ರೂಪವಿಸ್ಮಯ ಮತ್ತು ರೂಪವಿಸ್ಮೃತಿ

ರೂಪವಿಸ್ಮಯ ಮತ್ತು ರೂಪವಿಸ್ಮೃತಿ

‘ಸುದೀರ್ಘವೂ ಸೃಜನಶೀಲವೂ ಆದ ಬದುಕನ್ನು ಬದುಕಿದ ಇತರ ಶ್ರೇಷ್ಠ ಕಲಾವಿದರಂತೆಯೇ, ಬರ್ನಿನಿ ಕೂಡಾ ವ್ಯಕ್ತಿಗತವಾದ ತನ್ನದೇ ತಡವಾದ ಶೈಲಿಯೊಂದನ್ನು ರೂಪಿಸಿಕೊಂಡ. ಈ ಸಾದೃಶ್ಯವನ್ನು, ಉದಾಹರಣೆಗೆ, ರೆಂಬ್ರಾಂಟ್ ಅಥವಾ ಬಿಥೋವೆನ್‌ರ ಜತೆ ಇನ್ನೂ ಮುಂದಕ್ಕೆ ಒಯ್ಯುವುದು ತಪ್ಪಾದೀತು-ಬರ್ನಿನಿಯ ವೃತ್ತಿಜೀವನ ಆರಂಭ, ಮಧ್ಯ, ಮತ್ತು ಅಂತ್ಯವೆಂಬ ಚೊಕ್ಕದಾದ ವಿಭಜನೆಯನ್ನು ವಿರೋಧಿಸುತ್ತದೆ. ಹಾಗಿದ್ದೂ, ಅವನ ಕೊನೆಯ ಕೃತಿಗಳಿಗೆ ಅವುಗಳದ್ದೇ ಆದ ಪ್ರತ್ಯೇಕ ಗುಣವಿದೆ, ಉಳಿದವಕ್ಕಿಂತ ಹೆಚ್ಚು ಆಧ್ಯಾತ್ಮಿಕವೂ ವ್ಯಕ್ತಿಗತವೂ ಅಗಿರುವಂಥದು. ಈ ಬದಲಾವಣೆ ಆರಂಭವಾಗುವುದು ೧೬೫೦ರ ದಶಕದಲ್ಲಿ, ಆದರೆ ೧೬೪೬ರಲ್ಲಿ ಸುರುಮಾಡಿದ ‘ಸತ್ಯ’ದಲ್ಲೇ (Truth) ಅದರ ಪ್ರಕಟಣೆಯಿದೆ; ಗಮನಿಸತಕ್ಕ ಸಂಗತಿಯೆಂದರೆ, ಈ ‘ಸತ್ಯ’ ಸೈಂಟ್ ಪೀಟರ್ ಚರ್ಚಿನ ಗಂಟೆಗೋಪುರಗಳನ್ನು ನಿರ್ಮಿಸಲಾರದ ತನ್ನ ಸೋಲಿಗೆ ಅವನು ಮಾಡಿಕೊಂಡ ಖಾಸಗಿ ಆತ್ಮನಿವೇದನೆಯೂ ಆಗಿದ್ದಿತು. ಈ ರಚನೆಗೆ ‘ಕಾಲ ಪ್ರಕಟಿಸಿದ ಸತ್ಯ’ (Truth revealed by Time) ಎಂಬುದು ಮೂಲ ಕಲ್ಪನೆಯಾಗಿತ್ತು. ಆದರೆ ಅವನು ಕಾಲದ ಮೂರ್ತಿಯನ್ನು ಕೆತ್ತುವುದಕ್ಕೆ ಆಗಲೇ ಇಲ್ಲ, ಹಾಗೂ ಓಂಟಿಯಾಗಿರಲು ಉದ್ದೇಶಿಸಿರದ, ೧೬೫೨ರಲ್ಲಿ ಅಷ್ಟಕ್ಕೇ ನಿಲ್ಲಿಸಿದ, ಶಿಲ್ಪವೊಂದನ್ನು ನಾವು ನೋಡುತ್ತೇವೆ. ಒರಗಿದ ಮೂರ್ತಿಯೊಂದರ ಮೇಲೆ ನಮ್ಮ ಬಲಭಾಗದಿಂದ ಕಾಲ ತನ್ನ ಕುಡುಗೋಲನ್ನು ಹಿಡಿದು ಅವಳನ್ನು- ‘ನಗ್ನ ಸತ್ಯ’ವನ್ನು-ತೆರೆದು ತೋರಿಸುತ್ತ ಹಾರಿ ಹೋಗುವುದು ಬೇಕಾಗಿತ್ತು, ಅವಳ ಪಾದ ಭೂಗೋಲದ ಮೇಲಿದ್ದು, ಅವನನ್ನು ಸರಳ ಆನಂದಾತಿರೇಕದ ಮಂದಸ್ಮಿತದಿಂದ ಮೇಲ್ಮುಖವಾಗಿ ನೋಡುತ್ತಲೂ, ಸೂರ್ಯನ ಶುಚೀಕರಣ ಪ್ರಕಾಶ ಅವನ ಮುಖದಲ್ಲಿ ಬೆಳಗುತ್ತಲೂ ಇರುವ ವೇಳೆ. ಈ ಕಲ್ಪನೆಯ ಪಳೆಯುಳಿಕೆ ಸುಮಾರಾಗಿ ಯಾವುದೇ ಗುಣಮಟ್ಟದಿಂದ ನೋಡಿದರೂ ಅತೃಪ್ತಿಕರ. ಆದರೆ ಇದು ಅತ್ಯಂತ ಖಾಸಗಿಯೂ ಒಂದು ರೀತಿಯಲ್ಲಿ ಮಹತ್ವಪೂರ್ಣವೂ ಆದಂಥ ಶುದ್ಧ ಬರ್ನಿನಿ, ಹಾಗೂ ಸ್ವಂತಕ್ಕೆ ಕೆತ್ತಿದ ಈ ಕೃತಿಯಲ್ಲಿ ಅವನು ಮುಂದೆ ತನ್ನದೇ ಆದ ತಡವಾದ ಶೈಲಿಯೊಂದರ ಲಕ್ಷಣಗಳನ್ನು ತೋರುತ್ತಾನೆ ಎಂದು ವಿಮರ್ಶಕರು ಸರಿಯಾಗಿಯೇ ಹೇಳಿದ್ದಾರೆ. ಈ ಮೂರ್ತಿ ಬರ್ನಿನಿ ಹಿಂದೆಂದೂ ಕೆತ್ತಿದ ಶಿಲ್ಪಗಳಿಗಿ೦ತ ಕಡಿಮೆ ಸಾಂಪ್ರದಾಯಿಕ ಮಾರ್ಗದ್ದು. ದೇಹ ಮತ್ತು ಕಾಲುಗಳು ಗಮನಾರ್ಹವಾಗಿ ನೀಳವಾದುವು, ಮೇಲಿನ ಭಾಗಕ್ಕೆ ಹೋಲಿಸಿದರೆ ಕೆಳಗಿನ ಈ ಅಂಗಗಳ ಸಮತೋಲ ಜಾಸ್ತಿಯೇ ಎನಿಸಬೇಕು. ಸಮತೋಲದ ಈ ಮೂಲಭೂತ ಬದಲಾವಣೆ ಸೌಂದರ್ಯದ ಕುರಿತಾದ ಹೊಸದೊಂದು ಕಲ್ಪನೆಯಿಂದ ಪ್ರೇರಿತವಾಗಿದ್ದು, ಈ ಕಲ್ಪನೆಯೂ ಅಸಾಂಪ್ರದಾಯಿಕವೇ.’

