ದಾವಾನಲ ಧಾರಿಣಿ ಜಲ ಆಗಸ ಅನಿಲದಲಿ,
ಮಾಯದ ಗಾಯದ ಮಣ್ಣಿನ ಕಾಯದ ಹಂಗಿನಲಿ,
ಸಾರದ ಸೇರದ ಎಂದೂ ಆರದ ಘನತರಣಿ,
ಇರುಳಾಳುವ ಮನದಾಳಕೆ ಸುರಿ ಕಿರಣವ ಕರುಣಿ.

ಎದೆಯಾಳದಿ ಎವೆತೆರೆದಿವೆ ಗತಭವಗಳು ಹೊರಳಿ,
ಎಂದಿನ ಸ್ಮರಣೆಯ ಅರಣಿಯೊ ಹೊಗೆಯಾಡಿದೆ ನರಳಿ,
ಮೇಲೀಳುವ ಬಿಳಿಧೂಮದ ಜಾಲದ ಬಂಧದಲಿ
ಎಡವಿದೆ ಮತಿ, ವಾದದ ಗತಿ ಸುಳಿಬಿಚ್ಚಿದೆ ಕದಳಿ.

ಗಿರಿಹುತ್ತದ ತುದಿಗೆತ್ತಿದೆ ದಿಙ್ನಾಗರ ಭೋಗ
ಸೆಳೆಯುತ್ತಿದೆ ಅಳೆಯುತ್ತಿದೆ ಅನುರಾಗದ ಅಳ,
ಕರೆಯುತ್ತಿದೆ ಬಾರೇ ಬಾ ನೀರೇ ನಿಧಿ ಸಾರೇ
ಇಡಿಚಿತ್ತದ ಮಧುಭಾಂಡದಿ ಏನೇನಿದೆ ತಾರೇ.

ಗಣಿಯಾಳದ ಜಲ ಮೇಲಕೆ ಜುಳು ಜುಳು ಜುಳು ಹರಿದು
ಯೋಗದ ಕಡಲಿಗೆ ಎಚ್ಚರ ನಿದ್ದೆಯ ತೊರೆ ಹರಿದು,
ಸಾಗುವ ಡೊಂಕಿನಲಾಗಲಿ ತೂಗಾಟದ ರಾಗ
ಹಾಲಿನ ಹರವಿಯ ಸಿಡಿಸುವ ಬೃಂದಾವನಭೋಗ.

ಮಾಗಿಯ ರಾತ್ರಿಯ ಮಂಜಿನ ಮಬ್ಬಿನ ತೆರೆ ಸರಿದು
ಕಾಣದ ನಿಜವಿಶ್ವದ ಹೊಸ ದರ್ಶನಗಳು ತೆರೆದು
ಸಾವಿರದಾ ನವವಸಂತ ಮಾವಿನ ಹರೆಯೇರಿ
ಕೂಗುವ ಕೋಗಿಲೆಯಾಗಲಿ ಜೀವವು ತೃಷೆಯಾರಿ.
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)