ಅತಿ ಜರೂರು ಕರೆ
ಓಗೊಟ್ಟು ನಡೆಯಲೇ ಬೇಕು
ದೂಡಲಾಗದು ಮುಂದೆ
ಹೇಳಲಾಗದು ನೂರು ನೆಪ

ಅವ ದೂರ್ತನೆಂದರೂ ಬದುಕಿಗೆ
ಬಾರದಿರೆ ಸಾಕೆಂದರೂ
ದುತ್ತೆಂದು ಹೆಗಲೇರಿ
ತಳ್ಳಿ ಬಿಡುವ ಕೂಪಕ್ಕೆ

ಮುಗ್ಧ ಎಸಳುಗಳ ಕೂಡ
ಕೊಚ್ಚಿ ಹಾಕುವ ಕ್ರೂರ
ಕಣ್ಣೀರ ಧಾರೆಗೂ
ಆರ್ತನಾದಕ್ಕೂ ಕಿವುಡನವ

ಚಿಗುರೆಲೆಗೆ ಶರದೃತುವಿನಂತೆ
ಕರುಣೆಯಿಲ್ಲದೆ ಕರಕಲಾಗಿಸುವ
ಬಯಕೆ ಹೊತ್ತವ

ಎಷ್ಟೊಂದು ಕನಸುಗಳಿವೆ
ಮುಸ್ಸಂಜೆಯ ಮಾತುಗಳು ಬಾಕಿಯಿವೆ
ನಕ್ಷತ್ರಗಳ ಹಾದಿಯಲಿ ಬಯಕೆಗಳ ಮೂಟೆ
ಮಾರಲಿದೆ, ಕೊಳ್ಳಲಿದೆ
ಮೈಮನಗಳ ಸುಳಿಯಲಿ ತೇಲುವುದಿದೆ

ಅದಕ್ಕೆ
ಕೆಂಡ ಮಾರುವವನ ಸಹವಾಸ ಬೇಕಿಲ್ಲ ಎಂದರೂ
ಸಾರಿ ಬರುವ ಸರದಾರನ
ಅಪ್ಪುಗೆಯ ತೆಕ್ಕೆಗೆ ಬಿದ್ದರೆ – ಬಲಿ


ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)