ಪ್ರತಿ ಕ್ಷಣದಲ್ಲಿ ಪ್ರೀತಿ ಅಲೆ ಅಲೆಗಳಲಿ
ನಿರಾಳ ಪ್ರೇಮ ಹುಟ್ಟಿದ ತಂಪು
ತೂಗಿ ತೂಗಿ ತಿಳಿಗಾಳಿ ಗದ್ದೆ ಬಯಲು
ಎದೆ ತುಂಬಿ ಹಾಡಿದ ಸುಗ್ಗೀ ಪದ
ಜೀವನ ಜನಪದ ಕಣ್ಣುಗಳರಳಿಂದ
ಕಾಂತಿ ಹರಿಸಿದ ನೇತ್ರಾವತಿ.

ಹರಿಯುವ ಹರಿಗೋಲು ಹಾಯ್ದು ಧಾರಿಣಿ
ಮದು ಸೂಸಿದ ತಿಳಿಹಾಲು ಎದೆಗಿಳಿದ
ಗತಿ ಗುಣದ ಕ್ರಮ ಪರಿಚಲನೆ
ಅಂಗಳದಲ್ಲಿ ಅರಳಿ ಸೂಸಿದ ಮಲ್ಲಿಗೆ
ಪಸರಿಸಿದ ಹರಡಿ ಹಾಯ್ದ ಬೆಳದಿಂಗಳ
ಬಯಲು ಆಲಯ ಧ್ವನಿ ತರಂಗಳು ಅವಳ ಹಾಡು.

ಬೆಳ್ಳಗೆ ತೆಳ್ಳಗೆ ಹಗುರಾಗಿ ತೇಲಿದ ಬಿಳಿಗೆರೆ
ಜಿಗಿ ಜಿಗಿದು ನೆನೆನೆನೆದು ಹನಿಗಳೊಡಗೂಡಿ
ಜಾರು ಬಂಡಿ ಆಟ ಕರುಣಿಯ ನೋಟ
ಸುರಿ ಸುರಿದು ಹರಿದ ಝರಿ ನದಿಯಾಗಿ
ಸುಳಿದು ಸುಳಿದು ಹೆಜ್ಜೆಗಳು ಜಾರಿ
ಕಣಿವೆ ತುಂಬ ಬೆವರ ಹನಿಗಳು.

ಮುಗಿಯದ ಹಾದಿತುಂಬ ಹಿಮದಚಳಿ
ತಿಳಿಮೋಡ ತೇಲಿ ಪ್ರತಿಫಲಿಸಿದ ಕನ್ನಡಿ
ಒಳಹೊರಗೆ ಚಿಮ್ಮಿ ಹಾಡಿ ಧ್ವನಿಸುವ ಹಕ್ಕಿಗಳು
ಸುತ್ತಿ ಸುಳಿದು ಸುತ್ತುವ ಕಾಲುಹಾದಿಯ ಹೆಜ್ಜೆಗಳು
ಆಕಾಶಕ್ಕೆ ನೀಲಿ ತುಂಬಿ ಶಿಖರಬಿಂಬ ಅಂತರಿಕ್ಷ
ಒಡಲಲಿ ಕಡಲಲಿ ಹುಟ್ಟಿದ ಭವ್ಯ ಮತ್ತು ಕಾವ್ಯ
*****