ನವಿಲುಗರಿ – ೮

ನವಿಲುಗರಿ – ೮

ರಂಗ ಕಾಲೇಜು ಮುಗಿಸಿ ಹಳ್ಳಿದಾರಿ ಹಿಡಿದಿದ್ದ ಮತ್ತದೇ ಜಾಗದಲ್ಲಿ ಸ್ಕೂಟಿ ನಿಲ್ಲಿಸಿಕೊಂಡು ಬಿಸಿಲಲ್ಲಿ ಒಣಗುತ್ತಾ ಬೆವರೊರೆಸಿಕೊಳ್ಳುತ್ತ ನಿಂತ ಚಿನ್ನು ಕಂಡಳು. ರಂಗ ನೋಡಿಯೂ ನೋಡದವನಂತೆ ಹೋಗಬೇಕೆಂದುಕೊಂಡನಾದರೂ ಮಾನವೀಯತೆ ಬ್ರೇಕ್ ಹಾಕಿತು.

‘ಮತ್ತೇನಾಯಿತು ಭವಾನಿ ನಿನ್ನ ಸ್ಕೂಟಿಗೆ?’ ಕೇಳಿದ.

‘ಲಡಾಸ್‌ನನ್ಮಗಂದು, ಮುಂದಿನ ವೀಲ್ ಪಂಕ್ಚರ್‌ ಆಗಿದೆ ಕಣೋ…’ ನಿಟ್ಟುಸಿರು ಬಿಟ್ಟಳು.

‘ತಳ್ಕೊಂಡು ನಡಿಬೇಕಪ್ಪಾ’ ಸಲಹೆ ನೀಡಿದ.

‘ನಮ್ಮಂತಹ ಹುಡ್ಗೀರಿಗೆ ಹೇಳೋ ಮಾತಿದಾ?’ ನೊಂದ ನೋಟ ಬೀರಿದಳು.

‘ಓಹೋ! ನೀವೆಲ್ಲಾ ಬಾಳೆಹಣ್ಣಿನ ಬುಟ್ಟೀಲಿ ಬೆಳೆದವರಲ್ವೆ…’ ನಕ್ಕ.

‘ತುಂಬಾ ಬಿಸಿಲಿದೆ… ಕರ್‍ಕೊಂಡು ಹೋಗೋ ರಂಗಾ’ ಬೇಡಿದಳು.

‘ಎಲ್ಲಾದ್ರೂ ಉಂಟೆ! ಸುಡುತ್ತೆ ಅಂತ ತಿಳಿದೂ ಬೆಂಕಿ ಜೊತೆ ಸರಸ ಆಡೋ ಯಾವ ಉತ್ಸಾಹವಾಗಲಿ ಉಮೇದಾಗ್ಲಿ ನನಗಿಲ್ಲ… ನಡಿನಡಿ ತಳ್ಕೊಂಡು’ ಗದರಿಸಿದ.

‘ಹೀಗೆ ಕಾಡುದಾರೀಲಿ ಒಬ್ಳೆ ಹೊರಟರೆ ನೋಡಿದವರು ಸುಮ್ಮೆ ಹೋಗ್ತಾರಾ?’ ಭಯವನ್ನು ಮುಖದಲ್ಲಿ ತಂದುಕೊಂಡಳು.

‘ನೀನು ಪಾಳೇಗಾರರ ಮನೆ ರಾಜಕುಮಾರಿ ಅಂತ ಎಲ್ಲರಿಗೂ ಗೊತ್ತೇ ಇದೆ… ನಿನ್ನ ತಂಟೆ ಬಂದ್ರೆ ಪ್ರಾಣಕ್ಕೇ ತೊಂದ್ರೆ ಅಂತ ಸುತ್ತಹಳ್ಳೀಲಿ ತಿಳಿಯದ ಮುದಿ ಯಾವನಿದಾನೆ ಭವಾನಿ?’ ಚೇಡಿಸಿದ.

‘ಭವಾನಿ ಅನ್ವೇಡ ಚಿನ್ನು ಅನ್ನು ಅದೇ ನನಗಿಷ್ಟ’ ಮುನಿಸು ತೋರಿದಳು.

‘ಕಾಲೇಜ್ ಹುಡುಗರೂ ನಿನ್ನ ಹ್ಯಾಗೆ ಕರಿತಾರೋ ನಾನೂ ಹಾಗೆ ಕರೆಯೋದು. ನಂದೇನ್ ಸ್ಪೆಷಲ್ಲು? ಚಿನ್ನು ಪೆನ್ನು ಗನ್ನು ಕರೆಯೋಕೆ ಒಂದು ಹೆಸರಾದ್ರೆ ಸಾಕು’.

‘ಮಾತು ಸಾಕು ನಡಿಯೋ, ಕಂಬಿ ಮೇಲೆ ಕೂರ್‍ಲಾ?’ ಉತ್ಸುಕಳಾದಳು.

ಇದೆಲ್ಲಾ ಓವರ್ ಆಕ್ಟಿಂಗ್ ನನ್ನ ಹತ್ತಿರ ಇಟ್ಕೋಬೇಡ. ಒಂದು ಕೆಲಸ ಮಾಡೋಣ. ನೀನು ಸೈಕಲ್ ಮೇಲೆ ನಡಿ. ನಾನು ಸ್ಕೂಟಿ ತಳ್ಕೊಂಡು ಬರ್ತಿನಿ. ಊರು ಸೇರುತ್ಲು ಊರ ಬಾಗಿಲಲ್ಲೇ ನಿಮ್ಮ ಮನೆ… ಸ್ಕೂಟಿನಾ ಮನೆವರೆಗೂ ತಳ್ಳಿಕೊಂಡು ಹೋಗು… ಇಲ್ಲ ಅಲ್ಲೆ ನಿಲ್ಲಿಸಿ ಮನೆಗೆ ಹೋಗು’ ಪರಿಹಾರ ಸೂಚಿಸಿದ ರಂಗ.

‘ಅಂದ್ರೆ… ನಾನು? ನಾನು ಸೈಕಲ್ ಮೇಲೆ… ಹೋಗೋದೇ ನೊ ನೋ ನೋ’ ತಲೆ ಕೊಡವಿದಳು ಚಿನ್ನು.

‘ಸರಿ… ನಾನು ಬರ್ತಿನಿ’ ಹೊರಟೇಬಿಟ್ಟ ರಂಗ ಮತ್ತೆ ಕೂಗಿ ನಿಲ್ಲಿಸಿದಳು.

‘ಒಂದು ಕೆಲಸ ಮಾಡೋಣ ಕಣೋ, ಸ್ಕೂಟಿನಾ ಇಲ್ಲೇ ನಿಲ್ಲಿಸಿ ಲಾಕ್ ಮಾಡ್ತೀನಿ. ಆಮೇಲೆ ನಮ್ಮವರು ಯಾರಾದ್ರೂ ಬಂದು ತಗೊಂಡು ಹೋಗ್ತಾರೆ. ಈಗ ನಾನು ನಿನ್ನ ಜೊತೆ ಕಂಬಿಮೇಲೆ…’ ರಾಗ ಎಳೆದಳು.

‘ನೊ ಚಾನ್ಸ್, ನಾನು ಹೇಳಿದ್ಮೇಲೆ ಮುಗೀತು. ಮಾತು ಬದಲಿಸಲ್ಲ ಮನಸ್ಸೂ ಬದಲಿಸೋಲ್ಲ’.

‘ಸರಿ ಹೇಗೂ ಕಂಪನಿ ಸಿಗುತ್ತಿಲ್ಲ’ ಎಂದು ಅರೆ ಮನಸ್ಸಿನಿಂದ ಸಮ್ಮತಿಸಿದಳು. ಅವನು ಸ್ಕೂಟಿ ತಳ್ಳಿಕೊಂಡು ಹೊರಟರೆ ಇವಳು ನಿಧಾನವಾಗಿ ಸೈಕಲ್ ಪೆಡಲ್ ತುಳಿದಳು. ರಂಗ ಮಾತನಾಡುವ ಉತ್ಸಾಹ ತೋರಲಿಲ್ಲ. ಆದರೂ ಚಿನ್ನುವೇ ಕಾಲೇಜಿನ ವಿಷಯ ಸಂಗ್ರಾಮ ತನ್ನನ್ನು ನುಂಗುವಂತೆ ನೋಡುವ ವಿಷಯ ಮನೆಯಲ್ಲಿ ತನ್ನ ಬಗ್ಗೆ ಎಲ್ಲರೂ ತೋರುವ ಪ್ರೀತ್ಯಾದರ, ತನಗೇಕೋ ಈಗ ಓದೇ ತಲೆಗೆ ಹತ್ತದೆ ಸತಾಯಿಸುತ್ತಿರುವ ಬಗ್ಗೆ ಮಾತನಾಡುತ್ತಲೇ ಇದ್ದಳು. ಅವನು ಮೌನವಾಗಿ ಹಿಂಬಾಲಿಸುತ್ತಿರುವುದು ಅವಳನ್ನು ಅಣಕಿಸಿತು.

‘ನಾನು ಮಾತ್ನಾಡೋದು ಕೇಳಿಸ್ತಿಲ್ವಾ?’ ಸಣ್ಣಗೆ ಗದರಿಸಿದಳು.

‘ಕೇಳಿಸ್ತಿದೆ… ತಮ್ಮ ಧ್ವನಿಗಿರುವ ತಾಕತ್ತಿಗೆ ಮೈಕೇ ಬೇಡ’ ಕೆಣಕಿದ.

‘ಮತ್ತೆ, ಒಂದಕ್ಕೂ ಉತ್ತರವಿಲ್ಲ?’

