ತರಂಗಾಂತರ – ಹಿನ್ನುಡಿ

ತರಂಗಾಂತರ – ಹಿನ್ನುಡಿ

ಹಿನ್ನುಡಿಯ ಅಗತ್ಯವಿದೆಯೆ? ಇದೆ ಅಂದರೆ ಇದೆ, ಇಲ್ಲ ಅಂದರೆ ಇಲ್ಲ. ತನ್ನ ಬರಹದ ಕುರಿತು ಲೇಖಕ ಏನು ಹೇಳಿಕೊಂಡರೂ ಅದು ಓದುಗರ ಮನಸ್ಸನ್ನು ನಿರ್ದೇಶಿಸುವ ಕಾರಣದಿಂದ ಕೆಲವರು ಏನನ್ನೂ ಹೇಳದೆ ಸುಮ್ಮನೆ ಇರುತ್ತಾರೆ. ಇದೇ ಒಂದು ಭಯವಾಗಿಬಿಟ್ಟರೆ, ಲೇಖಕರು ಕೃತಿಗೆ ಹೆಸರು ಕೂಡಲೂ ಹಿಂದೆ ಮುಂದೆ ನೋಡಬಹುದು. ಅನಾಮಿಕರಾಗಿ ಪ್ರಕಟಿಸಬಹುದು. ಇಂಥ ಶಬ್ದದ ಭಯವನ್ನು ಬದಿಗಿರಿಸಿ ಈ ಹಿನ್ನುಡಿಯನ್ನು ಬರೆಯುತ್ತಿದ್ದೇನೆ.

ಇದನ್ನು ಬರೆಯುತ್ತಿರುವಾಗ ಓದುಗರು ಕೇಳಿದ, ಕೇಳದ, ನನ್ನ ಮನಸ್ಸಿಗೇ ಹೊಳೆದ ಹಲವಾರು ಪ್ರಶ್ನೆಗಳನ್ನು ಮುಂದಿರಿಸಿಕೊಂಡಿದ್ದೇನೆ. ಈ ಕೃತಿಯ ಶೈಲಿಯ ಬಗ್ಗೆ ಎರಡು ರೀತಿಯ ಪ್ರತಿಕ್ರಿಯೆಗಳಿವೆ. ಕಷ್ಟವಾಯಿತೆಂದು ಸಾಮಾನ್ಯ ಓದುಗರು, ಸರಳವಾಯಿತೆಂದು ಬುದ್ಧಿಜೀವಿಗಳು. ಈ ಬಗ್ಗೆ ನನಗೆ ಹೇಳುವುದುಕ್ಕೇನೂ ಇಲ್ಲವಾದರೂ, ಸೃಜನಶೀಲ ರಚನೆಗಳು ಆಕಾರಣಕ್ಕೋಸ್ಕರವೆ ಕ್ಲಿಷ್ಟವಾಗಿರಬೇಕೆಂದೋ, ಸುಲಭವಾಗಿರಬೇಕೆಂದೋ, ನನಗನಿಸುವುದಿಲ್ಲ. ಮುಖ್ಯ ಬರೆಯುವ ಹೊತ್ತಿಗೆ ಇಂಥ ಪ್ರಜ್ಞಾಪೂರ್ವ ತೀರ್ಮಾನಗಳನ್ನು ಎದಿರಿಟ್ಟುಕೊಂಡು ಕೃತಿರಚನೆ ಸಾಧ್ಯವೆಂದೂ ತೋರುವುದಿಲ್ಲ. ಲೇಖಕ ಯಾವ ಯಾವುದೋ ಪ್ರಯೋಗಗಳನ್ನು ಮಾಡಬಹುದು; ಇದು ಬಹಳ ಸಂಕೀರ್ಣವಾದ ವಿಚಾರವಾದ್ದರಿಂದ ಓದುಗರಿಗೆ ತಲುಪುವುದು ಎನ್ನುವ ಒಂದೇ ಒಂದು ಪ್ರಣಾಳಿಕೆಯ ಮೇಲಿಂದ ತೀರ್ಮಾನವಾಗುವಂಥದಲ್ಲ.

