ನನ್ನಾಕೆ ಸುಂದರಿ
ಬಲು ಸುಂದರೀ
ನೆರೆದ ಕೂದಲ ಬೈತಲೆ
ಕುಂಕುಮ ಕೆಂಪು||

ಫಳ ಫಳ ಹೊಳೆವಂತ
ಕಣ್ಣ ತುಂಬ ಧನ್ಯತೆಯ ಬಿಂಬ
ನನ್ನದೆಯಾಳದೆ ಅವಳದೇ ಪ್ರತಿಬಿಂಬ||

ಗುಳಿ ಬಿದ್ದಗಲ್ಲ ನಗುವಿನಂಚಿನ ತುಟಿಕೆಂಪು
ಜಾಣೆ ನನ್ನಾಕೆ ಬಲು ಸೌಂದರ್‍ಯವತಿ||

ಅವಳ ಕುಡಿನೋಟ ಚೈತನ್ಯ ತುಂಬಿ
ಬಂಗಾರ ಸಸಿ ನೆಟ್ಟ ಚತುರೆ
ನಾನು ಬರುವ ಹಾದಿಯಲಿ ಹೂವಹಾಸಿ ಕರೆದಳೆನ್ನ
ಜಾಣೆ ನನ್ನಾಕೆ ಬಲು ಸೌಂದರ್‍ಯವತಿ||

ಅರವತ್ತಾದರೂ ಹದಿನಾರರ ಮನಸು
ಭಾವನೆ ಕೆಳೆಯ ಬಂಧನ ಸೊಗಸು
ಎಂತು ಹೇಳಲಿ ಬಾರಲವಳು ಹತ್ತಿರ||

ಹಿಡಿ ಜೀವ ಹಿರಿಯಳಾದಳು ಕಿರಿಯರ ಅಣತಿಗೆ
ಪ್ರೀತಿ ಪ್ರೇಮ, ವಾತ್ಸಲ್ಯ ಮಮತೆ, ಮೆರೆದ ಸುಖ
ನಾನು ಅಂದು ಕಂಡೆ, ಅವಳ ಅಂತರಂಗ
ಜಾಣೆ ಇವಳು ನನ್ನಾಕೆ ಬಲು ಸೌಂದರ್‍ಯವತಿ||

ದೀಪ ಹಚ್ಚಿ ಕಿರಣವಾಗಿ ಬೆಳಗಿ
ಎನ್ನ ಮನೆ ಅಂಗಳ ಮನೆತನದ
ಸಿರಿಗೌರಿ, ಬಡತನಕೆ ಕಡಿವಾಣ ಹಾಕಿ
ಎನ್ನ ಮನದಾಳದ ಒಡತಿಯಾದಳು
ಜಾಣೆ ಇವಳು ನನ್ನಾಕೆ ಬಲು ಸೌಂದರ್‍ಯವತಿ||

ಸಪ್ತಪದಿಯ ನೆನಪು ಕೈಹಿಡಿದು
ಮನದೆ ನಿಂದಾಕೆ, ಇನ್ನು ಇಲ್ಲ ಚಂತೆ
ಜನುಮ ಜನುಮಕೂ ಅವಳೆ ನನ್ನಾಕೆ
ಜಾಣೆ ಇವಳೂ ಬಲು ಜಾಣೆ ಇವಳು
ನನ್ನಾಕೆ ಬಲು ಸೌಂದರ್‍ಯವತಿ||
*****

Latest posts by ಹಂಸಾ ಆರ್‍ (see all)