ಈ ಮೇಲಿನ ಪಾರಾವನ್ನು ನಾನು ಹೋವರ್ಡ್ ಹಿಬ್ಬರ್ಡ್ ಎಂಬ ವಿದ್ಧಾಂಸನು ಬರೆದ ‘ಬರ್ನಿನಿ’ ಎಂಬ ಪುಸ್ತಕದ ಕೊನೆಯ ಅಧ್ಯಾಯದಿಂದ ಎತ್ರಿಕೊಂಡಿದ್ದೇನೆ (Bernini, Penguin Publication, ೧೯೬೫). ಜಿಯೊವಾನಿ ಲೋರೆಂಝೋ ಬರ್ನಿನಿ (೧೫೯೮-೧೬೮೦) ಹದಿನೇಳನೆಯ ಶತಮಾನದ ಇಟೆಲಿಯ ಪ್ರಸಿದ್ಧ ಶಿಲ್ಪಿ ಹಾಗೂ ವಾಸ್ತುಶಿಲ್ಪಿ. ಹದಿನಾರನೆಯ ಶತಮಾನದಲ್ಲಿ ರೋಮನ್ ಕ್ಯಾಥಲಿಕ್ ಧರ್ಮದ ಆಚಾರಬದ್ಧತೆಯ ವಿರುದ್ಧವಾಗಿ, ಮುಖ್ಯವಾಗಿ ವೆಟಿಕನ್ ಜಗದ್ಗುರುಗಳ ಹಸ್ತಕ್ಷೇಪ, ಮಧ್ಯವರ್ತಿತನ ಮತ್ತು ಪರಮಾಧಿಕಾರ ಮುಂತಾದುವನ್ನು ಪ್ರಶ್ನಿಸಿ, ಯುರೋಪಿನಲ್ಲಿ ಕಾಣಿಸಿಕೊಂಡ ಸುಧಾರಣಾವಾದದ (Reformation) ಎಂಬ ವೈಚಾರಿಕ ಕ್ರಾಂತಿ ಪ್ರೊಟೆಸ್ಟಾಂಟಿಸಂನ ಸ್ಥಾಪನೆಗೆ ಕಾರಣವಾಯಿತು. ಈ ಕ್ರಾಂತಿಯ ಬೆನ್ನಲ್ಲೇ ಅದಕ್ಕೆ ವಿರುದ್ದವಾಗಿ, ಹಾಗೂ ಅದಕ್ಕೂ ಮೊದಲೇ ಚರ್ಚಿನ ಆಂತರಿಕ ಸುಧಾರಣೆಗಾಗಿ, ಈಗ ಮರುಸುಧಾರಣಾವಾದ (Counter-Reformation) ಎ೦ದು ಕರೆಯಲ್ಪಡುವ ಸಾಂಪ್ರದಾಯಿಕ ಪ್ರತಿರೋಧದ ಅಲೆಯೊಂದು ಅಲ್ಪಕಾಲಾವಧಿ ಕಾಣಿಸಿಕೊಂಡಿತು; ಇದರ ಕೊನೆಯ ಕಾಲಘಟ್ಟದಲ್ಲಿ ಬಂದವನೇ ಬರ್ನಿನಿ. ಹಿಬ್ಬರ್ಡ್‌ನ ಪುಸ್ತಕ ನಮಗೆ ಈ ಕಲಾವಿದನ ಬದುಕು ಮತ್ತು ಕೃತಿಗಳ ಸಂಕ್ಷಿಪ್ತವಾದ ಪರಿಚಯ ಮಾಡಿಕೊಡುತ್ತದೆ. ಇದೊಂದು ರೀತಿಯಲ್ಲಿ ಜೀವನ ಚರಿತ್ರೆ ಮತ್ತು ಕೃತಿವಿಮರ್ಶೆ ಎರಡೂ ಸೇರಿದ ಪುಸ್ತಕ.

ಸಾಹಿತ್ಯಕ್ಕೆ ಭಾಷೆ ಹೇಗೆ ಮಾಧ್ಯಮವೋ ಹಾಗೆ ಶಿಲ್ಪಕ್ಕೆ ಶಿಲೆ. ಕಲ್ಲನ್ನು (ಅಥವಾ ಇಂಥದೇ ಇತರ ದ್ರವ್ಯಗಳನ್ನು) ಕಡಿದು ಪ್ರತಿಮೆಯ ನಿರ್ಮಾಣವಾಗುತ್ತದೆ. ಬರ್ನಿನಿಯ ಕಾಲದಲ್ಲಿ ಹೆಚ್ಚಾಗಿ ಚಂದ್ರಕಾಂತಶಿಲೆಯನ್ನೇ ಶಿಲ್ಪಕಲೆಗೆ ಬಳಸುತ್ತಿದ್ದುದು. ಈ ಮಾಧ್ಯಮದಲ್ಲಿ ಶಿಲೆಯಲ್ಲಿ ಶಿಲ್ಪ ಕೆತ್ತುವುದೊಂದು ಕಠಿಣವಾದ ಕಾಯಕ. ಚಂದ್ರಕಾಂತಕ್ಕೆ ಒಂದೇ (ಹೆಚ್ಚಾಗಿ ಬಿಳಿಯ) ಬಣ್ಣವಾದ್ದರಿಂದ ನೋಡುವವರಿಗೆ ಮೂರು ಆಯಾಮಗಳ ಅನುಭವವಾಗುವುದಕ್ಕೆ ಬೆಳಕು ಛಾಯೆಗಳ ಪರಸ್ಪರ ಚೆಲ್ಲಾಟ ಅಗತ್ಯವಾಗುತ್ತದೆ. ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆಯ ಪರಿಚಯ ಇರುವವರಿಗೆ ಗೊತ್ತಿದೆ, ಸಾಹಿತ್ಯದ ಗಂಭೀರ ಓದುಗ ಸಾಧಾರಣವಾಗಿ ಏನನ್ನು ಓದುತ್ತಾನೆ ಎನ್ನುವುದು. ಸಾಹಿತ್ಯದ ‘ಅರ್ಥ’ ಕೇವಲ ಭಾಷೆಯಲ್ಲಿ ಇರುವುದಿಲ್ಲ; ಅದರ ಹಿನ್ನೆಲೆ, ಪಠ್ಯಾಂತರ ಮುಂತಾದವುಗಳಲ್ಲೂ ಇರುತ್ತದೆ. ಹೀಗೆ ವಿಮರ್ಶೆಯೆನ್ನುವುದು ಒಂದು ರೀತಿಯ ಪ್ರಬುದ್ಧವಾದ ಪಠನವೇ ಸರಿ. ಆದರೆ ಶಿಲ್ಪವನ್ನು ಅವಲೋಕಿಸುವ ವೀಕ್ಷಕ ನಿಜಕ್ಕೂ ಏನನ್ನು ನೋಡುತ್ತಾನೆ? ಅರ್ಥಾತ್, ಶಿಲ್ಪದಲ್ಲಿ ‘ಓದುವುದು’ ಏನನ್ನು? ಮಾಧ್ಯಮವನ್ನು (ಕಲಾಪ್ರಕಾರವನ್ನು ಹೊಂದಿಕೊಂಡು ಅದರ ಕುರಿತಾದ ವಿಮರ್ಶೆ ನಡೆಯುತ್ತದೆ ಎನ್ನುವುದು ನಿಜವಾದರೂ, ಯಾವ ಒಳ್ಳೆಯ ವಿಮರ್ಶೆಯೂ ಕೇವಲ ಮಾಧ್ಯಮಕ್ಕೆ ಅಂಟಿಕೊಂಡಿರುವುದೂ ಇಲ್ಲ, ಮಾಧ್ಯಮವನ್ನು ಮರೆತು ಗಾಳಿಗೋಪುರದಲ್ಲಿ ತೇಲಿಕೊಂಡಿರುವುದೂ ಇಲ್ಲ. ಹೋವರ್ಡ್ ಹಿಬ್ಬರ್ಡ್ ತನ್ನ ‘ಬರ್ನಿನಿ’ ಪುಸ್ತಕದಲ್ಲಿ ಇವೆರಡನ್ನೂ-ಎಂದರೆ, ಕೃತಿ ಮತ್ತು ಕೃತಿಸಂದರ್ಭವನ್ನು-ಹೊಂದಿಸಿಕೊಂಡು ಹೋಗುವ ಬಗೆ ಬಹಳ ಸಮರ್ಥವಾಗಿದೆ.

ಶಿಲ್ಪಕಲೆಗೆ ಅದರದ್ದೇ ಆದ ಪರಿಭಾಷೆಯಿದೆ. ಪಾಶ್ಚಾತ್ಯ ಶಿಲ್ಪಕಲೆಯಲ್ಲಿ ಬರ್ನಿನಿಯನ್ನು ಗುರುತಿಸುವುದು ಬರೋಕ್ (Baroque) ಶ್ಯೆಲಿಯೊಂದಿಗೆ. ಬರೋಕ್ ಎಂದರೆ ಸುಳಿ ಸುರುಳಿಗಳು ಜಾಸ್ತಿಯಿದ್ದು ಆಲಂಕಾರಿಕವಾದ ಶೈಲಿ. ಈ ಶೈಲಿಯೊಂದಿಗೆ ತನ್ನ ಕಲಾಜೀವನವನ್ನು ಆರಂಭಿಸಿದ ಬರ್ನಿನಿ ಹೇಗೆ ಕೊನೆಯಲ್ಲಿ ಇದಕ್ಕಿಂತಲೂ ಪ್ರತ್ಯೇಕವಾದ ತನ್ನದೇ ಶೈಲಿಯೊಂದನ್ನು ರೂಪಿಸಿಕೊಂಡ ಎನ್ನುವುದನ್ನು ಮೇಲೆ ಉದ್ಧರಿಸಿದ ಹಿಬ್ಬರ್ಡ್‌ನ ವಾಕ್ಯಗಳು