ಇಲ್ಲಿ ಹೆರಾಕ್ಲಿಟಸ್ ಏನು ಮಾಡುತ್ತಿದ್ದಾನೆ? ಕಾದಂಬರಿಯ ಅಂತ್ಯ ವಾಸ್ತವಿಕವೆ, ಅಲ್ಲವೆ? ಸಿನಿಮಾದಲ್ಲಿ ಆದ ಹಾಗೆ ಅನಿಸಿವುದಿಲ್ಲವೆ? ಇತ್ಯಾದಿ ಪ್ರಶ್ನೆಗಳಿವೆ. ವಾಸ್ತವಿಕತೆಯ ವಿಚಾರ ಬಹಳ ನಿಗೊಢವಾದ್ದು. ಅನೇಕ ತತ್ವಜ್ಞಾನಿಗಳು, ಸಾಹಿತ್ಯವಿಮರ್ಶಕರು, ವಿಜ್ಞಾನಿಗಳು ಹಾಗೂ ದಾರ್ಶನಿಕರು ಈ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಮೈಯ ವಾಸ್ತವಿಕತೆಯೊಂದಿದೆ; ಅದೇ ರೀತಿ ಮನಸಿನ ವಾಸ್ತವಿಕತೆಯೂ ಇರಬಹುದು. ಇವರೆಡೂ ಒಂದಾಗಿದ್ದೂ ಆಗಿರದೇ ಇರಬಹುದು. ಅವರವರು ವ್ಯವಹರಿಸುವ ಜಗತ್ತಿನ ವಾಸ್ತವಕ್ಕೆ ಅನುಸಾರವಾಗಿ ಅವರವರು ಹೆರಾಕ್ಲಿಟಸ್ ಮುಂತಾದವರನ್ನು ಸ್ವೀಕರಿಸಬಹುದು, ಬಿಡಬಹುದು. ಆದ್ದರಿಂದ ರೆಸೆಪ್ಷನ್ ಥಿಯರಿಯ ತೋರ ಉದ್ದೇಶವನ್ನು ಅಲ್ಲಗಳೆಯದೆಯೆ, ಲೇಖಕ ಪ್ರತಿಯೊಬ್ಬ ಸಂಭವನೀಯ ಓದುಗನನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯುವುದು ಸಾಧ್ಯವಿಲ್ಲವೆನ್ನುವುದನ್ನು ಹೇಳಬಯಸುತ್ತೇನೆ. ಎಂದರೆ, ಈ ಕೃತಿಯ ಓದುಗರಿಗೆ ಹೆರಾಕ್ಲಿಟಸ್ ಬಗ್ಗೆ ಎಷ್ಟು ಗೊತ್ತಿದೆ, ಎಷ್ಟು ಗೊತ್ತಿಲ್ಲ ಎನ್ನುವುದನ್ನು ಪೂರ್ವಭಾವಿಯಾಗಿ ತೀರ್ಮಾನಿಸುವುದಾದರೂ ಹೇಗೆ ಸಾಧ್ಯ? ಗೊತ್ತಿದ್ದರೆ ಬಹುಶಃ ಹೆಚ್ಚಿನ ಸ್ವಾರಸ್ವವಿರುತ್ತಿತ್ತು. ಇರದಿದ್ದರೂ ಕತೆಗೆ ತೊಂದರೆಯೇನೂ ಇಲ್ಲ ಎನ್ನುವ ಭಾವನೆಯೊಂದಿಗೆ ಮುಂದುವರಿಯಬೇಕಾಗುತ್ತದೆ.

