Home / ಕವನ / ಕವಿತೆ / ತಂತಾನೆ ನೋಡಿಕೊಂಡರೆ?

ತಂತಾನೆ ನೋಡಿಕೊಂಡರೆ?

ಎಲೆಲ್ಲೆಲ್ಲಿ ನೋಡಿದರೂ ಎಲ್ಲಾರೂ ಕಾಣಿಸ್ತಾರೆ, ನಾನೇ ಮಾತ್ರ ಕಾಣ್ಸೋದಿಲ್ಲ|
ನಾನಿದ್ದದ್ದೇ ಸುಳ್ಳೋ? ಹೇಳಾಕಿಲ್ಲ.
ಇದ್ದೇನೆಂದ್ರೂ-ಇದ್ದಾಂಗಿಲ್ಲ| ಏಸು ವರ್ಷ ಕಳೆದ್ರೂ ಬೆಳದ್ಹಾಂಗಿಲ್ಲ |
ಬುದ್ಧಿಯಂತೂ ಬರಲೇ ಇಲ್ಲ| ಹೋಗಿದ್ರೇ ಬರಬೇಕಲ್ಲ|
ಹೋದ ಬುದ್ಧಿ ತಿಂದ ಮುದ್ದಿ ಬರೋದುಂಟೇ?
ಬರತಽದಂದ್ರೆ ಬೇರೇ ದಾರಿಗುಂಟೇ ||

ಹೀಚು ಹೋಗಿ ಮಿಡಿ ಆಯ್ತು | ಕಾಯಿ ಹೋಗಿ ಹಣ್ಣು ಆಯ್ತು |
ಬದಲೀ ಬಣ್ಣೇ ಬರಲಿಲ್ಲ| ರುಚಿಯೇನೋ ತರಲಿಲ್ಲ|
ಹಳೇದಾದ್ರು ಹುಳಿ ಹೋಗಲಿಲ್ಲ | ಪಾಡುಗೊಂಡು ಮಧುರಾಗಲಿಲ್ಲ|
ಹಣ್ಣೆಂದು ಕರೆಯೋದ್ಹ್ಯಾಂಗ ಹುಣಸೀಕಾಯಿಗೆ ?
ಕಸುಕಿದ್ರು ಹುಣಸಿನಕಾಯಿ, ಹಣ್ಣಾದ್ರು ಹುಣಸಿನಕಾಯಿ
ಯಾಕೆಂದು ಕೇಳಬೇಡಿ ಹಾಕಿನೋಡಿ ಬಾಯಿಗೆ! ||

ಇದ್ದ ಗುಣ ಇದ್ದೇ ಇತ್ತು | ಬಣ್ಣ ಮಾತ್ರ ಬದಲಾಗಿತ್ತು|
ಸಕ್ರಿಮಾತ್ರ ಬೆರೀಲಿಲ್ಲ ಹುಳಿಹುಳಿ ಜೊಂಡಿಗೆ|
ಮೈ ಆಯ್ತು ಮೆತ್ತಗೆ | ಆಯುಷ್ಯ ಬಂತು ಹತ್ತೆಗೆ|
ಗುಣಾ ಹೋಗದಿದ್ರೆ ಈಡುಮಾಡಬೇಕು ಗುಂಡಿಗೆ ||

ತೆಂಗಿನಕಾಯಿ ಇನ್ನೊಂದು ಜಾತಿ | ದಿನಗಳೆದಂತೆ ಬಿರುಸಾಗತೈತಿ |
ಅಂಬವರುಂಟು ಹುಣಸಿಹಣ್ಣು | ಅಂದವರುಂಟೆ ತೆಂಗಿನಹಣ್ಣು? ||

ತೊಂಗಲಿಲ್ಲ ತಿಸಿಲಿಲ್ಲ ಮರ ಬೆಳೀತು ಮುಗಿಲಿಗೆ |
ಇಳಿದು ಬರುವ ಎಣಿಕೀ ಹಾಕದೆ, ಕಾಯಿ ಏರಿತು ಚಂಡಿಗೆ |
ನೇಣುಹಾಕಿ ನೇತಾಡುವನು ಜಿಗಿದು ಬಿದ್ರೆ ಭೂಮಿಗೆ|
ಸೀಳಿ ಹೋಗಬೇಕು, ಸೋರಿ ಹೋಗಬೇಕು ಸಾವಿಗೆ ||

ತಿನ್ನೋದೇನು ಸುಲಭವಲ್ಲ ತೆಂಗಿನಕಾಯಿ
ಜುಟ್ಟು ಕಿತ್ತಿ ಪರಟೇ ಒಡೆದು ತಗೀಬೇಕು ಬಾಯಿ ||
ಹಲ್ಲು ತಗೀದಿದ್ರೆ ಆಗಬೇಕಾಗ್ತಾದ ನಾಯಿ
ಹೈರಾಣಕಂಜಿ ಬಿಡೂದಕ್ಕಿಂತ ಹೆಚ್ಚುತಿಂದು ಸಾಯಿ ||

ತೆಂಗಿನ ಹಾಗೆ ಬಿರುಸು. ಹುಣಿಸೆಯಂತೆ ಹುಳುಚು |
ನನ್ನ ರುಚಿ ನನಗೇ ಬೇಡ | ಹೆರವರಿಗಂತೂ ಮೊದಲೇ ಬೇಡ ||
ಇದ್ದ ಕಣ್ಣು ಮುಚ್ಚಿಕೊಂಡು ತಂತಾನೆ ನೋಡಿಕೊಂಡರೆ
ಕಾಣಿಸ್ತೇನೋ ಕಾಣೊದಿಲ್ಲೋ ನೋಡಬೇಕು ಹಾಗಾದರೆ ||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...