ಸಹೃದಯಿ ಕೆ. ವೆಂಕಣಾಚಾರ್

ಸಾಹಿತಿ ಕೆ. ವೆಂಕಣಾಚಾರ್’ಗೆ ಅರವತ್ತೈದು ತುಂಬಿತು. ಅದೇನು ದೊಡ್ಡ ವಿಷಯವಲ್ಲ. ಅದಕ್ಕೆಂದೇ ಬರೆದ ಲೇಖನವೂ ಇದಲ್ಲವಾದರೂ ಅವರ ವಿಶಿಷ್ಟ ವ್ಯಕ್ತಿತ್ವದ ಪರಿಚಯವನ್ನು ತಿಳಿಯದವರಿಗೆ ತಿಳಿಸುವ ಸಣ್ಣ ಪ್ರಯತ್ನವಷ್ಟೆ. ಯಾಕೆಂದರೆ ಅವರ ಜೀವನ ಶೈಲಿಯೇ ಅಂತಾದ್ದು ಐನೂರಕ್ಕೂ ಹೆಚ್ಚು ಲೇಖನಗಳನ್ನು ಐತಿಹಾಸಿಕ ಚಿತ್ರದುರ್ಗ, ಚಿತ್ರದುರ್ಗ ಮಾರ್ಗದರ್ಶಿ, ಗಂಡುಗಲಿ ಮದಕರಿನಾಯಕ ಕಾದಂಬರಿಯ ಸಂಕ್ಷಿಪ್ತ ಸಂಗ್ರಹ, ರಾಜ್ಯಶಾಸ್ತ್ರದ ಬಗ್ಗೆ ಬರೆದ ಪಠ್ಯ ಪುಸ್ತಕಗಳು ಮತ್ತು ಐತಿಹಾಸಿಕ ಸ್ಮಾರಕಗಳ ಬಗ್ಗೆ ಹೆಚ್ಚು ವಿಷಯಗಳನ್ನು ಹೆಕ್ಕಿ ತೆಗೆದು ಚಿತ್ರಲೇಖನಗಳ ಮೂಲಕ ಸಾದರಪಡಿಸುವ ವೆಂಕಣಾಚಾರ್ ತಮ್ಮನ್ನು ತಾವು ಸಾಹಿತಿಯೆಂದು ಎಂದೂ ಒಪ್ಪಿಕೊಂಡಿದ್ದಿಲ್ಲ. ತಾನು ಕೇವಲ ಸಾಹಿತ್ಯ ಪರಿಚಾರಕನೆಂದೇ ಹೇಳಿಕೊಳ್ಳುತ್ತಾ ಸದಾ ಸಾಹಿತ್ಯಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ‘ಬಿಜಿ ಮನುಷ್ಯ’. ರಾಜಕುಮಾರ್ ಕಾಲ್ ಶೀಟಾದ್ರೂ ಸಿಕ್ಕಿತು ವೆಂಕಣಾಚಾರ್ ಕಾಲ್ಶೀಟ್ ಸಿಗೋದು ಕಷ್ಟ ಎಂಬ ಮಾತು ಸ್ನೇಹವಲಯದಲ್ಲಿ ರೂಢಿಯಲ್ಲಿತ್ತು.

