ನೀಲ ಮುಗಿಲಿನ ಮಾವ!

ನೀಲ ಮುಗಿಲಿನ ಮಾವ!

ಚಿತ್ರ: ಮನೂಚಿ

ಬಯಲ ಸೀಮಿ ಮಾಳಿಗೆಯ ಮೇಲೆ ಅಂಗಾತ ಮಲಗುವ ಚಟವಿದ್ದವರಿಗೆ ಈ ಮುಗಿಲಮಾವನ ಪ್ರೇಮ ಪ್ರಸಂಗಗಳು ಪುರಮಾಶಿ ಲಭ್ಯ!

ಆ ಮಾಳಿಗೆ… ಆ ಗಾಳಿ…. ಆ ಏಕಾಂತದೊಂದಿಗೆ ಗಗನದ ತುಂಬಾ ಗಗನಾಕಾರವಾಗಿ ತೇಲಾಡುವ ಚೈತನ್ಯ ನೌಕೆಗಳು… ಮುಗಿಲ ಅಂಗಳದಿಂದ ಮನೆಯ ಅಂಗಳಕ್ಕೆ ತಿರುಗುತ್ತ ತಿರುಗುತ್ತ ಇಳಿಯುವ ಠೀವಿ… ಕಂಡಿರಾ? ಅವುಗಳ ಸುಂದರವಾದ ಹರವಾದ ಎದೆಕಟ್ಟು ಚುಂಬಿಸಲು ಚಾಚಿದ ಚುಂಚು, ವಿಮಾನಿನಂತೆ ಚಾಚಿದ ಜೋಡಿ ರೆಕ್ಕೆಗಳು, ಅವುಗಳ ಕಂಠದಿಂದ ಆಗಾಗ ಹೊಮ್ಮುವ… ಕಿಲಿಲಿಲಿ.. ಕಿಲಿಂಗು.. ಕೂಗು! ಏನ ಚಂದ ನಮ್ಮ ಈ ಮಾವಯ್ಯ!

ನಾನು ಅನುಭವಿಸಿದಂತೆ… ಈ ಹದ್ದಿನಷ್ಟು ಸುಂದರ ಪಕ್ಷಿ ಈ ಸೃಷ್ಟಿಯಲ್ಲಿ ಇರಲಾರದು! ಗಗನದ ತುಂಬಾ ನಾಗಮಂಡಲವಾಗಿ ಈ ಹದ್ದು ಸುತ್ತುತ್ತ… ಎತ್ತರೆತ್ತರಕ್ಕೆ ಏರುತ್ತ… ಆ ಏರಿದ ಎತ್ತರದಿಂದ ನಿಧಾನವಾಗಿ ಇಳಿಯುತ್ತ ಬರುತ್ತಿದ್ದಾಗ ಅದರ ರೆಕ್ಕೆಗಳ ನೆರಳು ನಮ್ಮ ಮೇಲೆ ಚಕ್ಕನೆ ಚಿಮ್ಮಿ ಹೋಗುವ ಚೆಲುವು… ಎಂಥಾ ಮಜಾ! ಒಮೊಮ್ಮೆ ಆ ದೂರ ಗಗನದಿಂದಲೇ ಅದು ಪಿಚಕಾರಿ ಹೊಡೆದಾಗ ಅದರ ಬೆಳ್ಳನೆಯ ಮಲ… ಹಿಮಪಾತದಂತೆ… ನಮ್ಮ ಪಕ್ಕದಲ್ಲೇ ಪಟ್ಟನೇ ಬಿದ್ದು…. ಪಚ್ಚನೇ ನಮ್ಮ ಗಲ್ಲಕ್ಕೆ ಸಿಡಿದಾಗ ಆಗುವ ಖಶಿ ಏನು ಆಹಾ!

