ನೀಲಿ ಗುಲಾಬಿ ಹಳದಿ ಕಪ್ಪು
ಬಣ್ಣಗಳ ಮೋಡಿನ
ಬಟ್ಟೆ ತೊಟ್ಟು ಹೊರಟ ನಿನ್ನ
ಅದೆಷ್ಟೋ ಸಲ ಕಣ್ಣು ಕವಿಚಿ
ನೋಡಿದ್ದು ಹಸಿರೇ ಹಸಿರು.

ಹಸಿರು ಕುದುರೆಯನೇರಿ
ಬಿಸಿಲು ಕೋಲುಗಳನು ದಾಟಿ
ಆಕಾಶದಾರಿಯಲಿ ಹಾಯ್ದು
ನಿನ್ನ ಕಾಣಲು ಕಣ್ಣ ಕಿಟಕಿ ತೆರೆದರೆ
ಕಣ್ತುಂಬ ವಜ್ರಖಚಿತ ಸಿಂಹಾಸನ
ಪಕ್ಕನೆ ಕಣ್ತುಂಬ ನೀರು
ಹನಿ ಹನಿಯೊಳಗೆ ಮತ್ತದೇ ಹಸಿರು.

ಗುಡ್ಡ ಬೆಟ್ಟ ಕೊಳ್ಳದೆದೆಯಾಳದೊಳು
ಕಿಲಕಿಲ ನಗು ಬಿಸಿಯುಸಿರು ಹಸಿಯುಸಿರು
ನೀಲಿಕೊಳಗೊಳಗೆಲ್ಲ ಹೆಜ್ಜೆ ಮೂಡಿದ ಗುರುತು
ಒಡನೆಯೇ ಚಿಗುರೊಡೆಯುವ ಸಂಭ್ರಮಕೆ
ವಸಂತ ಕಳಿಸಿ ಮಳ್ಳ ಮಳ್ಳಿ
ಕಳ್ಳನಾಗಿ ತೇಲಿಹೋಗುವ ಕಾಲಪುರುಷ.
*****

Latest posts by ಲತಾ ಗುತ್ತಿ (see all)