್ಲವೆಂಬಂತೆ ತಾತನನ್ನ ಕೇಳಿದರು.

“ಈ ಸಿದ್ಧಾನಾಯಕ್ ಎಂತಹವರು?”

ಗುಂಡುತಾತನ ತುಟಿಗಳ ನಡುವೆ ವೇದಾಂತಿಯಂತಹ ನಗೆ ಸುಳಿಯಿತು ಅದೇ ಧಾಟಿಯಲ್ಲಿ ಹೇಳಿದ

“ಹಣ ಮನುಷ್ಯರಲ್ಲಿ ಇಷ್ಟು ಸೊಕ್ಕು ಯಾಕೆ ತುಂಬುತ್ತದೋ ಆ ಪರಮಾತ್ಮನೇ ಬಲ್ಲ ಅದರೊಡನೆ ಅವರೀಗ ಪಂಚಾಯತಿ ಪ್ರೆಸಿಡೆಂಟ್ ಬೇರೆ! ನಮ್ಮ ಇನ್ಸ್‌ಪೆಕ್ಟರ್ ಸಾಹೇಬರು ಈಗಾಗಲೇ ಅವರ ಸ್ವಲ್ಪಮಟ್ಟಿನ ಸೊಕ್ಕನ್ನು ಅಡುಗಿಸಿದ್ದಾರೆ. ನಿಮ್ಮಂತಹ ದೊಡ್ಡ ಅಧಿಕಾರಿಯ ಸಹಕಾರವಿದ್ದರೆ ಅವರ ಸೊಕ್ಕು ಪೂರ್ತಿ ಮುರಿಯಬಹುದು.”

ಮಾತುಗಳನ್ನು ಅಲ್ಲಿಗೇ ಮುಗಿಸಿ ಮೂವರೂ ಹೊರಬಂದರು. ಅಲ್ಲಿ ನೆರದ ಜನರು ಕಾಯುತ್ತಾ ಕುಳಿತಿದ್ದರು. ಅವನ ನಡುವೆ ಹೋಗಿ ನಿಂತ ಸ್ಕ್ವಾಡ್‌ನ ಮುಖ್ಯಸ್ಥರು ಎಲ್ಲರ ದೂರುಗಳನ್ನು ಕೇಳುತ್ತಿದ್ದರು. ಅವರು ಬರುವ ವಿಷಯ ತಿಳಿದು ಎಸ್.ಐ. ಮತ್ತು ಎಚ್.ಸಿ. ಅವರಿಗಿಂತ ಮೊದಲೇ ಪೋಲೀಸ್ ಸ್ಟೇಷನ್‌ಗೆ ಓಡಿ ಬಂದಿದ್ದರು. ಒಂದು ನೋಟ್‌ಬುಕ್ ಹಿಡಿದು ಅವರ ಬದಿಗೆ ನಿಂತಿದ್ದ ಎಸ್.ಐ. ಸ್ಕ್ವಾಡಿನ ಅಧಿಕಾರಿಯರು ಹೇಳಿದನ್ನು ಬರೆದು ಕೇಳುತ್ತಿದ್ದ. ಅದೆಲ್ಲಾ ಮುಗಿಯಲು ಸುಮಾರು ಒಂದು ಗಂಟೆ ಹಿಡಿಯಿತು.

