ಸಂವಿಧಾನದ ಪರಮಾರ್ಶೆಯ ಸುತ್ತ ಮುತ್ತ

ಸಂವಿಧಾನದ ಪರಮಾರ್ಶೆಯ ಸುತ್ತ ಮುತ್ತ

ಚಿತ್ರ: ಜೆರಾರ್‍ಡ ಗೆಲ್ಲಿಂಗರ್‍
ಚಿತ್ರ: ಜೆರಾರ್‍ಡ ಗೆಲ್ಲಿಂಗರ್‍

`ನಿಮ್ಮ ಮುಖ ವಕ್ರವಾಗಿದ್ದರೆ ಕನ್ನಡಿಯನ್ನು ದೂಷಿಸಬೇಡಿ’- ಇದು ರಷ್ಯಾದ ನಾಣ್ಣುಡಿ. ಸಂವಿಧಾನ ಪರಾಮರ್ಶೆ ಕುರಿತ ಪರ ವಿರೋಧಗಳ ವ್ಯಾಪಕ ಚರ್ಚೆಯಾಗುತ್ತಿದೆ. ಚರ್ಚೆಗೆ ಅನೇಕ ಮುಖಗಳಿರುತ್ತವೆ. ಪರಾಮರ್ಶೆ, ಆತ್ಮಾವಲೋಕನ ಎನ್ನುವುದು ಪ್ರಾಮಾಣಿಕತೆಯ ಪರೀಕ್ಷೆ. ಸಂವಿಧಾನ ಪರಾಮರ್ಶೆ ಅಂತಹ ಒಂದು ಆತ್ಮಾವಲೋಕವಾಗಬೇಕೆಂದು ಬಯಸುವವರಲ್ಲಿ ನಾನೂ ಒಬ್ಬ. ಭಾರತೀಯರ ಪ್ರಾಮಾಣಿಕತೆಯ ಪರೀಕ್ಷೆ ಅನಿವಾರ್ಯವಾಗಿ ಆಗಬೇಕಾಗಿದೆ. ಆದರೆ ಅದು ಆಗಬೇಕಾಗಿರುವುದು ಸಂವಿಧಾನ ಪರಾಮರ್ಶೆಯ ಮೂಲಕ ಅಲ್ಲ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಾವು ನಡೆದುಕೊಂಡಿದ್ದೇವೆಯೇ ಎಂಬುದನ್ನು ಕುರಿತು.

ಬಹುಶಃ ಈ ಅರ್ಥದಲ್ಲಿಯೇ ಎಂದು ಕಾಣುತ್ತದೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಹೆಚ್. ಜಿ.ಬಾಲಕೃಷ್ಣ ಅವರು “ಕಳೆದ ೫೦ ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ ನಿಜಕ್ಕೂ ಪರಾಮರ್ಶೆ ಆಗಬೇಕಾಗಿರುವುದು ಕಾರ್ಯಾಂಗ ಶಾಸಕಾಂಗ ಹಾಗೂ ಅಧಿಕಾರ ಶಾಹಿಯ ಕಾರ್ಯ ನಿರ್ವಹಣೆಯನ್ನು ಕುರಿತೇ ಹೊರತು ಸಂವಿಧಾನವನ್ನೇ. ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಅದರ ಪರಾಮರ್ಶೆಗೆ ಹೊರಟಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ” ಎಂದಿರುವುದು. ಸಂವಿಧಾನದ ಪಿತಾಮಹ ಎಂಬ ಹೆಗ್ಗಳಿಕೆಗೆ ಪಾತ್ರರಾದ ಡಾ|| ಅಂಬೇಡ್ಕರ್ ಅವರು ಸಂವಿಧಾನ ಸಭೆಗೆ ಹೇಳಿದ ಮಾತುಗಳೆಂದರೆ “ಒಂದು ಸಂವಿಧಾನ ಎಷ್ಟೇ ಶ್ರೇಷ್ಠವಾಗಿದ್ದರೂ ಅದನ್ನು ಅಳವಡಿಸುವ ಜನ ಪ್ರಾಮಾಣಿಕರಾಗಿರದಿದ್ದಲ್ಲಿ ಆ ಸಂವಿಧಾನದಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ. ಒಂದು ಸಂವಿಧಾನ ಶ್ರೇಷ್ಠವಲ್ಲದಿದ್ದರೂ ಅದನ್ನು ಅಳವಡಿಸುವ ಜನರಲ್ಲಿ ಪ್ರಾಮಾಣಿಕತೆ ಇದ್ದರೆ ಅದರಿಂದ ಹೆಚ್ಚು ಪ್ರಯೋಜನವಾಗುತ್ತದೆ. ಅಂಬೇಡ್ಕರ್ ಅವರ ಈ ಮಾತು ಕೂಡ ಸಂವಿಧಾನದ ಆಶಯಗಳ ಅಳವಡಿಕೆಯಲ್ಲಿ ನಮಗೆ ಇರಬೇಕಾದ ಪ್ರಾಮಾಣಿಕತೆಯ ಅಗತ್ಯವನ್ನು ಒತ್ತಿ ಹೇಳುತ್ತದೆ. ಒಂದು ರಾಷ್ಟ್ರದ ಸಂವಿಧಾನ  ಜೀವಂತವಾಗಿರಬೇಕಾದರೆ ಆ ರಾಷ್ಟ್ರದ ಜನರ ಪ್ರಾಮಾಣಿಕತೆ ಅದರ ಉಸಿರಾಗಿರುತ್ತದೆ. ಇಲ್ಲವಾದರೆ ಅದು ಸ್ವೇಚ್ಛೆಗೆ ತಿರುಗಿ ದುಷ್ಟಶಕ್ತಿಗಳ ರಣಾಂಗಣವಾಗಿಬಿಡುತ್ತದೆ.

