ಕಾಡುಲಿಲ್ಲಿಯ ಹೂವುಗಳು – ಒಂದು ಟಿಪ್ಪಣಿ

ಕವಿತೆ ಕಂಡರೆ ಮಾರು ದೂರ ಹೋಗುವವರನ್ನು ಕವಿತೆಯ ಹತ್ತಿರಕೊಯ್ದು ‘ಮುಟ್ಟಿನೋಡಿ, ಇದು ಏನೂ ಮಾಡುವುದಿಲ್ಲ’ ಎಂದು ಭಯ ಹೋಗಲಾಡಿಸುವಂತೆ ಕಾಣುವ ಸವಿತಾ ನಾಗಭೂಷಣರ ಕಾವ್ಯ ಸಮಕಾಲೀನ ಕನ್ನಡ ಕಾವ್ಯದಲ್ಲಿ ಒಂದು ವಿಶಿಷ್ಟ ಭಾವನ್ನು ಒತ್ತಿದ ಕಾವ್ಯ. ‘ಸವಿತಾ ಕಾವ್ಯ ತಂಗಾಳಿಯಂತೆ’ ಎಂದು ಒಂದೇ ಒಂದು ಸಾಲಲ್ಲಿ ದೇವನೂರು ಅವರ ಕಾವ್ಯವನ್ನು ಬಣ್ಣಿಸಿದ್ದಾರೆ. ಎಂ.ಎಸ್. ಆಶಾದೇವಿ ಈ ಮಾತಿಗೆ ಪ್ರತಿಕ್ರಿಯೆ ನೀಡುತ್ತ ತಂಗಾಳಿ ಯಾವಾಗಲೂ ಬೀಸುವುದಿಲ್ಲ ಎನ್ನುವುದೇ ತಂಗಾಳಿಯನ್ನು ಕುರಿತ ಮನುಷ್ಯನ ಹಂಬಲವನ್ನು, ನಿರೀಕ್ಷೆಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ, ತಂಗಾಳಿಯ ಮಹತ್ವವನ್ನು ಹೇಳುತ್ತದೆ .. ಎಲ್ಲ ಬಗೆಯ ಮಾಲಿನ್ಯಗಳ ಈ ಕಾಲದಲ್ಲಿ ಸವಿತಾರ ಬದುಕಿನ ಪ್ರೀತಿಯ, ಶುದ್ದಕಾವ್ಯದ ತಂಗಾಳಿ ಹೆಚ್ಚು ಬೀಸಲಿ(ಕಾಡುಲಿಲ್ಲಿಯ ಹೂವುಗಳು: ಮುನ್ನುಡಿ: ಪು. ೧೭) ಎಂದಿದ್ದಾರೆ. ತಂಗಾಳಿಯ ಲಯಕ್ಕೆ ಬರುವ ಮುನ್ನ, ‘ಶುದ್ದಕಾವ್ಯದ ತಂಗಾಳಿ’ಯ ಧ್ಯಾನಕ್ಕೆ ಬರುವ ಮುನ್ನ, ಸವಿತಾ ಕಾವ್ಯ ಸಾಕಷ್ಟು ತುಮುಲಗಳನ್ನು ಅನುಭವಿಸಿಯೇ ಬ೦ದಿದೆ ಎಂದು ನನ್ನ ಭಾವನೆ.