ಅಲ್ಲಿಂದ ಅವರು ತೇಜಾನೊಡನೆ ಬಂಡೇರಹಳ್ಳಿ ಸಂದುಗೊಂದುಗಳನ್ನೆಲ್ಲಾ ಸುತ್ತಾಡಿದರು. ಅಲ್ಲಿ ಮೋರಿಗಳನ್ನು, ತಿಪ್ಪೆಗಳನ್ನು ಹೇಗೆ ಅವರುಗಳೇ ಸ್ವಚ್ಛವಾಗಿಡಬಹುದೆಂಬ ಸಲಹೆ ಕೊಟ್ಟರು. ಅವರ ಹಿಂದೆ ಹಳ್ಳಿಯ ಯುವಕರ ಹಿಂಡಿತ್ತು. ಹಾಗೇ ನಡೆಯುತ್ತಾ ಅವರು ಗುಂಡುತಾತ ಮನೆಯೆದುರು ಬಂದಾಗ ಬಂಡೇರಹಳ್ಳಿಗೆ ಬಂದ ಅವರು, ಕನಿಷ್ಠ ತಮ್ಮ ಮನೆಯಲ್ಲಿ ಕಾಫಿಯನ್ನಾದರೂ ಕುಡಿಯಬೇಕೆಂದು ಒತ್ತಾಯಿಸಿದ. ಅವನ ಆತ್ಮೀಯ ಒತ್ತಾಯಕ್ಕೆ ಮನ್ನಣೆ ಕೊಡಬೇಕೆಂದುಕೊಂಡು ಮನೆಯೊಳಬಂದರು. ತಾತ ಮೊದಲೇ ಮನೆಗೆ ಹೇಳಿಕಳಿಸಿ ಎಲ್ಲಾ ವ್ಯವಸ್ಥೆ ಮಾಡಿದಂತಿತ್ತು. ಅಲ್ಲಿ ಅವನ ಮೊಮ್ಮಕ್ಕಳೊಡನೆ ಹುಡುಗಾಟವಾಡಿ ಕಾಫಿಯ ಉಪಚಾರ ಸ್ವೀಕರಿಸಿದರು ಸ್ಕ್ವಾಡಿನ ಮುಖ್ಯಸ್ಥರು.

ಸಿದ್ಧಾನಾಯಕನ ಮನೆಯ ಬಳಿ ಬಂದಾಗ ಅವನು ಅವರ ಬರುವಿಗಾಗೇ ಎಂಬಂತೆ ಬಾಗಿಲೆದುರೇ ಕಾದಿದ್ದ. ಅವರನ್ನು ಹಾರ್ದಿಕವಾಗಿ ಸ್ವಾಗಿತಿಸಿದರೂ ಒಳಗೆ ಹೋಗಲಿಲ್ಲ ಸ್ಕ್ವಾಡಿನ ಮುಖ್ಯಸ್ಥರು. ಸಾರಾಯಿ ಮಾರಾಟದ ವಿಷಯ, ಅವನು ಪೇದೆಗಳಿಗೆ ಲಂಚ ಕೊಡಿಸಿದ ವಿಷಯ ಪ್ರಸ್ತಾಪಿಸಿ ಇನ್ನು ಮುಂದೆ ಅಂತಹದು ನಡೆಯಬಾರದೆಂದು. ಯಾವ ಅಪರಾಧಿಯನ್ನೇ ಆಗಲಿ ಬಂಧಿಸುವ ಅಧಿಕಾರ ಪ್ರತಿನಾಗರೀಕನಿಗೂ ಇದೆ ಎಂದೂ ಇಡೀ ಹಳ್ಳಿಯೇ ಅವರ ವ್ಯವಹಾರದ ಮೇಲೆ ನಿಗಾ ಇಟ್ಟಿರುವುದಾಗಿ ಹೇಳಿದರು. ಲಾಟರಿ ಟಿಕೆಟ್ ಮಾರುವ ಅಂಗಡಿಯ ವಿಷಯ ಗುಂಪಿನಲ್ಲಿದ್ದ ಒಬ್ಬ ಯುವಕ ತೆಗೆದ. ನಾಳಿನಿಂದ ಅದನ್ನು ಮುಚ್ಚಿಬಿಡಬೇಕೆಂದು ಆಜ್ಞಾಪಿಸಿದರು. ಈ ಮಾತುಗಳನ್ನು ಅವರು ಪಾಲಿಸದಿದ್ದರೆ ಸಿ.ಎಂ. ಸಾಹೇಬರಿಗೆ ಹೇಳಿ ಪಾರ್ಟಿಯ ಸದಸ್ಯತ್ವದಿಂದ ಕೂಡ ಅವರನ್ನು ತೆಗೆದುಹಾಕುವುದಾಗಿ ಹೇಳಿದರು. ಇಡೀ ಹಳ್ಳಿ ಎದುರು ಆಗುತ್ತಿದ್ದ ತನ್ನ ಅವಮಾನವನ್ನು ನುಂಗಿಕೊಂಡು ಪ್ರತಿಯೊಂದಕ್ಕೆ ಒಪ್ಪಿಕೊಂಡ ಸಿದ್ದಾನಾಯಕ್.