ಸಿನಿಮೀಯತೆಯ ವಿಚಾರಕ್ಕೆ ಬಂದರೆ-ಸಿನಿಮಾ ನಮ್ಮ ಗಾಢವಾದ ವಾಸ್ತವಗಳನ್ನು ಅವಾಸ್ತವಗೊಳಿಸುವ ಒಂದು ಸಂಸ್ಕೃತಿಯನ್ನು ಹುಟ್ಟುಹಾಕಿರುವ ದುರಂತವನ್ನು ಕಾಣುತ್ತಿದ್ದೇವೆ. ಅದ್ದರಿಂದಲೆ, ಕೊಲೆ, ಆತ್ಮಹತ್ಯೆ, ಮಾನಭಂಗ, ಹಿಂಸ, ಪ್ರೀತಿ, ಪ್ರೇಮ-ಸಕಲವೂ ರಜತಪರದೆಯ ಭ್ರಮೆಯನ್ನು ತರುವುದು. ಸಿನಿಮಾ ಕಲ್ಚರಿನ ನಂತರ ಶೇಕ್ಸ್ಪಿಯರನ ರೊಮಿಯೊ ಎಂಡ್ ಜೂಲಿಯಟ್ ಕೂಡ ಅದರ ಮೂಲ ತೀವ್ರತೆಯನ್ನು ಕಳಕೊಂಡುಬಿಟ್ಟ ಹಾಗೆ ಅನಿಸುತ್ತದೆ. ಸಿನಿಮಾ, ಟೀವಿ, ಪತ್ರಿಕೆಗಳ ಭಯದಿಂದ ಲೇಖಕ ತನ್ನ ಕಲ್ಪನೆಗಳನ್ನು ಹೊಸ ಶಿಸ್ತಿಗೆ ಅಳವಡಿಸಿಕೊಳ್ಳಬೇಕಾಗಿ ಬಂದಿದೆಯೆನ್ನುವುದು ನಿಜ, ಆದರೂ ಕತೆ ಹೇಳುವ ತನ್ನ ಸ್ವಾತಂತ್ರ್ಯವನ್ನು ಆತ ಇನ್ನೂ ಕಳೆದುಕೊಂಡಿಲ್ಲ. ಒಂದು ಕತೆಯ ಸತ್ವ ಅದರ ಬಿಡಿಭಾಗಗಳ ಮೊತ್ತವಲ್ಲವಾದ್ದರಿಂದ ಆರಂಭ, ಅಂತ್ಯಗಳ ಬಗ್ಗೆ ವಿಶೇಷವಾಗಿ ತಲೆಕೆಡಿಸಿಕೊಳ್ಳಬೇಕಾಗಿಲ್ಲವೆಂದು ತೋರುತ್ತದೆ. ಮಧ್ಯರಾತ್ರಿಯಲ್ಲಿ ಕದಬಡಿದಾಗಲೆ ಕತೆ ತನ್ನ ಕೊನೆಯನ್ನು ಒಂದರ್ಥದಲ್ಲಿ ಬಿಟ್ಟುಕೊಡುತ್ತದೆ. ಆದರೆ ಅರ್ಥ ಅದೊಂದೇ ಅಲ್ಲ- ವಿನಯಚಂದ್ರ ಹೇಗೆ ವರ್ತಿಸಿದ ಅನ್ನುವುದೂ ಈ ಕೃತಿಯ ಅರ್ಥಕೆ ಮುಖ್ಯ. ಇದಕ್ಕೂ ಸಿನಿಮೀಯತೆಗೆ ಏನೇನೂ ಸಂಬಂಧವಿಲ್ಲ. ಹಾಗೂ ಅದೇನು ಅಷ್ಟು ಸರಳವಾದ ವಿಚಾರವೂ ಅಲ್ಲ; ವಿನಯಚಂದ್ರನ ಸಾವು ಅರ್ಥವಿದ್ದದ್ದೆ, ಇಲ್ಲದ್ದೆ?

