ಕ್ಯಾಬೇಜು ಮಾರಲು ಕೂತ ಗಂಡಸು
ಕ್ಯಾಬೇಜಿನಂತೆ
ಕಾಲಿಫ್ಲವರು ಮಾರುವ ಹೆಂಗಸು
ಕಾಲಿಫ್ಲವರಿನಂತೆ
ಇದ್ದಾರೆಯೆ ಇಲ್ಲವೆ-

ಕಚಕಚನೆ ಕುರಿಮಾಂಸ
ಕಡಿದು ಕೊಡುತ್ತಿರುವ ಹುಡುಗ
ಹೂವಿನ ರಾಸಿಯ ಹಿಂದೆ
ತಲೆ ಮರೆಸಿದ ಹುಡುಗಿ
ಪ್ರೇಮಿಗಳೆ ಅಲ್ಲವೆ-

ಬಟಾಟೆ ಕೊಳ್ಳುತ್ತಿರುವ
ಗೃಹಸ್ಥೆ ಹೆಂಗಸಿನ ಹಲ್ಲು
ಯಾರಿಗೋ ಕಾಯುತ್ತ ನಿಂತ
ತರುಣಿಯ ಬಲಿತ ಮೊಲೆ
ನಿಜವೇ ಸುಳ್ಳೆ-

ಕಾದು ಫಲವೇನು ಬರದವರಿಗೆ
ಬರುವವರು ಬರುತ್ತಾರೆ
ಈ ಶನಿವಾರ ಅಲ್ಲದಿದ್ದರೆ
ಮುಂದಿನ ಶನಿವಾರ
ಸಂತೆ ಸೇರುವುದು ಮೊದಲಿನಂತೆ

ಯಾರು ಮರೆತುಹೋದರು ಕಲ್ಲ
ಬೆಂಚಿನ ಮೇಲೆ ಕೈಚೀಲ ?
ಬದಿಯಲ್ಲಿ ಬಣ್ಣದ ಕೊಡೆ !
ಯಾವ ಪಲ್ಲಂಗದಲ್ಲಿ ಸಡಿಲಿತು
ಕಠಿಣವಾಗಿ ತೋರಿದ್ದ ತೊಡೆ?
*****