(ಶಿಶುನಾಳ ಷರೀಫ್ ಸಾಹೇಬರನ್ನು ನೆನೆದು)

ಕುಣಿಕುಣಿವಳು ನಮ್ಮ ಕುಂಬಾರಗಿತ್ತಿ
ಕೈಕಾಲಿಗೆ ಕೆಂಪು ರಂಗು ಹತ್ತಿ

ನೋವು ನಲಿವುಗಳೆಂಬ ಭೇದ ಮರೆತು
ಮಣ್ಣಿಗೆ ಮಣ್ಣು ಹದನಾಗಿ ಬೆರೆತು

ತಿರುಗಿಸಿ ಭೂಲೋಕದ ತಿಗರಿ
ಅದರೊಳಗೆ ಸಂಸಾರವೆಂಬ ಬುಗರಿ

ಹೊಟ್ಟೆ ಹಸಿವೆಯೆಂಬ ಬೆಂಕಿಯ ಮಾಡಿ
ಅದಕೆ ತಾಪತ್ರಯದ ಉರುವಲು ಕೂಡಿ

ಸುಡಲು ಇಷ್ಟೊಂದು ಬದುಕು ಬ್ರಹ್ಮಾಂಡ
ತುಂಬೀತು ಎಷ್ಟು ಅನ್ನದ ಭಾಂಡ
*****