ಅಪೂರ್ಣತೆಯನ್ನು ಮನುಷ್ಯರು ಸಹಿಸುವುದಿಲ್ಲ. ಹಲವು ಓದುಗರ ಪ್ರಕಾರ ಈ ಪುಸ್ತಕ ಬಹಳ ಚಿಕ್ಕದಾಯಿತು. ದೊಡ್ಡ ಕಾದಂಬರಿಯೊಂದು ಕೊಡಬಲ್ಲ ಖುಶಿಯನ್ನು ಇಂಥ ಕಿರುಕಾದಂಬರಿ ಕೊಡಲಾರದು. ಮೊದಲನೆಯದಾಗಿ, ಇದನ್ನು ಓದಿ ಮುಗಿಸಲು ಬೇಕಾಗುವ ವೇಳೆ ಸಣ್ಣದು. ಎರಡನೆಯದಾಗಿ, ಇಲ್ಲಿ ಓದುಗರು ಎದಿರಾಗುವ ಹಲವು ಪಾತ್ರಗಳು ಮತ್ತೆ ಕಾಣಿಸುವುದೇ‌ಇಲ್ಲ. ರೇಶ್ಮ ಏನಾದಳು? ಸುನಯನ ಏನಾದಳು? ದೀಕ್ಷಿತ ಎಲ್ಲಿಗೆ ಹೋದ? ವಿನಯಚಂದ್ರನನ್ನು ಹುಡುಕುವುದಕ್ಕೆ ಅವನ ತಂದೆ ತಾಯಿ ಪ್ರಯತ್ನಿಸಲಿಲ್ಲವೆ? ಸಾಮಾನ್ಯ ಪ್ರಶ್ನೆಗಳು ನಿಜ; ಅದರೆ ಪರಿಪೂರ್ಣತೆಯ ದೃಷ್ಟಿಯಿಂದ ಇವು ಮುಖ್ಯವಾದ ಪ್ರಶ್ನೆಗಳೇ ಆಗುತ್ತವೆ. ಇವೊಂದನ್ನೂ ಉತ್ತರಿಸುವುದು ಸಾಧ್ಯವಿಲ್ಲ. ಕೃತಿಯ ಹೊರಗೇನಿದೆಯೋ ಅದು ಓದುಗರಿಂಗೆ ಬಿಟ್ಟಿದ್ದು.

ಆದರೂ ಮಳಗಿ ಮತ್ತು ಶಿವಶಂಕರ್ ಇದನ್ನು ಪುಸ್ತಕರೂಪದಲ್ಲಿ ಪ್ರಕಟಿಸುತ್ತೇವೆಂದು ಮುಂದೆ ಬಂದಾಗ, ಎರಡನೆ ಭಾಗವೊಂದನ್ನು ಬರೆದು ಸೇರಿಸಿದರೆ ಹೇಗೆ ಎನ್ನುವ ವಿಚಾರ ನನ್ನ ಮನಸ್ಸಿನಲ್ಲಿ ಬರದಿರಲಿಲ್ಲ. ಎರಡನೆ ಭಾಗ ಬರೆಯುವುದಾದರೆ ಅದು ಹೇಗಿರುತ್ತದೆ ಎಂಬ ಕುರಿತು ಯೋಚಿಸತೊಡಗಿದೆ. ವಿನಯಚಂದ್ರನನ್ನು ಮತ್ತೆ ಬದುಕಿಸಿ ತರುವುದು ಸಾಧ್ಯವಿಲ್ಲ. ದೀಕ್ಷಿತನನ್ನು ಕೇಂದ್ರೀಕರಿಸಿ ಬರೆಯಬಹುದು-ಅದು ಒಂದು ಸಾಧ್ಯತೆ. ರೇಶ್ಮಳನ್ನು ಕೇಂದ್ರೀಕರಿಸಿ ಬರೆಯಬಹುದು-ಇನ್ನೊಂದು ಸಾಧ್ಯತೆ. ಎರಡನ್ನೂ ಬಿಟ್ಟು ಮೂರನ ವಿಧಾನವೊಂದನ್ನು ಕಲ್ಪಿಸತೊಡಗಿದೆ. ಈ ಎರಡನೆ ಭಾಗದಲ್ಲಿ ಏನಾಗುತ್ತದೆ? ಅಥವ ಏನಾಗುತ್ತದೆ ಎನ್ನುವುದಕ್ಕಿಂತ ಏನಾಗುವುದಿಲ್ಲ ಎಂಬ ಪ್ರಶ್ನೆಯ ಮೇಲೆ ಒತ್ತುಕೊಡಬಹುದು. ಏನಾಗುತ್ತದೆ ಎಂದರೆ, ವಿನಯಚಂದ್ರನ ಸಾವಿನ ಸುಳಿವು ಸಿಗುತ್ತದೆ; ಏನಾಗುವುದಿಲ್ಲ ಎಂದರೆ ಸಾವಿಗೆ ಕಾರಣರಾದವರು ಹಾಗೆಯೆ ಇರುತ್ತಾರೆ-ಏನೂ ಆಗದೆಯೆ.