ಭಾರತ ಸ್ವಾತಂತ್ರ್ಯ ಪಡೆದುಕೊಂಡ ಮೊದಲ ದಶಕದಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧ ನಡೆದ ಅಪ್ರಾಮಾಣಿಕ ಕಾಂಗ್ರೆಸ್ ಸರ್ಕಾರವನ್ನು ಕುರಿತು ಆಚಾರ್ಯ ಕೃಪಲಾನಿ ೧೯೫೬ ರಲ್ಲಿ ಎಚ್ಚರಿಕೆ ನೀಡಿದರು. ” ……. ಗೂಂಡಾಗಳೂ ಅಲ್ಲ, ಕಾಳಸಂತೆಕೋರರೂ ಅಲ್ಲ, ಕಮ್ಯುನಿಷ್ಟರೂ ಅಲ್ಲ. ಆದರೆ ಕಾಂಗ್ರೆಸ್ಸಿಗರಾದ ನೀವು ಶೈಶವ ಪ್ರಜಾಪ್ರಭುತ್ವದ ಬದ್ಧ ವೈರಿಗಳಾಗಿದ್ದೀರಿ. ಭಾರತದಲ್ಲಿ ಪ್ರಜಾ ಪ್ರಭುತ್ವವೇನಾದರೂ ಅಳಿದುಹೋದರೆ ಅದಕ್ಕೆ ಜವಾಬ್ದಾರರು ನೀವೇ ಆಗುತ್ತೀರಿ.” ಈ ಎಚ್ಚರಿಕೆಯ ಮಾತು ಏನನ್ನು ಮನವರಿಕೆ ಮಾಡಲು ಇಚ್ಛಿಸಿತ್ತೋ ಆ ಪ್ರಜಾಪ್ರಭುತ್ವಕ್ಕೆ ಧಕ್ಕೆಯುಂಟಾಗುವ ರೀತಿ ದೇಶದ ವಿದ್ಯಮಾನಗಳು ಜರುಗುತ್ತಿವೆ.

