ಮಲಗು ಮುದ್ದಿನ ಕಣ್ಮಣಿ
ಮಲಗು ಪ್ರೀತಿಯ ಚಿನ್ಮಯಿ|
ಮಲಗೂ ಮಲಗೆನ್ನ ಅರಗಿಣಿ
ಜೋಗುಳವ ಹಾಡುತಲಿ
ತಂಪೆಲರ ಬೀಸುತಲಿದೆ ತಂಗಾಳಿ ||

ನಿದಿರೆಯು ನಿನ್ನನು ಕರೆದೊಯ್ಯುವಳು
ಚಂದ್ರನ ಜೊತೆಗೂಡಿ ಆಟವನಾಡುವಳು|
ಬಣ್ಣಬಣ್ಣದಗೊಂಬೆಗಳ ಕೊಡುವಳು
ಮುಗಿಲ ಜೋಕಾಲಿ ತೂಗುವಳು||

ಆ ನೀಲಿನಭದಲಿ ಆ ತಾರೆಯರಜೊತೆಯಲಿ
ಬಗೆಬಗೆಯ ನರ್ತನವ ನೀ ಮಾಡುವೆ|
ಚೆಂದಿರನ ತಂಗಿಯರ ಜೊತೆಗೂಡಿ
ಚೆಂದನದ ಕೋಲಾಟವ ನೀನಾಡುವೆ||

ನಿನ್ನಂತೆ ಮಕ್ಕಳು ಅಲ್ಲಿ ಹತ್ತಾರು
ಜೊತೆಯಾಗಿ ಆಡಲು ಕಾದಿಹರು|
ರಾಜರಾಣಿಯ ಆಟವ ನೀನಾಡುವೆ
ಬಿಳಿ‌ಆನೆ ಅಂಬಾರಿಯ ಮೇಲೇರುವೆ
ಆನಂದ ಹರ್ಷೋಲ್ಲಾಸದಲಿ ತೇಲಾಡುವೆ||
*****