ಹೇಳುತ್ತವೆ. ಮುಖ್ಯವಾಗಿ ಸಮತೋಲವನ್ನು ಮೀರಿದ ನೀಳಾಂಗಗಳ ಪತ್ಯೇಕತೆ ಅದು ಎನ್ನುವುದು ಹಿಬ್ಬರ್ಡ್‌ನ ಅಭಿಪ್ರಾಯ. ಬರ್ನಿನಿಯ ಮುಂದಿನ ಕೃತಿಗಳಾದ ‘ಡೇನಿಯಲ್’ ಮತ್ತು ‘ದೇವದೂತ ಹಾಗೂ ಹಬಾಕುಕ್’, ‘ಮಗ್ದಲೀನ್’ ಮತ್ತು ‘ಜೆರೋಮ್’ ಮುಂತಾದವುಗಳನ್ನು ಹಿಬ್ಬರ್ಡ್ ಈ ದೃಷ್ಟಿಯಿಂದ ವಿಶ್ಲೇಷಿಸುತ್ತ ಹೋಗುತ್ತಾನೆ. ಶಿಲ್ಪವೆಂದರೆ ಬರೇ ಮೂರ್ತಿಯಲ್ಲ, ಅದೊಂದು ವಿಷಯ, ಆ ವಿಷಯದ ಹಿಂದೆ ಪೌರಾಣಿಕ, ಧಾರ್ಮಿಕ, ಐತಿಹಾಸಿಕ, ಅಥವಾ ಸಮಕಾಲೀನ ವ್ಯಕ್ತಿಗಳಿರುತ್ತಾರೆ ಅಥವಾ ಅವರಿಗೆ ಸಂಬಂಧಿಸಿದ ಘಟನೆಗಳಿರುತ್ತವೆ. ಬರ್ನಿನಿ ಹೆಚ್ಚಾಗಿ ವೆಟಿಕನ್ನಲ್ಲಿ ಜಗದ್ಗುರುಗಳಿಗೋಸ್ಕರ, ಇಲ್ಲವೇ ಬಿಶಪರಿಗೋಸ್ಕರ ಶಿಲ್ಪಕಲೆ ಹಾಗೂ ವಾಸ್ತುಕಲೆಗಳಲ್ಲಿ ನಿರತನಾಗಿದ್ದ ವ್ಯಕ್ತಿ. ರೋಮಿನ ಪ್ರಸಿದ್ಧ ಸೈಂಟ್ ಪೀಟರ್ಸ್ ಇಗರ್ಜಿಯ ಅಲಂಕಾರವನ್ನು ನೋಡಿಕೊಳ್ಳುವುದಕ್ಕೆ ಆತ ನೇಮಕಗೊಂಡವನೂ ಆಗಿದ್ದ. ಆದ್ದರಿಂದ ಅವನು ರಚಿಸಿದ ಹೆಚ್ಚಿನ ಶಿಲ್ಪಗಳೂ ಒಂದೋ ಸೈಂಟ್ ಪೀಟರ್ಸ್‌ನ ಅಲಂಕಾರಕ್ಕೆಂದು, ಇಲ್ಲವೇ ವೆಟಿಕನ್ನ ಇತರ ಇಗರ್ಜಿಗಳಿಗೆ೦ದು ರಚಿಸಿದ್ದು. ಕೆಲವೊಂದು ಇಗರ್ಜಿಗಳನ್ನು ಬುಡದಿಂದ ಕಟ್ಟುವ ಕೆಲಸವೂ ಅವನ ಪಾಲಿಗೆ ಒದಗಿತು. ಇದಲ್ಲದೆ ಪೋಪರ, ಬಿಶಪರ, ಹಾಗೂ ರೋಮಿನ ಶ್ರೀಮಂತ ಕ್ರಿಶ್ಚಿಯನ್ ಮನೆತನಗಳ ಖಾಸಗಿ ಸ್ಥಾಪನೆಗಳಿಗೋಸ್ಕರ ಕೂಡಾ ಬರ್ನಿನಿ ಶಿಲ್ಪರಚನೆ ಮಾಡಿದುದಿತ್ತು. ಆದ್ದರಿಂದ ಅವನು ರಚಿಸಿದ ಮೂರ್ತಿಗಳಲ್ಲಿ ಹಲವು ಬೈಬಲಿನ ಕತೆಗಳಿಗೆ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಸ೦ಬ೦ಧಿಸಿದ್ದು. ಈ ಎಲ್ಲ ವಿವರಗಳನ್ನು ಸಹಾ ಹಿಬ್ಬರ್ಡ್ ತನ್ನ ವಿಶ್ಲೇಷಣೆಯ ಭಾಗವಾಗಿ ಮಾಡಿಕೊಳ್ಳುತ್ತಾನೆ. ಯಾಕೆಂದರೆ ಇವಿಲ್ಲದೆ ಬರ್ನಿನಿಯ ಕೊಡುಗೆಯ ಬಗ್ಗೆ ಅರ್ಥಪೂರ್ಣವಾಗಿ ಮಾತನಾಡುವುದಕ್ಕೆ ಸಾಧ್ಯವಾಗುವುದಿಲ್ಲ.

