ಅರಿವಾಗಲೇ ಇಲ್ಲ ನನ್ನೊಳಗೆ ನೀನಿದ್ದೆ.
ಕಂಡಕಂಡಲ್ಲಿ ಕಾಡು ಮೇಡಲ್ಲಿ
ನಾಡಬೀಡಲ್ಲಿ ನಿನ್ನರಸಿ ಅಲೆದೆ.

ಕಣ್ಣಿನಾಳದ ಬಿಂಬದೊಳು
ಒಳಬಿಂಬವಾಗಿ ನೀನಿದ್ದೆ.
ಬಿಂಬಕ್ಕೆ ಇಂಬು ನಾನಾಗಿದ್ದು ತಿಳಿದಿರಲಿಲ್ಲ

ಮುಷ್ಟಿಯೊಳಗಣ ಸೃಷ್ಟಿ ನೀನಾಗಿದ್ದೆ
ಕರದೊಳಗಣ ಕಮಲ
ಕಾಡು ಕುಸುಮವೆಂದು ಬಗೆದೆ.

ಚರಣಕ್ಕೆ ಚೈತನ್ಯ ನೀನಾಗಿದ್ದೆ
ಅಷ್ಟದಿಕ್ಕುಗಳ ವಿಶಿಷ್ಟಬಲ
ನನ್ನಡಿಗಳಲ್ಲಿ ಹೇಗೆಂದು
ಶಂಕಿಸಿದೆ,

ರಕ್ತದೊಳಗಿನ ಕಣಕಣವೂ ನೀನಾಗಿದ್ದೆ.
ಅನ್ಯ ರಸದ ಗೋಜಿರಲಿಲ್ಲ.
ಹೃದಯ ಮಿಡಿತಕ್ಕೆ
ಮೆದುಳ ತಂತುಗಳ ಒರತೆ ನೀನಾಗಿದ್ದೆ.

ಮನದ ತುಡಿತಕ್ಕೆ ಪ್ರೇಮ ಸ್ಖಲಿತವೂ
ನೀನಾಗಿದ್ದೆ. ಅರಿವಾಗಲೇ ಇಲ್ಲ.
ನನ್ನೊಳಗೆ ನೀನಿದ್ದೆ.
ಸುಮ್ಮನೆ ನಿನ್ನರಸಿ ಅಲೆದೆ.
*****

ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)