ಸವಿತಾ ಅವರು ಕಾವ್ಯ ಬರೆಯುತ್ತಿದ್ದ ಆರಂಭ ಕಾಲದಲ್ಲಿ ಅವರ ಸಮಕಾಲೀನ ಕವಯತ್ರಿಯರು ಸ್ತ್ರೀವಾದದ ಬಗ್ಗೆ ಮಾತನಾಡುತ್ತಿದ್ದರು. ಎಚ್ಚೆತ್ತ ನಾನು ಎಂಬ ಪ್ರಜ್ಞೆಯ ಕುಲುಮೆಯಲ್ಲಿ ಬೆಂದು ಕಾವ್ಯ ಕಟ್ಟುವ ಕರ್ಮದಲ್ಲಿದ್ದರು. ಹೊಸ ಸಾಮಾಜಿಕ ಅರಿವಿನ ಬಗ್ಗೆ ಉತ್ಸುಕರಾಗಿ ಬರೆಯುತ್ತಿದ್ದರು. ಇನ್ನು ಅದೇ ಸರಿಸುಮಾರಿನಲ್ಲಿ ‘ಖಡ್ಗವಾಗಲಿ ಕಾವ್ಯ’ ಎಂಬ ಘೋಷಣೆಗಳು ಕಾವ್ಯವನ್ನು ಕ್ರಿಯಾವಾದದ ಹತ್ತಿರ ಸೆಳೆಯುವಂತೆ ಮೊಳಗುತ್ತಿದ್ದವು. ಆಗ್ರಹಪೂರ್ವಕ ದನಿಗಳನ್ನು ಬಂಡಾಯ ಕಾವ್ಯ ನಿರೀಕ್ಷಿಸುವಂತಿತ್ತು. ಸವಿತಾ ನಾಗಭೂಷಣ ಈ ದನಿಗಳಲ್ಲಿ ಯಾಕೆ ಹಾಡಲಿಲ್ಲ. ಇದು ಕುತೂಹಲದ ಪ್ರಶ್ನೆ. ಎಲ್ಲರ ದಾರಿ ಬಿಟ್ಟು ಹೋಗುವ ಅದು ಸುಲಭದ ಮಾರ್ಗವೇನಲ್ಲ. ಭಕ್ತನೊಬ್ಬನಿಗೆ ಇಂತಹ ಕಷ್ಟದ ಆಯ್ಕೆಗಳಿರುತ್ತವೆ. ತಾನು ನಂಬಿದ ಇಷ್ಟದೈವಕ್ಕೆ ಒಲಿದು ಇತರ ಹಂಗಿಲ್ಲದೆ, ನಿಲ್ಲಬಹುದಾದರೆ, ಅವನ ನಿಲುವಿನ ಬಗ್ಗೆ ಎಲ್ಲೋ ಒಂದೆಡೆ ಸೂಕ್ಷ್ಮವಾಗಿ ಆನುಮಾನಗಳು ಇರುವುದು ಸಾಧ್ಯ. ಆದರೆ ಇಷ್ಟದ್ಯೆವದ ಬಲ ಸ್ಪೂರ್ತಿಯನ್ನು ಕೊಡುತ್ತಿರುತ್ತದೆ. ಈ ಬಗೆಯ ಭಾವವನ್ನು ಇಟ್ಟುಕೊಂಡು ಕಾವ್ಯದ ದಾರಿ ತಾನು ಒಲಿದಿದ್ದು ಎಂದು ತೋರಿಸಬೇಕಾದ ಕಷ್ಟವನ್ನು ಸವಿತಾ ಎದುರಿಸಿಲ್ಲವೆಂದು ಹೇಗೆ ಹೇಳುವುದು? ಒಳದನಿಗಳ ಮಂದ್ರಸ್ಥಾಯಿಯಲ್ಲಿ ಸ್ವಂತ ಅನುಭವಗಳನ್ನೂ, ಸಾರ್ವಜನಿಕ ಅನುಭವಗಳನ್ನೂ ಗ್ರಹಿಸುವ ಮತ್ತು ಆ ಮೂಲಕ ತಾನು ಹೇಳುವುದರ ಬಗೆಗೆ ಪ್ರೀತಿ ನಂಬಿಕೆಗಳಿರುವುದಿಂದ ಸಂವಹನ ಸಾಧ್ಯ ಎಂದು ನಂಬುವ ಗುಣ ಸವಿತಾ ಅವರಿಗಿದೆ. ಈ ದಾರಿಯಲ್ಲೇ ಸಾಮರಸ್ಯದ ಹೆಜ್ಜೆ ಮೂಡುವುದು ಎಂದು ನಂಬಿದವರು ಅವರು. ಮೃದು ಮಧುರ ವಚನಗಳಿಂದ ಕಾವ್ಯ ಕಟ್ಟುವ ಸಂಕಲ್ಪ ಮಾಡಿದಂತೆ ಕಾಣುವ ಅವರು ಎಂಥಾ ದಿಗಿಲು ದುಮ್ಮಾನಗಳನ್ನೂ ಕಾವ್ಯದೊಲುಮೆಯಲ್ಲಿ ಹಾಯಿಸಿ ತರುವವೆಂಬ ಆತ್ಮವಿಶ್ವಾಸ ಹೊಂದಿದ್ದಾರೆ. ಮೂಲತಃ ಪ್ರಕೃತಿಯಲ್ಲಿ ಇರುವುದು ಸಮಾಧಾನದ ಗುಣ. ಈ ಸ್ಥಾಯಿಗುಣದ ನಿಯಮ ಮೀರಿ ಏನೂ ಆಗದೆಂದು ಅವರ ನಂಬಿಕೆ ಇರುವಂತಿದೆ. ಹಾಗಾಗಿ ಈ ಸಾಲುಗಳು:
ಜ್ವಾಲಾಮುಖಿಯೇ ಆಗಲಿ
ಸೂರ್ಯನೇ ಆಗಲಿ
ಸಿಟ್ಟಿನಿಂದ ಆಕ್ರೋಶದಿಂದ
ಯಾರನ್ನೂ ಸುಟ್ಟ ದಾಖಲೆಗಳಿಲ್ಲ.
