ಮೂರಂತಸ್ತಿನ ಮನೆಯ ಎಲ್ಲಕ್ಕೂ ಮೇಲಿನ ಅಂತಸ್ತಿನಲ್ಲಿ ಡೊಳ್ಳು ಹೊಟ್ಟೆಯ ಆ ಮನೆಯೊಡೆಯನು, ಚಿಕ್ಕ ಬಾಗಿಲಿನ ಒಂದು ಕದವನ್ನು ತೆರೆದು ಏನೋ ಓದುತ್ತ ಕುಳಿತಿದ್ದನು. ಅತ್ತಕಡೆಯಿಂದ ಹಾಯ್ದು ಹೋಗುವ ಒಬ್ಬ ಹುಡುಗನು ಆತನನ್ನು ನೋಡುತ್ತ ಕೆಲಹೊತ್ತು ನಿಂತುಕೊಂಡನು. ಶ್ರೀಮಂತನ ದೃಷ್ಟಿಯು ಆ ಹುಡುಗನತ್ತ ಹರಿಯಿತು. ಹುಡುಗ ನಗುತ್ತ ನಿಂತಿದ್ದಾನೆ ! ಅದನ್ನು ಕಂಡು ಶ್ರೀಮಂತನಿಗೆನಿಸಿತು – ತನ್ನ ಮನೆಯನ್ನೂ ತನ್ನ ವೈಭವವನ್ನೂ ನೋಡಿ ಆನಂದದಿಂದ ನಗುತ್ತಿದ್ದಾನೆ. ಈ ಹುಡುಗ. ಈತನಿಗೆ ಏನಾದರೂ ತಿನ್ನಲು ಮಿಠಾಯಿಕೊಡಿಸೋಣವೆಂದು ಯೋಚಿಸಿ, ಆ ಹುಡುಗನನ್ನು ಮಾತಾಡಿಸಿದನು-
“ಏನೋ, ತಮ್ಮಾ ಏಕೆ ನಗುತ್ತಿರುವಿ ?”
ಅನುಮಾನಿಸುತ್ತಲೇ ಆ ಹುಡುಗನು ಮರುನುಡಿದನು – “ಅಕಸ್ಮಾತ್ ನೀವು ಸತ್ತರೆ ನಿಮ್ಮ ಹೆಣವನ್ನು ಈಚೆಗೆ ಹೇಗೆ ತರುವುದು – ಎಂದು ಯೋಚಿಸಿ ನಕ್ಕೆನು.”
ಹುಡುಗನು ಅಧಿಕಪ್ರಸಂಗಿಯೆನ್ನುವುದು ಸ್ಪಷ್ಟವಾಯಿತು. ಅವನ ಮನೆಯೊಳಗಿನ ಹಿರಿಯರನ್ನು ಕರೆಯಿಸಿ ಈತನು ವಿವೇಕಿಯಾಗುವಂತೆ ತಿದ್ದಲು ಸೂಚಿಸಬೇಕೆಂದು ಶ್ರೀಮಂತನು ಬಗೆದನು.
“ಏ ಹುಡುಗಾ, ನಿಮ್ಮ ಮನೆಯಲ್ಲಿ ಯಾರಾರು ಇರುವಿರಿ ?”
“ನನ್ನ ಅಣ್ಣ ಹಾಗೂ ತಂದೆ ಇದ್ದಾರೆ” ಹುಡುಗನ ಹೇಳಿಕೆ.
“ಒಳ್ಳೇದು ಇಲ್ಲಿ ಕುಳಿತುಕೋ” ಎಂದು ಆ ಹುಡುಗನನ್ನು ಕುಳ್ಳರಿಸಿಕೊಂಡು ಒಬ್ಬ ಆಳುಮಗನನ್ನು ಕರೆದು ಆ ಹುಡುಗನ ಅಣ್ಣನನ್ನು ಕರೆತರಲು ಹೇಳಿದನು.