‘ಯಾರೇ ಆಗಲಿ ತಮ್ಮ ಬಗ್ಗೆ ತಾವೇ ಪರಾಕು ಹೇಳಿಕೊಳ್ಳುವಾಗ ಮಧ್ಯೆ ಮಾತಾಡಿ ಡಿಸ್ಟರ್ಬ್ ಮಾಡಬಾರದಲ್ವೆ?’

ಸೈಕಲ್ ಇಳಿದ ಅವಳು ಮುನಿಸು ತೋರಲೆಂದೇ ಅವನ ಬೆನ್ನಿಗೆ ದಬದಬನೆ ಗುದ್ದಿದಳು. ತಕ್ಷಣ, ‘ಅಯ್ಯಯ್ಯೋ… ಕೈ… ಕೈ… ನೋಯ್ತಾ ಇದೆ. ಒಳ್ಳೇ ದುರ್ಗದ ಬಂಡೆ ಇದ್ದಾಗಿದ್ದಿಯಲ್ಲೋ’ ಅಂತ ಕೈ ಕೈ ಹಿಸುಕಿಕೊಂಡಳು.

ಈ ಹುಡುಗಾಟವೆಲ್ಲಾ ನನಗೆ ಹಿಡಿಸೋದಿಲ್ಲ ಭವಾನಿ. ವಯಸ್ಸಿಗೆ ಬಂದ ಹುಡ್ಗೀರು ಚೆಲ್ಲುಚೆಲ್ಲಾಗಿ ಆಡಬಾರ್‍ದು’ ತಟ್ಟನೆ ಅಂದು ಮುಖ ಊದಿಸಿಕೊಂಡ. ಮುಖಕ್ಕೆ ರಾಚಿದಂತಾಯಿತವಳಿಗೆ, ಸೈಕಲ್ ಏರಿ ಮುಂದಿನ ದಾರಿಯತ್ತ ದೃಷ್ಟಿ ನೆಟ್ಟಳು. ಮಧ್ಯದಲ್ಲಿ ಕಾಳಿಕಾಂಬ ದೇವಸ್ಥಾನ ಎದುರಾದಾಗಲೂ ಅತ್ತ ನೋಡಲಿಲ್ಲ, ಕೈ ಮುಗಿಯಲಿಲ್ಲ. ರಂಗನೇ ಸೆಲ್ಯೂಟ್ ಹಾಕಿ ನಡೆದ ದೊಡ್ಡ ಆಲದಮರ ಬಂದಾಗ ವಾಹನಗಳನ್ನು ಬದಲಿಸಿಕೊಂಡರು. ತನ್ನ ಮಾತಿನಿಂದ ಅವಳಿಗೆ ಕೋಪ ಬಂದಿದೆ ಎಂದೆನಿಸಿತವನಿಗೆ. ಸ್ಕೂಟಿಗೆ ಲಾಕ್ ಮಾಡಿದ ಅವಳು ಹೋಗುವ ಮುನ್ನ ಅವನತ್ತ ನೋಡಿದಳು. ಅವಳು ನೋಡುವಾಗಲೆ ಅವನು ಅವಳತ್ತ ನೋಡಿದ. ‘ಫ್ಲೀಸ್ ಕಣೋ…. ನನ್ನನ್ನು ಅಷ್ಟು ಚೀಪಾಗಿ ತಿಳ್ಕೊಬೇಡ್ವೋ’ ಅಂದ ಚಿನ್ನು ಅವನ ಪ್ರತಿಕ್ರಿಯೆಗೂ ಕಾಯದೆ ದುಡುದುಡು ನಡೆದುಹೋದಳು. ಕ್ಷಣ ದಂಗುಬಡಿದು ನಿಂತ ರಂಗ, ಅವಳ ದನಿಯಲ್ಲಿನ ಆದ್ರತೆಯನ್ನು ಗ್ರಹಿಸಿದಾಗ ‘ಚೆಲ್ಲು ಚೆಲ್ಲು’ ಅಂತೆಲ್ಲಾ ತಾನು ಅನ್ನಬಾರದಿತ್ತೇನೋ ಅಂದುಕೊಂಡ.

ಚಿನ್ನು ದೊಪದೊಪ ನಡೆದುಬಂದು ಮೆಟ್ಟಿಲುಗಳನ್ನು ಏರುವಾಗ ಆಳುಕಾಳು ‘ಅಮ್ಮಾರು ನೆಡ್ಕೊಂಡು ಬರಾದಾ’ ಅಂತ ಕಂಗಾಲಾದರು. ಒಳಬಂದಾಗ ಮನೆಯವರಿಗೂ ಅಚ್ಚರಿ ಆತಂಕ.

‘ಏನೆ ಚಿನ್ನು ನೆಡ್ಕೊಂಡು ಬಂದ್ಯಾ?’ ಚಿನ್ನಮ್ಮನ ಕಳವಳ.

‘ದೊಡ್ಡ ಆಲದಮರದತಾವ ಸ್ಕೂಟಿ ಪಂಕ್ಚರ್ ಆಯ್ತು ನಡ್ಕೊಂಡು ಬರ್‍ದೆ ಇನ್ನೇನು ಮಾಡ್ಲಿ…’ ಬ್ಯಾಗನ್ನು ಬಿರುಸಾಗಿ ಮೂಲೆಗೆಸೆದಳು.

‘ಅಯ್ಯೋ ನನ್ನ ಚಿನ್ನ…. ಇದೆಂಥ ಗಾಡಿ ಕೊಡಿಸಿದಾರ್‍ಯೆ!? ಪಂಕ್ಚರ್ ಆಗ್ದೆ ಇರೋ ಗಾಡಿ ಕೊಡಿಸಬಾರಾ, ದುಡ್ಡಿಗೇನು ಬರ. ಸತ್ತಾಗೇನ್ ಹೊಡ್ಕೊಂಡು ಹೋಯ್ತಿರಾ’ ಗಂಡನ ಮೇಲೆ ಕೂಗಾಡುತ್ತಾ ಮಗಳನ್ನು ಉಯ್ಯಾಲೆ ಮೇಲೆ ಕೂರಿಸಿ ತೂಗುವಾಗಲೆ ಕೆಂಚಮ್ಮ ಟೀ ಕಾಯಿಸಿ ತಂದಳು. ಹೆಂಡತಿಯ ದಡ್ಡತನಕ್ಕೆ ನಕ್ಕ ಉಗ್ರಪ್ಪ ಅಂದ.

‘ಒಂದು ಕೆಲ್ಸ ಮಾಡು ಮಗಾ, ಇನ್ನು ಮ್ಯಾಲೆ ಗಾಡಿ ಎಲ್ಲಾನ ಕೈ ಕೊಡ್ತಾ ಒಂದು ಫೋನ್ ಹಚ್ಚು, ನಾವೇ ಯಾರಾನ ಬಂದು ನಿನ್ನ ಕರ್ಕೊಂಡು ಬತ್ತೀವಿ ಆಯ್ತಾ?’

‘ನನ್ನ ಹತ್ತಿರ ಮೊಬೈಲ್ ಎಲ್ಲಿದೆ?’ ಅಗತ್ಯಕ್ಕಿಂತ ಹೆಚ್ಚಾಗಿ ಚೀರಿದಳು.

‘ಆಯ್ತು ಆಯ್ತು… ನಾಳೆನೇ ಕೊಡಿಸ್ತೀನಿ ತಾಯಿ’ ಉಗ್ರಪ್ಪ ಕೈ ಮುಗಿದ.

‘ಏನಂತೆ ಮಗೀಂದು’ ಅನ್ನುತ್ತಲೇ ಒಳ ಬಂದರು ಭರಮಪ್ಪ, ಸೊಸೆಯರು ಒಳಗೆದ್ದು ಹೋದರು ತಲೆಯ ಮೇಲೆ ಮುಸುಕು ಎಳೆದುಕೊಳ್ಳುತ್ತ.

‘ನಿಮ್ಮ ಮೊಮ್ಮಗಳಿಗೆ ಮೊಬೈಲ್ ಬೇಕಂತೆ’ ಉಗ್ರಪ್ಪ ನಕ್ಕ.

‘ಹಂಗಾ… ಹಂಗಾರೆ ನಂದೇ ತಗಳೊ ಕೂಸು’ ಭರಮಪ್ಪನ ಕಕ್ಕುಲಾತಿ.

‘ನಿಂದಾ… ಒಳ್ಳೆ ಸುಣ್ಣಕಾಯಿ ಡಬ್ಬಿ ತರಾ ಅದೆ. ನನಗೆ ಮ್ಯೂಸಿಕ್ಕು, ವಿಡಿಯೋ, ಕಾಲ್ಯುಕ್ಯುಲೇಟರ್ ಕಂಪ್ಯೂಟರ್ ಎಲ್ಲಾ ಇರೋ ಅಪ್‌ಟುಡೇಟ್ ಮೊಬೈಲ್ ಬೇಕಪ್ಪಾ’ ಅಂದಳು ಚಿನ್ನು.

‘ಆತೇಳು ಮಗಾ ಅದ್ನೆ ತಗೊಂಡ್ರಾತು’ ಅಂದ ಉಗ್ರಪ್ಪ ಒಳಗೆದ್ದು ಹೋದ. ಚಿನ್ನು ಟಿವಿ ಆನ್ ಮಾಡಿದಳು ಯಾವುದೋ ಹಾಡು ಕುಣಿತಾ ಬರ್ತಾ ಇತ್ತು. ಚಾನಲ್ ಚೇಂಜ್ ಮಾಡಿ ಡಬ್ಲ್ಯುಡಬ್ಲ್ಯು‌ಎಫ್ ಬರೋ ಚಾನಲ್ ಹುಡುಕಿ ಇಟ್ಟಳು. ಭರಮಪ್ಪ ಖುಷಿಯಾದರು.

‘ನಾನು ಇದ್ನೆ ಇಕ್ಕು ಅಂತ ಹೇಳೋಂವಾ ಅನ್ನೊಂಡೆ ನೀನೂ ಇಟ್ಟೆ’ ಮೊಮ್ಮಗಳ ಕೆನ್ನೆ ಹಿಂಡಿದರು.

