ಹಚ್ಚಿಟ್ಟ ಹಣತೆಯಲ್ಲಿ
ಹೊಸೆದು ಬತ್ತಿಯಾಗಿರುವ ಹತ್ತಿ
ಮಿಂದು ಮಡಿಯುಟ್ಟ ಭಕ್ತನಂತೆ
ತೈಲದಲ್ಲಿ ಮುಳುಗಿ
ತಮದ ಕತ್ತಲ ಸುಡುತ
ಬೆಳಕ ಬಟ್ಟೆಯ ತೊಡುವ
ಯೋಗಿಯಂತೆ!
ತನ್ನೊಡಲ ನೂಲಿನಲೇ ಜೇಡ
ತನ್ನ ಜೀವಜಾಲದ ಕೇಡ
ತಾನೇ ಬಗೆದು ಪ್ರಾಣ ನೀಗುವಂತೆ

ಹತ್ತಿಯ ಬೀಜದಂತೆ
ಚಿತ್ತ ಹತ್ತಿ ಉರಿಯುವ ಬತ್ತಿಯಾಗಿ
ಬತ್ತಿಯನೇ ಸುಡುವ
ತೈಲವೂ ಆಗಿ
ಹೊತ್ತಿ ಉರಿಯುವ
ಬೆಳಕೂ ಆಗಿ
ಮಾಗುವ ಜೀವದ ಪಯಣ
ಸಾಗುತ್ತಿದೆ ಜಗದೊಳು ಸದ್ದಿಲ್ಲದೆ

ಇದ್ದುದಿದೇ ಇತ್ತು
ನಿದ್ದೆ ತಿಳಿದೆದ್ದ ಮಗು
ಅತ್ತದ್ದು ಹಾಲಿಗೋ ಅಮ್ಮನಿಗೋ
ಅಮ್ಮನಿದ್ದೂ ಬಾಟಲಿನ ಹಾಗಲಿಗೆ
ಬಾಯೊಡ್ಡುವ ಮಗುವ
ಅನಾಥವೆಂದು ಕರೆಯಲಾಗದ ಭಾವ
ಇದ್ದೂ ಇಲ್ಲದಂತೆ ಸಂತೈಸುತ್ತಿದೆ ಇನ್ನೂ.

ತೈಲ ತೀರಿದೆಯೆಂದು
ತಿಳಿದೇ ತಿಳಿದೀತು
ದೀಪ ಆರಿದ ಮೇಲೆ
ಆತ್ಮಕ್ಕೆ ಕಮಟು ಹತ್ತುವ ತನಕ
ಬತ್ತಿ ಮುಗಿದಿದೆ ಎಂದು
ತಿಳಿವುದಾದರೂ ಹೇಗೆ?

ಎಣ್ಣೆ ತೀರಿರುವ ದೀಪಗಳಿಗೆ
ಬತ್ತಿ ಹೊಸೆಯುವ ಕೆಲಸ
ವ್ಯರ್‍ಥವೇನಲ್ಲ
ಹತ್ತಿಗೆ ಮೆತ್ತಿಕೊಂಡೇ
ಇರುವ ಬೀಜಕ್ಕೆ
ಬೆಣ್ಣೆಯಾಗುವ ಕರ್‍ಮ ತಪ್ಪಿದ್ದಲ್ಲ
ತಪ್ಪೂ ಅಲ್ಲ!

ಹತ್ತಿ ಬತ್ತಿಯಾಗಿ
ಬೆಳಕಿನ ಬಿತ್ತವಾಗಿ
ತೈಲವಾಗುರಿದು ಇಲ್ಲವಾಗುವ
ಆತ್ಮಪರಿನಿರ್‍ವಾಣದ
ಈ ಪರಿಯ ಸೊಬಗ
ಇನ್ನಾಗ ಜೀವದೊಳು
ಕಾಣಲರಿಯೇ!
*****

ಯಲ್ಲಪ್ಪ ಟಿ
Latest posts by ಯಲ್ಲಪ್ಪ ಟಿ (see all)