ಗಂಡುಮೆಟ್ಟಿನ ನಾಡು ಲಲಿತಕಲೆಗಳ ಬೀಡು ಎಂದೇ ಹೆಸರಾಗಿರುವ ಚಾರಿತ್ರಿಕ ಚಿತ್ರದುರ್ಗ ನಾಟಕರಂಗಕ್ಕೂ ತನ್ನದೇ ಆದ ಕೊಡುಗೆಯನ್ನು ನೀಡಿ ತನ್ನುದರದಲ್ಲಿ ಬರೀ ಚರಿತ್ರೆಯ ಕನಕವಷ್ಟೇ ಅಲ್ಲ ಕಲಾರತ್ನಗಳೂ ತುಂಬಿವೆ ಎಂಬುದನ್ನು ಸಾಬೀತು ಪಡಿಸಿದೆ. ರಂಗ ದಿಗ್ಗಜ ವರದಾಚಾರ್ ಜನಿಸಿದ್ದು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ಎಂಬುದೊಂದು ಹೆಗ್ಗಳಿಕೆಯ ವಿಷಯ. ಚಿಂದೋಡಿ ವೀರಪ್ಪ, ಚಿಂದೋಡಿ ಲೀಲಾ, ಬಂಗಾರೇಶ್, ಕಂಚಿಕೆರೆ ಶಿವಣ್ಣ (ಈಗಿವರು ದಾವಣಗೆರೆ ಜಿಲ್ಲೆಗೆ ಸೇರಿದವರಾದರೂ ದುರ್ಗದ ಬಾಂಧವ್ಯ ಕಳಚಿಕೊಳ್ಳುವಂತದ್ದಲ್ಲ) ನಟ ರತ್ನಾಕರ ಓಬಳೇಶ್ವರ ಚಿತ್ರದುರ್ಗ ಕಂಡ ಮಹಾನ್ ರಂಗ ಕಲಾವಿದ, ವರನಟ ಬಿ. ಲಕ್ಷ್ಮಯ್ಯ ಮಾದನಾಯ್ಕನಹಳ್ಳಿ ವೀರಭದ್ರಪ್ಪ ಸಿನಿಮಾ ಹಾಗೂ ನಾಟಕಗಳಲ್ಲೂ ಹೆಸರು ಮಾಡಿ ಕಲಾರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಈ ಹಿರಿಯರ ಜಾಡನ್ನೇ ಹಿಡಿದು ಕಲಾರಂಗ ಪ್ರವೇಶಿಸಿದ ಬಿ. ಕುಮಾರಸ್ವಾಮಿ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಹೆಸರು ಮಾಡಿದವರು. ಜೊತೆಗೆ ಕಂಪನಿ ಕಟ್ಟಿ ಮಾಲೀಕರೂ ಆಗಿ ನೂರಾರು ಕಾಲಾವಿದರಿಗೆ ಆಶ್ರಯದಾತರಾಗಿ ನಿಂತ ಶ್ರಮಜೀವಿ. ಬುಡಕಟ್ಟು ಜನಾಂಗದಿಂದ ಬಂದ ದಲಿತ ಕಲಾವಿದ. ಬಡತನವನ್ನೇ ಹಾಸಿ ಹೊದ್ದವ. ಕುಳ್ಳಪ್ಪ ಸ್ಪಿನ್ನಿಂಗ್ ಮಿಲ್ ನಲ್ಲಿ ಕಾರ್ಮಿಕನಾಗಿ ನೂಲು ಸುತ್ತಲು ಆರಂಭಿಸಿದ ಕುಮಾರಸ್ವಾಮಿ ಹುಟ್ಟಿದ್ದು ಮಠದ ಕುರುಬರ ಹಟ್ಟಿಯಲ್ಲಿ ಓದಿದ್ದು ಅಲ್ಪ. ಕಲೆಯ ಬಗ್ಗೆ ಒಲವು ಬೆಳಸಿಕೊಂಡಿದ್ದು ಅಪಾರ. ಮೀಸೆ ಮೂಡುತ್ತಲೇ ನಾಟಕದ ಗೀಳು ಹಚ್ಚಿಕೊಂಡ ಕುಮಾರಸ್ವಾಮಿ, ಬಯಲು ನಾಟಕ, ಜಾತ್ರೆ ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಮಿಂಚಲು ಯತ್ನಿಸಿದರು. ತೃಪ್ತಿ ಸಿಗಲಿಲ್ಲ, ದೊಡ್ಡ ದೊಡ್ಡ ನಾಟಕ ಕಂಪನಿಗಳಲ್ಲಿ ಮಿಂಚಬೇಕೆಂಬ ಹಂಬಲಹೊತ್ತು ಚಿತ್ರದುರ್ಗದವರೇ ಆದ ಖ್ಯಾತ ರಂಗನಟ ಓಬಳೇಶ್ವರ ನಾಟಕ ಸಂಘದಲ್ಲಿ ಇನ್ನಿಲ್ಲದ ಸಾಹಸ ಮಾಡಿ ಜಾಗ ಗಿಟ್ಟಿಸಿಕೊಂಡರು. ಬುಡಕಟ್ಟು ಜನಾಂಗದಲ್ಲೇ ಹುಟ್ಟಿ ರಂಗಕಲೆಯಲ್ಲಿ ಪ್ರಸಿದ್ದರಾಗಿ ಒಂದು ಹಂತದಲ್ಲಿ ಮಾಸ್ಟರ್ ಹಿರಣ್ಣಯ್ಯ ನವರಿಗೆ ಪ್ರತಿಸ್ಪರ್ಧಿಯೇನೋ ಎಂಬಂತೆ ಬೆಳೆದ ಓಬಳೇಶ್ವರ್ ಕುಮಾರಸ್ವಾಮಿಗೆ ತಮ್ಮವನೇ ಹುಡುಗನೆಂಬ ಅಭಿಮಾನದಿಂದ ನೆಲೆಕೊಟ್ಟರು. ತಂಗಿಯ ಮದುವೆ ಮಾಡಬೇಕೆಂಬ ಛಲದಲ್ಲಿದ್ದ ಓಬಳೇಶ್ ತನ್ನ ಕಲಾವಿದೆ ತಂಗಿ ಸುಧಾಮಣಿಯನ್ನು ಕುಮಾರಸ್ವಾಮಿಗೆ ಲಗ್ನ ಮಾಡಿಕೊಟ್ಟರು ಆದರೆ ನಾಟಕಗಳಲ್ಲಿ ಪಾತ್ರವನ್ನು ಮಾತ್ರ ಕೊಡಲಿಲ್ಲ.

ಪತ್ನಿ ಪ್ರಸಿದ್ದ ರಂಗನಟಿ, ಭಾವ ರಂಗದಿಗ್ಗಜ, ಕುಮಾರಸ್ವಾಮಿ ಮಾತ್ರ ಕಂಪನಿಯಲ್ಲಿ ಅಬ್ಬೆಪಾರಿ ಉಂಡಾಡಿಯಾಗುಳಿದರು. ವಾರಕ್ಕೆ ಐದು ರೂಪಾಯಿ ಪಾಕೇಟ್ ಮನಿ ಏನೋ ಸಿಗುತ್ತಿತ್ತಾದರೂ ಮನಕ್ಕೆಲ್ಲಿಯ ನೆಮ್ಮದಿ. ಕುಮಾರಸ್ವಾಮಿ ಸುಖವನ್ನರಸಿ ಬಂದವರಲ್ಲವಾದ್ದರಿಂದ ಪಾತ್ರಗಳಿಗಾಗಿ ಭಾವನ ಹತ್ತಿರ ಗೋಗರೆದರು. ಸುಧಾಮಣಿಯ ಶಿಫಾರಸ್ಸೂ ಕೆಲಸ ಮಾಡಿತು. ಪಾತ್ರಗಳೂ ಸಿಕ್ಕವು, ಕಿರಿಯ ಪಾತ್ರಗಳಲ್ಲೇ ಪ್ರೇಕ್ಷಕರನ್ನು ತನ್ನತ್ತ ಸೆಳೆಯಲೆತ್ನಿಸಿ ಯಶಸ್ಸಿನ ಪಥದಲ್ಲಿ ಸಾಗುತ್ತಿದ್ದ ಕುಮಾರಸ್ವಾಮಿ ಓಬಳೇಶ್ವರರ ಪಾಲಿಗೆ ಕಿರಿಕಿರಿ ಎನ್ನಿಸಿದರು! ಕುಮಾರಸ್ವಾಮಿಯಲ್ಲಿನ ಕಲೆಯ ಆಳ ಹರವು ಗುರುತಿಸಿದ್ದ ಓಬಳೇಶ್ವರ್ ಕುಮಾರಸ್ವಾಮಿಯ ಬಗ್ಗೆ ಉದಾಸೀನ ಭಾವ ಹೊಂದಿದ್ದರು. ಇದನ್ನು ಸಹಿಸದ ಕುಮಾರಸ್ವಾಮಿ, ಓಬಳೇಶ್ವರ್ ಕಂಪನಿಯಿಂದ ಹೊರಬಂದರು. ಬಂದದ್ದು ಮತ್ತದೇ ಮಠದ ಕುರುಬರಹಟ್ಟಿಗೆ ಬರಿಗೈಲಿ ಬಂದವರು ಬಡ ಕುಟುಂಬಕ್ಕೆ ಮತ್ತಷ್ಟು ಹೊರೆಯಾದರು. ಕುಮಾರಸ್ವಾಮಿಯ ಕನಸಿನ ಕನ್ನಡಿ ನುಚ್ಚು ನೂರಾಗಿತ್ತು. ಆದರೇನು ಅವರ ಜೊತೆ ಹಟ್ಟಿ ನಾಟಕಗಳಲ್ಲಿ ಹಿಂದೆ ಅಭಿನಯಿಸಿದ್ದ ಮಿತ್ರರ ದೃಷ್ಟಿಯಲ್ಲೀಗ ಸುಧಾಮಣಿ ಕುಮಾರಸ್ವಾಮಿ ದೊಡ್ಡ ಕಲಾವಿದರಂತೆ ಭಾಸವಾದರು. ‘ನಾವೇ ಒಂದು ಕಂಪನಿ ಕಟ್ಟಿ ಬಿಡೋಣ ಎಂದು ಕುಮ್ಮಕ್ಕು ಕೊಟ್ಟರು. ಉಪವಾಸ ಹೀಗೆ ಸಾಯುವುದಕ್ಕಿಂತ ರಂಗದ ಮೇಲೆ ಸತ್ತರಾದರೂ ಜನ್ಮ ಸಾರ್ಥಕವಾದೀತೆಂದು ಕುಮಾರ್ ಕೂಡ ಅಳುಕುತ್ತಲೇ ‘ಹುಂ’ ಗುಟ್ಟಿದ್ದರು. ತಮ್ಮ ಪರ್ಸನಾಲಿಟಿಗೆ ಹಾಸ್ಯಪಾತ್ರಗಳೇ ಲಾಯಕ್ಕು ಅನ್ನಿಸಿತು. ಸಾಮಾನ್ಯವಾಗಿ ನಾಟಕ ಕಂಪನಿ ಮಾಲೀಕರೆಲಾ ಹಾಸ್ಯಪಾತ್ರಗಳಿಗೇ ಶರಣಾದವರು. ಗುಬ್ಬಿವೀರಣ್ಣ, ಹಿರಣ್ಣಯ್ಯ, ಚಿಂದೊಡಿ ವೀರಪ್ಪ, ಮಾಸ್ಟರ್ ಹಿರಣ್ಣಯ್ಯ ಇಂತಹ ಹಾಸ್ಯರತ್ನಗಳ ಸಾಲಿನಲ್ಲಿಯೇ ಇವರೂ ಹೆಜ್ಜೆ ಇಟ್ಟರು.