‘ತಾತ, ಇದೆಲ್ಲಾ ಬರೀ ಆಕ್ಟಿಂಗ್ ಅಂತೆ. ಇವರು ನಿಜವಾಗೂ ಬಡಿದಾಡೋದಿಲ್ವಂತೆ…’ ಅಂದಳು ಚಿನ್ನು.

‘ಅದೆಂಗಾರ ಇರವಲ್ಲದ್ಯಾಕೆ… ನನ್ನ ಮಕ್ಕಳು ಶಕ್ತಿವಾನರು ಕಣವ್ವ. ಹೆಂಗೆ ಬಟ್ಟದಂಗವರೆ! ಎತ್ತಿ ಎತ್ತಿ ಎಸಿತಾರೆ ಅಂದ್ರೆ ಸುಮ್ಮೆ ಮಾತಾ! ಚೆನ್ನಾಗಿ ಕಸರತ್ತು ಮಾಡಿರ್ತಾರೆ ಕಣವ್ವ, ಒಬ್ಬೊಬ್ಬರು ಒಂದು ಕುರಿ ತಿಂತಾರಂತೆ’ ಅಚ್ಚರಿಪಟ್ಟರು ಭರಮಪ್ಪ. ಚಿನ್ನಮ್ಮ ಮಾವನಿಗೆ ಕಾಫಿ ತಂದುಕೊಟ್ಟಳು. ಚಡ್ಡಿ ಹಾಕಿಕೊಂಡು ಅರೆಬೆತ್ಲೆ ಅಂಡುತೋರುತ್ತಾ ಹೊಡೆದಾಡೋ ರಾಕ್ಷಸರಂತಹ ಗಂಡಸರನ್ನು ಕಂಡವಳಿಗೆ ಅಸಹ್ಯವಾಯಿತು. ಪರ ಗಂಡಸರನ್ನ ಈ ಅವತಾರದಾಗೆ ನೋಡೋದುಂಟಾ? ಕಳವಳವಾಯಿತು. ಮುದ್ದಿನ ಮಗಳಿಗೆ ಹೇಳುವಂತಿಲ್ಲ. ಮೇಲಾಗಿ ತಿಳಿಹೇಳಬೇಕಾದ ತಾತನೇ ಮೊಮ್ಮಗಳ ಸಂಗಡ ಕೂತು ಇಷ್ಟಗಲ ನಗುತ್ತಾ ‘ಭೇಷ್… ಭಲಾ ನನ್ನ ಸರದಾರ’ ಅಂತ ಮೆಚ್ಚಿಕೋತಾ ನೋಡುವಾಗ ಉಸಿರೆತ್ತುವ ಮಾತು ದೂರವೇ ಉಳಿಯಿತು.

ಕೋಣೆಗೆ ಬಂದ ಚಿನ್ನಮ್ಮ ಬಳೆಸದ್ದು ಮಾಡಿದಾಗ ಲೆಕ್ಕಪತ್ರ ನೋಡುತ್ತಿದ್ದ ಉಗ್ರಪ್ಪ ತಲೆ‌ಎತ್ತಿದ. ‘ಅಲ್ಲಾ ಮೈನೆರದ ಹುಡ್ಗಿ, ಇಂಥದ್ದೆಲ್ಲಾ ನೋಡೋದಾ… ವಯಸ್ಸಾದವರಿಗಾದ್ರೂ ಬುದ್ಧಿ ಬ್ಯಾಡವಾ… ಥೂ ಅಸಹ್ಯ’ ಮೂತಿ ತಿರುವಿದಳು.

‘ಅದಕ್ಕೆ ನನ್ನ ಏನು ಮಾಡು ಅಂತಿಯೆ?’ ನಕ್ಕ ಉಗ್ರಪ್ಪ.

‘ಬುದ್ಧಿ ಹೇಳಿ ಒಂದೀಟು?’

‘ಯಾರಿಗೆ ?’

‘ನಿಮ್ಮ ಮಗಳಿಗೆ’

‘ಈಗಿನ ಕಾಲದವು ಹಿಂಗೆ ಕಣೆ. ನಮ್ಮ ಕಾಲ್ದಾಗೆ ಸೆಕ್ಸುಬುಕ್ಸಾ ಕದ್ದುಮುಚ್ಚಿ ಓದ್ತಿದ್ವಿ, ಬೇರ್‌ಬಾಡಿ ಫೋಟೋಂವಾ ಹೆಂಗಸುರ್‍ದು ಬಚ್ಚಿಟ್ಕೊಂಡು ರಾತ್ರಿನಾಗ ನೋಡ್ತಿದ್ವಿ… ಈಗ ಟಿವಿನಾಗೆ ಬರೋ ಹೆಂಗಸರೆಲ್ಲಾ ಮೂರು ಹೊತ್ತೂ ಬಿಚ್ಕೊಂಡು ಕುಣಿತಾವೆ. ಅದನ್ನ ಮಕ್ಕಳ ಜೊತೆ ಕುತ್ಕೊಂಡು ದೊಡ್ಡೋರೂ ನೋಡ್ತವೆ… ನಾವು ಹುಡ್ರಿದ್ದಾಗ ಹೆಂಗಸರ ಸೆರಗು ಸರಿದರೆ ಸಾಕಪ್ಪಾ ಅಂತ ಜೊಲ್ಲು ಸುರಿಸ್ಕೊಂಡು ಕಾಯ್ತಿದ್ವಿ. ಒಂದೀಟೇನಾರ ಕಾಣ್ತೋ ಮೈಮಾಗ್ಳ ರೋಮ ಹಂಗೆ ಸೆಟೆದು ನಿಂತ್ಕೊಂಬೋವು, ಈಗ ಮೊಲೆಕಟ್ಟು ಹೊಕ್ಕಳ ಎಲ್ಲಾ ಬಿಟ್ಕಂಡೆ ಓಡಾಡ್ತವೆ. ಟಿವಿನಾಗೂ ಸಿನಿಮಾದಾಗೂ ಕುಣಿತಾವೆ. ಈಗಿನ ಹುಡ್ರಿಗೆ ಏನು ಅನ್ನಿಸೀತು? ನೋಡಿದ್ದನ್ನೇ ನೋಡಿದ್ರೆ ಮಜಾ ಏನಿರ್‍ತದೆ? ಜಿಗುಪ್ಸೆ ಬತ್ತದೆ. ಆದ್ರೂವೆ ಮುಚ್ಚಿಡೋಕಿಂತ ಬಿಚ್ಚಿಡೋದೇ ವಾಸಿ ಅನ್ನಿಸ್ತೆಂತೆ’ ಅನ್ನುತ್ತಾ ಉಗ್ರಪ್ಪ ಚಿನ್ನಮ್ಮನ ಕೈ ಹಿಡಿದೆಳೆದುಕೊಂಡ ರಭಸಕ್ಕೆ ಅವಳು ಅವನ ಮೈ ಮೇಲೆ ಬಿದ್ದಳು.

‘ತೆಗ್‍ತೆಗಿರಿ ಹೊತ್ತಿಲ್ಲ ಗೊತ್ತಿಲ್ಲ. ತೋಳದತಾವ ಕುರಿ ನ್ಯಾಯ ಕೇಳೋಕೆ ಬಂದಂಗಾತು. ಸೆರಗು ಸರಿಪಡಿಸಿಕೊಂಡು ದಗ್ಗನೆದ್ದು ಬಾಗಿಲತ್ತ ಓಡಿದಳು. ರಾತ್ರಿ ತಾತ-ಮೊಮ್ಮಗಳು ಪಿಕ್ಚರ್ ನೋಡಲು ಹೊರಟಾಗಲೂ ಚಿನ್ನಮ್ಮನಿಗೆ ಇರಿಸುಮುರಿಸಾಯಿತು.

‘ಯಾವ ಸಿನಿಮಾಕ್ಕೆ ಹೊಂಟಿರಿ… ಭಕ್ತಕುಂಬಾರ ಹಾಕಿದಾರೇನು? ರಾಜಕುಮಾರಂದು?’ ಕೇಳಿದಳು.

‘ಇಲ್ಲ ಕಣ್ ಮಮ್ಮಿ, ಕರ್ರನೋನು ಒಬ್ಬ ಬಂದವ್ನೆ ಭಾರಿ ಬಾಡಿ ಬೆಳಸವ್ನೆ…. ಸಖತ್ ಫೈಟಿಂಗ್ ಮಾಡ್ತಾನೆ…’ ಚಿನ್ನು ಸಂಭ್ರಮ…

‘ಅದ್ಯಾವ ಸಿಲಿಮಾನೇ ತಾಯಿ’ ವ್ಯಂಗ್ಯವಾಗಂದಳು.

‘ದುನಿಯಾ ಅಂತ…’ ತಾಯಿಯತ್ತ ತಿರುಗಿಯೂ ನೋಡದ ಚಿನ್ನು ತಾತನ ಸಂಗಡ ಸಾರೋಟಿನಲ್ಲಿ ಹೊರಟಳು. ಉಳಿದವರು ಕಾರು, ವ್ಯಾನ್ ಬಳಸಿದರೂ ಭರಮಪ್ಪಗೆ ಮಾತ್ರ ಆಗಾಗ ಕುದುರೆ ಸಾರೋಟಿನಲ್ಲಿ ಅಡ್ಡಾಡಿ ಮೋಜು ಪಡೆಯುವ ಖಯಾಲಿ.

