ನೆನಪಿಸಿಕೊಳ್ಳಿ ರೆಡಿಂಗ್‌ನಿಂದ ಬ್ರೌಟನ್‌ವರೆಗಿನ
ನಮ್ಮ ಯಾತ್ರೆಯನ್ನು. ಇಂಗ್ಲೆಂಡ್ ಮುಗಿದು
ವೇಲ್ಸ್ ಮೊದಲಾಗುತ್ತಲೆ ಬದಲಾದ ಹವೆಯನ್ನು.

ಬ್ರೌಟನ್ ಪಬ್ಬಿನಲ್ಲಿ ಸಂಜೆ ಕೈಗೊಂಡ
ಮದ್ಯಪಾನ–ತಟಕ್ಕನೆ ಆರಂಭವಾದ
ಬ್ಯಾಂಡಿಗೆ ತಾಳ ಹಾಕುತ್ತ ನೀವು ಕಳೆದ

ಪ್ರಣಯಗಳ ಬಗ್ಗೆ ಮಾತಾಡುತ್ತ ಕರಗಿದ್ದನ್ನು.
ಆಚೆಗೆ ಕುಳಿತಿದ್ದಾಕೆ ಇನ್ನೊಂದು ಬದಿಯಿಂದ
ಹೇಗೆ ಕಾಣಿಸುತ್ತಿದ್ದಾಳೆಂದು ನೋಡಲು

ಬೇಕೆಂದೆ ಮತ್ತೆ ಮತ್ತೆ ನಾನು
ಬೀಯರ್ ಕೊಳ್ಳಲು ಎದ್ದು ಹೋದುದನ್ನು.
ನೆನಪಿಸಿಕೊಳ್ಳಿ ಮತ್ತೆ ನಮ್ಮ ಚೆಸ್ಟರ್ ಸಂಚಾರ-

ಡೀ ನದಿಯ ಮೇಲೆ ವಿಹಾರ-ಬೋಟಿನ ತುಂಬ ಜನ
ಹೆಂಗಸರು ಗಂಡಸರು ಅನೇಕ ಮೂಡುಗಳಲ್ಲಿ
ಬೇಸಿಗೆಯ ಕನಿಷ್ಟ ಉಡುಪುಗಳಲ್ಲಿ

ಅಂಥ ಯಾವಳೋ ಹೆಂಗಸಿನ ದೃಶ್ಯಗಳನ್ನು
ಕ್ಯಾಮರಾದಲ್ಲಿ ನೀವು ಹಿಡಿಯಲು ಯತ್ನಿಸಿ
ಸೋತುದನ್ನು-ಅದರೆ ಕಣ್ಣಿನಲ್ಲಿ ಖಂಡಿತ ಅಲ್ಲ!
*****