ಅಗುಳಿ ಕಿತ್ತಿಹ ಕದಕೆ
ರಕ್ಷೆ ನೀಡುವ ಧೈರ್ಯ
ಎಲ್ಲಿಂದ ಬರಬಹುದು
ಹೇಳು ಗೆಳೆಯ,
ಕಂಡ ಕಂಡಲ್ಲೆಲ್ಲಾ ಕೊರೆದ
ಕಾಂಡವ ಕಂಡೆ, ಮತ್ತೆ ಬುಡಮೇಲು
ಮರದ ಸಹಿತ.
ಮಾರುಮಾರಿಗೂ ಮಂದಿ
ಸೇರಿಹರು ಜೋಡಿಸಲು
ಮರಮುಟ್ಟು, ಒಣಸೀಳು
ಸಿಗಬಹುದೇ, ಎಂದು
ನೀರ ಕಾಯಿಸಿ ಬಿಸಿ ನೀರ
ಮೀಯಲು ಮೈನೋವು
ತಣಿಯುವುದು ಎಂದು ತಿಳಿದು
ಗೊತ್ತಿಲ್ಲ, ನಾಳೆ ಕುಡಿಯಲು
ನೀರಿಲ್ಲ, ಒಣಭೂಮಿ,
ಬರಡು ನೆಲ ಮತ್ತೆ ಜೊತೆಗಾರ
ಸೊಳ್ಳೆ, ತಿಗಣಿ
ತರುವಾಯ ತಡಿ ಮರುಳೇ,
ಅಷ್ಟಾಂಗವಕ್ರರು ತಾಯಗರ್ಭವ
ಸೀಳಿ ತಲೆಮಾರು ತಂತುಗಳು
ಬರಬಹುದು ನಾಳೆ
ಕಾಯುತಿದೆ ಕಾರ್ಕೋಟಕ
ಮೈಯೆಲ್ಲ ಉರಿನವೆಯ
ಬೆಂಕಿ ಎದ್ದು
ಮನುಜ ಮನುಜನ
ಮುಕ್ಕಿ ಹುರಿದು ತಿಂದು
ಹರವಾದ ದಾರಿಯಲಿ
ಹದವಾದ ಹುರುಪಿನಲಿ
ಅಭಿವೃದ್ಧಿ ಹೆಸರಿನಲಿ
ನಡೆಯುತಿದೆ ನಾಶ
ಗಿಡದ ಮರವೇರಿ
ಬುಡ ಕಡಿದ ಪೆದ್ದ
ಪಡದೇ ಇರನು ವಿಷಾದ
*****

ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)