ತಾತ – ಮೊಮ್ಮಗಳಿಗಿಬ್ಬರಿಗೂ ಸಿನಿಮಾ ಹಿಡಿಸಿತು. ನಾಯಕನ ಮುಗ್ಧತೆ ಒರಟುತನ ಪ್ರಾಮಾಣಿಕತೆ ಅಂತಃಕರಣ, ಅತಿಯಾದ ಆತ್ಮವಿಶ್ವಾಸ ಅಪಾರವಾದ ಬಲ ಹುರಿಗೊಂಡ ಮೈಕಟ್ಟು ಪೊಗರು ಒಗರು ಧೈರ್ಯ ದೀನತೆ ಬಡತನ ಎಲ್ಲ‌ಎಲ್ಲವೂ ಅವಳಿಗಿಷ್ಟವಾಯಿತು. ಪದೆಪದೆ ರಂಗ ಕಣ್ಣೆದುರು ಬಂದ. ರಂಗ ಹಿರೋಗಿಂತ ಅಂದವಾಗಿದ್ದಾನೆ ಅನ್ನೋದು ಬಿಟ್ಟರೇ ಅವನದೂ ಅದೇ ತಾಕತ್ತು ಪವರ್ರು ಅಂದುಕೊಂಡಳು ಚಿನ್ನು. ಒಂದು ಹೊಡೆದಾಟದ ದೃಶ್ಯ ನವಿರೇಳಿಸುವಂತಿತ್ತು ‘ಭಲಾ ಭೇಷ್… ವಾರೆವ್ಹಾ’ ಭರಮಪ್ಪ ತಲ್ಲೀನರಾಗಿಬಿಟ್ಟಿದ್ದರು. ‘ತಾತ’ ಅಂತ ಕೈಯಿಂದ ತಿವಿದು,

‘ನಮ್ಮ ರಂಗ ಇವನಿಗಿಂತ ಮಸ್ತು ಅದಾನೆ… ಮಸ್ತು ಫೈಟ್ ಮಾಡ್ತಾನಲ್ವೆ’ ತನಗೇ ತಿಳಿಯದಂತೆ ಅಂದುಬಿಟ್ಟವಳು ನಾಲಿಗೆ ಕಚ್ಚಿಕೊಂಡಳು ಚಿನ್ನು.

‘ನಮ್ಮ ರಂಗ! ಯಾರವ್ವ ಅವ್ನು?’ ದೃಶ್ಯದಿಂದೀಚೆ ಬಂದು ಕತ್ತಲಲ್ಲಿ ಚಿನ್ನು ಮೋರೆ ನೋಡಿದರು.

‘ಅದೇ ನಿಮ್ಮ ಗಲ್ಡಿ ಹುಡುಗ… ನೆನಪಾದ’ ತೇಲಿಸಿದಳು ಚಿನ್ನು, ರಂಗನ ನೆನಪಿಂದಾಗಿ ನಾಲಿಗೆ ಕಹಿಯಾಯಿತು.

‘ಅಂವಾ ಯಾಕೆ ಇವಳಿಗೆ ನೆಪ್ಪಾದ್ನು!?’ ಭರಮಪ್ಪನವರಿಗೆ ಮುಂದೆ ಸಿನಿಮಾ ರುಚಿಸಲಿಲ್ಲ. ಸಿನಿಮಾ ಹೇಗೋ ನೋಡಿ ಮುಗಿಸಿ ಮನೆಗೆ ಬಂದು ಹಾಸಿಗೆ ಮೈ ಚೆಲ್ಲಿದರೂ ಭರಮಪ್ಪನವರ ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಮೊಮ್ಮಗಳ ಮಾತುಗಳು ಕಿವಿಯನ್ನಿರಿದವು. ರಂಗ ತಮಗೆ ಎದುರಾಳಿಯಲ್ಲದಿರಬಹುದು. ಆದರೆ ಮೈತುಂಬಾ ಹರೇದ ಕೊಬ್ಬಿದೆ. ಏನೂ ಮಾಡಿ ಜಯಿಸಬಲ್ಲೆನೆಂಬ ಹಮ್ಮಿದೆ. ರಾಮೋಜಿಯನ್ನು ಕುಸ್ತಿನಾಗೆ ಮಣ್ಣು ಮುಕ್ಕಿಸಿ ಹಳ್ಳಿ ಘನತೆ ಕಾಪಾಡಿದಾನೆ. ರಾಮೋಜಿ ಹಂಗೆ ತಮ್ಮ ಮನೆ ಬಂಗಾರದ ಕಡೆ ಕಣ್ಣೆತ್ತಿಯೂ ನೋಡಿಲ್ಲ. ರಾಮೋಜಿ ಹಂಗೆ ಅವನೇನಾರ ಹಠ ಹಿಡಿದಿದ್ದರೆ ಆವತ್ತೇ ಈ ಹಳ್ಳಿನಾಗೆ ಅವನ ಹೆಣ ಬೀಳೋದು. ಪಬ್ಲಿಕ್ಕಾಗಿ ರಾಮೋಜಿ ಸವಾಲಿಗೆ ಒಪ್ಪಿದ್ದರೂ ಅವನೂ ಮದುಮಗನಾಗೇನು ಮಹರಾಷ್ಟ್ರ ಸೇರ್‍ತಾ ಇರಲಿಲ್ಲ. ಹೆಣವಾಗಿ ಪಾರ್ಸೆಲ್ ಆಗ್ತಿದ್ದ. ನಮ್ಮ ಶಕ್ತಿ ಸಾಮರ್ಥ್ಯ ರಾಮೋಜಿಯಂತಹ ಪರಸ್ಥಳದವಾ ಅರಿಯದಂವಾ. ರಂಗನಿಗೆ ಅರಿವಿದೆ ಭಯವೂ ಇದೆ. ಎಲ್ಲಾ ಸರಿಯಾಗೇ ಮುಗಿದಿದೆ. ಆದರೂ ಚಿನ್ನು ಅಂತಹ ಬಂಗಾರದ ಹುಡ್ಗಿಗೆ ಹಿತ್ತಾಳೆ ನೆನಪಾರ ಯಾಕಾತು? ಹಪಹಪಿಸಿತು ಮುದಿಜೀವ. ಅವನೂ ಇವಳ ಕಾಲೇಜಿನಾಗೇನಾರ ಓತ್ತಾ ಅವನಾ? ತಿಳ್ಕೊಂಬೇಕು. ಜಾವದ ಕೋಳಿ ಕೂಗಿದ್ದು ಕೇಳಿತು. ಕತ್ತಲೆಯಲ್ಲಿ ಬೆಳಕು ಸುರಿಯುತ್ತಿತ್ತು. ಮುಲ್ಲಾಸಾಬಿ ಕೂಗುವಾಗ ಭರಮಪ್ಪನವರಿಗೆ ಒಳ್ಳೆ ಜೋಂಪು.

ಕಾಲೇಜು ಓದು ಲ್ಯಾಬು ಲೈಬ್ರರಿ ತಾನಾಯಿತು ತನ್ನ ಪಾಡಾಯಿತೆಂದು ರಂಗನಿದ್ದರೂ ತಾನಾಗಿಯೇ ಮುಂದುವರೆದು ಮಾತನಾಡಿಸಿಕೊಂಡು ಬರುತ್ತಿದ್ದಳು ಚಿನ್ನು. ಅವನು ಲ್ಯಾಬ್ ಲೈಬ್ರರಿ ರೀಡಿಂಗ್ ರೂಮ್ ಸ್ಟೇಡಿಯಮ್ ಕ್ಯಾಂಟೀನ್ ಎಲ್ಲೇ ಇರಲಿ, ಎಷ್ಟೋ ಮಂದಿ ಗೆಳೆಯರೊಂದಿಗಿರಲಿ, ಚಿನ್ನು ಗೆಳತಿಯರೊಂದಿಗೆ ಹಾಜರ್. ಇದನ್ನೆಲ್ಲಾ ನೋಡುವ ಸಂಗ್ರಾಮನಿಗೆ ಸಹಜವಾದ ಅಸೂಯೆ, ಅವನೂ ಗೆಳೆಯರೊಂದಿಗೆ ಹಾಜರ್. ಸಾರಿ ಕೇಳಿದ. ತಾನು ಮೊದಲಿನ ಸಂಗ್ರಾಮನಲ್ಲ ತುಂಬಾ ಬದಲಾಗಿದ್ದೇನೆ. ‘ಐ ಲವ್ ಯೂ ಟು ಮಚ್’ ಎಂದು ನೇರವಾಗಿಯೇ ಎಲ್ಲರ ಎದುರೂ ಹೇಳಿದಾಗ ಉಡಾಫೆ ಮಾಡಿ ನಕ್ಕು ಬಿಟ್ಟಿದ್ದಳು ಚಿನ್ನು.

