ಅದೃಷ್ಟದ ರೇಖೆಗಳಿವೆ ನಿನಗೆ
ವಿದೇಶಕ್ಕೆ ಹೋಗುತ್ತೀ
ಅಲ್ಲದೆ ಎಷ್ಟು ಮೆತ್ತಗಿದೆ ಈ ಹಸ್ತ!
ಎಲ್ಲರೂ ಒಲಿಯುತ್ತಾರೆ
ನಿನಗೆ ಬಲಿಯಾಗುತ್ತಾರೆ

ಹೆಬ್ಬೆರಳ ಬುಡದ ಈ ಎತ್ತರ ನೋಡು
ಅದರ ಕೆಳಗಿನ ವಿಸ್ತಾರ ನೋಡು
ಉಪನದಿಗಳಂತಹ ಈ ಗೆರೆಗಳು
ಭಾಗ್ಯದ ಸೆರೆಗಳು

ಇನ್ನು ಕೆಲವು
ಸಿಕ್ಕಿದುವು ಎನ್ನುವ ಮೊದಲೆ
ಮಾಯವಾಗುವ ರೇಖೆಗಳು
ನಿಗೂಢ ಹೆಂಗಸು ನೀನು
ಗುಪ್ತ ನಿಧಿಗಳು ಇರುವುದೆ ಹಾಗೆ
ಬೆಟ್ಟಗಳ ಇಳಿಜಾರು
ಜಾರುವ ಹಾಗೆ!
ಅಹ! ಇಂಥ ಕೈ ನಾನು
ಇದು ತನಕ ಕಂಡಿಲ್ಲ!

ಆದರೆ ಆಕೆಗೆ ಗೊತ್ತಿತ್ತು-
ಅವಳ ರೇಖೆಗಳಲ್ಲಿ ನಾನು
ನನ್ನ ದಾರಿಗಳನ್ನು ಮೂಡಿಸುತ್ತಿದ್ದೆ
ಇಬ್ಬರೂ ಈಗಾಗಲೆ
ಬಹಳ ದೂರ ಆಗಲಿದ್ದೆವು!
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)