ನೀನು ಭೂಮಿಯ-ಆಕಾಶದ ನಿಯಮಗಳನ್ನು ಮೀರಲಾರೆ.

ಸವಿತಾ ಕಂಡುಕೊಳ್ಳುವ ಪ್ರಕೃತಿಯ ಸಾಮರಸ್ಯದ ಹದ ರೂಪುಗೊಳ್ಳುವುದು ಬಹುಶಃ ನವೋದಯದ ಚೈತನ್ಯದಿಂದ. ಅವರ ಕಾಲದ ಕವಿಗಳು ನವೋದಯಕ್ಕೆ ಬೆನ್ನು ತಿರುಗಿಸಿದಂತೆ, ಸವಿತಾ ಮಾಡಲಿಲ್ಲ. ಅವರಿಗೆ ಅಲ್ಲಿರುವ ವಸ್ತು ಚೈತನ್ಯ ನಿಯಮ ಮುಖ್ಯವಾಗುತ್ತದೆ. ಅನೇಕಾಂತವಾದದ ನೆರಳಿರುವ ಅವರ ಕವಿತೆಗಳು ಸಾಮಾಜಿಕ, ಪ್ರಾಕೃತಿಕ, ವೈಯಕ್ತಿಕ ಎಂಬ ವಿಭಜನೆಯ ಘಟಕಗಳಲ್ಲಿ ಬಿಚ್ಚಿಕೊಳ್ಳುವುದಿಲ್ಲ. ಅತಿ ವಯಕ್ತಿಕವಾದುದು ಪ್ರಾಕೃತಿಕವಾಗಿರಬಹುದು ಅಥವಾ ಅಪ್ಪಟ ಸಾಮಾಜಿಕ ಎನಿಸುವುದು ಪ್ರಾಕೃತಿಕ ನೆಲೆಗೆ ಬರಬಹುದು. ಆದ್ದರಿದಲೇ ಇಲ್ಲಿ ಅಳುವ ಹುಡುಗಿಯನ್ನು ಸಮಾಧಾನಿಸಲು ಪ್ರಕೃತಿ ಬರುತ್ತದೆ. ಹೊಳೆಮಗಳಲ್ಲಿ ತಾಯಿ ಜೀವಪರ ನಿಲುವನ್ನು ಅಳವಡಿಸಿಕೊಳ್ಳಲು ಬುದ್ಧಿಮಾತು ಹೇಳುತ್ತಾಳೆ.

ಪ್ರಕೃತಿಯತ್ತ ನೋಡಲು ಕವಯತ್ರಿಯರಿಗೆ ಕಾರಣವೂ ಇದೆ. ಪರಸ್ಪರ ವಿರೋಧಿ ಭಾವಗಳು ಪರಿಣಾಮವನ್ನು ತಣ್ಣಗಾಗಿಸುತ್ತವೆ. ಈ ಮೂಲಗುಣವನ್ನು ಸಾಮಾಜಿಕ ನಿಯಮ ಎಂದು ಭಾವಿಸಿದಾಗ, ಪರಸ್ಪರ ವಿರೋಧಿಯಾದ ಭಾವಗಳು ಸಾಮಾಜಿಕ ವಲಯದಲ್ಲೂ ಪ್ರಕೃತಿಯ ನಿಯಮವನ್ನು ಅನುಸರಿಸುವುದನ್ನು ನೋಡಬಹುದು. ಹಿಂಸೆಗೆ ಅಹಿಂಸೆ, ಸೇಡಿಗೆ ಸ್ನೇಹ, ವೈರಕ್ಕೆ ಅವೈರಗಳು ಪರಸ್ಪರ ಪ್ರತಿಭಾವಗಳು. ಇದನ್ನು ನಿಯಮವಾಗಿಸಿಕೊಂಡ ಬುದ್ದ, ಗಾಂಧಿಯರು ಸವಿತಾರ ಕಾವ್ಯದಲ್ಲಿ ಬರುವುದಕ್ಕೂ ಇದೇ ಕಾರಣವಿರಬಹುದು.