‘ನೀನು ಪ್ರೀತಿಸ್ತಿಯಾ ಅಂದ್ರೆ ನಾನೂ ಪ್ರೀತಿಸಬೇಕೆ? ನನಗೆ ಇಷ್ಟವಾಗಬೇಡ್ವೆ? ನಿಮ್ಮಪ್ಪಂಗೆ ಹೇಳಿ ಒಂದು ಮದುವೆ ಮಾಡ್ಕೋ ಎಲ್ಲಾ ಸರಿಹೋಗುತ್ತೆ. ಗಂಡು ಹೆಣ್ಣುಗಳಾಗಿ ಹುಟ್ಟಬಹುದು, ಮದುವೆ ಆಗಬಹುದು, ಅವರಿಗೆ ಮಕ್ಕಳೂ ಹುಟ್ಟಬಹುದು – ಇದು ಪ್ರಕೃತಿಯ ನಿಯಮ. ಮನುಷ್ಯ ಭೂಮಿ ಮೇಲೆ ಹುಟ್ತಾನೆ. ಆದರೆ ಪ್ರೇಮ ಹುಟ್ಟೋದು ಸುಕೋಮಲವಾದ ಹೃದಯದಲ್ಲಿ. ಅದು ಎರಡೂ ಹೃದಯಗಳಲ್ಲಿ ಹುಟ್ಟಿದಾಗ ಮಾತ್ರ ಮನಸ್ಸುಗಳು ಒಂದಾಗೋದು. ಇದು ಪ್ರೀತಿಯ ನಿಯಮ. ಒಂದೇ ಕೈಲಿ ನಮಸ್ಕರಿಸೋಕೆ ಅಸಾಧ್ಯ. ಎರಡು ಕೈ ಜೋಡಿಸಿದರೇ ನಮಸ್ಕಾರ. ಎರಡು ಹೃದಯಗಳು ಒಂದಾದರೇ ಪ್ರೀತಿಯ ಆವಿಷ್ಕಾರ’ ನಿಲ್ಲಿಸಿಕೊಂಡು ತಿಳಿಹೇಳಿದ್ದಳು ಚಿನ್ನು. ಅಂದು ಎಲ್ಲರೂ ಬೆರಗಾಗಿದ್ದರು. ಸಂಗ್ರಾಮನಿಗೇನೂ ಸಮಾಧಾನವಾಗಿರಲಿಲ್ಲ. ಅವಳ ಧೈರ್ಯ ಕಂಡು ಬೇರೆಲ್ಲರಿಗೂ ಆಶ್ಚರ್ಯವಾಗಿತ್ತಾದರೂ ರಂಗನಿಗೆ ಯಾವ ಅಚ್ಚರಿಯೂ ಇಲ್ಲ. ಅದು ಪಾಳೇಗಾರರ ರಕ್ತವಲ್ಲವೆ. ಒಂದಿಷ್ಟು ಕೊಲೆಸ್ಟ್ರಾಲ್ ಜಾಸ್ತಿ ಅಂದುಕೊಂಡಿದ್ದ. ಆದರೆ ಅವಳಂತಹ ಪುಟ್ಟ ಹುಡುಗಿ ಪ್ರೇಮವನ್ನು ವ್ಯಾಖ್ಯಾನಿಸಿದ ರೀತಿಗೆ ಮಾತ್ರ ಬೆರಗುಗೊಂಡಿದ್ದ ಕಣ್ಣಿಗೆ ಪ್ರಬುದ್ಧೆಯಂತೆ ಕಂಡಳಂದು.

ಸೈಕಲ್, ಸ್ಕೂಟಿ ಎರಡೂ ಹಳ್ಳಿಯತ್ತ ಸಾಗುವಾಗ ಸ್ಕೂಟಿ ಸ್ಲೋ ಆಗುತ್ತಿತ್ತು. ರಂಗ ಸೈಕಲ್ ವೇಗ ಹೆಚ್ಚಿಸಿದರೆ ಸ್ಕೂಟಿ ಸ್ಪೀಡ್ ಏರುತ್ತಿತ್ತು. ರಂಗ ಹೆಚ್ಚು ಮಾತನಾಡುವವನಲ್ಲ ಎಂಬುದಕ್ಕಿಂತ ಅವಳ ಬಳಿ ಹೆಚ್ಚಿನ ಮಾತಾಗಲಿ, ಸ್ನೇಹವಾಗಲಿ ಅವನಿಗೆ ಬೇಕಿರಲಿಲ್ಲ. ಚಿನ್ನು ಅವನೊಡನೆ ಮಾತನಾಡಬೇಕೆಂದರೆ ಜೊತೆಯಾಗಬೇಕೆಂದರೆ ಸ್ಕೂಟಿಯನ್ನು ಕೆಡಿಸದೆ ವಿಧಿಯಿರಲಿಲ್ಲ. ಮೊಬೈಲ್ ತನ್ನ ಬಳಿ ಇತ್ತಾದರೂ ಅದರಿಂದ ಇವಳಿಗೇನಂತಹ ಉಪಕಾರವಾಗಿರಲಿಲ್ಲ. ಅಪಕಾರವಾಗಿದ್ದೇ ಹೆಚ್ಚು.

‘ಹೆಂಗಿದೆ ಮಗಾ ಎಲ್ಲಿದ್ದಿ? ಅಂತ ಅಪ್ಪನೋ…’ ‘ಬಿರಿಯಾನಿ ಚೆಂದಾಗಿತ್ತೇನೆ? ಅಂತ ಅಮ್ಮನೋ…’ ‘ನಾನು ಡ್ರೆಸ್ ಮಾಡಿ ಕಳಿಸಿದ್ನಲ್ಲ ಏನಂದ್ರೂ ಕ್ಲಾಸ್‌ಮೇಟ್ಸು?’ ಅಂತ ಚಿಗಮ್ಮ… ‘ಎಲ್ಲಿ ಬರ್ತಿದಿ ಕೂಸು ಬ್ಯಾಗ ಬಂದುಬುಡು ಅಂತ ತಾತ’.

‘ಕಾಲೇಜಿನಾಗೆ ನಿನ್ನ ತಂಟೆಗೆ ಯಾವನಾರ ಬಂದ್ರೆ ತಕ್ಷಣ ನನ್ನ ನಂಬರ್‍ಗೆ ಫೋನು ಮಾಡು ಚಿನ್ನು, ರ್‍ಯಾಗಿಂಗ್ ಪಾಗಿಂಗ್ ಏನು ಇಲ್ಲಲ್ಲ’ ಅಂತ ಚಿಗಪ್ಪ ಮೈಲಾರಿಯ ಪಿರಿಪಿರಿ. ಕಾರಣವಿಲ್ಲದೆ ರಿಂಗ್ ಮಾಡುವ ಇವರಿಂದ ರೋಸಿ ಹೋದ ಚಿನ್ನು ಆದಷ್ಟು ಸೈಲೆಂಟ್ ಮೋಡ್‌ನಲ್ಲಿಡುತ್ತಿದ್ದಳು. ತನ್ನ ಬಳಿ ಮೊಬೈಲ್ ಇದ್ದರೆ ಬೇಕೆಂದಾಗ ರಂಗನಿಗೆ ರಿಂಗ್ ಮಾಡಬಹುದೆಂಬ ಖುಷಿಗೇ ಮೊಬೈಲ್ ಕೊಡಿಸುತ್ತೇವೆಂದಾಗ ಬೇಡವೆನ್ನಲಿಲ್ಲ. ಆದರೆ ಬಡಪಾಯಿ ರಂಗನ ಬಳಿ ಎಲ್ಲಿಯ ಮೊಬೈಲ್ ಎಂದು ಗೊತ್ತಾದಾಗ ಬಿಸಾಡಬೇಕೆನಿಸಿತ್ತು. ಇದೆಲ್ಲಾ ಕಾರಣವಾಗಿ ಅವಳ ಸ್ಕೂಟಿ ಮತ್ತೆ ಕುಲಗೆಟ್ಟು ದಾರಿಯಲ್ಲಿ ನಿಂತು ರಂಗನನ್ನು ಸ್ವಾಗತಿಸಿತು.

‘ಮತ್ತೆ ನಿನ್ನ ಸ್ಕೂಟಿ ಕೈಕೊಡ್ತಾ…. ಏನಾಗಿದೆ?’ ಸೈಕಲ್ ಇಳಿದು ನಕ್ಕ.

‘ಯಾರಿಗೊತ್ತಪ್ಪ ಬರ್ತಾ ಇದ್ದೆ ಗಡಗಡಗಡ ಅಂತ ಸದ್ದು ಮಾಡಿ ನಿಂತೇ ಬಿಡ್ತು’ ಮುಗ್ಧಳಾಗಿ ಉಲಿದಳು.

‘ಪಾಪ, ಹೊಸ ಸ್ಕೂಟಿನೇ ಕೊಡಿಸಿದಾರೆ. ಇನ್ನು ನಾಲ್ಕನೆ ಸಾರಿ ಸಹ ಸರ್ವಿಸ್ ಮಾಡಿಸಿಲ್ಲ. ಸಾವಿರ ಕಿಲೋಮೀಟರೂ ಓಡಿಲ್ಲ… ಅಲ್ವಾ? ಮತ್ತೆ ಯಾಕೆ ಹೀಗೆ ಟ್ರಬಲ್ ಕೊಡ್ತಾ ಇದೆ?’ ಅನ್ನುತ್ತಲೇ ರಿಪೇರಿಗಿಳಿದ.

‘ಅದು ರಿಪೇರಿ ಮಾಡೋಕೆ ಬರದಷ್ಟು ಕೆಟ್ಟಿದೆ… ಏಳಪ್ಪಾ ಸುಮ್ನೆ ಟೈಮ್ ಯಾಕೆ ವೇಸ್ಟು ಮಾಡೋದು. ಲೇಟಾದ್ರೆ ಮನೇಲಿ ಗಾಬರಿ ಆಗ್ತಾರೆ ನಡಿ, ಡಬ್ಬಲ್ ರೈಡ್ ಹೋಗೋಣ’ ಚಿನ್ನು ನಗುನಗುತ್ತಾ ಹೇಳುವಾಗ ರಂಗ ಬೆಚ್ಚಿಬಿದ್ದ. ಸ್ಕೂಟಿ ಪರೀಕ್ಷಿಸಿದ. ವೈರುಗಳೆಲ್ಲಾ ತುಂಡಾಗಿವೆ. ಪೆಟ್ರೋಲು ಇಲ್ಲ. ಹಿಂದಿನ ಟೈರಲ್ಲೂ ಗಾಳಿಯಿಲ್ಲ. ಈ ಹದಗೆಟ್ಟ ಸ್ಕೂಟಿ ರಿಪೇರಿಗೆ ವಾರ ಬೇಕಾದೀತು. ಇಲ್ಲ ಗುಜರಿಗೆ ಹಾಕೋದೇ ವಾಸಿ ಅಂದುಕೊಂಡ.