ಕೊನೆಗೆ ತೇಜಾನೊಬ್ಬನನ್ನೇ ಬದಿಗೆ ಕರೆದು ತಾವು ಸಿ.ಎಂ. ಸಾಹೇಬರಿಗೆ ಹೇಳಿ ಹಳ್ಳಿಯ ಏಳಿಗೆಗಾಗಿ ಸಾಕಷ್ಟು ಹಣವನ್ನು ಮಂಜೂರು ಮಾಡಿಸುವುದಾಗಿ, ಅದನ್ನು ಇಲ್ಲಿನ ಯುವಕರನ್ನು ನಿಯಮಿಸಿಕೊಂಡು ಕೆಲಸ ಮಾಡಬೇಕೆಂದು ಹೇಳಿದರು.

ಅವರು ತಮ್ಮ ಕಾರನ್ನು ಹತ್ತುವಾಗ ತೇಜಾನೊಬ್ಬನಿಗೆ ಕೇಳಿಸುವಂತೆ ಹೇಳಿದರು.

“ಕಲ್ಯಾಣಿಯ ಸುಳಿವು ಸಿಕ್ಕರೆ, ಅವಳನ್ನು ಕೊಲ್ಲಬೇಡ. ಅಂತಹವರು ಬಹುಕಾಲ ಬದುಕಿರಬೇಕು”

ಅವರ ಮಾತಿನಿಂದ ತೇಜಾನ ಹೃದಯ ತುಂಬಿ ಬಂತು ಹೇಳಿದ

“ಇಲ್ಲ ಸರ್! ಅಂತಹದು ಆಗುವುದಿಲ್ಲ”

ಬಂಡೇರಹಳ್ಳಿಯವರ ಜಯಘೋಷದೊಡನೆ ಅವರ ಕಾರು ರಾಮನಗರದ ಕಡೆ ಸಾಗಿತ್ತು. ಎಲ್ಲರೂ ತಮ್ಮ ತಮ್ಮ ಮನೆಯ ಕಡೆ ಹೋಗತೊಡಗಿದಾಗ ಎಸ್.ಐ. ಮತ್ತು ಎಚ್.ಸಿ.ಯನ್ನು ಮುಖ್ಯ ಕೆಲಸವಿದೆ ಎಂದು ಉಳಿಸಿಕೊಂಡ ಮೇಲೆ ಪೋಲಿಸ್ ಸ್ಟೇಷನ್ನೊಳ ಹೋದ ತೇಜಾ, ಅವರು ಮಾಡಬೇಕಾದ ಕೆಲಸವನ್ನು ವಿವರಿಸಿದ. ಅಂತಹ ಕೆಲಸ ಅದೇ ರಾತ್ರಿ ಮಾಡಬೇಕಾಗಿ ಬರುತ್ತದೆ ಎಂದವರು ಅಂದುಕೊಂಡಿರಲಿಲ್ಲ.

ತೇಜ ಜೀಪನ್ನು ನಡೆಸುತ್ತಿದ್ದ ಅವನ ಬದಿಗೆ ಕುಳಿತಿದ್ದ ಎಸ್.ಐ. ಹಿಂದೆ ಒಬ್ಬ ಪೇದೆ. ಅದು ಬಂಡೇರಹಳಿಯನ್ನು ದಾಟಿ ಸ್ವಲ್ಪ ದೂರ ಹೋಗಿ ಬಂದು ಬದಿಗೆ ನಿಂತಿತ್ತು. ಆಗಲೇ ರಾತ್ರಿಯ ಹನ್ನೊಂದು ಗಂಟೆ. ಅವರ ಕಾಯುವಿಕೆ ಆರಂಭವಾಯಿತು. ಅವರು ಹೆಚ್ಚು ಹೊತ್ತು ಕಾಯಬೇಕಾಗಿ ಬರಲಿಲ್ಲ. ಅರ್ಧಗಂಟೆಯಲ್ಲಿ ರಾಮನಗರದ ಕಡೆಯಿಂದ ಬಂದ ಪೋಲಿಸ್ ವ್ಯಾನೊಂದು ಅವರ ಬದಿಗೆ ನಿಂತಿತು. ಅದರಲ್ಲಿ ಡ್ರೈವರನ್ನು ಬಿಟ್ಟು ಒಬ್ಬ ಎಸ್.ಐ. ಮಾತ್ರವಿದ್ದ. ಅವರಿಬ್ಬರೂ ಕೆಳಗಿಳಿದು ಸೆಲ್ಯೂಟ್ ಹೊಡೆಯುತ್ತಿದ್ದಂತೆ ಏನೇನು ಹೇಗೆ ಮಾಡಬೇಕೆಂಬುವದನ್ನು ವಿವರಿಸಿದ ತೇಜಾ ಅವನ ಮಾತು ಮುಗಿಯುತ್ತಲೇ ವ್ಯಾನನ್ನು ಹತ್ತಿದರವರು. ಅದು ಬಂಡೇರಹಳ್ಳಿಯ ಕಡೆ ಓಡತೊಡಗಿತು.

ತನ್ನ ಜೀಪಿನಲ್ಲಿ ಡ್ರೈವಿಂಗ್ ವೀಲ್‌ನೆದುರು ಕುಳಿತ ತೇಜಾ ಯಾವ ಅವಸರವೂ ಇಲ್ಲದಂತೆ ಅದನ್ನು ಸ್ಟಾರ್‍ಟ್ ಮಾಡಿ ವ್ಯಾನನ್ನು ಹಿಂಬಾಲಿಸತೊಡಗಿದ. ಬಹಳ ದಣಿದಿದ್ದರೂ ಅವನ ಯೋಚನೆಗಳು ಕಲ್ಯಾಣಿಯ ಸುತ್ತ ಹರಿಯತೊಡಗಿದವು. ತಾ ಮಾಡುತ್ತಿದ್ದ ಇದೆಲ್ಲ ಕೆಲಸ ನಿರರ್ಥಕವೆನಿಸತೊಡಗಿತ್ತು. ಅವಳೊಡನೆ ಎಲ್ಲಾದರೂ ಹೋಗಿ ಸುಖವಾಗಿದ್ದರೆ ಸಾಕು ಅದೇ ಈ ಜೀವನದ ಅರ್ಥ. ಅದೇ ಬದುಕಿನ ಗುರಿ ಎಂಬ ನಿರ್ಣಯಕ್ಕೆ ಬಂದಿದ್ದ.

