ನನಗೆ ಟೀ ಬೇಕು
ಟಿಫಿನ್ ಬೇಕು
ಹೊದೆಯುವುದಕ್ಕೆ ಚದ್ದರ ಬೇಕು
ಎಂದೆ
ಸೋಶಿಯೋಳಜಿ ಸೈಕಾಳಜಿ ಆಂತ್ರೊಪೋಳಜಿ
ಫಿಲಾಸಫಿ ಸಾಕು ನಿನಗೆ ಎಂದಿರಿ
ಎಲ್ಲಾ ಅನುಭವಿಸಬೇಕು ನನಗೆ
ಎಂದು ಕೂಗಿದೆ
ಇಂದ್ರಿಯಗಳಿಂದ ಇತ್ತ ಬಾ
ಅಳಬೇಡ ನಗಬೇಡ ಚಿಂತಿಸು
ಎಂದಿರಿ
ಚಿಂತಿಸಿದೆ ಸಣ್ಣ ತಲೆಬುರುಡೆಯೊಳಗೆ
ಬೆಳೆಸಿದೆ ಮಿದುಳು ಬ್ರಹ್ಮಾಂಡವಾಗಿ
ಪ್ರೀತಿಸಲಿಲ್ಲ, ದ್ವೇಷಿಸಲಿಲ್ಲ
ನಿರ್ಲಿಪ್ತನಾದೆ
ಅನಾಸ್ತೇಸಿಯಾ ಆದೆ !
ಈಗಲೋ ನನಗೆ ಹಸಿವಿಲ್ಲ ರುಚಿಯಿಲ್ಲ
ಉಪ್ಪು ಖಾರ ಗೊತ್ತಿಲ್ಲ
ದೊಡ್ಡ ಬುದ್ಧಿಯ ಕೆಳಗೆ
ಸಣ್ಣ ಕೈ ಕಾಲುಗಳ
ವ್ಯಂಗ್ಯಚಿತ್ರ ಈ ನಾನು
ಇರಲಿ ಬಿಡಿ
ಆತ್ಮಹತ್ಯೆಯ ಕುರಿತು
ಏನೆನ್ನುತ್ತವೆ ಸಾರ್ ನಿಮ್ಮ ಗ್ರಂಥಗಳು ?
*****