ಇಂದು ಅಂತರ ರಾಷ್ಟ್ರೀಯ ಮಾರುಕಟ್ಟೆಗೆ ನಮ್ಮನ್ನು ನೇರವಾಗಿ ಮಾರಿಕೊಳ್ಳುತ್ತಿದ್ದೇವೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಕೆಂಪು ಹಾಸನ್ನು ಹಾಸಿ ಅವರನ್ನು ಅಂಗಲಾಚಿ ಕರೆಯುತ್ತಿದ್ದೇವೆ. ಎಲ್ಲಿ ಸಿಕ್ಕಿದರಲ್ಲಿ ಹಣಕ್ಕೆ ಅಂಗೈಯೊಡ್ಡಿ ಭಾರತಮಾತೆಯನ್ನು ಸಾಲದ ಶೂಲಕ್ಕೆ ಏರಿಸುತ್ತಿದ್ದೇವೆ. ಬಂಡವಾಳ ಶಾಹಿಗಳಿಗೆ, ವಿದೇಶಗಳಿಗೆ, ಕೋಮುವಾದಿಗಳಿಗೆ ದೇಶದಲ್ಲಿ ಬಲವಾಗಿ ಬೇರು ಬಿಡುವ ತಂತ್ರಗಳನ್ನು ಅಂತರಂಗದಲ್ಲಿ ಹೆಣೆಯುತ್ತಾ ಬಹಿರಂಗದಲ್ಲಿ ಸ್ವದೇಶಿ ಮಂತ್ರ ಪಠಿಸುತ್ತಿದ್ದೇವೆ. ಶತ್ರುಗಳನ್ನು ನಿಯಂತ್ರಿಸುವ ಶಕ್ತಿಯನ್ನು ಕಳೆದುಕೊಂಡ ನಾವು ಮರೆಯೊಳಗೆ ಬಿಟ್ಟುಕೊಂಡು (ಕಾರ್ಗಿಲ್) ಅವರನ್ನು ಹೊರಹಾಕಿದ್ದೇ ವಿಜಯವೆಂದು ಬೀಗವ ಬಿಂಕಗುಳಿತನಕ್ಕೆ ಬಲಿಯಾಗಿದ್ದೇವೆ. ಬುದ್ಧನ ಬೆಳಕನ್ನು ಜಗತ್ತಿಗೆ ನೀಡಬೇಕಾದ ನಾವು ಬುದ್ಧ ಪೂರ್ಣಿಮೆಯಂದೇ ಪೋಕ್ರಾನಿನಲ್ಲಿ ಅಣುಬಾಂಬ್ ಸಿಡಿಸಿ ಬೆಳಕಿಗೆ ಬದಲು ಬೆಂಕಿಯನ್ನು ಸುರಿದಿದ್ದೇವೆ. ಇಡೀ ಮನುಕುಲದ ಮುನ್ನಡೆಗೆ ಅಪ್ಯಾಯಮಾನವಾದ ಉಪನಿಷತ್ತಿನ ಬೆಳ್ಳಂ ಬೆಳಕನ್ನು ಅಜ್ಞಾನದ ಕತ್ತಲಲ್ಲಿ ಕಮರಿ ಹೋಗುತ್ತಿರುವ ಪ್ರಪಂಚಕ್ಕೆ ಹರಿಯ ಬಿಡುವ, ಪ್ರಾಮಾಣಿಕತೆಗೆ ಬದಲು ಜಾತಿ ಮತ, ಸ್ಪೃಶ್ಯ, ಅಸ್ಪೃಶ್ಯತೆಗಳ ಹುಸಿ ಆಡಂಬರದ ಸಂತೆಯಲ್ಲಿ ಹುಚ್ಚರಂತೆ ವರ್ತಿಸುತ್ತಿದ್ದೇವೆ. ಒಂದಾಗಬೇಕಿದ್ದ ನಾವು ಒಡೆದು ಹೋಗಿದ್ದೇವೆ. ಇಂತಹ ಒಂದು ಸ್ಥಿತಿಯನ್ನು ಮುನ್ನಡೆ ಎಂದು ಕಾಣುವ ಹುಂಬಸ್ಥಿತಿಗೆ ಒಳಗಾಗುತ್ತಿದ್ದೇವೆ. ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಸಂದರ್ಭದಲ್ಲಿ ಇಂಗ್ಲೆಂಡಿನ ಮಾಜಿ ಪ್ರಧಾನಿ ಚರ್ಚಿಲ್

“ಸ್ವತಂತ್ರ ಭಾರತದಲ್ಲಿ ಅಧಿಕಾರ ಎನ್ನುವುದು ದಗಾಕೋರರ, ಕಳ್ಳರ ಹಾಗೂ ನಿರಂಕುಶ ದರೊಡೆಕೋರರ ಕೈಗೆ ಹೋಗುತ್ತದೆ…… ಅವರು ತಮ್ಮ ತಮ್ಮೊಳಗೇ ಹೊಡೆದಾಡುತ್ತಾರೆ. ಈ ಬಹಿರಂಗ ಕಾದಾಟದಿಂದಾಗಿ ಭವ್ಯ ಭಾರತ ಕಳೆದು ಹೋಗುತ್ತದೆ” ಎಂದು ಹೇಳಿದ್ದು, ಶಾಸನ ಸಭೆಗಳಲ್ಲಿ, ಲೋಕಸಭೆ ರಾಜ್ಯಸಭೆಗಳಲ್ಲಿ ಗಲಭೆ ಗದ್ದಲ ಹೊಡೆದಾಟಗಳು ಸರ್ವೆ ಸಾಮಾನ್ಯವಾಗುತ್ತಿರುವುದು, ಮಂತ್ರಿಗಳ ಶಾಸಕರ ಕೊಲೆಯಾಗುತ್ತಿರುವುದು, ಚಿಲ್ಲರೆ ವಿಷಯಗಳಿಗೆ ಲೋಕಸಭೆಯ ಕಲಾಪಗಳೇ ನಡೆಯದೆ ಚೆಲ್ಲಾಟಕ್ಕೆ ತೊಡಗುತ್ತಿರುವುದು ಚರ್ಚಿಲ್ಲರ ಮಾತುಗಳನ್ನು ನಿಜವಾಗಿಸುತ್ತಿವೆ.