೧೯೭೨ರಲ್ಲಿ ತಮ್ಮದೇ ಆದ ಶ್ರೀಕುಮಾರೇಶ್ವರ ನಾಟಕ ಸಂಘವನ್ನು ಸ್ಥಾಪಿಸಿದರು. ಮೊದಲ ಕ್ಯಾಂಪ್ ದುರ್ಗದ ಅತಿಚಿಕ್ಕ ಹೋಬಳಿ ಭರಮಸಾಗರದಲ್ಲಿ ‘ಮುದುಕನ ಮದುವೆ’ ನಾಟಕದಲ್ಲಿ ತನ್ನ ವಯಸ್ಸಿಗೆ ಮೀರಿದ ಮುದುಕನ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರಾದರೂ ಆರ್ಥಿಕವಾಗಿ ಮುಳುಗುವ ಸ್ಥಿತಿ, ಉಪವಾಸ ವನವಾಸಗಳಲ್ಲೇ ತನ್ನವರೊಂದಿಗೆ ದಿನ ತಳ್ಳಿದ ಕುಮಾರ್ ಒಂದೆರಡು ಹಳೆಪರದೆಗಳಲ್ಲೇ ನಾಟಕಕ್ಕೆ ಹೊಸರೂಪ ತಂದು ಕೊಡಲು ಹೆಣಗಿದರು. ಹೋದ ಕಡೆಯಲ್ಲೆಲ್ಲಾ ಜನಮೆಚ್ಚುಗೆಗೆ ಪಾತ್ರರಾದರೂ ಹೊಟ್ಟೆಬಟ್ಟೆಗೆ ಆಗದಷ್ಟು ಸಂಪಾದನೆಯಿಂದಾಗಿ ಕಂಗೆಟ್ಟರು. ಹೊಸ ಪರದೆಗಳನ್ನು ನವನವೀನ ನಾಟಕಗಳಲ್ಲಿ ಬರೆಸಲು ಕಾಸಿಲ್ಲದ ಅನಾಥಸ್ಥಿತಿ. ಇಂತಹ ದಿನಗಳಲ್ಲೇ ಮೂರು ಮಕ್ಕಳ ತಂದೆಯೂ ಆದ ಕುಮಾರಸ್ವಾಮಿ ಮಕ್ಕಳ ಭವಿಷ್ಯವನ್ನು ನೆನೆದು ಬಳಲಿ ಬೆಂಡಾದರು. ಕಂಪನಿಗೆ ಸಲಾಮ್ ಹೊಡೆದು ಮೊದಲಿನಂತೆ ಮಿಲ್ ಕಾರ್ಮಿಕನಾಗಿ ಕೂಲಿ ಮಾಡಿದರೂ ಸರಿ ಹೆಂಡತಿ ಮಕ್ಕಳನ್ನು ಬಾಳಿಸುವ ಛಲಕ್ಕೆ ನಿಂತರು. ಮಾಗಡಿ ಕ್ಯಾಂಪ್ ತಮ್ಮ ಕಡೆಯ ಕ್ಯಾಂಪ್ ಎಂದು ನಿರ್ಧರಿಸಿಬಿಟ್ಟರು. ಒಬ್ಬರೇ ಕೂತು ಕಣ್ಣೀರಿಟ್ಟರು. ಕಲಾದೇವಿ ನಿಷ್ಕರುಣಿಯಲ್ಲ ತನ್ನನ್ನು ನಂಬಿದ ಕಲಾ ಕುಸುಮವನ್ನು ಕೈಹಿಡಿದೆತ್ತದಷ್ಟು ಬಡವಿಯಲ್ಲವೇ ಅಲ್ಲ. ಮಾಗಡಿ ಕ್ಯಾಂಪ್ ನಲ್ಲಿ ಕಲಾಮಾತೆ ತನ್ನ ಕುವರನಿಗೆ ಯಶಸ್ಸಿನ ರುಚಿ ಹತ್ತಿಸಿದಳು. ಕಲಾವಿದನಾಗಿಯೇ ಬಾಳು ಎಂದು ಹರಸಿಯೂಬಿಟ್ಟಳೆಂದ ಮೇಲೆ ಕಲಾವಿದನನ್ನು ಹಿಡಿಯುವವರಾದರು ಯಾರು? ‘ಮುದುಕನ ಮದುವೆ’ ನಾಟಕ ವರ್ಷಗಟ್ಟಲೆ ಪ್ರಯೋಗ ಕಂಡಿತು. ಹಣ ಕೀರ್ತಿಯ ಹೊಳೆ ಹರಿಯಿತು. ಓಬಳೇಶ್ವರ್ ವಿರಚಿತ ‘ಮುಂಡೇಮಗ, ಖಾದಿ ಸೀರೆ’ ನಾಟಕಗಳನ್ನು ಕೈಗೆತ್ತಿಕೊಂಡರು. ಓಬಳೇಶ್ವರ್ ನಿರ್ವಹಿಸಿದ ಪಾತ್ರಗಳನ್ನೇ ನಿರ್ವಹಿಸಿ ಅವರಿಂದಲೇ ‘ಸೈ’ ಅನ್ನಿಸಿಕೊಂಡರು. ಓಬಳೇಶ್ವರ್ ತಮ್ಮ ದೌರ್ಬಲ್ಯಗಳಿಂದಾಗಿ ಕಂಪನಿಯ ಮೇಲಿನ ಹಿಡಿತ ಕಳೆದುಕೊಂಡು ಆನಾರೋಗ್ಯದತ್ತ ಜಾರುತ್ತಿದ್ದಾಗಲೇ ಕುಮಾರಸ್ವಾಮಿ ಕಲಾ ಮೆಟ್ಟಿಲುಗಳನ್ನು ನಿಧಾನಾಗಿ ಏರಲಾರಂಭಿಸಿದರು. ಮೈಸೂರು, ಹಾಸನ, ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಎಲ್ಲೇ ಕ್ಯಾಂಪ್ ಮಾಡಿದರೂ ಅದೇ ತಮ್ಮ ಸ್ವಂತ ಊರೆಂಬಂತೆ ವರ್ಷಗಟ್ಟಲೆ ನಾಟಕಗಳನ್ನು ಆಡುತ್ತ ನೆಲೆ ನಿಲುವಂತಾದರು. ಪ್ರಶಂಸೆ ಪ್ರಶಸ್ತಿ ಪಾರಿತೋಷಕ ಪಟ್ಟಪದವಿಗಳೂ ಪ್ರಾಪ್ತವಾದವು. ನಾಲ್ಕು ಕಂಪನಿಗಳನ್ನು ಕಟ್ಟಿಸಿ ಬೆಳೆಸಿ ಮಾಲೀಕರಾದವರಲ್ಲೇ ಮುಳುಗುತ್ತಿದ್ದ ತನ್ನ ಭಾವ ಓಬಳೇಶ್ವರ ಕಂಪನಿ ಮತ್ತೆ ಚೇತರಿಸಿಕೊಳ್ಳಲೂ ನೆರವಾದರು. ಈಗ ಕಲಾ ಧೀಮಂತಿಕೆಯ ಜೊತೆಗೆ ಶ್ರೀಮಂತಿಕೆಯೂ ಸೇರಿಕೊಂಡ ಮೇಲೆ ಶ್ರೀಮಂತ ನಾಟಕಗಳನ್ನು ಬರೆಸಿ ಆಡುವ ಪಣತೊಟ್ಟರು.