ಮೇಲಿನ ಉದ್ಧರಣೆಯಲ್ಲಿ ಸೈಂಟ್ ಪೀಟರ್ಸ್‌ನ ಗಂಟೆಗೋಪುರಗಳ ಬರ್ನಿನಿಯ ವೈಫಲ್ಯದ ಪ್ರಸ್ತಾಪ ಬರುತ್ತದೆ. ಈ ಕುರಿತು ಹಿಬ್ಬರ್ಡ್ ಹಿ೦ದಿನ ಅಧ್ಯಾಯದಲ್ಲಿ ವಿವರಿಸಿರುತ್ತಾನೆ. ಸೈಂಟ್ ಪೀಟರ್ಸ್ ಇಗರ್ಜಿಯ ಮುಂಭಾಗದಲ್ಲಿ ಆಚೀಚೆ ಎರಡು ಗೋಪುರಗಳ ಅಡಿಪಾಯಗಳು ಮೊದಲಿಂದಲೇ ಇದ್ದುವು. ಪೋಪ್ ಎಂಟನೆಯ ಅರ್ಬನ್‌ನ ಕಾಲದಲ್ಲಿ ಅವುಗಳ ಮೇಲೆ ಗಂಟೆಗೋಪುರಗಳನ್ನು ಸ್ಥಾಪಿಸುವ ಯೋಜನೆಯನ್ನು ಬರ್ನಿನಿಗೆ ವಹಿಸಲಾಗಿತ್ತು. ಗೋಪುರಗಳು ಕಟ್ಟುವ ಹಂತದಲ್ಲೇ ಕುಸಿದುಬಿದ್ದುವು. ಕಾರಣ ಕೆಳಗೆ ನೀರ ಬುಗ್ಗೆಗಳಿದ್ದುದು, ಇದು ಬರ್ನಿನಿಯ ಕುರಿತು ಹೊಟ್ಟೆಕಿಚ್ಚಿರುವವರಿಗೆ ಅವನನ್ನು ಟೀಕಿಸುವುದಕ್ಕೆ ಒಂದು ಕಾರಣವಾಯಿತು. ಆದರೆ ಅರ್ಬನ್ ಬರ್ನಿನಿಯ ಮಿತ್ರನಾದ ಕಾರಣ ಬರ್ನಿನಿಗೆ ವೆಟಿಕನ್ ಆಶ್ರಯಕ್ಕೆ ಕುಂದುಂಟಾಗಲಿಲ್ಲ. ಆದರೆ ಅರ್ಬನ್ ಕಲಾಕೃತಿಗಳಿಗೆ ಖರ್ಚುಮಾಡುತ್ತಿದ್ದರೂ, ಸ್ವಂತ ಕುಟುಂಬದವರಿಗೋಸ್ಕರ ದುಂದು ವೆಚ್ಚಮಾಡಿ ವೆಟಿಕನ್ ಭ೦ಡಾರವನ್ನು ಖಾಲಿಮಾಡಿದ್ದ. ಆದ್ದರಿಂದ ಅವನ ನಂತರ ಜಗದ್ಗುರುವಿನ ಪಟ್ಟವೇರಿದ ಹತ್ತನೆಯ ಇನ್ನಸೆಂಟ್‌ನ ಅವಕೃಪೆಗೆ ಒಳಗಾದವರಲ್ಲಿ ಬರ್ನಿನಿಯೂ ಒಬ್ಬ! ಆದರೂ ಬರ್ನಿನಿ ಎಷ್ಟು ಉತ್ತಮ ಶಿಲ್ಪಿಯಾಗಿದ್ದ ಎಂದರೆ ಇನ್ನಸೆಂಟ್ ಕೂಡಾ ಕ್ರಮೇಣ ಅವನನ್ನು ಒಪ್ಪಿಕೊಳ್ಳಬೇಕಾಯಿತು. ಬರ್ನಿನಿ ಸ್ವಂತಕ್ಕಾಗಿ ಕೆತ್ತಿದ ‘ಸತ್ಯ’ ಕಲಾಕೃತಿಯನ್ನು ಈ ಕಾರಣಕ್ಕೆ ಹಿಬ್ಬರ್ಡ್ ಕಲಾವಿದನ ಆತ್ಮನಿವೇದನೆಯೆಂದು ಕರೆದುದು.