ಇಂತಹ ಹುಚ್ಚುತನದಿಂದ ಹೊರಗುಳಿದ ಭಾರತ ವಿಶ್ವ ಶಕ್ತಿಯಾಗಿ ಹೊರಹೊಮ್ಮುವ ಎಲ್ಲ ಸತ್ವವನ್ನು ಸಂವಿಧಾನದಲ್ಲಿ ಅಳವಡಿಸಿಕೊಡಲು ಅನುಭವ ಪಡೆದ ಸಂಸದೀಯ ಪಟುಗಳು, ಕಾನೂನು ಪಂಡಿತರು, ಮಹಾನ್ ಸಂವಿಧಾನ ತಜ್ಞರು, ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಪಡೆದಿದ್ದ ಪ್ರತಿಭಾವಂತರು ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನಗಳ ಕಾಲ ಚರ್ಚಿಸಿ ಚಿಂತಿಸಿ ರಚಿಸಿದ ಸಂವಿಧಾನವನ್ನು ಹನ್ನೊಂದು ಮಂದಿ ಸದಸ್ಯರ ಆಯೋಗ ಒಂದು ವರ್ಷದಲ್ಲಿ ಪರಾಮರ್ಶಿಸಿ ವರದಿ ನೀಡಲು ಹೊರಟಿರುವುದು ವಿಪರ್ಯಾಸ. ಆದರೆ ಅದರ ಅಂತರಂಗದ ನಿಜವಾದ ಉದ್ದೇಶ ಗೌಪ್ಯವಾಗಿರುವ ಎಲ್ಲ ಸೂಚನೆಗಳೂ ಇವೆ. ಖ್ಯಾತ ನ್ಯಾಯವಾದಿ ಹಾಗೂ ಸಂಸತ್ ಸದಸ್ಯರಾದ ಫಾಲಿನಾರಿಮನ್ ‘ಸಂವಿಧಾನ ಪುನರ್ವಿಮರ್ಶೆ ಮಾಡಲು ಹೊರಟಿರುವ ನಿರ್ಧಾರ ಒಂದು ಬುಡಮೇಲು ಕೃತ್ಯ’ ಎಂದು ಕರೆದಿರುವುದು ಈ ಕಾರಣದಿಂದಲೇ. ಏಕೆಂದರೆ ತಜ್ಞ ಸಂವಿಧಾನ ರಚನಾಕಾರರು ಪ್ರಪಂಚದ ಎಲ್ಲ ಸಂವಿಧಾನಗಳ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಭಾರತೀಯ ವಸ್ತುಸ್ಥಿತಿಗೆ ಅನುಗುಣವಾಗಿ ಪೂರಕವಾದ ತತ್ವಗಳ ಆಧಾರದ ಮೇಲೆ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ಅದು ವರ್ಗ ವರ್ಣ ವ್ಯವಸ್ಥೆಯಲ್ಲಿ ಉಸಿರುಗಟ್ಟಿದ ಭಾರತಕ್ಕೆ ಬಿಡುಗಡೆಯ ಬೆಳಕಾಗಿದೆ.

ಇಂತಹ ಸಂವಿಧಾನದ ಮೇಲೆ ಅಂದು ಕಾಂಗ್ರೆಸ್ ಅಲ್ಪ ಪ್ರಮಾಣದ ತಪ್ಪುಗಳನ್ನು ಎಸಗಿದ್ದರೆ ಇಂದು ಬಿಜೆಪಿ ಅದನ್ನು ಬೃಹತ್ ಪ್ರಮಾಣದಲ್ಲಿ ಮಾಡ ಹೊರಟಿದೆ. ತುರ್ತು ಪರಿಸ್ಥಿತಿಯನ್ನು ನೇರವಾಗಿ ಹೇರಿ ಪಾಪ ಕೃತ್ಯಗಳನ್ನು ಮಾಡಿ ಕಾಂಗ್ರೆಸ್ ಸಂವಿಧಾನಕ್ಕೆ ಅಪಚಾರವೆಸಗಿದ್ದರೆ ಬಿಜೆಪಿ ಪರೊಕ್ಷವಾಗಿ ಈ ಹೀನ ಕೃತ್ಯಕ್ಕೆ ಕೈ ಹಾಕಿದೆ. ತನ್ನ ಅಂತರಂಗದ ಆರ್. ಎಸ್. ಎಸ್. ವಿಶ್ವ ಹಿಂದೂ ಪರಿಷತ್ ಮುಂತಾದ ಸಂಘ ಪರಿವಾರಗಳ ‘ಹಿಂದೂ’ (ನಿಜವಾದ ಅರ್ಥದಲ್ಲಿ ಬ್ರಾಹ್ಮಣ ಅಥವಾ ವೈದಿಕ) ರಾಷ್ಟ್ರದ ಒತ್ತಡಕ್ಕೆ ಮಣಿದು (ಅಲ್ಲ ಒಲಿದು) ಸಂವಿಧಾನದ ಜಾತ್ಯಾತೀತ ಸ್ವರೂಪಕ್ಕೆ ಮಸಿ ಬಳಿಯ ಹೊರಟಿದೆ.

