ಟೀಚರ್‍….
ಆವತ್ತು ನಾನು ತಂದು
ಕೊಟ್ಟ ಹೂವನ್ನು
ನೀವು ಮುಡಿಯಲಿಲ್ಲ.

ನಿಮ್ಮ ಕುಂಕುಮದ ಬೊಟ್ಟಿಗೆ
ನಿಮ್ಮ ಎತ್ತರದ ತುರುಬಿಗೆ
ತೊಟ್ಟುಸಹಿತ ಕಿತ್ತುತಂದ
ಕೆಂಪು ದಾಸವಾಳವನ್ನು
ನೀವು ಮುಡಿಯಲಿಲ್ಲ.

ನಾನು ನಿಮ್ಮನ್ನು ಪ್ರೀತಿಸಿದ್ದೆ
ನಮಗಾಗಿ ನೀವು ಪಾಠ ಹೇಳುವ
ಗಣಿತವನ್ನೂ ಪ್ರೀತಿಸಿದ್ದೆ
ಆದರೂ ನೀವು ಹೂವು ಮುಡಿಯಲಿಲ್ಲ.

ಮರುದಿನ ನೀವೆ ಬೋರ್ಡಿನ
ಮೇಲೆ ಕೆಂಪು ದಾಸವಾಳ ಬರೆದಿರಿ
ಆಮೇಲೆ ಪರಾಗ ಕೇಸರ
ಎಂದು ಗಂಟೆಗಟ್ಟಳೆ ಕೊರೆದಿರಿ
ನನ್ನ ಕಣ್ಣಿಂದ ಅಷ್ಟೂ
ದಳಗಳುರುಳಿದವು
ನಿಮಗೆ ಕಾಣಲಿಲ್ಲ.

ನಾನು ನೋಡಿದ್ದೇನೆ
ನನ್ನ ಗೆಳತಿಯರು ತರುವ
ಗುಲಾಬಿಯನ್ನು ನಿಮ್ಮ ಮುಡಿಯಲ್ಲಿ
ಆದರೆ ಗಟ್ಟಿಮಣ್ಣಿನ
ನನ್ನ ಮನೆಯಂಗಳದಲ್ಲಿ
ಗುಲಾಬಿ ಚಿಗುರುವುದಿಲ್ಲ.

ನೀವೇ ನನ್ನೆದೆಯೊಳಗೆ
ಬೇರಿಳಿಸಿದ ಪ್ರೀತಿಯ ಗಿಡದಲ್ಲಿ
ನೂರು ದಾಸವಾಳದ ಹೂಗಳರಳಿದರೂ
ಟೊಂಗೆ ಟೊಂಗೆಯಲಿ
ಒಂದೂ ನಿಮ್ಮ ಮುಡಿಗೇರಲಿಲ್ಲ.

*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)