ಹದ್ದಿನಷ್ಟು ಶುದ್ಧವಾದ… ಗಂಭೀರವಾದ… ತೀಕ್ಷ್ಣವಾದ, ಬೆಡಗಿನ ಹಕ್ಕಿ ಯಾವುದಿದೆ ಹೇಳಿ? ನವಿಲು ಜಗಳಗಂಟಿ… ಕೋಗಿಲಾ ಕಿಲಾಡಿ… ಗಿಳಿ ಗುಳ್ಳಿ… ಪಾರಿವಾಳಾ ಉಡಾಳಾ… ಗುಬ್ಬಿ ಸುಬ್ಬಿ… ಬೆಳ್ಳಕ್ಕಿ ಬುಡರಶಿಂಗಿ… ಮರಕುಟುಗಾ ಕಟುಕಾ… ಛೇಛೇ… ಎಲ್ಲ ಪಕ್ಷಿಗಳಿಗೂ ಒಂದೊಂದು ಮೈನಸ್ ಪಾಯಿಂಟ್ ಇದ್ದೇ ಇದೆ. ಆದರೆ ಹದ್ದಿನಷ್ಟು ಪ್ಲಸ್ ಪಾಯಿಂಟುಗಳುಳ್ಳ ಆಕಾಶದ ಶಾಶ್ವತ ರಾಜನ ಸ್ಥಾನ ಯಾರಿಗಿದೆ?

ಮುಗಿಲರಾಜ, ಗಗನರಾಜ, ಮಳೆಯರಾಜ ಹದ್ದು, ಆದ್ದರಿಂದಲೇ ವಿಷ್ಣು ದೇವ ಈ ಹದ್ದನ್ನೇ ಗರುಡನೆಂದು ಖುಶಿಯಿಂದ ಕರೆದು ತನ್ನ ವಾಹನವನ್ನಾಗಿ ಮಾಡಿಕೊಂಡ. ಅರ್ಥಾತ್ ಆ ಕಾಲದ ಬಾಂಬರ ಜೆಟ್ ವಿಮಾನವೆಂದರೆ ಗರುಡನೆಂದು ಸಂಶೋಧನೆ ಮಾಡಿದವನೇ ವಿಷ್ಣು. ಆದರೆ ಥೇಟ ಹುಂಬನಾದ ಶಂಕರ ಎತ್ತಿನ ಡುಬ್ಬದ ಮೇಲೆ ಕುಂತುಬಿಟ್ಟ. ಪಾರ್ವತಿ ನೆನೆಸಿದಾಗ ಅವಳ ಮಡಿಲು ಸೇರಲು ಶಂಕರನಿಗೆ ಸರುವೊತ್ತು ದಾಟಿ ಬೆಳಕಾಗಿಬಿಡುತ್ತಿತ್ತು, ಆದರೆ ಪ್ರಿಯತಮ ಲಕುಮಿ ಕರೆದಾಗ ಈ ಲಕುಮೀಶ ಆರ್ಜಂಟಾಗಿ ಗರುಡನ ಡುಬ್ಬ ಏರಿ, ಸೆಕೆಂಡಿನಲ್ಲಿ ಸುಂದರಿಯ ಸೊಂಟ ಸೇರುತ್ತಿದ್ದ. ಹೆಂಡತಿಯ ಪ್ರೀತಿ ಅಂದರೆ ಇದೇ ರೀತಿ!

ಅತ್ತ ಗಣಪತಿಯಂತೂ ತಾನು ಇಪತ್ತು ಟನ್ನು ಆನೆಭಾರವಿದ್ದರೂ, ಇಪ್ಪತ್ತು ಗ್ರಾಮು ಭಾರದ ಇಲಿಯ ಮೇಲೆ ಕೂತುಬಿಟ್ಟ ಪುಣ್ಯಾತ್ಮ! ಪಾಪ ಆ ಇಲಿ ಮಡಿಯಾಗಿ ಪಟ್ಟನೇ ಸಿಡಿಯಿತೋ ಏನೋ! ಆ ಕಾಲದ ಸೂಪರ್‌ಟೆಕ್ ಸೂಪರಸಾನಿಕ್ ಹಾರುಯಂತ್ರವೆಂದರೆ ಗರಡನೆ! ಇದು ದೇವತೆಗಳ ಸಿಲೆಕ್ಷನ್!!