ಬಹುಶಃ ಇದನ್ನು ನಿರೂಪಿಸುವುದಕ್ಕೆ ಒಬ್ಬ ಪತ್ರಿಕಾಕರ್ತನ ಅಗತ್ಯ ಬೇಕಾಗಬಹುದು. ಆತ ಯಾವುದೋ ಆಕಸ್ಮಿಕದಲ್ಲಿ ವಿನಯಚಂದ್ರ ಕಾಣೆಯಾದ ಸುದ್ದಿ ತಿಳಿಯುತ್ತಾನೆ ಎಂದುಕೊಳ್ಳೋಣ. ನಂತರ ಇದರ ಶೋಧನೆಯಲ್ಲಿ ತೊಡಗುತ್ತಾನೆ-ಒಂದು ತನಿಖಾವರದಿ ಸಿದ್ಧಪಡಿಸುತ್ತಾನೆ. ಆದರ ಅದು ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ ಎನ್ನುವ ಗ್ಯಾರಂಟಿಯೇನೂ ಇಲ್ಲ; ಪ್ರಕಟವಾದರೂ ಅದು ಸಂಪಾದನ ಕತ್ತರಿಪ್ರಯೋಗಕ್ಕೆ ಒಳಗಾಗಿರುತ್ತದೆ. ಅಷ್ಟರಲ್ಲಿ ಈ ನಮ್ಮ ಪತ್ರಿಕಾಕರ್ತ ನೇರವಾಗಿ ಪೋಲೀಸರನ್ನ ಎದಿರುಹಾಕಿಕೊಂಡರುತ್ತಾನೆ. ಈ ಪೋಲೀಸರಾದರೂ ಕೆಟ್ಟವರೇನೂ ಆಗಿರಬೇಕಾದ್ದಿಲ್ಲ. ವಿದ್ಯಾವಂತರಿರಬಹುದು. ವಿಜ್ಞಾನ, ಸಾಹಿತ್ಯ, ರಾಜ್ಯಶಾಸ್ತ್ರ ಓದಿದವರಾಗಿರಬಹುದು, ಅವರಿಗೂ ಹೆಂಡತೆ ಮಕ್ಕಳಿರಬಹುದು. ನಾಸಿರುದ್ದೀನ್ ಶಾ, ಸ್ಮಿತಾಪಾಟೀಲ, ಸುಹಾಸಿನಿ ಮುಂತಾದವರನ್ನು ಸ್ಕ್ರೀನಿನ ಮೇಲೆ ನೋಡಿ ಮಂತ್ರಮುಗ್ಧರಾಗಬಹುದು. ಆದರೆ ಇದು ಯಾವುದೂ ಪತ್ರಿಕಾಕರ್ತನ ರಕ್ಷಣೆಗೆ ಬರುವುದಿಲ್ಲ. ಈ ಬಾರಿ ಆತನ ಕೊಲೆಗೆ ರೈವಲ್ ಗ್ಯಾಂಗ್ ನೆಪವಾಗುತ್ತದೆ. ಯಾಕೆಂದರೆ ಇದೂ ಕೂಡ ಈ ದೇಶದ ದುರದೃಷ್ಟವೇ.

ಇಂಥ ಪರಿಸ್ಥಿತಿಯಲ್ಲಿ ಜನರನ್ನು ನಂಬಿಸುವುದು ಸುಲಭ.

ಸುಲಭವೆ? ಸುಲಭದ ಮಾತೇ ಇಲ್ಲ. ಯಾಕೆಂದರೆ ಜನ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಸೃಷ್ಟಿಸಿಸಂ, ಸಿನಿನಿಸಂ ಅವರನ್ನು ಅವರಿಸಿಕೊಂಡಿದೆ. ಹೀಗಿರುತ್ತ, ಈ ಎರಡನೆ ಭಾಗ ಒಂದನೆಯರ ಮರುಕಳಿಕೆಯಾಗಿರದೆ ಬೇರೆ ಸಾಧ್ಯತೆಯೇ ನನಗೆ ಹೊಳೆಯುವುದಿಲ್ಲ. ಬಹುಶಃ ಟಿಕೆಟ್ ಗೆ ಕೂಡ ಪೈಟಿಂಗ್ ಫ಼ಾರ್ ಗಾಡೋ ಬರೆಯುತ್ತ ಹೀಗನ್ನಿಸಿರಬೇಕು. ಅದ್ದರಿಂದಲೆ ಎರಡನೆ ಅಂಕವು ಮೊದಲನೆಯದರ ಮರುಕಳಿಕೆಯಾಗಿದೆ.

