ಬಿಗುಮಾನ ಒಂದೆಡೆಗೆ ; ಬಿಂಕ ಮತ್ತೊಂದೆಡೆಗೆ.
ಬೇರಾವುದೋ ಹೊಸತು ಭಾವನಾವರಿಸಿರಲು
ಮೊದಲ ಪರಿಚಯದಂದು ಕಣ್ಣೆತ್ತಿ ನೋಡದೆಯೆ
ಮೌನದಲಿ ಮಾತುಗಳ ಮುಳುಗಿಸುತ ಹಿಗ್ಗಿದೆವು.
ಚಪಲ ಚಂಚಲ ಕಣ್ಣು ನೋಡಲೆಳಸುತಲಿತ್ತು!
ಹೃದಯ ಹರಿಯುತಲಿರಲು ಒಲವ ಹೊನಲಾಗುತಲಿ
ಅಂತು ಎಂತೋ ಏನೋ ತಂಗಾಳಿ ಬೀಸಿತ್ತು.
ಒಂದೆ ಹೂವರಳಿತ್ತು ನಮ್ಮಿರ್ವರೆದೆಗಳಲಿ!

ಆ ಹೂವ ಬಾಳಿಂದು ಚೂರು ಚೂರಾಗುತಿದೆ!
ಅಂದಿನಂತಲ್ಲಿಂದು ಅಗಲಿಕೆಯ ಅರುಣ ದಿನ!
ಆನಂದ ಸಾಗರದಿ ಮಿಂದ ಎರಡಾತ್ಮದೆದೆ
ದಳವೆಲ್ಲ ಬೇರಾಗಿ ಚೂರಾಗಿ ಅಳಿವ ದಿನ!
ಮೊದಲ ಪರಿಚಯದಂತೆ ಸಾವಿನೀ ದಿನವಲ್ಲ.
ಆದರೂ ಮೌನ ಮಾತಿನ ಮಸಣ!- ಇಧಿಯಿಲ್ಲ!
*****