‘ಹುಂ… ಎಲ್ಲಾ ಕಿತ್ತುಹಾಕಿಬಿಟ್ಟಿದೀಯ. ಗ್ಯಾರೇಜಿನವನಿಗೆ ಕೊಟ್ಟರೂ ರಿಪೇರಿ ಮಾಡೋಕೆ ತಿಣಿಕಾಡ್ತಾನೆ. ಸ್ಪೇರ್ ಪಾರ್ಟ್ಸ್ ಚೇಂಜ್ ಮಾಡಬೇಕಾಗುತ್ತೆ. ಯಾಕೆ ಹಿಂಗ್ ಮಾಡ್ದೆ?’ ಅಸಹನೆಯಿಂದ ಕೇಳಿದ.

‘ಏನೋಪ್ಪಾ! ನಂಗೇನು ಗೊತ್ತಿಲ್ಲ… ಹೋಗ್ಲಿ ಬಿಡು… ಹೋಗೋಣ ನಡಿ. ನನಗೆ ಸೈಕಲ್ಲೇ ಇಷ್ಟವಾಗುತ್ತಪ್ಪಾ’.

‘ಮೊಬೈಲ್ ಇದೆಯಲ್ಲ ಮನೆಯವರಿಗೆ ರಿಂಗ್ ಮಾಡು, ಕಾರಲ್ಲಿ ಬಂದು ತಮ್ಮನ್ನ ಕರ್‍ಕೊಂಡು ಹೋಗ್ತಾರೆ’ ಸಿಡುಕಿದ. ಮುಖ ಸಣ್ಣದು ಮಾಡಿಕೊಂಡಳು.

‘ಅಷ್ಟೂ ತಿಳಿವಳಿಕೆಯಿಲ್ಲದ ಹಳ್ಳಿಗುಗ್ಗುವಾ ನಾನು? ದರಿದ್ರ ಮರೆತು ಮನೇಲೇ ಬಿಟ್ಟು ಬಂದುಬಿಟ್ಟೆ ಮೊಬೈಲ್ನಾ ಕಣೋ’ ಶಪಿಸಿಕೊಂಡಳು.

‘ಯಾಕೋ ಹಿಂಜರಿತಿಯಾ, ನಮ್ಮ ಮನೆಯವರೇನಾದ್ರೂ ನೋಡಿಬಿಟ್ರೆ ಅಂತ ಭಯನಾ?’ ಬೇಕೆಂದೇ ಕೆಣಕಿದಳು.

‘ನಿನಗೇ ನಿಮ್ಮ ಮನೆಯವರ ಭಯವಿಲ್ಲ ಅಂದೇಲೆ ನನಗೇನೇ? ಬಾ ಕೂತ್ಕ’ ಒಮ್ಮೆಲೆ ಸಿಡುಕಿದ.

‘ಇದಪ್ಪಾ ಹೀರೋ ಮಾತು’ ಎಂದು ಕಂಬಿ ಏರಿದಳು. ಮೌನವಾಗಿ ಸೈಕಲ್ ಓಡಿಸುತ್ತಿದ್ದ ಮೈಗೆ ಮೈ ತಾಕದಷ್ಟು ನಾಜೂಕಾಗಿ ಅವಳು ಸರಿದು ಕೂತಳು, ತಗ್ಗುದಿನ್ನಿಗಳು ಸ್ಪರ್ಶಿಸಲು ಅನುವು ಮಾಡಿಕೊಡುತ್ತಿದ್ದವು. ಅವನಿಗೆ ಕೋಪ ಬಂದಿದೆ ಎಂಬುದವಳಿಗೆ ಅರಿವಾಗಿತ್ತು. ಅದನ್ನು ಶಮನಗೊಳಿಸಬೇಕು. ಮನಸ್ಸು ಬಿಚ್ಚಿ ಮಾತನಾಡಬೇಕೆನಿಸಿತ್ತವಳಿಗೆ. ಕಾಳಿಕಾಂಬ ದೇವಾಲಯದ ಬಳಿ ಸೈಕಲ್ ಬಂದಾಗ ‘ಒಂದ್ನಿಮಿಷ ಇಲ್ಲಿ ನಿಲ್ಲಿಸು ರಂಗ’ ಗಂಭೀರವಾಗಿಯೇ ಅಂದಳು. ರಂಗ ಸೈಕಲ್ ನಿಲ್ಲಿಸಿದ. ನೆಗೆದು ಕೆಳಗಿಳಿದಳು. ಆ ನೆಗೆತದಲ್ಲಿ ನವ‌ಉತ್ಸಾಹ ಪುಟಿದಂತೆ ತೋರಿತು. ಅವಳು ದೇವಸ್ಥಾನದ ಬಳಿ ನಡೆದುಹೋಗಿ ಮೆಟ್ಟಿಲುಗಳ ಮೇಲೆ ಕುಳಿತು ‘ಬಾ’ ಎನ್ನುವಂತೆ ಸನ್ನೆ ಮಾಡಿದಳು. ದುಮುಗುಟ್ಟುತ್ತಲೇ ನಡೆದುಬಂದ.

‘ಕುಳಿತುಕೋ’ ಎಂಬಂತೆ ಸನ್ನೆ ಮಾಡಿದಳು. ಆಗೀಗ ಓಡಾಡುವ ಸುತ್ತಮುತ್ತಲ ಹಳ್ಳಿ ಜನ ಇವರತ್ತ ಕುತೂಹಲದಿಂದ ನೋಡುತ್ತಾ ಹೋಗುತ್ತಿದ್ದರು. ಇದೆಲ್ಲಾ ಅವನಲ್ಲಿ ಒಂದಿಷ್ಟು ಆತಂಕವನ್ನು ಸೃಷ್ಟಿಸಿತು.

‘ಯಾಕೆ ಹೀಗಿದ್ದೀಯಾ? ನನ್ನ ಜೊತೆ ಇದ್ದಾಗ ಖುಷಿಯಾಗಿ ಇರಬೇಕಲ್ವೆ?’ ಅವನಲ್ಲಿ ಉತ್ಸಾಹ ತುಂಬಲು ಯತ್ನಿಸಿದಳು.

‘ನಿನ್ನ ಜೊತೆ ಇರೋದೇ ಪ್ರಾಣಾಪಾಯವೆಂದು ಗೊತ್ತಿರೋವಾಗ ಖುಷಿ ಹೇಗಾದೀತು…?

‘ನಮ್ಮ ಮನೆಯವರೇನು ಯಮ ಅಂಡ್ಕೊಂಡೆಯಾ?’ ನಕ್ಕಳು ಚಿನ್ನು.

‘ಆಯಸ್ಸು ಮುಗಿದವರನ್ನ ಮಾತ್ರ ಯಮ ಮುಟ್ತಾನೆ…’ ವ್ಯಂಗ್ಯವಾಗಂದ ರಂಗ.

‘ನಮ್ಮ ಮನೆಯವರೂ ಅಂದ್ರೆ ಅಷ್ಟೊಂದು ಭಯನಾ?’ ಮತ್ತದೇ ಕೆಣಕು.

‘ಹಾಗಂದ್ರೇನು ಅಂತ್ಲೆ ನಂಗೊತ್ತಿಲ್ಲ. ದುಷ್ಟರನ್ನ ಕಂಡ್ರೆ ದೂರ ಇರು ಅಂದಿದಾರೆ ಹಿರಿಯರು’.

‘ನಾನೂ ದುಷ್ಟಳಂತೆ ಕಾಣುತ್ತೇನಾ ರಂಗ?’ ಗದ್ಗದಿತಳಾದಳು. ಅವನು ಪ್ರತಿಕ್ರಿಯಿಸಲಿಲ್ಲ. ಅವಳೇ ಮಾತನಾಡಿದಳು. ‘ನನಗೆ ಧನ ದೌಲತ್ತು ಸುಖಸುಪ್ಪತ್ತಿಗೆಗಿಂತ ನಿಜವಾದ ಪ್ರೀತಿ ಮುಖ್ಯ.’

‘ನಿನಗೇನು ಪ್ರೀತಿಗೆ ಕಡಿಮೆ? ಅಂಗೈಯಲ್ಲಿಟ್ಕೊಂಡು ಸಾಕ್ತಿಲ್ವೆ? ನಿಮ್ಮ ಮನೆಯವರು ನಿನಗಾಗಿ ಪ್ರಾಣ ಕೊಡಲೂ ಸಿದ್ದ. ಅಷ್ಟೊಂದು ಪ್ರೀತಿ ಸಾಲದೆ?’

‘ಅಷ್ಟಾಗಿದ್ದರೆ ಒಪ್ಪಬಹುದಿತ್ತು. ಬೇರೆಯವರ ಪ್ರಾಣ ತೆಗೆಯಲೂ ಸಿದ್ದವಾಗಿಬಿಡ್ತಾರೆ. ನನ್ನ ಬೇಕು ಬೇಡಗಳಿಗಿಂತ ಅವರ ಬೇಕು ಬೇಡಗಳೇ ಅವರಿಗೆ ಮುಖ್ಯ. ಅವರುಗಳದ್ದು ಪ್ರೀತಿಯೋ, ದರ್ಪವೋ ಅರ್ಥವಾಗ್ತಿಲ್ಲ. ತಮ್ಮಗಳ ಪ್ರೀತಿಯಿಂದ ಅವರು ನನ್ನಲ್ಲಿ ಭಯ ಹುಟ್ಟಿಸಿಬಿಟ್ಟಿದ್ದಾರೆ. ಸ್ವಾತಂತ್ರ್ಯವಿಲ್ಲದ ಪ್ರೀತಿ ಗುಲಾಮಗಿರಿಗಿಂತ ಕಡೆ. ನನಗೆ ಬೇಕಾಗಿರೋದು ನಿಜವಾದ ಪ್ರೀತಿ… ನನ್ನ ಪ್ರೀತಿಗಾಗಿ ಪ್ರಾಣ ಬಿಡುವವರು ಬೇಕು. ಅಂದ್ರೆ ಪ್ರಾಣ ಬಿಡುವಷ್ಟು ಪ್ರೀತಿಸೋರು ಬೇಕು. ಪ್ರಾಣ ತೆಗೆಯೋ ಕೊಲೆಗಡುಕರಲ್ಲ…’ ಪಟಪಟನೆ ಮಾತನಾಡಿ ಹನಿಗಣ್ಣಾದಳು.