ಸೌಂದರ್ಯದಲ್ಲಿ ಹದ್ದನ್ನು ಮೀರಿದ ಶಕ್ತಿ ಇನ್ನೊಂದಿಲ್ಲ. ಆದರೆ ಆದರೆ ಶೃಂಗಾರವನ್ನು ನೋಡಿ ಸವಿಯಬಲ್ಲ ಕಣ್ಣುಗಳು ನಮಗೆ ಬೇಕು. ಅದು ಒಂದು ಕಿಲೊಮೀಟರ ಎತ್ತರದಲ್ಲಿ ಹಾರಿದರೂ ಭೂಮಿಯಲ್ಲಿ ಚಲಿಸುವ ಒಂದು ಮಿಲಿಮೀಟರ ಇರುವೆ ಇಲಿ ಹಲ್ಲಿ ಹಾವಿನ ಮರಿ ಗುರುತಿಸಬಲ್ಲದು. ಮಿಂಚಿನ ವೇಗದಿಂದ ಬಂದು, ಫಟಾರನೆ ಆ ಹಾವಿನ ಮರಿಯನ್ನು ಎತ್ತಿಕೊಂಡು ಕೆಲಸಲ ದೊಡ್ಡ ಹಾವನ್ನೆ ಕಚ್ಚಿಕೊಂಡು… ಎತ್ತರದ ಮರದ ಟೊಂಗೆಯ ಮೇಲೆ ಕುಂತು ಟಿಫಿನ್ ಮಾಡಬಲ್ಲದು.

ಒಂದು ಸಲ ನಮ್ಮೂರಲ್ಲಿ ಏನಾಯಿತು ಗೊತ್ತೇ? ಒಂದು ಹದ್ದು ಒಂದು ಉದ್ದ ನಾಗರ ಹಾವನ್ನು ಕಚ್ಚಿಕೊಂಡು ಮುಗಿಲಿಗೆ ಹಾರಿ, ಭಾರಿ ಎತ್ತರದ ತಂಗಿನ ಮರದ ಮೇಲೆ ಕೂತುಬಿಟ್ಟಿತ್ತು. ಆ ನಾಗರ ಹಾವು ಎಷ್ಟು ಕಿಲಾಡಿ ಇತ್ತೆಂದರೆ ಆ ಮುಗ್ಧ ಹದ್ದಿಗೆ ಮಂಕುಬೂದಿ ಎರಚಿ ತಂಗಿನ ಮರದಲ್ಲೇ ತಪ್ಪಿಸಿಕೊಂಡಿತು. ಹದ್ದು ಹುಚಮಂಗ್ಯಾ ಆಗಿ ಹಾರಿಹೋಯಿತು. ಮುಂದೆ ಆ ಆತೀ ಎತ್ತರದ ತೆಂಗಿನಮರದಲ್ಲಿಯೇ ಆ ಸರ್ಪ ಮನೆಮಾಡಿಕೊಂಡು ಬೆಳೆದು… ಬೆಳೆದು. ರೋಣಪ ನಾಗರಹಾವಾಯಿತು! ಇದನ್ನು ಎಷ್ಟಕ್ಕೂ ಅರಿಯದ ಆ ತೋಟದ ಕರಿಯಪ್ಪಣ್ಣ ತೆಂಗಿನಕಾಯಿ ಇಳಿಸಲು ಸರಸರನೇ ಆ ಭಾರಿ ಎತ್ತರದ ತೆಂಗಿನ ಮರದ ತುಟ್ಟ ತುದಿಗೆ ಏರಿ, ತಂಗಿನಕಾಯಿ ಕೀಳಲು ಹೋಗುತ್ತಾನೆ. ಆ ಭಯಂಕರ ಸರ್ಪ ಭುಸ್ಸೆಂದು ಅವನ ಮೇಲೆಯೇ ಎರಗಿಬಿಟ್ಟಿತು! ಅಲ್ಲಿಂದಲೇ ಆ ಕರಿಯಪ್ಪಣ್ಣ ಕುರಿಯಪ್ಪಣ್ಣನಾಗಿ ಬಿರ್ರನೇ ಕಾರಂಜಿ ಬಿಡುತ್ತಲೇ ಭೂಲೋಕಕ್ಕೆ ಸರ್ರನೇ ಇಳಿದುಬಿಟ್ಟ!

ಇಂಥಾ ಹದ್ದಿನ ಪವಾಡ ಯಾವ ಪುರಾಣದಲ್ಲಿದೆ ಹೇಳಿ?

ಒಂದೆಲ್ಲ… ಹತ್ತಾರು ಸಲ… ನಾನು ಹಿತ್ತಲದಲ್ಲಿ ಕುಂತು ಭಕ್ತಿ ಗಾಟೆ ಮಿರ್ಚಿ ತಿನ್ನುವಾಗ ಹದ್ದುಗಳು ಮಿಂಚಿನಂತೆ ಬಂದು, ಫಟ್ಟನೆ ಹೊಡೆದು, ಭಜಿಯನ್ನು ಲೂಟಿಮಾಡಿ ಪರಾರಿ ಆಗುತ್ತಿದ್ದವು! ಆ ಭಯಭೀತಿಯೇ ಒಂದು ಖುಶಿ!