ಶರವೇಗದಿಂದ ಹೋದ ವ್ಯಾನು ಕರ್ಕಶ ಶಬ್ದದೊಡನೆ ಗುಡಿಸಲುಗಳೆದುರು ನಿಂತದ್ದು ಕಾಣಿಸಿತು. ಸೈನ್ಯದ ತುಕಡಿಯ ಮೇಲೆ ಆಕ್ರಮಣ ಮಾಡುವಂತೆ ವ್ಯಾನಿನಿಂದ ಧುಮುಕಿದರು ಪೋಲಿಸಿನವರು. ಹೆಣ್ಣು ಗಂಡುಗಳ ಕೂಗಾಟ ಕಿರುಚಾಟ ಕೇಳಿಸಿತು. ತನ್ನ ವಾಹನದ ಗತಿಯನ್ನು ಇನ್ನೂ ನಿಧಾನಗೊಳಿಸಿದ. ಅರೆ ಬತ್ತಲೆ ಇದ್ದ, ಇನ್ನೂ ಬಟ್ಟೆಗಳನ್ನು ತೊಡುವ ಅವಸರದಲ್ಲಿದ್ದ ಐವರು ಹೆಣ್ಣು ಐವರು ಗಂಡುಗಳನ್ನು ಹೊರಗೆ ತಂದು ನಿಲ್ಲಿಸಿದರು ಪೋಲಿಸಿನವರು. ಆ ಗುಂಪಿನಲ್ಲಿ ಒಬ್ಬ ನಡುವಯಸ್ಕ ಮತ್ತೊಬ್ಬ ಗಂಡೂ ಇದ್ದ. ತೇಜಾನ ಜೀಪು ವ್ಯಾನಿನ ಹಿಂದೆ ಬಂದು ನಿಲ್ಲುವುದರಲ್ಲಿ ಎಲ್ಲರೂ ಬಟ್ಟೆಗಳನ್ನು ತೊಟ್ಟಿದ್ದರು. ವ್ಯಾನಿನಿಂದ ಇಳಿದ ತೇಜಾ ದಣಿವಿನ ನಡುಗೆ ನಡೆಯುವಂತೆ ನಡೆಯುತ್ತಾ ನಡುವಯಸ್ಕನ ಬಳಿ ಬಂದು ತನ್ನ ಬೇಸರವನ್ನೆಲ್ಲಾ ಹೊರಗಡಹುವಂತೆ ಬಲವಾಗಿ ಅ ಹೊಟ್ಟೆಯಲ್ಲಿ ಒಂದು ಗುದ್ದು ಗುದ್ದಿದ್ದ. ಅವನಿಂದ ನೋವಿನ ಚೀತ್ಕಾರ ಹೊರಟಿತು. ಎರಡು ಹೆಜ್ಜೆ ಹಿಂದೆ ತೂರಾಡಿ ನಿಂತ. ಬದಿಗೆ ನಿಂತ ಗಂಡು ಭಯದಿಂದ ಹಿಂದೆ ಸರಿಯಲು ಹೋದಾಗ ಒಂದು ಹೆಜ್ಜೆ ಮುಂದೆ ಹಾಕಿ ಬಲವಾಗಿ ಅವನ ತೊಡೆಗಳ ನಡುವೆ ಒದ್ದ. ನೋವಿನಿಂದ ಕೂಗಿದ ಅವನು ತನ್ನ ಎರಡೂ ಕೈಗಳನ್ನು ಮರ್‍ಮಾಂಗದ ಬಳಿ ತಂದ. ತೂರಾಡಿ ನಿಂತ ನಡುವಯಸ್ಕನ ಬಳಿ ಬಂದು ಅವನ ಮುಖದ ನಡುವೆ ಒಂದು ಗುದ್ದು ಗುದ್ದಿದ. ಅದರ ರಭಸಕ್ಕೆ ಅವನು ಹಿಂದೆ ಉರುಳಿ ಅಂಗತವಾಗಿ ಬಿದ್ದ. ತನ್ನ ಗತಿ ಏನಾಗುವುದೋ ಎಂದುಕೊಂಡು ಮರ್‍ಮಾಂಗ ಹಿಡಿದ ವ್ಯಕ್ತಿ ನೋವಿನ ದನಿಯಲ್ಲಿ ಕೂಗಿದ.

“ತಪ್ಪಾಯಿತು ಧಣಿ! ನಮ್ಮಿಂದ ತಪ್ಪಾಯಿತು”

ಅವನನ್ನು ಮರೆತಂತೆ ತೇಜಾ ಕೆಳಗೆ ಬಿದ್ದವನ ಮುಖಕ್ಕೆ ಒದ್ದ. ಇದೆಲ್ಲವನ್ನೂ ನೋಡುತ್ತಿದ್ದ ಪೋಲಿಸಿನವರು. ಅಲ್ಲಿ ನಿಂತ ಹೆಣ್ಣು ಗಂಡುಗಳು ಒಂದು ಮಾತನ್ನೂ ಆಡಲಿಲ್ಲ. ತನ್ನ ಅಧಿಕಾರಿಗೆ ಹುಚ್ಚು ಹಿಡಿದಿರಬಹುದೇ ಎನಿಸಿತು ಎಸ್.ಐ.ಗೆ. ನೆಲಕ್ಕೆ ಬಿದ್ದ ನಡುವಯಸ್ಕ ನರಳುತ್ತಾ ಹೇಳಿದ.

“ಇನ್ನೊಂದು ಸಲ ಇಂತಹದು ಆಗುವುದಿಲ್ಲ ಸ್ವಾಮಿ… ದಯಮಾಡಿ ನಮ್ಮನ್ನು ಕ್ಷಮಿಸಿ”

“ನೀನು ಯಾವ ಊರಿನವನು” ಮೊದಲ ಬಾರಿ ಮಾತಾಡಿದ ತೇಜ.