‘ಪ್ಚ… ಇದೆಲ್ಲಾ ನನಗ್ಯಾಕೆ ಹೇಳ್ತಿ ಭವಾನಿ?’ ಮುಖ ಸಿಂಡರಿಸಿದ.

‘ಭವಾನಿ ಅನ್ಬೇಡ ಚಿನ್ನು ಅನ್ನು’ ಅವಳೂ ಮುಖ ಸಿಂಡರಿಸಿದಳು. ಅವನು ಮೌನವಾಗಿ ಕುಳಿತ. ಅವಳೇ ಪುನಃ ತನ್ನ ಮಾತನ್ನು ಮುಂದುವರೆಸಿದಳು.

‘ಇದೆಲ್ಲಾ ನಿನಗ್ಯಾಕೆ ಹೇಳ್ತಿದೀನಿ ಅಂದ್ರೆ ನೀನು ನನ್ನನ್ನು ಅರ್ಥಮಾಡ್ಕೋ ಅಂತ’.

‘ಅರ್ಥನಾ? ಇದರಲ್ಲಿನ ಅರ್ಥ ಭಾವಾರ್ಥ ತಾತ್ಪರ್ಯ ಕಟ್ಕೊಂಡು ನಾನ್ಯಾಕೆ ತಲೆಕೆಡಿಸಿಕೊಳ್ಳಿ. ನೀನು ನಮ್ಮ ಹಳ್ಳಿ ಹುಡುಗಿ ಕಾಲೇಜ್ಮೇಟ್ ಅಷ್ಟೆ… ಸ್ವಲ್ಪ ಹೊತ್ತು ಮಾತುನಿಲ್ಲಿಸಿ, ‘ಒಳ್ಳೆ ಫ್ರೆಂಡ್ ಅಂದ್ಕೋಬಹುದು’ ಅಂದ.

‘ಫ್ರೆಂಡ್ ಅಷ್ಟೆನಾ?’ ನಿರಾಶೆಯಿಂದ ಅವನ ಮೋರೆ ನೋಡಿದಳು. ಅವಳ ಕಣ್ಣುಗಳಲ್ಲಿ ಪ್ರೇಮಸಿಂಚನವಿತ್ತು. ಅವಳತ್ತ ನೋಡದೇ ರಸ್ತೆಯತ್ತ ನೋಟ ಬೀರಿದ.

‘ನೋಡೋ, ನಾನು ನಿನ್ನನ್ನು ಪ್ರೀತಿಸ್ತಾ ಇದೀನಿ ಕಣೋ. ಅದು ನಿನಗೂ ಗೊತ್ತಿದೆ. ಇಡೀ ಕಾಲೇಜಿಗೆ ಗೊತ್ತಿರೋ ವಿಷಯ ನಿನಗೆ ಮಾತ್ರ ಗೊತ್ತಿಲ್ಲದಂತೆ ನಟಿಸಿ ನೀನು ಸಾಧಿಸೋದಾದ್ರೂ ಏನು?’ ಒಂದಿಷ್ಟೂ ನಾಚದೆ ಅಂಜದೆ ಅವನ ದೃಷ್ಟಿಗೆ ದೃಷ್ಟಿ ಬೆರೆಸಿದಳು.

‘ಒಳ್ಳೆ ಗ್ರಹಚಾರವೆ. ನೀನು ಪ್ರೀತಿಸಿಬಿಟ್ಟೆ ಅಂತ ನಾನೂ ಪ್ರೀತಿಸೋಕೆ ಸಾಧ್ಯವೆ. ಫಾರ್‌ಎಕ್ಸಾಂಪಲ್, ಸಂಗ್ರಾಮ ನಿನಗೋಸ್ಕರ ಸಾಯ್ತಾನೆ. ನೀನು ಯಾಕೆ ಅವನ್ನ ಪ್ರೀತಿಸಬಾರ್‍ದು?’ ನಗುತ್ತಾ ಮರುಪ್ರಶ್ನಿಸಿದ.

‘ಅದು ನನ್ನ ಇಷ್ಟಕ್ಕೆ ಸಂಬಂಧಿಸಿದ್ದು. ಯಾರನ್ನ ಪ್ರೀತಿಸ್ಬೇಕು, ಯಾರನ್ನ ಪ್ರೀತಿಸಬಾರು ಅನ್ನೋವಷ್ಟು ತಿಳುವಳಿಕೆ ನನಗಿದೆ’.

‘ಆ ತಿಳುವಳಿಕೆ ನನಗೂ ಇದೆ. ನನಗೂ ನನ್ನದೇ ಆದ ಇಷ್ಟಗಳಿರೋಲ್ವ?’

‘ಹಾಗಂದ್ರೆ ನಾನು ನನ್ನ ಪ್ರೀತಿ, ನಿನಗೆ ಇಷ್ಟವಿಲ್ಲ ಅನ್ನು?’

‘ಅಯ್ಯೋ ಪೆದ್ದಿ. ನನಗೆ ಅದಕ್ಕೆಲ್ಲಾ ಪುರುಸೊತ್ತಿಲ್ಲ. ಮೊದಲೇ ದಡ್ಡ ನಾನು. ನಾನು ಕಾಲೇಜಿಗೆ ಬರ್ತಿರೋದು ಓದೋಕೆ, ಲವ್ ಮಾಡೋಕಲ್ಲ. ಜೊತೆಗೆ ನನಗೆ ಜವಾಬ್ದಾರಿಗಳಿವೆ. ನನಗೆ ಒಂದು ಉದ್ಯೋಗವಿಲ್ಲ. ಮನೇಲಿ ಎಲ್ಲರೂ ಹೇಳಿದ ಚಾಕರಿ ಮಾಡ್ಕೊಂಡು ಬದುಕ್ತಾ ಇದೀನಿ. ನಾನಷ್ಟೇ ಅಲ್ಲ ನನ್ನ ತಾಯಿ, ತಂಗಿ ನಮ್ಮ ಮನೇಲಿ ನಾವೇ ಚಾಕರಿಗಿದ್ದೇವೆ. ಡಿಗ್ರಿ ಮುಗಿಸಿಯೇ ಕೆಲಸಕ್ಕೆ ಸೇರಬೇಕೂ ಅಂತ ಹಂಬಲವಿಲ್ಲ. ತಾಯಿ ಒತ್ತಾಯಕ್ಕೆ ಕಾಲೇಜಿಗೆ ಸೇರಿದ್ದೇನೆ. ಪುಸ್ತಕ, ಫೀಜಿಗೂ ಒದ್ದಾಟ. ಒಂದು ಕೆಲಸ ಈಗ್ಲೂ ಬೈಚಾನ್ಸ್ ಸಿಕ್ಕಿಬಿಟ್ರೆ ಓದಿಗೆ ಗುಡ್‌ಬಾಯ್ ಹೇಳಿ ಕೆಲಸಕ್ಕೆ ಸೇರ್‍ಕೋತೀನಿ. ನನ್ನ ತಾಯಿ ತಂಗಿನಾ ಆ ನರಕದಿಂದ ಪಾರುಮಾಡ್ತೀನಿ. ಅದಷ್ಟೇ ಗುರಿ ನನ್ನದೀಗ… ತಂಗಿಯ ಮದುವೆ ಮಾಡೋ ಜವಾಬ್ದಾರಿ ಬೇರೆ… ತಿಳೀತಾ? ನಾನೇ ಊಟ ಬಟ್ಟೆಗೆ ಲಾಟ್ರಿ ನನ್ನನ್ನೇ ನಾನು ಸಾಕ್ಕೊಳ್ಳೋ ಯೋಗ್ಯತೆಯಿಲ್ಲ. ನನ್ನ ಪ್ರೀತಿಸ್ತಾಳಂತೆ ಇವಳು, ಅದಕ್ಕೋಸ್ಕರ ನಾನೂ ಪ್ರೀತಿಸಿಬಿಡಬೇಕಂತೆ…’ ತನ್ನ ಮನೆಯ ಪರಿಸ್ಥಿತಿಯನ್ನು ಸಂಕ್ಷಿಪ್ತವಾಗಿ ವಿವರಿಸುವನು. ‘ಹೌದೇನೋ’ ಎಂದವಳು ದುಃಖಿತಳಾದಳು. ‘ಮಹಾರಾಣಿ ಎಲ್ಲಿ ಚಪರಾಸಿ ಎಲ್ಲಿ?’ ಅಂದು ನಗುವನು.

‘ಪ್ರೀತಿ ನಿನ್ನ ಕಂತೆ ಪುರಾಣ ಎಲ್ಲಾ ಕೇಳೋಲ್ಲ ಕಣೋ. ಪ್ರೀತಿ ಕೇಳೋದು ಪ್ರೀತಿ ಮಾತ್ರ. ಆಯ್ತಪ್ಪ, ನಿನ್ನ ಜವಾಬ್ದಾರಿಗಳೆಲ್ಲಾ ಮುಗೀಲಿ, ನಿನ್ನ ತಂಗಿ ಮದುವೇನೂ ಆಗ್ಲಿ. ಆಮೇಲಾದ್ರೂ ನೀನು ನನ್ನ ಮದುವೆ ಆಗಬಹುದಲ್ಲ’.