ಒಂದು ಸಲ ಒಂದು ಹದ್ದಿನ ರೆಕ್ಕೆಯಲ್ಲಿ ದಾಸಾಳ ಗಿಡಿದ ಸಣ್ಣ ಟೊಂಗಿ ಸಿಕ್ಕು, ತೊಡರಾಗಿ, ಮಹಾಸಂಕಟದಿಂದ ಭೂಮಿಗೆ ಬಿದ್ದು ಬಿಟ್ಟಿತು. ಆ ಕ್ಷಣದಲ್ಲೇ ನಮ್ಮ ಮನಿಯ ಕರೇಬೆಕ್ಕು ಆ ಹದ್ದನ್ನು ಬೆಣ್ಣೆಮುದ್ದಿ ತಿಂದಂತೆ ಚಪ್ಪರಿಸಿ ತಿನ್ನಲು ಹಾರಿ ಬಂತು. ನಾವೆಲ್ಲ ಓಡಿಹೋಗಿ… ನೆಲಕ್ಕೆ ಕೊಪ್ಪರಿಸಿ ಬಿದ್ದ ಆ ಹದ್ದನ್ನು ಮೆಲ್ಲನೇ ನಮ್ಮ ಕೈಯಿಂದಲೇ ಹಿಡಿದು… ಮೆತ್ತಗೇ ಅದರ ರೆಕ್ಕೆಯಲ್ಲಿ ತೊಡರಿದ ಟೊಂಗೆಯ ಸಿಕ್ಕು ಬಿಡಿಸಿದೆವು. ತಕ್ಷಣ ಹದ್ದು ತುಂಬ ಖುಶಿಯಿಂದ ಪಟಪಟ ರೆಕ್ಕೆ ಬಡಿಯುತ್ತ ಬಳುವಲ ಮರಕ್ಕೆ ನೆಗೆದು ಹಾರಿತು. ಅಂದಿನಿಂದ ಅದು ನನ್ನ ದೋಸ್ತ ಆಯಿತು. ನಾನು ಅದರ ದೋಸ್ತ ಆದೆ. ದಿನವೂ ನಾನು ಆಕಾಶಕ್ಕೆ ತೂರುವ ರೊಟ್ಟಿ ಚೂರುಗಳನ್ನು ಅದು ಖುಷಿಯಿಂದ ಕಚ್ಚಿಕೊಂಡು ಹಾರತೊಡಗಿತು.

ಬಸವಣ್ಣನವರು… ನೀರಿಂಗೆ ನೈದಿಲೆಯೇ ಶೃಂಗಾರ… ಗಗನಕ್ಕೆ ಚಂದ್ರಮನೇ ಶೃಂಗಾರ… ನಾರಿಗೆ ಗುಣವೇ ಶೃಂಗಾರ… ಎಂದು ಹಾಡಿದ್ದಾರೆ! ಬಸವಣ್ಣನವರು ನಮಗೆ ಚೂರು ಪರ್ಮಿಶನ್ ಕೊಡುವದಾದರೆ… ಗಗನಕ್ಕೆ ಗರುಡನೇ ಶೃಂಗಾರ… ನಾರಿಗೆ ಗಾರುಡಿ ಮಂತ್ರವೇ ಶೃಂಗಾರ… ಎಂದು ತಿದ್ದಬಹುದೇ?

ಗಾರುಡಿ ಮಂತ್ರ ಅಂದರೆ ಗೊತ್ತಲ್ಲ?

ಗೋಳು ಕುಟ್ಟುವ ತಮ್ಮ ಗಂಡೂಗಳನ್ನು ರುಬ್ಬಗುಂಡು ಮಾಡಿ ಆಡಿಸುವ ಜಾಣ ಹೆಂಡಿರ ಗರುಡಮಂತ್ರ!


Previous post ನವವಸಂತ
Next post ಸ್ವತ್ತು

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

cheap jordans|wholesale air max|wholesale jordans|wholesale jewelry|wholesale jerseys