ಅದರೆ ನಿಜಜೀವನದಲ್ಲಿ (ಅಂಥದೊಂದು ಪ್ರಮೇಯವನ್ನು ಒಪ್ಪಿಕೊಂಡು ಹೇಳುವುದಿದ್ದರೆ) ಮನುಷ್ಯರು ಮರುಕಳಿಕೆಯನ್ನು ಕೂಡ ಗುರಿತಿಸಲಾರದ ರಾಜಕೀಯ ದುರಂತವೊಂದಿದೆ. ಬಹುಶಃ ಬೆಕೆಟ್ ನ ನಾಟಕ ಈ ಸ್ಥಿತಿಯನ್ನು ಬಹಳ ಅಮೂರ್ತವಾಗಿಯೂ ಸಾರ್ವಕಾಲಿಕವಾಗಿಯೂ ಹೇಳುತ್ತದೆಂದು ನನಗನಿಸುತ್ತಿದೆ. ವಿನಯಚಂದ್ರನ ಮರಣ ಕೇವಲ ಒಂದು ಘಟನೆಯಾಗದೆ ಮತ್ತೆ ಮತ್ತೆ ಮರುಕಳಿಸುವ ಮರುಕಳಿಕೆಯಾಗಿದೆ. ಆದರೆ ಇದನ್ನು ಗುರುತಿಸಲಾರದ ಸ್ಥಿತಿಯಲ್ಲಿ ನಾವಿದ್ದೇವೆ.

ಎರಡನೆ ಭಾಗ ಬರೆಯುತ್ತಿದ್ದರೆ ಅದನ್ನು ಜಾರ್ಜ್ ಸಾಂತಾಯನನ ಮಾತಿನೊಂದಿಗೆ ಆರಂಭಿಸುವುದು ಯುಕ್ತವಾಗುತ್ತಿತ್ತು. “ಹಿಂದಿನದನ್ನು ಯಾರು ಮರೆಯುತ್ತಾರೋ ಅವರು ಅದನ್ನು ಮತ್ತೆ ಪುನರಾವರ್ತಿಸುವುದಕ್ಕೆ ಬದ್ಧರಾಗುತ್ತಾರೆ” ಎನ್ನುತ್ತಾನೆ ಸಾಂತಾಯನ. ಮನುಷ್ಯ ಚರಿತ್ರೆಯನ್ನು ತೆಗೆದು ನೋಡಿದರೆ ಈ ಮಾತು ಪ್ರತಿಯೊಂದು ಕಾಲಘಟ್ಟದಲ್ಲೂ ಸತ್ಯವಾಗುತ್ತ ಬಂದಿರುವುದನ್ನು ಕಾಣಬಹುದು. ಆದರೆ ಹೆರಾಕ್ಲಿಟಸನ ಪ್ರಪಂಚದಲ್ಲಿ ಯಾವುದೂ ಮರುಕಳಿಸುವುದಿಲ್ಲ. ಪ್ರತಿಯೊಂದು ವಸ್ತುವೂ ನಿರಂತರಚಲನೆಯಲ್ಲಿರುವುದರಿಂದ ಯಾವುದೂ ಈ ಕ್ಷಣದಲ್ಲಿದ್ದ ಹಾಗೆ ಮುಂದಿನ ಕ್ಷಣದಲ್ಲಿ ಇರುವುದಿಲ್ಲ. ಆದಕಾರಣವೆ ಒಂದೇ ನದಿಗೆ ಎರಡು ಬಾರಿ ಇಳಿಯುವ ಹಾಗಿಲ್ಲ. ನಾವು ಸಾಂತಾಯನನ ಜಗತ್ತಿನಲ್ಲಿ ಬದುಕುತ್ತಿದ್ದೇವೆಯೆ ಅಥವ ಹೆರಾಕ್ಲಿಟಸನ ಜಗತ್ತಿನಲ್ಲೆ? ಒಂದು ಇನ್ನೊಂದನ್ನು ಅಲ್ಲಗಳೆಯಲೇಬೇಕೆ?