ಚಿತ್ರದುರ್ಗದ ಯೋಗಿ ಸಂತ ನಾಯಕನಹಟ್ಟಿ ತಿಪ್ಪೆರುದ್ರಸಾಮಿ ಬಗ್ಗೆ ಆರ್.ಡಿ. ಕಾಮತ್ ರಿಂದ ೧೯೮೫ ರಲ್ಲಿ ನಾಟಕ ಒಂದನ್ನು ಬರೆಸಿ ರಂಗಕ್ಕೆ ತಂದರು. ಹೋದೆಡೆಯಲ್ಲೆಲಾ ಚಿನ್ನದ ಮಳೆ ಸುರಿಯಿತು. ಅದರಲ್ಲಿ ಕುಮಾರಸ್ವಾಮಿ ಅಭಿನಯಿಸುತ್ತಿದ್ದ ಗಾಂಪನ ಪಾತ್ರದ್ದ ಗಾರುಡಿಗೆ ಪ್ರೇಕ್ಷಕ ಮರುಳಾಗಿ ಹೋದ. ೧೯೮೭ ರಲ್ಲಿ ‘ಮಲೆ ಮಹದೇಶ್ವರ ಮಹಾತ್ಮೆ’ ನಾಟಕವನ್ನು ಬರೆಸಿ ಟಿ.ನರಸೀಪುರದ ಮೊದಲ ಪ್ರಯೋಗದಲ್ಲೇ ಜನಮನಗೆದ್ದ ಕುಮಾರ್, ಮೈಸೂರಿಗರ ಮನೆಮಾತಾದರು. ಸಿಂಧೂರ ಲಕ್ಷ್ಮಣದಂತಹ ಐತಿಹಾಸಿಕ ನಾಟಕ ಕೊಟ್ಟ ಕುಮಾರ್ ತನ್ನ ಜಿಲ್ಲೆಯ ಮದಕರಿನಾಯಕನನ್ನು ರಂಗಕ್ಕೆ ತರುವ ಆಶೆ. ೧೯೯೦ ರಲ್ಲಿ ಹಿರಿಯ ರಂಗಕರ್ಮಿ ಧುತ್ತರಗಿ ‘ರಾಜವೀರ ಮದಕರಿ ನಾಯಕ’ ನಾಟಕವನ್ನು ದುರ್ಗದಲ್ಲೇ ನೆಲೆ ನಿಂತು ಬರೆದು ಕೊಟ್ಟರು. ಮದಕರಿನಾಯಕನೂ ಕುಮಾರಸ್ವಾಮಿಗೆ ಮೋಸ ಮಾಡಲಿಲ್ಲ, ಕುಮಾರ್ – ಸುಧಾಮಣಿ ಹೆಗಲಿಗೆ ಹೆಗಲು ಕೊಟ್ಟು ದುಡಿದರು. ತಮ್ಮ ಮಕ್ಕಳನ್ನೂ ತಾವು ನಂಬಿದ ನೆಚ್ಚಿದ, ರಂಗಭೂಮಿಗೆ ತಂದರು. ಆದರೇನು ಕಾಲಾಯ ತಸ್ಮೈ ನಮಃ. ಸಿನಿಮಾದ ಹಾವಳಿಯಿಂದ ಸೊರಗ ಹತ್ತಿದ ನಾಟಕ ಕಲೆ ಟಿ.ವಿ.ಯ ಹಾವಳಿಯಿಂದಾಗಿ ಬಳಲಿ ಬಸವಳಿಯಿತು. ಹೊಸತನಕ್ಕೆ ತೆರೆದುಕೊಳ್ಳಲಾಗದ ನಾಟಕರಂಗ ಬಡವಾಯಿತು. ಕುಮಾರಸ್ವಾಮಿಯ ಕಂಪನಿಯದೂ ಅದೇ ಸ್ಥಿತಿ. ದ್ವಂದಾರ್ಥದ ಸಂಭಾಷಣೆಗಳಿಂದಲೂ ರಂಗಕಲೆ ಉಳಿಯದಷ್ಟು ದುರ್ಬಲವಾಯಿತು. ಕಲಾವಿದರಿಗೆ ಸಂಬಳ ಕೊಡುವುದೂ ಕಷ್ಟವಾದಾಗ ಕಲಾವಿದರು ಕಂಪನಿ ಬಿಟ್ಟರು. ಕುಮಾರಸ್ವಾಮಿ ಎದೆಗುಂದಲಿಲ್ಲ. ಆ ಜಾಗದಲ್ಲಿ ತಮ್ಮ ಮಕ್ಕಳಾದ ಉಮಾ – ನಳಿನಿಯನ್ನೇ ತುಂಬಿದರು. ಪತ್ನಿಯಂತೂ ರಂಗಕಲೆಗೇ ತಮ್ಮನ್ನು ಧಾರೆ ಎರೆದುಕೊಂಡವರು. ನಷ್ಟ ಕಷ್ಟಗಳಲ್ಲೂ ಕಂಪನಿ ನಿಲ್ಲಿಸಲಿಲ್ಲ ತೋಟ ಮಾರಿದರೂ ಕಂಪನಿ ಉಳಿಸಿಕೊಳ್ಳುವ ಛಲ ಬಿಡಲಿಲ್ಲ. ಧುತ್ತರಗಿಯವರಿಂದ ದೇವಿ ಮಹಾತ್ಮೆ ಎಂಬ ಹೊಸ ನಾಟಕವನ್ನು ಬರೆಸಿದರೆ. ಲಕ್ಷಗಟ್ಟಲೆ ಖರ್ಚು ಮಾಡಿ ಸೌಂಡ್ ಎಫೆಕ್ಟ್ ಸ್ಟೇಜ್ ಟ್ರಿಕ್ಸ್‌ಗಳನ್ನು ಬಳಸಲು ಮುಂದಾದರು. ಬಾಂಬೆಯಿಂದ ಹೊಸ ಪರಿಕರಗಳು ಬಂದಿಳಿದವು. ಬೆಂಗಳೂರಿನಿಂದ ಕಲಾವಿದರೂ ಬಂದರು. ಕೆಳಕೋಟೆಯ ಯುವ ಕಲಾವಿದರೂ ಸೇರಿಕೊಂಡರು. ದೇವಿ ರಂಗಕ್ಕೆ ಇಳಿದು ಬಂದಳು. ಕುಮಾರಸ್ವಾಮಿಯ ಭಗೀರಥ ಪ್ರಯತ್ನ ಫಲಿಸಿತು. ರಂಗಾಸಕ್ತರು ‘ದೇವಿ ಮಹಾತ್ಮೆ’ಯನ್ನು ಮೆಚ್ಚಿದರು. ೧೯೯೫ ರಲ್ಲಿ ಸರ್ಕಾರ ‘ನಾಟಕ ಅಕಾಡೆಮಿ’ ಪ್ರಶಸ್ತಿ ನೀಡಿ ಗೌರವಿಸಿತು. ರಂಗ ಕಲಾವಿದರಾದ ಜಯಕುಮಾರ್, ಜಖಾವುಲ್ಲಾ, ದಾವಣಗೆರೆ ರಮೇಶ, ಮಲ್ಲಿಕಾರ್ಜುನ, ನಟಿ ಪಂಕಜ ಇಂತಹ ನೈಜ ಕಲಾವಿದರನ್ನು ಬಳೆಸಿ ಬೆಳಗಿಸಿದ ಕೀರ್ತಿ ಕುಮಾರಸ್ವಾಮಿಗೂ ಸಲುತ್ತದೆ. ಅವರ ನಟನೆ ಸಾಹಸ ಛಲಕ್ಕೆ ಸಂದ ಗೌರವವೆಂಬಂತೆ ಈ ಸಲ ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಿ ಸನ್ಮಾನಿಸಿದೆ. ದಕ್ಷಿಣ ಕರ್ನಾಟಕದಲ್ಲೀಗ ನಡೆದಿರುವ ಮೂರೇ ಮೂರು ಕಂಪನಿಗಳಲ್ಲಿ ನಟ ಕುಮಾರಸ್ವಾಮಿಯದೂ ಒಂದು. ಅರಸೀಕೆರೆಯ ಕ್ಯಾಂಪ್ ನಲ್ಲಿ ಪ್ರೇಕ್ಷಕರನ್ನರಸುತ್ತಾ ರಾತ್ರಿ ನಿದ್ದೆಗೆಡುತ್ತಿರುವ ಕುಮಾರಸ್ವಾಮಿ ಯಂತಹ ಕಲಾಕಾರರು ಉಳಿಯಬೇಕು ಅದಕ್ಕೆ ಪ್ರೇಕ್ಷಕ ಧಣಿಯ ಕೃಪೆಬೇಕು.
*****

ವೇಣು ಬಿ ಎಲ್
Latest posts by ವೇಣು ಬಿ ಎಲ್ (see all)