ಪ್ರಕೃತಿಯ ಸತ್ವದಲ್ಲಿ ವಿಷಯಾತೀತ (transcental) ಇರುವನ್ನು ಸಾಧಿಸಲು ಬಯಸುವ ರೊಮ್ಯಾಂಟಿಕ್ ಕಾವ್ಯದ ಮಾದರಿಯನ್ನು ಸವಿತಾರ ಪ್ರಕೃತಿ ನಿಷ್ಠತೆಯ ಜೊತೆಗೆ ಹೋಲಿಸಲು ಆಗದೇನೋ. ಅವರ ಕಾವ್ಯ ಚಂದ್ರ, ಸೂರ್ಯ, ನದಿಗಳ ಪ್ರಾಕೃತಿಕ ಆವರಣದಲ್ಲಿ ಸೃಷ್ಟಿಯಾದಂತೆ ಕಂಡರೂ, ಅದು ಸಾಮಾಜಿಕ ಸ್ತರಗಳಲ್ಲಿ ವಿಸ್ತಾರವನ್ನು ಪಡೆಯುವಂತೆ ಕಾಣುತ್ತವೆ. ‘ಚಂದ್ರನನ್ನು ಕರೆಯಿರಿ ಭೂಮಿಗೆ’ ಒಂದು ರೊಮ್ಯಾಂಟಿಕ್ ಕವಿತೆಯಂತೆ ಕಾಣುತ್ತದೆ. ಆದರೆ ಕಿಟಕಿಯೊಳಗೆ ನಿಂತು ಕರೆವ ವ್ಯಕ್ತಿಯ ಸಾಮಾಜಿಕ ಬೇಲಿಗಳು ಚಂದ್ರನೆಂಬ ವಸ್ತುವನ್ನು ತನ್ನೊಳಗೆ ಪ್ರವೇಶ ಮಾಡದಂತೆ ನಿರ್ಬಂಧ ಹಾಕುವ ಸೂಚನೆಯನ್ನು ನೀಡುತ್ತಿವೆ. ‘ನಾನು ಸೂರ್ಯ’ ಕವಿತೆಯಲ್ಲಿ ಸೂರ್ಯ ಹೇಳಿಕೊಳ್ಳುವುದೇನೆಂದರೆ:
ನಾನು ಹುಟ್ಟು ಬಂಡಾಯಗಾರ
ಜಗತ್ತಿನ ಅನ್ಯಾಯದ
ವಿರುದ್ಧ ಯಾವತ್ತು
ಸಿಡಿದು ನಿಂತಿದ್ದೇನೆ ದೂರ…. ಎಂದು.

ಅವನ ವಸ್ತುಗುಣ ಸಾಮಾಜಿಕ ಚಹರೆಯನ್ನು ಪಡೆಯುವಂತೆ ಮಾಡುವ ಕ್ರಮ ಈ ಬಗೆಯದು.

ಇದಲ್ಲದೆ, ಇನ್ನೊಂದು ಪರಂಪರೆಯ ನಿಯಮವನ್ನೂ ಅವರ ಪ್ರಕೃತಿ ಕವಿತೆಗಳು ಪಾಲಿಸುತ್ತವೆ. ಅದು ಭಕ್ತಿಯ ಮೂಲಕ. ಭಕ್ತಿಗೆ ಒಂದು ಒಳಗಿನ ಲೋಕ ಇದೆ. ದ್ವೈತ್ವ ಭಾವದಲ್ಲಿ ತನ್ನಿರುವನ್ನು ಗುರುತಿಸಿಕೊಂಡು, ಶರಣಾಗತಿಯ ಭಾವದಲ್ಲಿ ತಲ್ಲೀನತೆಯನ್ನು ಪಡೆಯಲು ಯತ್ನಿಸುತ್ತದೆ. ಶುದ್ದಭಾವದ ಸೆಳಹಿನಲ್ಲಿ ಮುಗ್ಧತೆ ಮತ್ತು ಇನ್ನೊಬ್ಬರ ಹಿತ ಬಯಸುವ ಅಮಲಭಾವ ಹುಟ್ಟುತ್ತದೆ. ಇದು ಮುಂದೆ ಸಾಮಾಜಿಕ ಕಾಳಜಿಯ ದನಿಯಲ್ಲಿ ಕಂಡುಕೊಳ್ಳಬಹುದು. ಈ ಸಂಕೀರ್ಣ ಭಾವವನ್ನು ಕಾವ್ಯದ ಮೂಲವಾಗಿರಿಸಿಕೊಳ್ಳುವುದು ಸ‌ವಿತಾ ಕಾವ್ಯ ಅನ್ನಿಸುತ್ತದೆ. ಭಕ್ತಿಯ ಆರ್ದ್ರತೆ, ಆರ್ತಭಾವವು ನಿವೇದನೆಗೆ ಸುಲಭವಾಗಿ ಒಲಿಯುವಂತದ್ದು ಮತ್ತು ತೆರೆದುಕೊಳ್ಳುವ ಕ್ರಿಯೆಗೆ ಪೂರಕವಾದುದು. ಇದೇ ಭಾವವನ್ನು ಇನ್ನೊಂದು ಹೃದಯ, ಇನ್ನೊಂದು ವ್ಯಕ್ತಿತ್ವವನ್ನು ಮುಟ್ಟಲು ಸಾಧ್ಯವಾಗಬಹುದು. ಚೆಲುವ ನಾರಾಯಣನನ್ನು ಧ್ಯಾನಿಸುವ ಭಾವವು ಸಾಮಾಜಿಕ ಸಂಗತಿಗಳ ಮೇಲಿನ ಭಾವಕ್ಕಿಂತ ಬೇರೆಯಾಗಿ ಕಾಣುವುದಿಲ್ಲ.