ಸಂವಿಧಾನ ಪರಾಮರ್ಶೆಯ ಪ್ರಾಮಾಣಿಕತೆಯನ್ನು ಗತಿಸಿದ ಫಟನೆಗಳಿಂದ ಸ್ಪಷ್ಟಪಡಿಸಿಕೊಳ್ಳಬಹುದಾಗಿದೆ. ೧೯೯೨ ರ ಡಿಸೆಂಬರ್ ಆರರಂದು ಕರ ಸೇವೆಯ ಹೆಸರಿನಲ್ಲಿ ಉತ್ತರ ಪ್ರದೇಶದ ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಸರ್ವೋಚ್ಛ ನ್ಯಾಯಾಲಯಕ್ಕೆ ಪ್ರಮಾಣ ಪತ್ರಿಕೆ ಸಲ್ಲಿಸಿ ಅದಕ್ಕೆ ವಿರುದ್ಧವಾಗಿ ಬಾಬರಿ ಮಸೀದಿ ಕೆಡವಿದ ಹೀನ ಕೃತ್ಯ ಕಣ್ಣ ಮುಂದಿದೆ. ಇದಕ್ಕೆ ಅಸಮಾನತೆಯ ಮನುಸ್ಮೃತಿಯನ್ನು ಸುಟ್ಟು ಸಮಾನತೆಯ ಸಂವಿಧಾನವನ್ನು ನೀಡಿದ ಡಾ||ಅಂಬೇಡ್ಕರ್ ಅವರ ಸ್ಮರಣ ದಿನವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಪೋಕ್ರಾನಿನಲ್ಲಿ ಅಣುಬಾಂಬ್ ಸಿಡಿಸಲು ಶಾಂತಿಯನ್ನು ಸಮಾನತೆಯನ್ನು ಮಾನವ ಘನತೆ ಗೌರವಗಳನ್ನು ಜಗತ್ತಿಗೆ ಸಾರಿದ ಗೌತಮ ಬುದ್ಧನ ಪೂರ್ಣಿಮೆಯ ದಿನವನ್ನೇ ನಿಗದಿ ಪಡಿಸಿಕೊಳ್ಳಲಾಗಿದೆ ಏಕೆ? ಇವು ಆಕಸ್ಮಿಕವೆ? ಖಂಡಿತ ಅಲ್ಲ.