ಹೆಗಲಿಗೊಂದು ಚೀಲ ನೇತು ಹಾಕಿಕೊಂಡು ಬರಬರನೆ ಹೊರಟರೆಂದರೆ ಯಾವುದೋ ಪುಸ್ತಕ ಬಿಡುಗಡೆಯೋ ಸುಗಮ ಸಂಗೀತದ ಕಾರ್ಯಕ್ರಮವೋ ವಾರದಲ್ಲಿ ನಡೆಯಲಿದೆ ಎಂದೇ ಅರ್ಥ. ಚಿತ್ರದುರ್ಗದಲ್ಲಿ ಯಾರದ್ದೇ ಸಭೆ ಸಮಾರಂಭ ನಡೆಯಲಿ ನಿರೂಪಣಾ ಕಾರ್ಯಭಾರ ಆಚಾರದ್ದೇ. ಅವರ ಮೃದು ಮಧುರ ದನಿ ಮುಖ್ಯ ಅತಿಥಿಗಳನ್ನು ಪ್ರಶಂಶಿಸಿ ಮುದುಗೊಳಿಸುವ ಪರಿ ಸಭೆ ನೀರಸವಾಗದಂತೆ ಸಮಯೋಚಿತವಾಗಿ ಹೇಳುವ ನಾಣ್ಣುಡಿಗಳ ಸವಿ ಹಿರಿಯ ಸಾಹಿತಿ ಕವಿಗಳ ಉಕ್ತಿಗಳನ್ನು ಬಳಸಿಕೊಳ್ಳುವ ಚಾತುರ್ಯ ಚಪಾಳೆ ತಟ್ಟಿ ಪ್ರೋತ್ಸಾಹಿಸಿರೆಂದು ಸಭಿಕರಿಗೆ ಸೂಚ್ಯವಾಗಿ ನಿವೇದಿಸುವ ಕಲೆಗಾರಿಕೆ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸಿಕೊಡುವ ಸಮಯ ಪ್ರಜ್ಞೆ, ಇಂತಹ ವಿಶೇಷ ಗುಣಗಳಿಂದಾಗಿ ಸಾಹಿತಿ ಸ್ವಾಮೀಜಿ ಕಲಾವಿದರ ಅಧಿಕಾರಿವರ್ಗದವರ ಎಂತದ್ದೇ ಸಭೆಗಳಿಗೆ ವೆಂಕಣಾಚಾರ್ ನಿರೂಪಣೆ ಅನಿವಾರ್ಯವೆಂಬಂತಾಗಿಬಿಟ್ಟಿದೆ.