ಭಕ್ತಿಯೆನ್ನುವುದು ನಾನು ಎಂಬ ಭಾವವನ್ನು ಸ್ಪಷ್ಟಪಡಿಸಿಕೊಳ್ಳುವಂತದದ್ದು. ಸವಿತಾ ಅವರ ಕಾವ್ಯದಲ್ಲಿ ಆರಂಭಿಕ ಸಂಕಲನಗಳ ಅನೇಕ ಕವಿತೆಗಳು ‘ನಾನು’ ಎಂಬ ಆತ್ಮಪ್ರತ್ಯಯದಿಂದ ಕೂಡಿವೆ. ಅಕ್ಕಮಹಾದೇವಿ ಬಹುಶಃ ನಾನು ಎಂಬ ಭಾವವನ್ನು ಚೆನ್ನಾಗಿ ಅನುಭವಿಸಿದಂತಹ ಕವಯತ್ರಿ. ನಾನು ಎಂಬುದು ಆಧ್ಯಾತ್ಮಿಕ ಪ್ರಶ್ನೆಯೂ ಹೌದು. ಇವೆರೆಡರ ತೊಳಲಾಟದಲ್ಲಿ ಅಕ್ಕಮಹಾದೇವಿಯಂತಹವರೂ ಇರಬೇಕಾಗುತ್ತದೆ. ‘ನಾನು ಹೆಂಗೂಸಲ್ಲ’ ಎಂದು ಹೇಳುವ ಚೆನ್ನಮಲ್ಲಿಕಾರ್ಜುನನೆಂಬ ಗಂಡನನ್ನು ಮದುವೆಯಾದ ಹೆಣ್ಣಾಗಿ ಗುರುತಿಸಿಕೊಳ್ಳುವ ತುರ್ತು ಸಾಮಾಜಿಕವಾಗಿ ಮತ್ತು ವೈಯಕ್ತಿಕ ಹಂತಗಳೆರಡರಲ್ಲೂ ಕೂಡಿಸಿಕೊಳ್ಳಬೇಕಾದ ಭಾವ, ಸವಿತಾ ಅವರಲ್ಲೂ ಈ ಭಾವಗಳಿವೆ. ನಾನು ಎಂಬುದು ಹೆಣ್ಣುವ್ಯಕ್ತಿತ್ವ, ಮೃದುವ್ಯಕ್ತಿತ್ವ ಇತ್ಯಾದಿಗಳನ್ನು ಸಂಕೇತಿಸುವ ಕವಿತೆಗಳು ಅವರಲ್ಲಿ ಇದ್ದರೂ ಅವುಗಳ ಪ್ರಮಾಣ ಕಡಿಮೆಯೆಂದೇ ಹೇಳಬೇಕು. ಆದರೆ ನಾನು ಎನ್ನುವುದನ್ನು ಪರೀಕ್ಷೆಗೊಳಪಡಿಸಿಕೊಳ್ಳುತ್ತಲೇ ಇರುವುದಾಗಿ,
ಆಮೇಲೆ ನೀನು ಎಂಬುದನ್ನು ಗುರುತಿಸುವಂತದ್ದು. ಅವರ ಈ ಸಾಲುಗಳನ್ನು ನೋಡಬೇಕು:
ನೀನೆಂಬುದಿಲ್ಲದಿದ್ದರೆ| ನಾನೆಂಬುದೂ ಇಲ್ಲ.
ದುಃಖ ದುಗುಡ, ದುಮ್ಮಾನವಿಲ್ಲ.
ಆಸೆ, ಅಕ್ಕರೆ, ಅಹಂಕಾರಗಳಿಲ್ಲ.
ಆತ್ಮನೂ ಇಲ್ಲ, ಪರಮಾತ್ಮನೂ ಇಲ್ಲ.
