ನೀರಿಲ್ಲದೂರಿನಲಿ ಮುಗಿಲ ಹುಡುಕಿದರು
ಮುಗಿಲಿಲ್ಲದೂರಿನಲಿ ನೀರ ಹುಡುಕಿದರು

ಹೊಲವಿಲ್ಲದೂರಿನಲಿ ಹಸುವ ಹುಡುಕಿದರು
ಹಸುವಿಲ್ಲದೂರಿನಲಿ ಹೊಲವ ಹುಡುಕಿದರು

ಹೂವಿಲ್ಲದೂರಿನಲಿ ತುಂಬಿಯ ಹುಡುಕಿದರು
ತುಂಬಿಯಿಲ್ಲದೂರಿನಲಿ ಹೂವ ಹುಡುಕಿದರು

ಮರವಿಲ್ಲದೂರಿನಲಿ ಹಣ್ಣ ಹುಡುಕಿದರು
ಹಣ್ಣಿಲ್ಲದೂರಿನಲಿ ಮರವ ಹುಡುಕಿದರು

ಹೆಣ್ಣಿಲ್ಲದೂರಿನಲಿ ಗಂಡ ಹುಡುಕಿದರು
ಗಂಡಿಲ್ಲದೂರಿನಲಿ ಹೆಣ್ಣ ಹುಡುಕಿದರು

ಪ್ರೀತಿಯಿಲ್ಲದೂರಿನಲಿ ಮಕ್ಕಳ ಹುಡುಕಿದರು
ಮಕ್ಕಳಿಲ್ಲದೂರಿನಲಿ ಪ್ರೀತಿಯ ಹುಡುಕಿದರು

ಮನುಷ್ಯರಿಲ್ಲದೂರಿನಲಿ ದೇವರ ಹುಡುಕಿದರು
ದೇವರಿಲ್ಲದೂರಿನಲಿ ಮನುಷ್ಯರ ಹುಡುಕಿದರು

ಮನಃಸ್ಸಾಕ್ಷಿಯಿಲ್ಲದೂರಿನಲಿ ಸತ್ಯವ ಹುಡುಕಿದರು
ಸತ್ಯವಿಲ್ಲದೂರಿನಲಿ ಮನಃಸ್ಸಾಕ್ಷಿಯ ಹುಡುಕಿದರು

ದಯೆಯಿಲ್ಲದೂರಿನಲಿ ಹೃದಯವ ಹುಡುಕಿದರು
ಹೃದಯವಿಲ್ಲದೂರಿನಲ್ಲಿ ದಯೆಯ ಹುಡುಕಿದರು

ಭಾವವಿಲ್ಲದೂರಿನಲಿ ಕವಿತೆಯ ಹುಡುಕಿದರು
ಕವಿತೆಯಿಲ್ಲದೂರಿನಲಿ ಭಾವವ ಹುಡುಕಿದರು
*****