ಮತ್ತೆ ಮೂಡುತಿದೆ ಕತ್ತಲೆದೆಯಿಂದ
ಪೌರುಷಮಯ ಇತಿಹಾಸ,
ಸತ್ತ ಬೂದಿಯಲು ಕಿಡಿಗಳ ತೆರೆಯುವ
ಅನಂತತೆಯ ಚಿರಸಾಹಸ

ಮನೆಯ ಕವಿದಿದ್ದ ಇರುಳನು ಕೊಳೆದು
ಹಗಲ ಹಚ್ಚಿದುದೆ ಸಾಲದೆ?
ನೆರೆಜನ ಮೊರಯಿಡೆ ಕಾದಿ ಗೆಲಿಸಿದೆವು
ಉರುಗೋಲಾಗಿ ಬಳ್ಳಿಗೆ

ಎಂದಿನಿಂದಲೋ ಹರಿದು ಬಂದಿರುವ
ಜೀವನ ಧರ್ಮದ ಶ್ರುತಿಗೆ
ಇಂದಿನ ಸ್ವರವನು ಹೊಂದಿಸಿ ಹಾಡುವ
ಆಸೆ ಫಲಿಸುತಿದೆ ಬಾಳಿಗೆ

ಕಂಠ ಕಂಠದಲು ದನಿಗೊಳ್ಳುತ್ತಿದೆ
ಶ್ರೀ ಸಾಮಾನ್ಯನ ಜಯಕಾರ,
ಮೂಲೆ ಮೂಲೆಯಲು ಮೈಪಡೆಯುತ್ತಿದೆ
ಸಹಸ್ರಶೀರ್ಷನ ಅವತಾರ.
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)