……………………
ಇಲ್ಲಿ ನಾನು-ನೀನು
ಏನೇನೂ ಅಲ್ಲ (ನೀನೆಂಬುದಿಲ್ಲದಿದ್ದರೆ …)

ಕವಿತೆಯ ವಿಸ್ತಾರ ನಿಧಾನವಾಗಿ ನಾನು ನೀನು ಎಂಬುದರಿಂದ ಪ್ರಾರಂಭವಾಗಿ ಬ್ರಹಾಂಡದಲ್ಲಿ ಸುತ್ತಾಡಿ, ಕೊನೆಗೆ ಮೆಟಪಿಸಿಕಲ್ ಆದ ನೆಲೆಯಲ್ಲಿ ಬಂದು ನಿಲ್ಲುತ್ತವೆ. ಇದೇ ಸಾಮಾಜಿಕ ವ್ಯಕ್ತಿತ್ವವು ಪರ್ಯವಸನವಾಗಿ ನಿಲ್ಲಬೇಕಾದ ನೆಲೆಯೂ ಆಗಿದೆಯಲ್ಲವೇ? ‘ಗಾಂಧಿ ಹುಟ್ಟಿದ’ ಕವಿತೆಯನ್ನು ನೋಡಿದರೆ, ಗಾಂಧಿಯ ವ್ಯಕ್ತಿತ್ವ ಮಾಗುವಿಕೆಯ ಅರಿವಿನಿಂದಲೇ ಹುಟ್ಟಿದ್ದನ್ನು ಬಿಚ್ಚಿಡುತ್ತದೆ. ನಾನು ಎಂಬುದು ಸಂಕುಚಿತವಾಗಿದ್ದು ನೋವು, ಅಪಮಾನಗಳಿಂದ ಹದಗೊಂಡು ಮಾಗಿ ಗಾಂಧಿಯೆಂಬ ವ್ಯಕ್ತಿತ್ವ ತಳೆಯುತ್ತದೆ. ಈ ಆಗುವಿಕೆಯ ಆಶಯ ‘ನಾನು’-ಎನ್ನುವ ಆತ್ಮಪ್ರತ್ಯಯದಿಂದ ಹೊರಟು ವಿಸ್ತಾರವಾದ ನೆಲೆಯನ್ನು ಕಂಡುಕೊಳ್ಳುತ್ತದೆ ಎಂಬುದನ್ನು ಇಲ್ಲಿ ಗಮನಿಸಬಹುದು. ಅಲ್ಲದೆ ನಾನು ಎಂಬುದು ಸಂಯೋಜನೆಯ ಫಲವೂ ಆಗಿದೆ. ಎಲ್ಲವು ಸೇರಿ ಒಂದು ನಿರಂತರ ಆಗುವಿಕೆಯ ಪರಿಣಾಮಗಳನ್ನು ಸೃಷ್ಟಿಸುತ್ತಿರುತ್ತದೆ. ಈ ದೃಷ್ಟಿಯಿಂದ ‘ಹಪ್ಪಳದ ಕತೆ’ ಕವಿತೆಯ ಸಂಯೋಜನೆಯ ತಿರುಳು ಗಮನಾರ್ಹವೆನಿಸುತ್ತದೆ:
ತನಗೆ ತಾನೆ ಎಂಬಂತೆ ಎಲ್ಲಿಂದ ಬಂದೆ? | ಎಂದು ಹಪ್ಪಳವೆ ಕೇಳಿತು
ಬೀಜ, ಸಸಿ, ತೆನೆ | ಕಾಳು, ಬೇಳೆ
ಬೆವರು ಹಸಿವು
ನೀರು, ನೆಲ, ಭೂಮಂಡಲ
ಉಂಡೆ ಉಂಡೆಯಾಗಿ
ಹಪ್ಪಳವೆ ತಾನಾಗಿ ! ಕತೆ ಸಾಗಿತು.
