ಈಗೀಗ ಅವಳು
ನಾಚಿಕೊಳ್ಳುವುದಿಲ್ಲ
ಮೊದಲಿನಂತೆ
ನೀರಾಗುವುದಂತೂ
ದೂರದ ಮಾತೇ ಸರಿ
ಮೂಗುತಿಯ ನತ್ತು
ಅವಳೀಗೀಗ ಭಾರವೆನಿಸುತ್ತಿಲ್ಲ
ಮುಂಗುರುಳು ನಲಿದು
ಮುತ್ತಿಕ್ಕುವುದಿಲ್ಲ
ಗಲ್ಲಗಳ ಚುಂಬಿಸಿ
ಅವಳ ನುಡಿಯಲ್ಲಿ
ಅಂದಿನ ಹುಡುಗಾಟವಿಲ್ಲ
ಕಣ್ಣುಗಳಲ್ಲಿ ಆಗೀನ
ಚಂಚಲತೆಯಿಲ್ಲ
ನೆಟ್ಟ ನೋಟ
ಸ್ಪಷ್ಟ ದಿಕ್ಕಿನತ್ತ
ಹೆಪ್ಪುಗಟ್ಟಿದಂತಿದೆ
ಹೆತ್ತ ಬೀಜಗಳ ಚಿತ್ರವೇ
ಮನ ಭಿತ್ತಿಯಲ್ಲಿ ಅಚ್ಚೊತ್ತಿದೆ
ಅವಳ ಮನ ಮೊಗ್ಗಿನಂತೆ
ಅರಳುವುದಿಲ್ಲ
ಕ್ಷಣ ಭಂಗುರ ಸಂಭ್ರಮಕ್ಕೆ
ಹಿಂದಿನಂತೆ
ಮುಖಮುದ್ರೆ
ಗಾಂಭೀರ್ಯದ ಅಚ್ಚು
ಹಾಕಿದಂತಿದೆ
ಗಡಸುತನ ಗಟ್ಟಿಯಾಗುತ್ತಿದೆ
ಮಾಗಿದಂತೆ ಪ್ರಾಯ
ಬೆಚ್ಚಗಿನ ಬದುಕಿನ
ಹಂಬಲಿಕೆ ಈಗ
ಕನಸಲ್ಲೂ ಇಲ್ಲ
ಬದಲಿಗೆ ಬರುವ
ದಿನಗಳದ್ದೆ ಚಿಂತೆ
ಹೇಗೆ ಕಟ್ಟುವುದು ಸರೀಕರೊಡನೆ
ಸಮಬದುಕು ಎಂಬಂತೆ
ಎಂತಹ ವೈಚಿತ್ರ್‍ಯ ನೋಡಿ
ಒಂದು ಹಡೆದರೆ ಸಾಕು
ಹುಡುಗಿ ಹೆಣ್ಣಾಗಿ ಹೊಣೆಗಾರ್ತಿಯಾಗಲಿಕೆ
ಹೆಂಗಸಾಗಿ ಗಡಸುಗಾರ್ತಿಯಾಗಲಿಕೆ
*****


















