ಮಧ್ಯಾಹ್ನದ ಬಿರು ಬಿಸಿಲು ಹೊರಗೆ
ಒಳಗೆ ತೊಟ್ಟಿಲಲ್ಲಿ ಮಗು ಮಲಗಿದೆ
ಅಡುಗೆ ಮನೆಯಿಂದ ಪರಿಮಳ ಸೂಸಿ
ಗೋಡೆಯ ಮೇಲಿನ ಭಾವಚಿತ್ರಗಳ ಮೂಗರಳಿಸಿವೆ.
ಚಿಟ್ಟೆ ಹರಿದಾಡದೇ ಕುಳಿತಿದೆ ಹೂವ ಮೇಲೆ.
ಹೃದಯ ಮನಸ್ಸು ತಣ್ಣಗೆ ಹೈರಾಣ
ಗೋಡೆಯ ಗಡಿಯಾರ ಸುಮ್ಮನೆ ಚಲಿಸಿದೆ
ಹಣ್ಣು ಹೊತ್ತ ಮರ ಬಾಗಿದೆ ಬಿಸಿಲಿಗೆ
ಕಡಲಿನಾಳಕ್ಕಿಂತ ಮನದ ಆಳ ದೊಡ್ಡದು
ಮಧು ಹೀರಿದ ದುಂಬಿ ತಲ್ಲಣಿಸಿದೆ
ಮಾತುಗಳ ಬಿಮ್ಮನೆ ಮುನಿಸಿಕೊಂಡಿವೆ.
ಪಡಸಾಲೆಯಲಿ ಜೋಕಾಲಿ ಜೀಕಿದೆ
ಅವನಿಲ್ಲದ ಹಗಲು ಭಾರವಾಗಿದೆ
ನೆನಪುಗಳ ಒಗ್ಗರಣೆಗೆ ಸಿಡಿಮಿಡಿಗೊಂಡಿದೆ
ಮಲಗಿದ ಮಗು ರಚ್ಚೇ ಹಿಡಿದು ಅಳುತದೆ
ಅಂಗಳದ ಗಿಡಗಳಲಿ ಒಂದು ಗುಬ್ಬೀ ಚಿಲಿಪಿಲಿ
ತುಂಬಾ ಸುಂದರವಲ್ಲ ಹಿತವಲ್ಲ ಬೆವರ ಹನಿಗಳು.
ನದಿಯ ಹರವಿನಲಿ ಬೆಣಚುಕಲ್ಲುಗಳು
ಬೇರಿನ ನೀರ ಆವಿ ಒಣಗಿ ಹುಡಿ ಮಣ್ಣು
ಬಣ್ಣದ ಬಿಸಿಲಿನ ಸೂರ್ಯನಿಗೆ ಶೃಂಗಾರ
ನೀಲ ಆಕಾಶದ ಕ್ಯಾನ್‌ವಾಸಿನಲಿ ಎಳೆ ಚಿಗುರು
ಬಿಂಬಿಸಿದ ವಸಂತದ ಕನ್ನಡಿ ಹೊಳಪು
ಗಾಬರಿ ಆಗುವುದು ಸಹಜ ಬಿರು ಬಿಸಿಲಿನಲಿ.
*****