ಅರಳಿತು ಜೀವ ನನ್ನೊಳಗೆ
ನಾ ಅಂದು ನೋಡಿದ ದಿನದಿಂದಲೇ
ಕರಗಿ ಹೋದೆ ನಾ ನಿನ್ನ ನೋಟಕೆ
ನೀನಾದೆ ಪಾಠ ನನ್ನ ಬಾಳ ಪುಟಕೆ.
ನಿನ್ನಯ ಸಾಂಗತ್ಯ ಹಸಿರಾಗಿ
ನನ್ನಯ ಒಡಲ ನೀ ಉಸಿರಾಗಿ
ಮಧುರ ಮೈತ್ರಿಯಲಿ ಒಂದಾಗಿ
ಬಾಳ ಪಯಣಕೆ ನಾವು ಜೊತೆಯಾಗಿ.
ಅರಿಶಿನವ ಹಚ್ಚಿದ ಹರಿಣಿ
ನೀನಾದೆ ನನ್ನ ಗೃಹಿಣಿ
ನನ್ನೊಲವಿನಾ ಅರಗಿಣಿ
ನೀನೆ ನನ್ನ ರತಿ ರಮಣಿ.
ಕರುಣೆಯ ಭಾವ ನಿನ್ನದು
ಕರುಣಾಳು ಜೀವ ನನ್ನದು
ಪೂಜಿಸುವ ಮನೋಭಾವ ನಿನ್ನದು
ಆರಾಧಿಸುವ ಚೇತನ ನನ್ನದು.
ಪ್ರೀತಿಯ ಕಡಲು ಉಕ್ಕುತ ಸಾಗಲಿ
ಬರುವಾ ದಿನಗಳ ಮಿಲನದಲಿ
ಹರುಷವ ತುಂಬುವೆ ಪ್ರತಿಕ್ಷಣದಲ್ಲಿ
ಯುಗಗಳೇ ಕಳೆಯಲಿ ಈ ಜೀವ ಜೊತೆಯಾಗಿ
*****


