“ರಾಯಚೂರಿನವನು ಧಣಿ… ತಪ್ಪಾಯಿತು” ಕೂಡಲೇ ಮಾತಾಡದಿದ್ದರೆ ಎಲ್ಲಿ ಹೊಡೆಸಿಕೊಳ್ಳಬೇಕಾಗುತ್ತದೆ ಎಂಬಂತೆ ಉತ್ತರಿಸಿದನವ.

“ಇವನ್ಯಾರು?” ಎರಡನೆಯ ಪ್ರಶ್ನೆ

“ರಾಮನಗರದವನು, ಇಲ್ಲಿ ಕಾವಲಿರುತ್ತಾನೆ” ಕೇಳಿದ್ದಕ್ಕಿಂತ ಹೆಚ್ಚಿನ ವಿವರ ಕೊಟ್ಟ ನಡುವಯಸ್ಕ,

“ಹುಡುಗಿಯರು ಎಲ್ಲಿಯವರು?”

“ಇಬ್ಬರು ಬೀದರಿನವರು. ಒಬ್ಬಳು ಗೋವಾದವಳು. ಮಿಕ್ಕವರು ಅಕ್ಕಪಕ್ಕದ ಹಳ್ಳಿಯವರು” ತೇಜಾನ ಪ್ರಶ್ನೆ ಮುಗಿಯುತ್ತಲೇ ಬರುತ್ತಿತ್ತು ನಡುವಯಸ್ಕನ ಉತ್ತರ.

“ನಿನ್ನಲ್ಲಿ ಯಾರು ಕರೆತಂದರು?”

“ನಾನೇ ಮೊದಲು ಒಬ್ಬ ಹುಡುಗಿಯೊಡನೆ ಬಂದ”

“ಈ ಗುಡಿಸಲುಗಳ ಒಡೆಯ ಯಾರು?”

“ಹಳ್ಳಿಯ ನಡುವಿದೆ ಅವನ ಮನೆ! ಸೋಮಣ್ಣ! ಸೋಮು”

ಹೆಣ್ಣುಗಳ ಹತ್ತಿರ ನಿಂತಿದ್ದ ಇಬ್ಬರು ಎಸ್.ಐ.ರನ್ನು ಕೈಮಾಡಿ ಕರೆದ ಓಡುತ್ತಾ ಬಂದ ಅವರು ಆಜ್ಞೆಗಾಗಿ ಎಂಬಂತೆ ತೇಜಾನೆದುರು ನಿಂತರು. ಯಾವ ಭಾವೋದ್ವೇಗವೂ ಇಲ್ಲದ ದನಿಯಲ್ಲಿ ಹೇಳಿದ

“ಈ ಮನೆ ಒಡೆಯನನ್ನು ಹಿಡಿದು ಅವನು ರಾಮನಗರ ಸೇರುವವರೆಗೂ ಒದೆಯುತ್ತಿರಿ. ಈ ಹೆಣ್ಣುಗಳ, ಹುಡುಗಿಯರ ಎಲ್ಲಾ ಸಾಮಾನುಗಳೊಡನೆ ಇಲ್ಲಿಂದ ಸಾಗಹಾಕಿ ಮತ್ತವರು ಬಂಡೇರಹಳ್ಳಿಯಲ್ಲಿ ಕಾಣಿಸಬಾರದು. ಸೋಮಣ್ಣನೊಡನೆ ಈ ಇಬ್ಬರನ್ನು ಬಂಧಿಸಿರಿ. ಇವರುಗಳ ಅವಶೇಷವೂ ಇಲ್ಲಿ ಇರಬಾರದು. ಬೇಗ ಕೆಲಸ ಆರಂಭಿಸಿ.”

