ಒಂದು ಗಂಟೆ
ಪುಟ್ಟ ಕೋಣೆಯ
ಬೆಳಗಿದೆ

ಗೋಡೆಯ ಮೇಲೆ
ಸುಂದರಿಯ ಪಟವಿತ್ತು
ಪರಿಶೀಲಿಸಿದೆ

ಹೂದಾನಿಯಲ್ಲಿ
ತಾಜಾ ಹೂಗುಚ್ಚವಿತ್ತು
ಆಘ್ರಾಣಿಸಿದೆ

ಮರುಳೆ…
ಬೂದಿಯಾಗಿರು
ಎಂದು ಬೆಂಬತ್ತಿದ
ಪತಂಗಕ್ಕೆ
ತಿಳಿಯ ಹೇಳಿದೆ

ಮೂಲೆಯಲ್ಲಿ
ಮುದುಡಿ ಮಲಗಿದ್ದ
ಮುದುಕನ
ಮರಣಕ್ಕೂ ಸಾಕ್ಷಿಯಾದೆ

ಉರಿದೂ ಉರಿದೆ
ಕೊನೆವರೆಗೆ
ದೇಹದೊಂದಿಗೆ
ಆತ್ಮನೊಂದಿಗೆ.
*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)