ಗಾಳಿ ಕೂಗುತ್ತಿದೆ
ಕಡಲು ಮೊರೆಯುತ್ತಿದೆ
ಮರ ಗಿಡ ತೋಟ ಗದ್ದೆ
ತಲ್ಲಣಿಸಿ ತೂಗಿ
ನೆಲಕ್ಕೆ ಒಲೆಯುತ್ತಿದೆ,
ಮೇಘದ ಕಪ್ಪು ಸಲಗಗಳ ದಾಳಿಗೆ ಬೆದರಿ
ಬೆಳಕು ತುರಾತುರಿ ತಳ ಕಿತ್ತಿದೆ
ಚಚ್ಚಿದೆ ಮಳೆ
ಬೆಚ್ಚಿದೆ ಇಳೆ
ಹುಚ್ಚೇರುತ್ತಿದೆ ಆಗಲೇ
ಹೆಚ್ಚಿಹೋಗಿರುವ ಹೊಳೆಗಳಿಗೆ,
ಮುಚ್ಚುತ್ತಿದೆ ದಪ್ಪನೆಯ ಕಪ್ಪುರಗ್ಗು ನೆಲವನ್ನು
ಆ ತುದಿಯಿಂದ ಈ ತುದಿವರೆಗೆ.
ಮಗೂ
ಈ ಆಬ್ಬರದಲ್ಲಿ ನಿನ್ನ ಹಂಸಧ್ವನಿ
ಕೇಳುತ್ತದೆ ಹೇಳು ಯಾರ ಕಿವಿಗೆ ?
ಗಂಟೆ ಬಾರಿಸುತಿರಲು ತಂತಿ ಮಿಂಚಿದ ಗಾನ
ಕಂತಿಹೋಗದೆ ಹೇಳು ಮೊರೆತದೊಳಗೆ ?
ಆದರೂ ಚಿಂತಿಲ್ಲ
ಸರದಿಗಳು ಉಂಟಲ್ಲ!
ನುಡಿತವನ್ನೇ ಬಿಟ್ಟುಕೊಡುವ ಗೋಜಿಲ್ಲ.
ನಡೆಯುತ್ತಿರಲಿ ಸಾಧನೆ ತನ್ನಷ್ಟಕ್ಕೆ
ಒಳಗೊಳಗೆ,
ತಿಳಿದಿರಲಿ ಜೊತೆಗೆ
ಮೆಚ್ಚಿಗೆ ನಿರೀಕ್ಷಿಸಲು ನಿನ್ನ ಕಲೆಗೆ
ಇದಲ್ಲ ತಕ್ಕ ಗಳಿಗೆ.
*****