ಒಬ್ಬ ಎಸ್.ಐ. ನಡುವಯಸ್ಕನನ್ನು ಕರೆದುಕೊಂಡು ವ್ಯಾನಿನಲ್ಲಿ ಸೋಮಣ್ಣನ ಮನೆಯ ಕಡೆ ಹೋದ. ಮಿಕ್ಕವರು ಬಂದಿಗಳನ್ನು ಹೆಣ್ಣು ಗಂಡುಗಳನ್ನು ಬೇರ್ಪಡಿಸಿ ಹಗ್ಗದಿಂದ ಕಟ್ಟುವ ಕೆಲಸದಲ್ಲಿ ನಿರತರಾದರು. ಅವರೆಲ್ಲರ ಕಡೆ ಒಮ್ಮೆ ನೋಡಿ ನಿಧಾನವಾಗಿ ತನ್ನ ಜೀಪಿನ ಕಡೆ ಹೆಜ್ಜೆ ಹಾಕಿದ ತೇಜ.

ಮನೆಗೆ ಬಂದಾಗ ತಾನಿನ್ನೂ ಏನೂ ತಿಂದಿಲ್ಲವೆ೦ಬುವುದು ನೆನಪಾಯಿತು. ಅಡುಗೆಯಮನೆಗೆ ಹೋದ. ಅಲ್ಲಿ ಅವನ ಊಟ ಸಿದ್ಧವಾಗಿತ್ತು. ಕೈಕಾಲು ತೊಳೆದು ಬಟ್ಟೆ ಬದಲಿಸಿ ಊಟ ಮಾಡಿದ. ಕಲ್ಯಾಣಿ ಊಟ ಮಾಡಿರಬಹುದೇ ಎಲ್ಲಿ ಮುಗಿಯಬಹುದೆಂಬ ಯೋಚನೆ ಬಂತು. ಅವಳು ನೆನಪಾದಾಗ ನಾಯಕನ ಬಗ್ಗೆ ಹೇಳಿದ್ದು ಜ್ಞಾಪಕವಾಯಿತು. ಬಾಗಿಲನ್ನು ಸರಿಯಾಗಿ ಹಾಕಿದ. ಅದು ತೆಗೆದುಕೊಂಡರೆ ಸಪ್ಪಳ ಬರುವಂತೆ ಬಾಗಿಲಿಗೆ ಬಂಡೆಗಳನ್ನು ಜೋಡಿಸಿದ. ತಾ ಮಾಡಿದ ಕೆಲಸವನ್ನು ಒಮ್ಮೆ ನೋಡಿ ತೃಪ್ತಿಯಿಂದ ಒಳಬಂದು ಬೆಲ್ಟ್‌ನಿಂದ ರಿವಾಲ್ವರ್ ತೆಗೆದ. ಅದನ್ನು ಬಿಚ್ಚಿ ಒಳಗಿರುವ ಬುಲೆಟ್‌ಗಳನ್ನು ಪರೀಕ್ಷಿಸಿಕೊಂಡ. ಎಲ್ಲಾ ಸರಿಯಾಗಿದ್ದವು. ಹಾಸಿಗೆ ಬುಡದಲ್ಲಿ ತನ್ನ ಕೈಗೆ ಮಾತ್ರ ರಿವಾಲ್ವರ್ ಸಿಗುವಂತೆ ಇಟ್ಟುಕೊಂಡು ಹಾಸಿಗೆಯ ಮೇಲೆ ಉರುಳಿದ. ಎಲ್ಲಾ ಹಿಂಸೆಗಳಿಂದ ಮುಕ್ತಿ ದೊರೆತಂತಹ ಅನುಭವವಾಯಿತು. ನೋಡನೋಡುತ್ತಿದ್ದಂತೆ ನಿದ್ದೆ ಅವನನ್ನು ಆವರಿಸಿಬಿಟ್ಟಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಕ್ಷಾತ್ಕಾರ
Next post ಜಾಗತೀಕರಣದ ಹೊಸಿಲಲ್ಲಿ ನಿಂತಿರುವ ರೈತನಿಗೊಂದು ಕಿವಿಮಾತು

ಸಣ್ಣ ಕತೆ

 • ಎದಗೆ ಬಿದ್ದ ಕತೆ

  ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

 • ಬಲಿ

  ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಸ್ವಯಂಪ್ರಕಾಶ

  ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys