ನನ್ನ ನಾ ನಿನ್ನ ನೀ
ತಿಳಿದುಕೊಳ್ಳುವುದು.
ನನ್ನೊಳಗೆ ನೀ ನಿನ್ನೊಳಗೆ ನಾ
ಬೆಳಕಾಗುವುದು

ಒಳಮೈ ಹೊರಮೈ ಕಾಯಿಸಿಕೊಳ್ಳುವುದು
ಕಿರಣಕ್ಕೊಡ್ಡಿ ಮನಸ್ಸನ್ನು
ದುಡಿಸಿಕೊಳ್ಳುವುದು
ಹಸಿರ ಮತ್ತೆ ಮತ್ತೆ
ಮೆದ್ದು ಮುದಗೊಳ್ಳುವುದು

ಬೆಳಕ ಆಸರೆಗಾಗಿ ಕನಸ ಕಟ್ಟುವುದು
ನೀರ ಮೇಲಿನ ನಡೆಗೂ
ಗುರಿಯ ಇಡುವುದು

ಬೇಲಿ ಗೂಟಕ್ಕೆ ಹಬ್ಬಿದ ಬಳ್ಳಿ
ಗೂಟ ಗೂಟವ ದಾಟಿ ಬೇಲಿಯನ್ನೆ
ಹಸಿರ ಕೋಣೆಯಾಗಿಸಿ
ಅಲಂಕರಿಸುವುದು
ಆಳಕ್ಕೆ ಇಳಿದಿಳಿದು ದೃಢವಾಗುವುದು

ಮನೆ ಹಣತೆಯ ಬೆಳಗಿಸಿಕೊಳ್ಳುವುದು.
ಬತ್ತಿಯ ಮತ್ತೆ ಮತ್ತೆ ಹೊಸೆದು
ಹೊರಗಣ ಹಣತೆಗೂ ತೈಲವನ್ನೆರೆಯುವುದು.
ಬೆಳಕನ್ನೆ ಹೊದ್ದುಕೊಳ್ಳುವುದು
*****