ವೃತ್ತಿಯಲ್ಲಿ ರಾಜ್ಯಶಾಸ್ತ್ರದ ಪ್ರಾಧಾಪಕರಾಗಿದ್ದ ವೆಂಕಣ್ಣ ಪ್ರವೃತ್ತಿಯಿಂದ ಸಾಹಿತಿಗಳು. ಅದಕ್ಕೆಲ್ಲಿಯ ನಿವೃತಿ ? ಕಥೆ ಕಾದಂಬರಿಗಳನ್ನು ಬರೆವ ಗೋಜಿಗೆ ಹೋಗದೆ ಪಕ್ವ ಮನಸ್ಸುಗಳಿಗಾಗಿ ಬೇಕಾದ ಮಾಹಿತಿಗಳನ್ನು ತಾವು ಓದಿದ ಆಂಗ್ಲ ಸಾಹಿತ್ಯದಿಂದಾಗಲಿ ಪುರಾಣ ಪುಣ್ಯಕೃತಿ ಆಧಾತ್ಮಿಕ ಗ್ರಂಥ ವೇದೋಪನಿಷತ್ತುಗಳಿಂದಾಗಲಿ ಸಾರಸಾರವನ್ನು ಹೀರಿ ಸಂಗ್ರಹಿಸಿ ಸಾದರಪಡಿಸುವಲ್ಲಿ ಜೇನಿನಂತೆ ಶ್ರಮಿಸುವುದರಿಂದಾಗಿಯೇ ಪ್ರಾಯಃ ಅವರ ಬರಹಗಳಲ್ಲಿ ಸವಿ ಹೆಚ್ಚು, ಅಂತೆಯೇ ಅವರ ಸಾಂಗತ್ಯದಲ್ಲಿ ಹಿತ ಹೆಚ್ಚು. ಯಾರಿಗೂ ನೋವಾಗದಂತೆ ನಡೆದುಕೊಳ್ಳುವ ಸರ್ವರಳೊಂದಾಗುವ ಯಾರ ವಿರೋಧವನ್ನು ಕಟ್ಟಿಕೊಳ್ಳದ ಎಂಥವರ ಸ್ವಭಾವಕ್ಕೂ ಹೊಂದಿಕೊಂಡು ಬಿಡುವ ಅವರ ಸ್ವಭಾವ ಆಯಾ ಪಾತ್ರೆಗಳಿಗೆ ಹಾಕಿದಾಗ ಅದೇ ರೂಪ ಪಡೆವ ನೀರಿನಂತೆ ಶುದ್ಧ ಶಾಂತ. ಹೀಗಾಗಿ ಅವರ ಒರಿಜಿನಲ್ ಸ್ವಭಾವ ಎಂತದ್ದೆಂಬುದೇ ಹಲವರಿಗೆ ಜಿಜ್ಞಾಸೆಯ ವಸ್ತು. ಯೂನಿವರ್ಸಿಟಿ ವಿದ್ವಾಂಸರಿಂದ ಹೋಟೆಲ್ ಮಾಣಿವರೆಗೆ ಏಕಪ್ರಕಾರ ಜನಪ್ರಿಯತೆಯನ್ನು ಗಳಿಸಿರುವ ಆಚಾರ್’ಗೆ ದೊಡ್ಡೋರು ಸಣ್ಣೋರು ಎಂಬ ಭೇದ ಭಾವವಿಲ್ಲ. ಇಂವಾ ಯಾರವಾ ಎನ್ನದೆ ಇಂವಾ ನಮ್ಮವ ಇಂವಾ ನಮ್ಮವ ಎಂಬ ಗುಣದಿಂದಾಗಿಯೇ ತೀರ್ಥಹಳ್ಳಿಯ ವೆಂಕಣ್ಣ ಈವತ್ತು ದುರ್ಗದ ವೆಂಕಣನೇ ಆಗಿಹೋಗಿದ್ದಾರೆ. ‘ಧಣಿ ದೊರೆ ಅಪಾಜಿ’ ಎಂದೇ ಅವರು ಕರೆದು ಪ್ರೀತಿಯಿಂದ ಮಾತನಾಡಿಸುವಾಗ ಉಬ್ಬಿ ಹೋಗುವ ಒಳಗೇ ಖುಷಿಪಟ್ಟುಕೊಳ್ಳುವ ವಿದ್ವಾಂಸರ ಖುಷಿ ಶಾಶ್ವತವೇನಲ್ಲ. ಯಾಕೆಂದರೆ ಆಗಲೆ ಎದುರಿಗೆ ಬಂದ ಆಫೀಸಿನ ಜವಾನನ್ನೂ ಅದೇ ಧಾಟಿಯಲ್ಲಿ ಗೌರವಿಸುವಾಗ ತಾವು ಬಹಳ ದೊಡ್ಡವರೆಂದು ಭಾವಿಸಿಕೊಳ್ಳುವವರಿಗೆ ಮಾತ್ರ ಶಾಕ್ ಕಟ್ಟಿಟ್ಟ ಬುತ್ತಿ.