೧೯೯೩ ಡಿಸೆಂಬರ್ ಆರರ ನಂತರ ದೆಹಲಿಯಲ್ಲಿ ಸಂಘ ಪರಿವಾರದವರ ‘ಧರ್ಮ ಸಂಸತ್’ ನಲ್ಲಿ ಸಿದ್ಧವಾದ ೬೮ ಪುಟಗಳ ಟಿಪ್ಪಣಿಯ ಸಂಕ್ಷಿಪ್ತ ಪರಿಚಯವನ್ನು ೩. ೧. ೯೩ ರ ಪಯೋನಿಯರ್ ಪತ್ರಿಕೆಯನ್ನು ಉದ್ಧರಿಸಿ ೨೯. ೨. ೯೩ ರ ಫ್ರಾಂಟ್ ಲೈನ್ ಪತ್ರಿಕೆಯಲ್ಲಿ ಎ. ಜಿ. ನೂರಾನಿ ಮತ್ತು ಮಾಲಿನಿ ಚಟರ್ಜಿ ಬರೆಯುತ್ತಾರೆ. ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಸಂವಿಧಾನ ಪರಮರ್ಶೆಯ ಅಂತರಂಗದ ಆಶಯಗಳ ಸೂಚನೆಗಳೂ ಸಿಗುತ್ತವೆ. ಅವುಗಳೆಂದರೆ.
೧. ಸಂವಿಧಾನದ ಪ್ರಸ್ತಾವನೆಯಲ್ಲಿ ‘ಜಾತ್ಯಾತೀತ’ ಮತ್ತು ‘ಸಮಾಜವಾದ’ ಪದಗಳು ಹಿಂದೂ ಧರ್ಮದ ಪರಿಕಲ್ಪನೆಗಳಿಗೆ ವಿರುದ್ಧವಾಗಿವೆ.
೨. ಅಲ್ಪ ಸಂಖ್ಯಾತ ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೆ ವಿಶೇಷ ಹಕ್ಕು ನೀಡಿದ್ದು ಸರಿಯಲ್ಲ
೩. ಪರಿಶಿಷ್ಪ ಜಾತಿ ಪಂಗಡಗಳಿಗೆ ಮೀಸಲಾತಿ ಸೌಲಭ್ಯ ನೀಡಬಾರದಿತ್ತು.
೪. ರಾಷ್ಟ್ರಗೀತೆ ‘ಜನಗಣಮನ’ದ ಬದಲು ‘ಒಂದೇ ಮಾತರಂ’ ಆಗಬೇಕಿತ್ತು.
೫. ಭಾಷಾವಾರು ಪ್ರಾಂತರಚನೆ ಸರಿಯಲ್ಲ. ಭಾರತ ಹಿಂದೂ ರಾಷ್ಟ್ರವಾಗಿದೆ.
೬. ೬೦-೭೦ ಸಣ್ಣ ಸಣ್ಣ ರಾಜ್ಯಗಳನ್ನಾಗಿ ಮಾಡಿ ಏಕೀಕೃತ, ಅತಿ ಕೇಂದ್ರಿಕೃತ ಪ್ರಭುತ್ವ ಸ್ಥಾಪನೆ ಆಗಬೇಕು.
೭. ನಾಗರಿಕ ಹಕ್ಕುಗಳನ್ನು ದೇಶಪ್ರೇಮಕ್ಕೆ ಬದ್ಧರಾದವರಿಗೆ ಕೊಡಬೇಕು.
೮. ಭಾರತ ಎಂದೂ ಹಿಂದೂ ರಾಷ್ಟ್ರ.
೯. ರಾಷ್ಟ್ರ ಧ್ವಜ ಬದಲಾಗಬೇಕು. ಅಶೋಕ ಚಕ್ರದ ಬದಲಿಗೆ ‘ಓಂ’ ಅಥವಾ ‘ಸ್ವಸ್ತಿಕ್’ ಚಿಹ್ನೆ ಇರಬೇಕು.
೧೦.‘ಲೋಕಸಭೆ’, ‘ರಾಜ್ಯಸಭೆ’ ಬದಲಿಗೆ ಅತ್ಯುನ್ನತ ಮಟ್ಟದ ಸಾಧು ಸನ್ಯಾಸಿಯರ ‘ಗುರುಸಭೆ’ ಇರಬೇಕು.
೧೧.ಎಲ್ಲ ಮಸೂದೆಗಳು ‘ಗುರುಸಭೆ’ಯಲ್ಲಿ ಚರ್ಚಿಸಿ ಅನುಮತಿ ಪಡೆಯಬೇಕು. ನಂತರ ಔಪಚಾರಿಕವಾಗಿ ಲೋಕಸಭೆ ಅಂಗೀಕರಿಸುವಂತಾಗಬೇಕು.
೧೨.ಸುಪ್ರೀಂ ಕೋರ್ಟ್‌ಗಳ ನ್ಯಾಯಾಧೀಶರ ನೇಮಕ ಹಾಗೂ ಅವರ ಮೇಲೆ ಶಿಸ್ತಿನ ಕ್ರಮ ‘ಗುರು ಸಭೆಗೆ’ ಇರಬೇಕು.
೧೩.ಗುರುಸಭೆ ಮತ್ತು ಲೋಕಸಭೆಗಳ ನಡುವೆ ರಕ್ಷಾ ಸಭೆ (ಮಿಲಿಟರಿ) ಇರಬೇಕು. ತುರ್ತು ಪರಿಸ್ಥಿತಿ ಘೋಷಿಸಬಹುದೆಂಬ ತೀರ್ಮಾನ ‘ರಕ್ಷಾ ಸಭೆ’ಗೆ ಇರಬೇಕು.

ಕೊಂಚ ಯೋಚಿಸೋಣ, ಸಂವಿಧಾನದ “ಜಾತ್ಯಾತೀತ” ಮತ್ತು “ಸಮಾಜವಾದಿ” ಪದಗಳು ಹಿಂದೂ ಧರ್ಮದ ಅರ್ಥಾತ್ ವರ್ಣ ವ್ಯವಸ್ಥೆಗೆ ಓತ ಬ್ರಾಹ್ಮಣ ಧರ್ಮದ ಪರಿಕಲ್ಪನೆಗೆ ವಿರುದ್ಧವಾಗಿದೆ. ಅಂದರೆ ಜಾತಿ, ವರ್ಗ, ಇರಬೇಕು ಎಂಬುದು ಅವರ ಆಶಯ. ನಾಗರಿಕ ಹಕ್ಕುಗಳನ್ನು ದೇಶ ಪ್ರೇಮಕ್ಕೆ ಬದ್ಧರಾದವರಿಗೆ ಕೊಡಬೇಕು ಎಂದಾದರೆ ದೇಶ ಪ್ರೇಮದ ಅಳತೆಗೋಲು ಯಾವುದು? ಹಣೆಗೆ ಕುಂಕುಮ ಹಚ್ಚಿಕೊಳ್ಳುವುದೆ? ಕಾವಿ, ಖಾಕಿ ಧರಿಸಿ ತ್ರಿಶೂಲ ಲಾಟಿ ಹಿಡಿದು ಕುಣಿಯುವುದೆ? ಅಸ್ಪೃಶ್ಯತೆಯನ್ನು ಮೇಲು ಕೀಳು ಎಂಬ ಜಾತಿಯನ್ನು ಅಂತರಂಗದ  ತುಂಬ ತುಂಬಿಕೊಂಡು ‘ವಂದೇ ಮಾತರಂ’ ಎಂದು ಕಿರುಚಿಕೊಳ್ಳುವುದೆ? ‘ಗುರುಸಭೆ’ ಇರಬೇಕು, ಲೋಕಸಭೆಗೆ, ಸರ್ವೋಚ್ಛ ನ್ಯಾಯಾಲಯಗಳಿಗೆ ಮಾರ್ಗದರ್ಶನ ಮಾಡುವ ಸ್ಥಾನ ಅವಕ್ಕಿರಬೇಕು, ಅಂದರೆ ರಾಮಾಯಣ ಮಹಾಭಾರತಗಳಲ್ಲಿ ಇದ್ದಂತೆ. ಆಗ ತಪಸ್ಸು ಮಾಡಿದ ಶೂದ್ರ ಶಂಬೂಕರ ಕೊರಳು ಕತ್ತರಿಸುವ, ಗುರು ಕಾಣಿಕೆಯ ನೆಪದಲ್ಲಿ ಏಕಲವ್ಯರ ಹೆಬ್ಬೆಟ್ಟನ್ನು ಬಲಿಗೊಳ್ಳುವ ಕ್ರಿಯೆ ಸುಲಭ ಆಗುತ್ತದೆ ಅಲ್ಲವೆ? ಇಂತಹ ಕೃತ್ಯಗಳನ್ನು ರಕ್ಷಿಸಿ ಕಾಪಾಡಿಕೊಂಡು ಬರಲು ಇವರ ಹಿಡಿತದಲ್ಲಿ ‘ರಕ್ಷಾಸಭೆ’ (ಮಿಲಿಟರಿ) ಇರಬೇಕು. ತುಂಬಾ ವ್ಯವಸ್ಥಿತವಾದ ಅತ್ಯಂತ ಜಾಣ್ಮೆಯ ಪರಾಮರ್ಶೆ ಇದಾಗಿದೆ. ಇವರ ಇಂಥ ದುಷ್ಕೃತ್ಯಗಳಿಗೆ ಕೊನೆ ಮೊದಲಿಲ್ಲ!