(ಹಪ್ಪಳದ ಕತೆ)
‘ಕಾಡುಲಿಲ್ಲಿಯ ಹೂವುಗಳು’ ಸವಿತಾ ನಾಗಭೂಷಣರ ಈವರೆಗಿನ ಪದ್ಯಗಳ ಸಂಕಲನ. ‘ಹೂಗಳೆಂದರೆ ನನಗೆ ಪ್ರೀತಿ’ ಎಂದು ಹೇಳುವ ಸವಿತಾ ಹೂ ಪದ್ಯಗಳನ್ನೂ ಬರೆದಿದ್ದಾರೆ. ಹೂಗಳ ಮೂಲಕ ಅವರು ಮುಗ್ಧತೆಯನ್ನು ಒಂದು ಮೌಲ್ಯವಾಗಿ ಬಿಂಬಿಸುತ್ತಿದ್ದಾರೆ ಎಂದು ಕೆಲವು ವಿಮರ್ಶಕರು ಹೇಳುವುದುಂಟು. ಆದರೆ ಕೊನೆಗು ನನಗನ್ನಿಸುವುದು ಭಕ್ತಿಯ ಆರ್ದ್ರತೆಯ ಭಾವ ಮತ್ತು ಅಲ್ಲಿ ಉಳಿಯುವ ಚಡಪಡಿಕೆ ಮತ್ತು ವಿಷಾದಗಳು ಅವರ ಕಾವ್ಯದಲ್ಲಿವೆ ಎಂದು ಸರಳವಾಗಿ ಹೇಳುವ ಅವರ ಕ್ರಮದಲ್ಲಿ ಒಂದು ವಿಷಾದದ ಎಳೆಯಿರುವುದನ್ನು ಗುರುತಿಸಬಹುದು; ಹಾಗೇ ಚಡಪಡಿಕೆಯೂ ಇರುವುದು ಗೋಚರವಾಗುತ್ತದೆ. ಹೂವಿನಿಂದ ಹೊಡೆದರೆ ನಲುಗಿ ನೋಯುವ ಸುಕುಮಾರಲೋಕ ನಮ್ಮ ಸುತ್ತ ಖಂಡಿತವಾಗಿಯೂ ಇಲ್ಲ. ಅದಕ್ಕಾಗಿ ಕೈಗೆ ಖಡ್ಗವೆತ್ತಿಕೊಂಡು ಯುದ್ಧಸಾರುವ ಧಾಟಿಯನ್ನು ಸವಿತಾ ಬಹುಶಃ ಬಯಸುವುದಿಲ್ಲ. ಆದರೆ ಅವರು ತಮ್ಮ ಕವಿತೆಗಳಲ್ಲಿ ತರುವ ಸಾಮಾಜಿಕ ಅಸಮಾನತೆಗಳ ಚಿತ್ರಣ ಬಂಡಾಯದ ಸ್ವರೂಪವನ್ನು ಹೇಳುತ್ತವೆ. ಮುಖ್ಯವಾಗಿ ಸ್ತ್ರೀ ಅಸ್ತಿತ್ವದ ಪ್ರಶ್ನೆ ಬಂದಾಗ, ಅವರ ದನಿ ಶೋಷಿತರ ದನಿಯೊಳಗೆ ಮಿಳಿತವಾಗುತ್ತದೆ. ಸಿರಾಜ್ ಅಹಮದ್ ಗುರುತಿಸುವಂತೆ ಅವರ ಕಾವ್ಯದಲ್ಲಿ ಮಾತೃತ್ವದ/ವಾತ್ಸಲ್ಯದ ಭಾವಗಳು ಇವೆ ಎಂದು ನನಗನ್ನಿಸುವುದಿಲ್ಲ. ಜೋರಾದ ದನಿಯಲ್ಲಿ ಪ್ರತಿಭಟನೆ ಮಾಡದೇ ಹೋದರೂ, ಪ್ರತಿಭಟನೆಯ ಸೊಲ್ಲನ್ನು ಕೇಳಿಸುತ್ತದೆ ಆವರ ಕಾವ್ಯ. ಅದು ಮಾತೃತ್ವದ ಭಾವದಲ್ಲಿ ಮುಳುಗಿ ಹೋಗುವುದಿಲ್ಲ. ಸಾಮಾನ್ಯತೆಯಲ್ಲಿ ಆಸಮಾನ್ಯತೆಯನ್ನು ಕಾಣುವ ನವೋದಯದೊಳಗೆ ಪ್ರೀತಿವಾತೃಲ್ಯಗಳು ಸಹಜ ಭಾವಗಳಾಗಿ ಬರುತ್ತವೆಯಲ್ಲವೆ? ಜಾತ್ರೆಯೊಳಗಿನ ಶಿವನ ದರ್ಶನ ಮಾಡಿಸುವ ಕವಯಿತ್ರಿಗೆ ಸಹಸ್ಪಂದನದ ಗುಣವು ಹೆಚ್ಚಿನದ್ದಾಗಿದೆ ಎಂಬುದು ತಿಳಿಯುತ್ತದೆ.