ದುರ್ಗಕ್ಕೆ ಹೊಸದಾಗಿ ಬರುವ ಯಾರೇ ಜಿಲ್ಲಾಧಿಕಾರಿ, ಪೋಲಿಸ್ ವರಿಷ್ಠರು, ಕೇಂದ್ರ ಸಚಿವ ಜಗಮೋಹನ್, ವಿದೇಶಿ ಗಣ್ಯ ಇಂಗ್ಲೆಂಡಿನ ರಾಯಭಾರಿ ರಾಬ್ ಯಂಗ್ ಮತ್ತು ಕೆಥಾರಿನ್ ಯಂಗ್ ತರದವರು ಸಾಹಿತ್ಯ ದಿಗ್ಗಜರೆನಿಸಿದ ಎ.ಎನ್.ಮೂರ್ತಿರಾಯರು, ಭೈರಪ್ಪ, ಅಡಿಗ, ಗುಲ್ವಾಡಿ ಇಂಥವರಿಗೆ ಏಳು ಸುತ್ತಿನ ಕೋಟೆಯನ್ನು ತೋರಿಸಿ ಪರಿಚಯಿಸುವಲ್ಲಿ ವೆಂಕಣಾಚಾರ್ಯರನ್ನೇ ಸರ್ಕಾರಿ ಅಧಿಕಾರಿಗಳು ಕರೆಯಿಸಿಕೊಳ್ಳುತಾರೆಂಬುದು ಅಲಿಖಿತ ಒಪ್ಪಂದಂತಾಗಿಬಿಟ್ಟಿದೆ. ಚಿತ್ರದುರ್ಗದ ಇತಿಹಾಸ ಪಾಳೆಗಾರರ ಆಳ್ವಿಕೆಯು ಅಂಕಿ ಅಂಶಗಳು ಆಡಳಿತ ಕ್ರಮ ಕಾರ್ಯ ಪರಾಕ್ರಮ ಇವುಗಳ ಬಗ್ಗೆ ದುರ್ಗದವರಿಗಿಂತಲೂ ತುಸು ಹೆಚ್ಚೆ ತಿಳಿದುಕೊಂಡಿರುವ ದುರ್ಗಾಭಿಮಾನಿ ವೆಂಕಣ್ಣ, ಭಾವಾವೇಶದಿಂದ ಬಣ್ಣಿಸುವಲ್ಲಿ ಇತಿಹಾಸ ತಜ್ಞರನ್ನು ಯಾವ ಕಾದಂಬರಿಕಾರನನ್ನು ಮೀರಿಸಬಲ್ಲ ಚಾಣಾಕ್ಷರು. ಇಷ್ಟೇ ಅಲ್ಲ ಪ್ರತಿವರ್ಷದ ಸರ್ಕಾರಿ ಹಬ್ಬಗಳಾದ ಜನವರಿ ೨೬ ಮತ್ತು ಆಗಸ್ಟ್ ೧೫, ಕನ್ನಡ ರಾಜ್ಯೋತ್ಸವ ಸಮಾರಂಭದ ಇಡೀ ವೀಕ್ಷಕ ವಿವರಣೆ ಹಾಗೂ ಭೇಟಿ, ಸಿಡಿಯಂತಹ ಪ್ರಾಚೀನ ಜಾತ್ರೆಗಳನ್ನು ಅವುಗಳ ಐತಿಹ್ಯ ವಿವರಗಳನ್ನು ಗಂಟೆಗಟ್ಟಲೆ ಗಂಟಲಿಗೆ ಬಿಡವು ಕೊಡದೆ ಕಲರ್ ಫುಲ್ ಆಗಿ ನಿರೂಪಿಸುವ ಅವರನ್ನು ಮೈಕಾಸುರನೆಂದು ಆಡಿಕೊಳ್ಳುವವರು ಇಲ್ಲದಿಲ್ಲವಾದರೂ ಅವರ ಜಾಣ್ಮೆ ತಾಳ್ಮೆ ಸಾಮರ್ಥ್ಯವನ್ನು ಈವರೆಗೆ ಊರಿನವರಾರೂ ಮೈಗೂಡಿಸಿಕೊಳ್ಳದಿರುವುದು ವಿಷಾದನೀಯ. ಆಚಾರ್ ಸ್ನೇಹ ವಿಶ್ವಾಸಗಳಲ್ಲೆಂದೂ ಜಾತಿ ಬೆರಸಿದವರಲ್ಲ. ಮನೆಗೆ ಬಂದವರಿಗೆಲಾ ಒಂದೇ ತೆರನಾದ ಉಪಚಾರ. ಜಾತಿ ಅವರ ಮನೆಯ ಒಳಗಾಗಲಿ ಹೊರಗಾಗಲಿ ಕಂಡವರಿಲ್ಲ. ಮನದಲ್ಲಿ ರವಷ್ಟು ಇದೆ ಎಂಬುದು ಕೆಲವರ ಕುಹುಕ, ಅದರಲ್ಲೇ ಅಂತವರಿಗೆ ಪರಮ ಸುಖ.