ಹುಡುಗನ ಅಣ್ಣ ಬರಲು, ಶ್ರೀಮಂತನು ಅವನ ಅಧಿಕಪ್ರಸಂಗವನ್ನು ತಿಳಿಸಿದನು. ಆ ಮಾತು ಕೇಳಿ ಅಣ್ಣನಿಗೆ ತಮ್ಮನ ಮೇಲೆ ಸಿಟ್ಟು ಬಂತು. ಜಂಕಿಸಿ
ನುಡಿದನು – “ಧನಿಯರು ಸತ್ತರೆ ಆ ಹೆಣವನ್ನು ಹೊರತರುವ ವಿಚಾರ ನಿನಗೇಕೆ ಬೇಕಾಗಿತ್ತು ? ಹೆಣವನ್ನು ಕಡೆಕಡೆದು ತಂದಾರು ಹೊರಗೆ. ಅದರ
ಉಸಾಬರಿ ಏತಕ್ಕೆ ಮಾಡುವಿ ?”
ಆ ಮಾತು ಕೇಳಿ ಶ್ರೀಮಂತನಿಗೆ ಅನಿಸಿತು – ಈತನು ತಮ್ಮನಿಗಿಂತ ಮಿಗಿಲಾದ ಅಧಿಕಪ್ರಸಂಗಿ – “ತಮ್ಮಾ, ನೀನೂ ಒಂದಿಷ್ಟು ಕುಳಿತುಕೋ” ಎಂದು
ನುಡಿದು, “ಇವರಿಬ್ಬರನ್ನು ಬಿಡಬೇಡ” ಎಂದು ಆಳುಮಗನಿಗೆ ಸೂಚಿಸಿದನು. ಬೇರೊಬ್ಬ ಆಳನ್ನು ಕರೆದು – “ಅವರ ತಂದೆಯನ್ನು ಮುಂದೆ ಹಾಕಿಕೊಂಡು ಬಾ. ಅವನಾದರೂ ಈ ಅವಿವೇಕಿಗಳನ್ನು ತಿದ್ದಲಿ” ಎಂದು ಹೇಳಿದನು.
ಮರುಕ್ಷಣದಲ್ಲಿಯೇ ಅವರ ತಂದೆ ಬರಲು, ಶ್ರೀಮಂತನು ಅವನನ್ನು ಹತ್ತಿರಕ್ಕೆ ಕರೆದು ಕುಳ್ಳಿರಿಸಿಕೊಂಡು, ಅವನ ಮಕ್ಕಳಿಬ್ಬರೊಡನೆ ನಡೆದ ಸಂಗತಿಯನ್ನು ಕ್ರಮವಾಗಿ ವಿವರಿಸಿದನು. ತಂದೆಗೂ ಎಲ್ಲಿಲ್ಲದ ಸಿಟ್ಟುಬಂತು, ಅವರ ವರ್ತನೆ ಕೇಳಿ. ಶ್ರೀಮಂತನ ಎದುರಿನಲ್ಲಿಯೇ ಮಕ್ಕಳಿಗೆ ಛೀ ಎನ್ನಲು ತೊಡಗಿದನು – “ಕತ್ತೆ ಆಗಿರುವಿರಿ ತಿಳಿಯುವದಿಲ್ಲವೇ ನಿಮಗೆ ? ಧನಿಯರು ಸತ್ತರೆ ಹೆಣವನ್ನು ಹೇಗೆ ಹೊರತರುವುದೆಂಬ ವಿಚಾರ ನಿಮಗೇಕೆ ಬೇಕಿತ್ತು ? ಹೆಣವನ್ನು ಕಡೆ ಕಡೆದು ಹೊರತರುವ ಯುಕ್ತಿ ಹೇಳಿಕೊಡುವದಕ್ಕೆ ನೀನಾವ ಪಂಡಿತನು ? ಮನೆಯಲ್ಲಿಯೇ ಶವಕ್ಕೆ ಬೆಂಕಿ ಹಚ್ಚಲೊಲ್ಲರೇಕೆ, ನಿಮಗೇಕೆ ಆ ಉಸಾಬರಿ ?”
ತಂದೆಯೂ ಅದೇ ವರ್ಗಕ್ಕೆ ಸೇರಿದ ಪ್ರಾಣಿಯೆಂದು ಬಗೆದು, ಅವರೆಲ್ಲರಿಗೂ ಹೋಗಿಬನ್ನಿರೆಂದು ಶ್ರೀಮಂತನು ಕೈಮುಗಿದು ಕಳಿಸಿದನು.
*****