ಕಲಾವಿದನೊಬ್ಬನ ಕೃತಿಗಳನ್ನು ಆತನ ಕಾಲ, ಸಂದರ್ಭ, ಹಾಗೂ ನಂಬಿಕೆಗಳು ಹೇಗೆ ನಿರ್ದೇಶಿಸುತ್ತವೆ ಎನ್ನುವುದಕ್ಕೆ ಬರ್ನಿನಿಯ ಒಂದೊಂದು ಕೃತಿಯೂ ಉದಾಹರಣೆಯಾಗುತ್ತದೆ. ‘ಸೈಂಟ್ ತೆರೆಸಾಳ ಉನ್ಮಾದ’ (The Ecstasy of St Teresa). ಬರ್ನಿನಿಯ ಅತ್ಯಂತ ಮಹತ್ವದ ಕೃತಿಗಳಲ್ಲಿ ಒಂದು. ವೆಟಿಕನಿನ ಕೋರ್ನೆರೋ ಚಾಪೆಲಿನ ಮೇಲ್ಛಾಗದಲ್ಲಿ ಸ್ಥಾಪಿಸಿರುವ ಈ ಕೃತಿಯ ವಸ್ತು ಕಾರ್ಮೆಲೈಟ್ ಸನ್ಯಾಸಿನಿ ಸಂಘದ ಸ೦ತ ತೆರೆಸಾಳ ಅನುಭವವೊಂದನ್ನು ಚಿತ್ರಿಸುತ್ತದೆ. ಸ್ಪಾನಿಷ್ ಮೂಲದವಳಾದ ತೆರೆಸಾ ಒಂದು ದಿನ ವಿಚಿತ್ರವಾದ ಅನುಭವವೊಂದಕ್ಕೆ ಒಳಗಾಗುತ್ತಾಳೆ. ದೇವದೂತನೊಬ್ಬ ಬಂದು ಚಿನ್ನದ ದೈವಿಕ ಈಟಿಯಿಂದ ತನ್ನ ಹೃದಯವನ್ನು ಬಾರಿ ಬಾರಿ ತಿವಿದು ತೆಗೆಯುತ್ತಿರುವಂತೆ ತೆರೆಸಾಳಿಗೆ ಅನಿಸುತ್ತದೆ. ಈ ಹರ್ಷಮಿಶ್ರಿತ ನೋವಿನ ಉನ್ಮಾದದಿಂದ ಅವಳು ಅನನ್ಯವಾದ ಅನುಭೂತಿ ಪಡೆಯುತ್ತಾಳೆ. ಲೇಖಕಿಯೂ ಆಗಿದ್ದ ತೆರೆಸಾ ಇದನ್ನೆಲ್ಲ ತನ್ನ ಜೀವನಚರಿತ್ರೆಯಲ್ಲಿ ಬರೆದಿಟ್ಟು ಹೋಗಿದ್ದಾಳೆ. ಬರ್ನಿನಿ ಕೆತ್ತಿದ್ದು ಈ ಘಟನೆಗೆ ಸಂಬಂಧಿಸಿದ ಶಿಲ್ಪಗುಚ್ಛವನ್ನು. ಈ ಶಿಲ್ಪಸ್ವರೂಪದ ಸಮಗ್ರ ವಿಶ್ಲೇಷಣೆಯನ್ನು ಹಿಬ್ಬರ್ಡ್ ತನ್ನ ‘ಬರ್ನಿನಿ’ ಪುಸ್ತಕದಲ್ಲಿ ಮಾಡುತ್ತಾನೆ. ಸಂತ ತೆರೆಸಾ ಸಂಪೂರ್ಣವಾಗಿ ಪರವಶಳಾಗಿದ್ದಳೆ; ಮೋಡಗಳಲ್ಲಿ ತೇಲುವಂತಿದ್ದರೂ. ಕುಸಿದುಹೋದವಳಂತೆಯೂ ಕಾಣಿಸುತ್ತಾಳೆ; ಮುಂಗಡೆ ತೋರುವ ಅವಳ ಎಡಗೈ ತನಗೆ ತಾನೇ ತೊನೆಯುವಂತೆ ಇದೆ. ಅದೇ ರೀತಿ ಅವಳ ಎಡಗಾಲು ಕೂಡ. ಆದರೆ ಹಿಬ್ಬರ್ಡ್ ಇಷ್ಪಕ್ಕೆ ನಿಲ್ಲಿಸದೆ, ಬರ್ನಿನಿ ಇಲ್ಲಿ ಸಂತ ಇಗ್ನೇಶಿಯಸ್ ‘ಯೌಗಿಕ ಅಭ್ಯಾಸಗಳು’ (Spiritual Exercises) ಎ೦ಬ ಗ್ರಂಥದಲ್ಲಿ ಕಿಶ್ಚಿಯನರು ಹೇಗೆ ಬೈಬಲಿನ ಪಾತ್ರಗಳನ್ನು ಮತ್ತು ಘಟನೆಗಳನ್ನು ಕಲ್ಪಿಸಿ ಆವಿರ್ಭವಿಸಿಕೊಳ್ಳಬೇಕು