‘ಐದು ಸಾವಿರ ವರ್ಷಗಳ ಮನು ಸ್ಮೃತಿಯನ್ನು ಬಿಟ್ಟು ಐವತ್ತು ವರ್ಷಗಳ ಸಂವಿಧಾನ ಪರಾಮರ್ಶೆಗೆ ಇವರು ಏಕೆ ಹೊರಟಿದ್ದಾರೆ’ ಎಂದು ಕೇಳುವ ನಿಡುಮಾಮಿಡಿಯ ‘ಮಾನವ ಧರ್ಮ’ ಪೀಠದ ಅಧ್ಯಕ್ಷರಾದ ವೀರಭದ್ರ ಚನ್ನಮಲ್ಲ ಮಹಾಸ್ವಾಮಿಯವರ ಪ್ರಶ್ನೆಯ ಅಂತರಂಗದ ಸತ್ಯ ಈಗ ಅರ್ಥವಾಗುತ್ತದೆ ಅಲ್ಲವೇ?’ ನಮ್ಮ ಈ ತಲೆಮಾರಿನಲ್ಲಿ ನಾವು ನೀಚರ ದುಷ್ಕೃತ್ಯಗಳಿಗೆ ತಲೆ ತಗ್ಗಿಸುವುದಕ್ಕಿಂತ ಹೆಚ್ಚು ಸಜ್ಜನರ ನಿಷ್ಕ್ರಿಯ ಮೌನಕ್ಕೆ ಲಜ್ಜೆ ಪಡಬೇಕಾಗಿದೆ.’ ಎಂದು ಅಮೆರಿಕಾದ ಕರಿಯ ಗಾಂಧಿ ಎಂದು ಹೆಸರು ಮಾಡಿದ ಡಾ. ಮಾರ್ಟಿನ್‌ ಲೂಥರ್ ಕಿಂಗ್‌ನ ಮಾತುಗಳನ್ನು “ನಿಷ್ಕ್ರಿಯ ಸಜ್ಜನರು” ಮನನ ಮಾಡಬೇಕಿದೆ. ಸಂವಿಧಾನ ಪರಮಾರ್ಶೆ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ವೆಂಕಟಾಚಲಯ್ಯನವರಿಗೆ ನಿವೃತ್ತ ನ್ಯಾಯಮೂರ್ತಿ ಹೆಚ್‌. ಜಿ. ಬಾಲಕೃಷ್ಣ ಅವರು “ಆ ಸ್ಥಾನವನ್ನು ತ್ಯಜಿಸಿ” ಎಂದು ಹೇಳಿದ್ದು ಈ ಅರ್ಥದಲ್ಲಿಯೇ. ಅವರು ತ್ಯಜಿಸಲಿಲ್ಲ. ಯಾವ ಹುತ್ತದಲ್ಲಿ ಯಾವ ಹಾವು ಇದೆ ಎಂದು ಹೇಗೆ ತಿಳಿಯಬೇಕು?