ನಿವೃತ್ತಿಯ ಸಮಯದಲ್ಲಿ ತಮಗಿಷ್ಟವಾದ ಕನ್ನಡ ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾಗಿ ದುಡಿದ ವೆಂಕಣ್ಣ, ಹಲವಾರು ಗ್ರಾಮೀಣ ಪ್ರತಿಭೆಗಳನ್ನು ೫೦ ಕ್ಕೂ ಹೆಚ್ಚು ಜನಪದ ಕಲಾವಿದರನ್ನು ಬೆಳಕಿಗೆ ತಂದವರು. ಅವರಲ್ಲಿ ಜಯಮ್ಮ ಹುಚ್ಚಿಂಗಮ್ಮರಿಗೆ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಸಿಗುವಲ್ಲಿ ಶ್ರೀಯುತರ ಪಾತ್ರವಿದೆ. ದುರ್ಗದ ಗಾನ ಕೋಗಿಲೆಗಳಾದ ಬಿ.ಪಿ. ಶೋಭ, ಕೋಕಿಲಾ ರುದ್ರಮುನಿಯಂತಹ ಗಾಯಕಿಯರು ಲೈಮ್ ಲೈಟಿಗೆ ಬರಲು ಕಾರಣರಾದವರು. ಸದಾ ಸಕ್ಕರೆ ಅಕ್ಕರೆ ಮಿಕ್ಸ್ ಮಾಡಿ ಮಾತನಾಡುವ ಸರ್ವಮಿತ್ರ ವೆಂಕಣಾಚಾರ್ ಕೋಪಗೊಂಡರೆ ಮಾತ್ರ ವಿಶ್ವಾಮಿತ್ರ. ಸಾವಿರಾರು ಸಭೆಗಳ ರೂವಾರಿಯಾಗಿ, ನೂರಾರು ಸಾಹಿತಿ ಕಲಾವಿದರುಗಳ ಸನ್ಮಾನಕ್ಕೆ ಕಾರಣಕರ್ತರಾದ ಆಚಾರ್ ರನ್ನು ಸನ್ಮಾನಿಸಿ ಗೌರವಿಸಲು ಅನೇಕ ಸಂಘ ಸಂಸ್ಥೆಗಳಿಗೆ ಮಠ ಮಾನ್ಯಗಳಿಗೆ ಹಂಬಲವಿದ್ದರೂ ಅವರೆಂದೂ ಸನ್ಮಾನದಿಂದ ಗಾವುದ ದೂರ – ‘ನೀನಾಸಂ’ ನಾಟಕಗಳನ್ನು ನೋಡುವ ಹುಚ್ಚನ್ನು ದುರ್ಗದ ರಂಗಾಸಕ್ತರಲ್ಲಿ ತುಂಬಿದ್ದೆ ವೆಂಕಣ್ಣ. ನೀನಾಸಂ ತಂಡ ದುರ್ಗಕ್ಕೆ ಎರಡು ಸಲ ವರ್ಷದಲ್ಲಿ ಭೇಟಿ ನೀಡುವಲ್ಲಿ ಶ್ರೀಯುತರ ಶ್ರಮಾಸಕ್ತಿ ವ್ಯಯವಾಗುವುದಿದೆ.