‘ಅಷ್ಟು ಹೊತ್ತಿಗೆ ನೀನು ಮುದುಕಿ ಆಗಿರ್ತಿ ಹೋಗೆ… ನಾವು ಒಳ್ಳೆ ಫ್ರೆಂಡ್ಸ್ ಆಗಿರೋಣ. ನನ್ನಂಥ ಒಡ್ಡನ್ನ ದಡ್ಡನ್ನ ಕಟ್ಕೊಂಡು ಏನ್ ಸುಖ ಪಡ್ತಿ? ನಿನಗೆ ನನಗಿಂತ ಒಳ್ಳೆ ಗಂಡು ಸಿಗ್ತಾನೆ. ಇದೆಲ್ಲಾ ಹುಚ್ಚುಬಿಟ್ಟುಬಿಡಮ್ಮ. ನಡಿ ಹೋಗೋಣ’ ಮೇಲೆದ್ದ ರಂಗ. ‘ನಿಜವಾಗ್ಲೂ ನೀನು ನನ್ನನ್ನು ಪ್ರೀತಿಸ್ತಾ ಇಲ್ವೇನೋ… ಅದನ್ನಾದ್ರೂ ಹೇಳೋ?’ ಗದ್ಗದಿತಳಾದಳು.

‘ಸೂರ್ಯೊದಯ ಆಗೋ ಹಾಗೆ ಮೊಗ್ಗು ಅರಳೋ ಹಾಗೆ, ಕತ್ತಲು ಹರಿದು ಬೆಳಕು ಹೋಗೋ ಹಾಗೆ, ಪ್ರೇಮ ಕೂಡ ಅರಿವಿಗೆ ಬಾರದೆ ಹೃದಯವನ್ನಾವರಿಸುವ ಪ್ರಕ್ರಿಯೆ… ಈವತ್ತಿನವರೆಗೂ ನನ್ನಲ್ಲಿ ಆ ಭಾವನೆ ಉಂಟಾಗಿಲ್ಲ’.

‘ಮುಂದೆ?’ ಕೇಳಿದಳು. ಅವಳನ್ನೇ ನೋಡಿದ. ನವಿಲುಗರಿ ಯಾವ ಕಡೆಯಿಂದ ನೋಡಿದರೂ ಚೆಂದ.

‘ಗೊತ್ತಿಲ್ಲ’ ಅಂದ ರಂಗ ಅವಳತ್ತ ನೋಡದೆ.

ಹೀಗೆಂದಾಗ ಅವಳಿಗೆಷ್ಟೋ ಸಮಾಧಾನ. ’ಅಲ್ಲಿವರೆಗೂ ನಾವು ಒಳ್ಳೆ ಫ್ರೆಂಡ್ಸ್… ಓಕೆ’

‘ಓಕೆ’ ಎಂದು ಅರೆಮನಸ್ಸಿನಿಂದಲೇ ಕೈ ಕುಲುಕಿದಳು.

ರಂಗ ಅವಳನ್ನು ದೊಡ್ಡ ಆಲದ ಮರದ ಬಳಿ ತಂದುಬಿಟ್ಟ. ಅಲ್ಲಿ ಯಾರೂ ಇದ್ದಂತೆ ತೋರಲಿಲ್ಲ. ಇದೆಲ್ಲಾ ರಂಗನಿಗೆ ಇಷ್ಟವಾಗುತ್ತಿರಲಿಲ್ಲವಾದರೂ ತಾನೇಕೆ ಅವಳು ಹೇಳಿದ ಹಾಗೆ ಕೇಳುತ್ತೇನೆ! ತಾವು ಇಬ್ಬರೂ ಸೈಕಲ್ ಮೇಲೆ ಬರುವುದನ್ನು ಅವಳ ಮನೆಯವರಾರಾದರೂ ಒಮ್ಮೆ ಕಂಡರೂ ತನ್ನ ಜೀವಕ್ಕೆ ಕುತ್ತೇ ಎಂದರಿತೂ ತಾನಾದರೂ ಏಕೆ ಅವಳತ್ತ ವಾಲುತ್ತಿದ್ದೇನೆ! ಪ್ರೇಮ ಅಂದರೆ ಇದೇನಾ? ತನ್ನಲ್ಲಿ ತಾನೇ ಪ್ರಶ್ನೆ ಹಾಕಿಕೊಳ್ಳುತ್ತಾನಾದರೂ ಪ್ರೇಮ ಎಂಬುದನ್ನವನು ಸರ್ವಥಾ ಒಪ್ಪಿಕೊಳ್ಳಲಾರ. ಮೈ ಮುಟ್ಟಿದೋರ ಕೈ ಕತ್ತರಿಸೋ ಫ್ಯಾಮಿಲಿಯ ಹುಡುಗಿಯ ಜೊತೆ ಬೈಕಲ್ಲಿ ಡಬ್ಬಲ್ ರೈಡ್ ಮಾಡೋದು ‘ಥ್ರಿಲ್’ ಅವನಿಗೆ. ಅವರಿಗೆ ವಿಷಯ ತಿಳಿದರೆ ಏನಾಗಬಹುದು? ಏನು ಬೇಕಾದರೂ ಆಗಲಿ, ತಾವೇನು ತಪ್ಪು ಮಾಡುತ್ತಿಲ್ಲವೆ? ಅಲ್ಲಿಗೂ ಪೊಗರು ತೋರಿದರೆ ಫೇಸ್ ಮಾಡೋದೂ ‘ಥ್ರಿಲ್ಲೇ’. ವಯಸ್ಸೇ ಅಂತದ್ದು ಅಸಾಧ್ಯವನ್ನು ಸಾಧಿಸೋ ಛಲ ಕೈಗೆಟುಕದುದನ್ನು ಹಿಡಿಯೋ ಹಂಬಲ. ಗೌರಿಶಂಕರ ಶಿಖರ ಏರೋದು, ಅಮೇಝಾನ್ ನದಿಯಲ್ಲಿ ಮೈಲಿಗಟ್ಟಲೆ ಈಜೋದು, ಹಾವುಗಳ ಜೊತೆ ಬಾಳೋದು, ಹತ್ತಾರು ವಾಹನಗಳನ್ನು ಒಟ್ಟಿಗೆ ಎಳೆಯೋದು, ಕಾರನ್ನು ಎತ್ತೋದು, ಮೃತ್ಯುಪಂಜರದಲ್ಲಿ ಬೈಕ್ ಓಡಿಸೋದು, ಜಲಪಾತಕ್ಕೆ ಹಾರೋದು ಯಾಕೆ, ಗಗನಕ್ಕೇ ಹಾರೋದು ಇವೆಲ್ಲಾ ಹರೆಯದ ಹುಡುಗರ ಸಾಹಸವೆ. ಗಿನ್ನಿಸ್ ದಾಖಲೆಯ ಹುಚ್ಚೂ ಹಲವರಿಗೆ ಪ್ರೇಮ ಕೂಡ ಸಾಹಸಿಗಳ ಸೊತ್ತು, ಅರಿಯದ ಹುಡುಗಿಯ ಹೃದಯ ಸಿಂಹಾಸನದಲ್ಲಿ ಜಾಗ ಗಿಟ್ಟಿಸೋದು ಬೇರೆಯವರ ನಿವೇಶನದಲ್ಲಿ ಮನೆ ಕಟ್ಟೋಕೆ ಹೊರಟಷ್ಟೇ ಅಪಾಯ. ಅಪಾಯಕ್ಕೆ ಒಡ್ಡಿಕೊಳ್ಳೋದೇ ಸಾಹಸ. ಅಂತಹ ಸಾಹಸ ಮಾಡಿಸೋ ಶಕ್ತಿ ಪ್ರೇಮಕ್ಕೆ ಮಾತ್ರ ಇದೆ. ಇಲ್ಲವಾಗಿದ್ದರೆ ಶತ್ರು ಪಾಳೆಯದಲ್ಲಿನ ಶಶಿರೇಖೆಯನ್ನು ಅಭಿಮನ್ಯು, ಕೌರವ, ಪಕ್ಷಪಾತಿ ಬಲರಾಮನ ಸೋದರಿ ಸುಭದ್ರೆಯನ್ನು ಅರ್ಜುನ, ಪರಮಶತ್ರು ರುಕ್ಮಾಂಗದನ ಮಗಳು ರುಕ್ಕಿಣಿಯನ್ನು ಶ್ರೀಕೃಷ್ಣ ಯಾಕೆ ಪ್ರೀತಿಸಬೇಕಿತ್ತು? ಲೈಲಾ ಮಜ್ನು, ಸಲೀಂ ಅನಾರ್ಕಲಿ, ರೋಮಿಯೋ ಜೂಲಿಯಟ್, ಸಂಯುಕ್ತೆ ಪೃಥ್ವಿರಾಜ್ ಎಲ್ಲರದ್ದೂ ಇದೇ ಕಥೆ ಇದೇ ವ್ಯಥೆ. ಪೌರಾಣಿಕ ಐತಿಹಾಸಿಕ ಜಾನಪದದಿಂದ ಇಂದಿನ ಸಾಮಾಜಿಕ ಜೀವನಕ್ಕೆ ಅಡಿಯಿಟ್ಟರೂ ಪ್ರೇಮ ಪೌರುಷದ ಮುಂದೆ ಎಲ್ಲವೂ ಅಡಿ, ಶತ್ರು ಪಾಳೆಯದಲ್ಲೇ ಪ್ರೇಮ ಹುಟ್ಟೋದು. ಮುಳ್ಳುಗಳ ನಡುವೆಯೇ ಹುಟ್ಟುವ ಗುಲಾಬಿಯಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೇಮ
Next post ಮಹಮದನ ಪ್ರೇಮಪತ್ರ

ಸಣ್ಣ ಕತೆ

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

 • ರಾಧೆಯ ಸ್ವಗತ

  ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

 • ಕಲ್ಪನಾ

  ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

 • ಮಾದಿತನ

  ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

 • ಅವರು ನಮ್ಮವರಲ್ಲ

  ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…