ಸಮಾಧಾನದ ಸಂಗತಿ ಎಂದರೆ ಸಂಘ ಪರಿವಾರಗಳ ಮುಖವಾಡದಿಂದ ಬಿಜೆಪಿ ಸಂವಿಧಾನ ಪರಾಮರ್ಶೆಗೆ ಕೈ ಹಾಕಿದ್ದರೂ – ಕೇಶವಾನಂದ ಭಾರತಿ ಪ್ರಕರಣದಲ್ಲಿ “ಸರ್ಕಾರ ಹಾಗೂ ಸಂಸತ್ ಸಂವಿಧಾನ ತಿದ್ದುಪಡಿ ತರುವ ಸ್ವತಂತ್ರ ಪಡೆದಿದ್ದರೂ ಸಂವಿಧಾನದ ಮೂಲ ಸ್ವರೂಪ ಬದಲಿಸುವ ಹಾಗಿಲ್ಲ’ ಎಂದು ಸುಪ್ರೀಂ ಕೋರ್ಟು ನಿರ್ಣಯ ನೀಡಿದೆ. – ರಾಷ್ಟ್ರಪತಿಯ ಅಸಮ್ಮತಿಯ ನಡುವೆ ಈ ಪರಾಮರ್ಶೆ ನಡೆಯುತ್ತಿದೆ. – ತಿದ್ದುಪಡಿ ಎರಡೂ ಸದನಗಳಲ್ಲಿ ಚರ್ಚೆಗೆ ಬಂದು ಬಹುಮತ ಪಡೆಯಬೇಕಾಗಿದೆ. ಬಹುಮತ ದೊರಕುವ ಸಾಧ್ಯತೆ ಅತ್ಯಂತ ತೆಳುವಾಗಿದೆ. ಮತ ಪಡೆವ ಹಂತಕ್ಕೆ ಬರುವುದರೊಳಗಾಗಿ ತಮ್ಮ ತಮ್ಮ ಸ್ವಾರ್ಥಕ್ಕಾಗಿ, ಅಧಿಕಾರದ ಆಸೆಗಾಗಿ, ಇಚ್ಛೆಯಿಲ್ಲದಿದ್ದರೂ, ಸಮಯ ಸಾಧಕನತನದ ಅನಿವಾರ್ಯತೆಯಿಂದ ಬಿಜೆಪಿಯನ್ನು ಆಲಿಂಗಿಸಿಕೊಂಡಿರುವ ಮಿತ್ರ ಪಕ್ಷಗಳಿಗೆ ಆಲಿಂಗನ ಅಸಹ್ಯವಾಗಿ ಬಂಧನದಿಂದ ಬಿಡುಗಡೆಗೊಳ್ಳಬಹುದು ಇರಲಿ. ಈ ಎಲ್ಲವನ್ನು ಮೀರಿಯೂ ಒಂದು ಕೋಮುವಾದಿ ಪಕ್ಷಕ್ಕೆ ಜಯ ತಂದುಕೊಡಬೇಕೆನ್ನುವುದು ಕಾಲದ ನಿರ್ಣಯವೆ ಎಂಬುದನ್ನು ಕಾದು ನೋಡಬೇಕಾಗಿದೆ. ಬಹುಶಃ ಭಾರತದ ಮಣ್ಣಿಗೆ ಅದು ಒಗ್ಗದ ವಿಷಯ. ಏಕೆಂದರೆ ಮನುಕುಲವನ್ನು ಪ್ರೀತಿಸಿದ ನಾಲ್ಕು ಸಾವಿರ ವರ್ಷಗಳ ಗೌತಮ ಬುದ್ಧ ಇಂದಿಗೂ ಬೆಳಗುತ್ತಿದ್ದರೆ ಜನಾಂಗೀಯ ದ್ವೇಷದಿಂದ ಮೆರೆದ ಜರ್ಮನಿಯ ಹಿಟ್ಲರ್ ಕೇವಲ ಅರವತ್ತು ವರ್ಷದೊಳಗೆ ಕಣ್ಮರೆಯಾಗಿರುವುದು ನಮ್ಮ ಕಣ್ಣ ಮುಂದೆ ಜೀವಂತವಾಗಿರುವ ಇತಿಹಾಸ. ಅದ್ದರಿಂದ ಸೃಷ್ಟಿಯ ಅಗಾಧ ಶಕ್ತಿಯನ್ನು ಗೌರವಿಸೋಣ.

-೨೦೦೦
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ
Next post ಸರ್ಕಾರದ ಕೆಲಸ

ಸಣ್ಣ ಕತೆ

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

 • ಯಾರು ಹೊಣೆ?

  "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

 • ತೊಳೆದ ಮುತ್ತು

  ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

 • ಇಬ್ಬರು ಹುಚ್ಚರು

  ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

cheap jordans|wholesale air max|wholesale jordans|wholesale jewelry|wholesale jerseys