ಮತ್ತೊಂದಿಷ್ಟು ಹೇಳಲೇಬೇಕಾದ ವಿಚಾರ : ತಮ್ಮ ಎರಡನೇ ಮಗನ ಮದುವೆಯ ಸರಳ ಸಮಾರಂಭದಲ್ಲಿ ವೆಂಕಣ್ಣ ತಮ್ಮ ೬೨ನೇ ವಯಸ್ಸಿನ ಸವಿನೆನಪಿಗಾಗಿ ಬಡ ಕಲಾವಿದರನ್ನು ಕರೆಸಿ ಸನ್ಮಾನಿಸಿ ತಾವು ಕೂಡಿಟ್ಟ ೬೨ ಸಾವಿರ ರೂಪಾಯಿಗಳನ್ನು ಹಂಚಿ ಖುಷಿಪಟ್ಟಿದ್ದು ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳದೆ ಇದ್ದದು ಅವರ ದಾನಕ್ಕಿಂತ ಶ್ರೇಷ್ಠವೆನ್ನಿಸಿತು. ದುರ್ಗದ ಲೈಬ್ರರಿಗೆ ಎಂಟುನೂರಕ್ಕೂ ಹೆಚ್ಚು ಗ್ರಂಥಗಳ ದಾನ, ಸಾಹಿತ್ಯ ಪರಿಷತ್ತಿಗೆ ಹತ್ತು ಸಾವಿರ ದತ್ತಿ ಹಣ ನೀಡಿದ್ದು ಇವೆಲಾ ಮಹತ್ವದ ವಿಷಯವಲ್ಲವೆಂದುಕೊಂಡರೂ ನಿವೃತ್ತಿಯಾದ ಮಧ್ಯಮವರ್ಗದ ಮನುಷ್ಯನಲ್ಲಿ ಇಂತಹ ಪ್ರವೃತ್ತಿಗಳೇಳುವುದು ಅತಿ ವಿರಳವಲ್ಲವೆ!

ಮನೆಯ ಸನಿಯವೆ ಸರ್ಕಾರಿ ಪ್ರೈಮರಿ ಶಾಲೆಯಿದ್ದು ಮಧಾಹ್ನ ಮತ್ತು ಸಂಜೆ ಶಾಲೆಯು ಬಿಟ್ಟಾಗ ಅಲ್ಲಿಯ ಬಡಮಕ್ಕಳು ವೆಂಕಣ್ಣನ ಮನೆಯ ಮುಂದೆ ಕುಡಿಯುವ ನೀರಿಗಾಗಿ, ಸಿಗುವ ಚಾಕೊಲೇಟ್‌ಗಾಗಿ ‘ತಾತ.. ತಾತ’ ಎಂದು ನಿತ್ಯವೂ ಮುತ್ತಿಕೊಳ್ಳುವುದು ಮಕ್ಕಳ ಪಾಲಿನ ನಿತ್ಯೋತ್ಸವ. ಬಡಮಕ್ಕಳು ಯೂನಿಫಾರಂ ಇಲ್ಲವೆಂದರೆ ಪಠ್ಯಪುಸ್ತಕ ನೋಟ್‌ಬುಕ್ ಬೇಕೆಂದರೆ ಅವರ ಕೈಗೆ ಹಣ ಕೊಡದೆ ತಾವೇ ಕೊಂಡು ತಂದು ಮರುದಿನವೇ ಕೊಡುವಷ್ಟು ಸಹನೆ ಪ್ರೇಮ ಮಕ್ಕಳ ಮೇಲಿರಿಸಿಕೊಂಡಿರುವ ವಿಶಿಷ್ಟ ವ್ಯಕ್ತಿತ್ವದ ಹಸನ್ಮುಖಿ ಆಚಾರ್ ಇನ್ನೂ ೬೫ ವರ್ಷ ನಮ್ಮೊಂದಿಗಿರಲೆಂದು ಆಶಿಸೋಣವಲ್ಲವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇದಲ್ಲ ತಕ್ಕ ಗಳಿಗೆ
Next post ವನ ಸಂಪತ್ತು

ಸಣ್ಣ ಕತೆ

 • ದೇವರು

  ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

 • ಮರೀಚಿಕೆ

  ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…