ವಧುವಿನಂತೆ ಕಾದಿದೆ
ವರಣಮಾಲೆ ನೇದಿದೆ
ನಿನ್ನ ವರಿಸಲೆಂದು ಲೋಕ ಕಾತರದಲಿ ಕಾದಿದೆ,
ಬಾ ಬಾ ಹೊಸ ಕಾಲವೆ
ಹೊಸ ಹಾಡಿಗೆ ತಾಳವೆ
ಬಾಳ ಕುಣಿಸುವಂಥ ಗರವ ಬೀಳಿಸುವಾ ದಾಳವೆ!

ಬಾ ಬಾ ಹೊಸವರ್ಷವೆ
ವಧುಗೆ ವರನ ಸ್ಪರ್ಶವೆ,
ಬೆಂದ ಮನಕೆ ಅನಂದವ ತಾ ಅಶಾವೃಷ್ಟಿಯೆ;
ನೀ ಬಾಳಿನೊಳಾಡಿ
ಆಗಲಿ ಹೊಸ ಮೋಡಿ
ಏಳಲಿ ಇಳೆ ಹಳೆಯ ನೋವ ನೆನಪಿನಿಂದ ದೂಡಿ.

ಹಳೆಯದೇನೆ ಇರಲಿ,
ಹೊಸ ಕನಸಿನ ಮುರಳಿ
ಕರೆಯುತ್ತಿದೆ ತೆರೆಯುತ್ತಿದೆ ನವ ಅನುಭವ ಸುರುಳಿ.
ಗೆಜ್ಜೆ ತೊಡಿಸಿ ಅಡಿಗೆ
ಹೂವ ಸಲಿಸಿ ಮುಡಿಗೆ
ಹಾಡಿ ಕರೆವ ಹೊಸದಿನಗಳ ನಮ್ಮ ಲೋಕದೊಳಗೆ
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)