ಎ೦ದು ನೀಡಿದ ಉಪದೇಶವನ್ನು ಸಾಕ್ಷಾತ್ವರಿಸುವಂತೆ ಶಿಲ್ಪರಚನೆ ಮಾಡಿದ್ದಾನೆ ಎಂಬ ಅಭಿಪ್ರಾಯವನ್ನು ಮುಂದೊಡ್ಡುತ್ತಾನೆ. ಇಂಥ ಭಾವುಕ ಕಲ್ಪನೆಯಿಂದಲೇ ತೆರೆಸಾ ಅನುಭೂತಿಗೊಳಗಾದ್ದು; ಬರ್ನಿನಿ ಕೂಡಾ ಇದನ್ನು ಮಾನಸಿಕವಾಗಿ ಸಾಕ್ಷಾತ್ಕರಿಸಿಕೊಂಡೇ ಈ ಶಿಲ್ಪವನ್ನು ರೂಪಿಸಿದ್ದು. ಕಟ್ಟಾ ಕ್ಯಾಥಲಿಕನಾಗಿದ್ದ ಬರ್ನಿನಿ ತನ್ನ ಜೀವಿತದ ಕೊನೆಯ ನಲುವತ್ತು ವರ್ಷಗಳ ಕಾಲ ಪ್ರತಿದಿನ ಇಗರ್ಜಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಎಂಬ ವಿವರವನ್ನೂ ಹಿಬ್ಬರ್ಡ್ ಉಲ್ಲೇಖಿಸುತ್ತಾನೆ. ಹೀಗೆ ಶಿಲ್ಪಕಲಾ ವಿಮರ್ಶೆ ಕೇವಲ ಶಿಲ್ಪಸ್ವರೂಪದ ವಿಶ್ಲೇಷಣೆಯಷ್ಟೇ ಆಗಿ ಉಳಿಯುವುದಿಲ್ಲ. ಅದು ನಮಗೊಂದು ಸಮಗ್ರ ಕಾಲಕ್ಕೆ ಪ್ರವೇಶ ದೊರಕಿಸಿಕೊಡುತ್ತದೆ.

ಇಂಥ ಕೃತಿಗಳಿಂದ ಸಾಹಿತ್ಯ ವಿಮರ್ಶೆ ಕೂಡಾ ಕಲಿಯುವುದಿದೆ: ಯಾಕೆಂದರೆ ಸಾಹಿತ್ಯ ವಿಮರ್ಶೆ ಸಹಾ ಒಂದೋ ರೂಪವಿಸ್ಮಯದಲ್ಲಿ ಕೃತಿ ಸಂದರ್ಭವನ್ನು ಮರೆಯಬಹುದು; ಇಲ್ಲವೇ ರೂಪವಿಸ್ಮೃತಿಯಲ್ಲಿ ಕೃತಿಯನ್ನು ಮರೆಯಬಹುದು. ಇವೆರಡೂ ಅತಿರೇಕಗಳಾಗುತ್ತವೆ. ಇಂಥ ಅತಿರೇಕಗಳಿಂದ ಮುಕ್ತವಾಗಿ ಹೇಗೆ ಬರೆಯಬಹುದೆನ್ನುವುದನ್ನು ಹಿಬ್ಬರ್ಡ್‌ನ ‘ಬರ್ನಿನಿ’ ತೋರಿಸಿಕೊಡುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿವರಾತ್ರಿ ದಿನದಲ್ಲಿ (ಸುಗ್ಗಿ ಕೋಲಾಟದ ಪದ)
Next post ಚೀಟಿ

ಸಣ್ಣ ಕತೆ

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಮಾದಿತನ

  ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಕಲಾವಿದ

  "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

cheap jordans|wholesale air max|wholesale jordans|wholesale jewelry|wholesale jerseys