ಅನಾಮಿಕಗಳು

ಒಮ್ಮೊಮ್ಮೆ
ಎವೆಕಳಚಿ ಕೂರುತ್ತೇನೆ ಒಬ್ಬನೇ.
ನಿಧಾನ ಇಳಿಯುತ್ತೇನೆ :
ಅಪ್ಪನ ತಲೆ
ಅಜ್ಜನ ಎದೆ
ಮಾಸಿದ ಮುಖಗಳ ಕಟಿ ತೊಡೆ ನಡೆ
ಬಹಳ ಬೇಕಾಗಿಯೂ
ತಿಳಿಯದ ಹೆಡೆ ;
ಇಳಿ ಇಳಿಯುತ್ತ
ಸದ್ದಿಲ್ಲದೆ ಸುತ್ತ ಹುತ್ತ ಏಳುತ್ತ
ಬೆಳಕು ತೊದಲುತ್ತದೆ
ನೆನಪು ಮಾಸುತ್ತದೆ
ಕತ್ತಲ ರಾಡಿ
ಉಗ್ಗಿ ಹಾಯುತ್ತದೆ.
ಈಗ
ತೆವಳುವುದೆ ಸರಿ
ಮರವು ಮಂಪರಿನ
ತಳಕ್ಕೆ, ಅಲ್ಲ,
ಇನ್ನೂ ಕೆಳಕ್ಕೆ :
ದನಿ ಜಿಗಿಯದ ಪಿಸು ಉಸುರಿನ
ಹೊಲಕ್ಕೆ.

ಬರುತ್ತಿವೆ ಮೇಲೆ
ನಿಧಾನ ಉಬ್ಬುವ ದಿಬ್ಬಗಳು
ಮಬ್ಬಿನವು,
ಹಾಗೇ ಕೊರಗಿನಲ್ಲಿ
ಗಾತ್ರ ಸಮೆಸಮೆದು

ಅರರೇ
ಗಜ್ಜುಗ ಗಾತ್ರದ ಬೀಜಗಳು;
ಆಕಾರದ ಬಿಗಿತಕ್ಕೆ
ಇಂದ್ರಿಯ ಜಿಗಿತಕ್ಕೆ
ಒಗ್ಗದ ಬಗ್ಗದ
ಕಾಮರೂಪಿ ತಾಮಸ ಕುಡಿಗಳು ;
ದಟ್ಟ ಬೆಳಕನ್ನ ಬೇಡುವ
ಕರಿಗೋಡೆಗೆ ತಲೆ ತೀಡುವ
ಕಿರುಗತ್ತಲೆಗಳು
ಭಾಷೆ ಹೊದೆಯದ ಬೆತ್ತಲೆಗಳು;
ದರಿ ಪೊದೆಗಳ
ಒಡಲಿನಲ್ಲಿ ಪಿಸುಗುಟ್ಟುವ
ಹಸಿ ಬೆದೆಗಳು
ಹೊಸ ಕುದಿಗಳು.

ಇವು
ಮೆತ್ತಗೆ ಬಿಚ್ಚಿ ಸುತ್ತಿದ ಸಿಂಬಿ
ಸರಸರ ಪರಪರ
ಹುಸಿನಿಜಗಳ ನಂಬಿ
ಹುದುಗಿ ಸರಿಯುವ ಹಾವು ನೋವುಗಳು
ಕಾವುಗಳು
ಯಾವ ಏಟಿಗೆ ಎದ್ದವೋ
ಈ ಬಾವುಗಳು?

ಒಂದೆರಡನ್ನು ಹಿಡಿದು,
ಹಗಲಿಗೆ ಎದ್ದೆ
ಎನ್ನುವ ಮೊದಲೇ ಜಾರಿ
ಕೈಯಿಂದ ಬಿದ್ದುವು.
ಸಂದಿತನಕ ಬಂದಿದ್ದಾಗ
ನೋಡಿದೆನಲ್ಲ.
ರಾಡಿ ಬೆಳಕಲ್ಲಿ ಕೆಂಚು ಹಪ್ಪಳದಂತೆ
ಕೊಂಚ ತುದಿ ಕಂಡವು.

ಎಂಥದೋ ದೆವ್ವದ ಮರಿಗಳ?
ಎಂಥದೋ ದೈವ ಹೆತ್ತವ?
ಅರ್ಥವಾಗದು.
ಹುಟ್ಟದ ಕೂಸಿನ ಮೈ ಮುದ್ರೆ
ಗುರುತಿಸುವುದು ಹೇಗೆ?
ಮತ್ತೆ ಪುಳಕ್ಕನೆ ಮುಳುಗಿದವು
ತಳದಲ್ಲಿ,
ಕತ್ತಲ
ಕೊಳದಲ್ಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಗಮ್ಮಾ ಆಡೋದು ಹೋಲಿ
Next post ಕವಿತೆ ಇದು

ಸಣ್ಣ ಕತೆ

 • ದೊಡ್ಡ ಬೋರೇಗೌಡರು

  ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ಕೆಂಪು ಲುಂಗಿ

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

 • ವಲಯ

  ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…