ಸವಿತಾರ ಕಾವ್ಯ ಕಳೆದೆರಡು ದಶಕಗಳಲ್ಲಿ ವಿವಿಧ ವಿನ್ಯಾಸಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತಾ ಬಂದಿದೆ. ಅವರ ಸಾಮಾಜಿಕ ಕಾಳಜಿಯು ಇನ್ನಷ್ಟು ಪ್ರಖರವಾಗಿಯೇ ಕಾಣಿಸಿ ಕೊಳ್ಳುತ್ತಿದ್ದು, ದೈನಂದಿನ ರಾಜಕಾರಣವು ಸಹ ಅಲ್ಲಿನ ಭಾಗವಾಗಿ ಬರುತ್ತಿದೆ. ಇಲ್ಲಿ ನನಗೆ ತೊಡಕುಂಟಾಗುತ್ತದೆ. ಕವಿಗೆ ಕಾವ್ಯ ಕಟ್ಟಲು ಬಂದಾದ ನಂತರ ಅವನ ಮುಂದೆ ಸವಾಲುಗಳು ಹೆಚ್ಚು. ‘ಪೇಪರ್ ಓದಿ ಚರ್ಚಿಸುವ ಮಧ್ಯಮ ವರ್ಗ’ (ಲಂಕೇಶರ ಪದಪುಂಜ)ದ ಅಭಿವ್ಯಕ್ತಿಗಳಂತೆ ಅವರ ಸಾಮಾಜಿಕ ಕಾಳಜಿಯು ಎಲ್ಲೋ ತೀವ್ರತೆಯನ್ನು ಕಳೆದುಕೊಂಡಂತೆ ಅನ್ನಿಸುತ್ತದೆ. ‘ಜಾಗತೀಕರಣದ ಹೊಸ್ತಿಲಲ್ಲಿ ನಿಂತ ರೈತನಿಗೊಂದು ಕಿವಿಮಾತು’ ತರದ ಕವಿತೆಗಳಲ್ಲಿ ಪ್ರತಿಕ್ರಿಯಾತ್ಮಕ ಗುಣಗಳೇ ಎದ್ದು ಕಾಣುವಂತಿದೆ. ಸಾಮಾಜಿಕ ಕಳಕಳಿಯ ಪ್ರಾಮಾಣಿಕತೆಯು ಪಾರ್ಟಿನೋಸ್ಟ್ ಕವಿತೆಗಳಲ್ಲಿ ಎಷ್ಟೋಬಾರಿ ಇಲ್ಲವಾಗಿರುತ್ತದೆಯಂತೆ. ಸಮಕಾಲೀನ ಸನ್ನಿವೇಶದಲ್ಲಿ ‘ಬಾಲ್ಕನಿ ಆಕ್ಟಿವಿಸಂ’ ಎಂದು ಹೇಳುವ ರೀತಿಗೆ ಹತ್ತಿರ ಬರುವಂತೆ ಸಾಮಾಜಿಕ ಕಳಕಳಿ ವ್ಯಕ್ತವಾಗುತ್ತಿದೆ. ಹಾಗೇ ಸಾಹಿತ್ಯದಲ್ಲೂ ಕವಿತೆಯನ್ನು ಭಾವಿಸಿ ಬರೆಯುವ ಮಟ್ಟದಿಂದ ಪ್ರೊಫಶನಲಿಸಂ ಕಡೆಗೆ ಕರೆದೊಯ್ಯುತ್ತಿವೆಯಲ್ಲವೆ? ಸವಿತಾರ ಕಾವ್ಯ ಕೂಡ ಈ ಬಿಕ್ಕಟ್ಟಿನ ಸ್ಥಿತಿಯನ್ನು ಎದುರಿಸುತ್ತಿದೆ. ಏನೇನೂ ಅರಿವಿಲ್ಲದೆ ಅರಿವಿನ ಶಿಖರ ಮುಟ್ಟುವ ಅನುಭಾವ ಮಾರ್ಗಗಳು ಹೊಳೆಯಿಸುವ ಶಕ್ತಿಯಿದ್ದ ಅವರ ಕಾವ್ಯ ವಾಚಾಳಿತನದ ಸೋಂಕು ಅಂಟಿಸಿಕೊಳ್ಳುತಿದೆಯೆಂಬ ಆತಂಕ ನನ್ನದು. ಇದಕ್ಕೆ ಅವರ ಕ್ರಿಯಾಶೀಲತೆಯೇ ಉತ್ತರ ಕೊಡಲಿದೆ ಎಂದು ಇದೇ ಸಮಯದಲ್ಲಿ ಭರವಸೆಯನ್ನೂ ತಾಳುತ್ತಿರುವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೊದಲಿಗೆಲ್ಲಿತ್ತರಿ ಅಲಾವಿ ಕೂನಾ
Next post ಸಲಹೆ

ಸಣ್ಣ ಕತೆ

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ಇನ್ನೊಬ್ಬ

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…