ಬಳ್ಳಾರಿ ನೀರಿನ ಜಾತ್ರೆ
ನಾನೊಲ್ಲೆ ತಂಗೆಮ್ಮ ಈ ಗಂಗಾಯಾತ್ರೆ
ಕೊಡಗಳ ಪರ್ವತಶ್ರೇಣಿಯ ನೋಡಮ್ಮ
ಒಡಕು ಡಬ್ಬಗಳೇನು ಹಂಡೆಗಳೇನು!

ನೂಕು ನುಗ್ಗುಗಳೇನು, ಹಟದ ಪಂಥಗಳೇನು
ಓಕುಳೀಯಾಡುವ ಸಂರಂಭವೇನು!
ಒಬ್ಬಳ ತುರುಬು ಮತ್ತೊಬ್ಬಳ ಕೆಯ್ಯಲ್ಲಿ
ಅಬ್ಬಬ್ಬ ಇವರಿಗೆ ಈಡೇನೆ ನಾವು?

ಘಟಗಳು ಒಡೆದುವು ಬಳೆಗಳು ಸಿಡಿದುವು
ಹಟಮಾರಿ ಜನಗಳ ಮುಷ್ಕರ ನೋಡೆ!
ಸ್ತ್ರೀಯರ ಪುರುಷರ ವಾಗ್ವಾದ ಕೇಳಮ್ಮ
ನ್ಯಾಯಸ್ಥಾನದ ದೊಡ್ಡ ತೀರ್ಪು ನೋಡಮ್ಮ!

ಸಂತೆಯ ರೈತನು ಬಾಯಾರಿ ಬಂದರೆ
ವಂತಿಲ್ಲ ನಡೆಯೆಂದು ನೂಕುತಲಿಹರು!
ಪ್ರಾಣ ಸಂಕಟವಾಗಿ ನಾಲಿಗೆ ಕಳೆದರು
ನೀನಾರಿಗರುಹುವೆ ನಿಲ್ಲೆಂಬರವರು

ದಯೆಯಿಲ್ಲ ಒಂದಿನಿತು ದಾಕ್ಷಿಣ್ಯ ಮೊದಲಿಲ್ಲ
ನಯವಿಲ್ಲ ಭಯವಿಲ್ಲ ಗಂಗೆಯ ಮುಂದೆ
ಅಳತೆಯ ಭತ್ಯವನುಣ್ಣಲು ಬಹುದಮ್ಮ
ತಿಳಿನೀರ ಭವಣೆಯು ಬೇಡಮ್ಮ

ಅಣಕವಾಡಿದಳೆಂದು ಮುನಿಸುಗೊಳ್ಳುವರೇನೊ
ಜನಕಜೆ ಯತ್ನವೆ ಕವಿತೆಯ ತಡೆವುದು
*****