ಲೇಖಕ ಅರಿವನ್ನು ನಿರ್ಮಿಸಬಲ್ಲ ಮಾತ್ರ. ಆತ ಯಾವ ಸಮಸ್ಯೆಗೂ ಪರಿಹಾರ ಒದಗಿಸುವುದಿಲ್ಲ. ಈ ಮಾತಿನ ಅಗತ್ಯವಿದೆಯೆ? ಚೂರಿಯ ಚಿತ್ರ ಮಾಡಿ ಕೆಳಗೆ “ಚೂರಿ” ಎಂದು ಬರೆಯುವುದು ಕ್ರಮ; ಆದರೂ ಅಂಥ ಚಿತ್ರದ ಕೆಳಗೆ “ಇದು ಚೂರಿಯಲ್ಲ” ಎಂದು ಬರೆದವರಿದ್ದಾರೆ. ಇದು ಅರ್ಥವಾದವರಿಗೆ ನನ್ನ ಮಾತಿನ ಅರ್ಥವೂ ಆಗುತ್ತದೆ.

ಹೀಗೆ ಎರಡನೆಯ ಭಾಗವನ್ನೇನೂ ನಾನು ಬರೆಯಲಿಲ್ಲ. ಬರೆಯದೆ ಅದರ ಸೂಚನೆಯನ್ನು ಮಾತ್ರ ಕೊಟ್ಟು ಇದನ್ನಿಲ್ಲಿಗೆ ನಿಲ್ಲಿಸುತ್ತೇನೆ. ಹೀಗೆ ಸೂಚಿಸುವುದೂ ಕೂಡ ಬರೆಯುವ ಒಂದು ವಿಧಾನವೆಂದು ತಿಳಿದುಕೊಳ್ಳಬಹುದು. ಇನ್ನು ಅಪೂರ್ಣತೆಯ ಭಯವೇನೂ ನನ್ನನ್ನು ಎಂದು ಬಾಧಿಸಿದ್ದಿಲ್ಲ. ರೇಶ್ಮ ಏನಾದಳು, ಸುನಯನ ಏನಾದಳು ಎನ್ನುವ ಪ್ರಶ್ನೆಗಳು ಹಾಗೆಯೆ ಉಳಿಯಬೇಕಾಗುತ್ತವೆ-ಅದೇ ಸರಿ. ಈ ಹಿನ್ನುಡಿಯನ್ನು ನಾನು ಕತೆಯ ಅರ್ಥವಿವರಣೆ ಕೊಡುವ ಉದ್ದೇಶದಿಂದ ಬರೆದಿಲ್ಲ. ಅದ್ದರಿಂದ ಓದುಗರು ಅವರವರಿಗೆ ಸರಿಕಂಡ ಅರ್ಥವನ್ನು ಪಡೆಯುವುದಕ್ಕೆ ಸ್ವತಂತ್ರರು. ಒಂದು ಕೃತಿ ಪ್ರಕಟವಾದ ಮೇಲೆ ಅದರ ಅದೃಷ್ಟ ಹೇಗಿರುತ್ತದೋ ಹೇಳುವುದು ಸಾಧ್ಯವಿಲ್ಲ. ಇಂಥ ರಿಸ್ಕುಗಳನ್ನು ಲೇಖಕ ತೆಗೆದುಕೊಳ್ಳಲೇಬೇಕಾಗುತ್ತದೆ. ಬರೆಯುವ ನಿರ್ಣಯದಿಂದಲೆ ಅವು ಆರಂಭವಾಗುತ್ತವೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏ ವಯಸ್ಸೇ
Next post ಹೀಗೊಂದು ಕಾಲವಕ್ಕಾ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…