ಮುಸ್ಸಂಜೆಯ ಮಿಂಚು – ೬

ಮುಸ್ಸಂಜೆಯ ಮಿಂಚು – ೬

ಅಧ್ಯಾಯ ೬ ರತ್ನಮ್ಮನ ಕರುಣ ಕಥೆ

ರಿತು ಆಫೀಸಿಗೆ ಬರುವಾಗ ಹೊರಗಡೆ ಕಾರು ನಿಂತದ್ದನ್ನು ಗಮನಿಸಿ, ಯಾರು ಬಂದಿರಬಹುದು ಎಂದುಕೊಳ್ಳುತ್ತಲೇ ಒಳನಡೆದಿದ್ದಳು. ಹಣ್ಣು ಹಣ್ಣು ಮುದುಕಿಯೊಬ್ಬರನ್ನು ಇಬ್ಬರು ತೋಳು ಹಿಡಿದು ನಿಧಾನವಾಗಿ ನಡೆಸಿಕೊಂಡು ಹೋಗುತ್ತಿದ್ದದ್ದನ್ನು ಗಮನಿಸಿ, ಸರಸರನೇ ಅವರ ಹಿಂದೆಯೇ ನಡೆದಳು.

ಅವರ ಕಚೇರಿಯ ಒಳಹೊಕ್ಕು ಆ ವೃದ್ದೆಯನ್ನು ತಮ್ಮ ತಾಯಿ ಎಂದು ಪರಿಚಯಿಸಿ, ಇಲ್ಲಿ ಸೇರಿಸಲು ಬಂದಿರುವುದಾಗಿ ತಿಳಿಸಿದರು. ವೆಂಕಟೇಶ್ ಮೊಗದಲ್ಲಿ ವಿಷಾದ ಭಾವ ಕಾಣಿಸಿತು.

“ಬನ್ನಿ, ಕುಳಿತುಕೊಳ್ಳಿ. ಈ ಆಶ್ರಮ ಇರುವುದೇ ಅಸಹಾಯಕ ವೃದ್ದರಿಗಾಗಿ, ಆದರೆ, ತಾಯಿಯನ್ನೇ ಇಲ್ಲಿ ಸೇರಿಸೋಕೆ ಬಂದಿದ್ದೀರಲ್ಲಾ, ಏನಂಥ ಸಮಸ್ಯೆ?” ಎಂದು ಪ್ರಶ್ನಿಸಿದರು. ನೀವು ಬದುಕಿದ್ದೂ ತಾಯಿಯನ್ನು ಅನಾಥರಾಗಿಸುತ್ತೀರಾ ಎಂಬ ಭಾವವಿತ್ತು ಪ್ರಶ್ನೆಯಲ್ಲಿ.

“ಏನ್ ಮಾಡೋದು ಸಾರ್, ತುಂಬಾ ಕಷ್ಟವಾಗಿಬಿಟ್ಟಿದೆ ನಮ್ಮಮ್ಮನ್ನ ನೋಡ್ಕೊಳೊದಿಕ್ಕೆ. ನಮ್ಮಮ್ಮಂಗೆ ನಾನೊಬ್ನೆ ಮಗ, ಇತ್ತೀಚೆಗೆ ನಮ್ಮಮ್ಮ ಮೊದಲಿನ ಥರಾ ಇಲ್ಲ. ಅವರನ್ನ ಮಕ್ಕಳ ಥರ ನೋಡ್ಕೊಬೇಕು. ಮೊದ್ಲೆಲ್ಲಾ ಅಮ್ಮ ಹೀಗೆಲ್ಲ ಇರ್ತಾ ಇರ್ಲಿಲ್ಲ. ಸೊಸೆ ಜತೆ, ಮೊಮ್ಮಗನ ಜತೆ ಚೆನ್ನಾಗಿ ಹೊಂದಿಕೊಂಡಿದ್ದರು. ಆದ್ರೆ, ಈಗ ಅದೆಷ್ಟು ಬದಲಾಗಿದ್ದಾರೆ ಅಂದ್ರೆ ಮಗನಾದ ನಂಗೇ ಕಷ್ಟವಾಗ್ತಾ ಇದೆ. ಇನ್ನು ನನ್ನ ಹೆಂಡತಿ ಹೇಗೆ ಸಹಿಸಿಕೊಳ್ತಾಳೆ ಹೇಳಿ?” ಸಂಕೋಚಿಸುತ್ತ ಆ ವೃದ್ಧೆಯ ಮಗ ನುಡಿದ.

“ಹೌದು ಸಾರ್, ನಾನು ಇವನ ಫ್ರೆಂಡ್ ರಂಗನಾಥ್ ಅಂತ. ಅವನ ಕಷ್ಟ ನೋಡಲಾರದೆ ನಾನೇ ಈ ಸಜೆಷನ್ ಕೊಟ್ಟಿದ್ದು ಸಾರ್, ವಯಸ್ಸಾದ ಮೇಲೆ ತುಂಬಾ ಕಷ್ಟ ಸಾರ್” ಮತ್ತೊಬ್ಬಾತ ಹೇಳಿದ.

ಕೊಂಚ ಸುಧಾರಿಸಿಕೊಂಡಿದ್ದ ಮಗ ತನ್ನ ತಾಯಿಯ ಬಗ್ಗೆ ಹೇಳತೊಡಗಿದ. ಮೂರು ಜನ ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನನ್ನು ಹೆತ್ತಿದ್ದ ರತ್ನಮ್ಮ ಅತ್ಯಂತ ಜೀವನೋತ್ಸಾಹ ಹೊಂದಿರುವಾಕೆ. ಮೂರು ಹೆಣ್ಣುಮಕ್ಕಳನ್ನು ಓದಿಸಿ, ಒಳ್ಳೆಯ ಕಡೆ ಕೊಟ್ಟು ಮದುವೆ ಮಾಡಿ, ಮಗನಿಗೂ ಮದುವೆ ಮಾಡಿ, ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದರು. ಬದುಕು ಆನಂದಮಯ ಎಂದುಕೊಂಡಿರುವಾಗಲೇ ಪತಿಗೆ ಕಿಡ್ನಿ ಫೈಲ್ಯೂರ್ ಆಗಿ ಸಾವನ್ನಪ್ಪಿದಾಗ ಬದುಕಿನಲ್ಲಿ ಕಂಡ ಮೊದಲ ಆಘಾತದಿಂದ ತತ್ತರಿಸಿದರೂ ಗಟ್ಟಿ ಜೀವ ಕಾಲಕ್ರಮೇಣ ಚೇತರಿಸಿಕೊಂಡಿತ್ತು.

ಆ ದೈವಕ್ಕೆ ಅದು ಸಹನೆಯಾಗಲಿಲ್ಲವೇನೋ ಎಂಬಂತೆ ಪ್ರವಾಸ ಹೊರಟಿದ್ದ ಹೆಣ್ಣುಮಕ್ಕಳ ಟಾಟಾ ಸುಮೋಗೆ ಲಾರಿಯೊಂದು ಗುದ್ದಿ ಕ್ಷಣದಲ್ಲಿಯೇ ಹೆಣವಾದ, ತನ್ನ ಹೆತ್ತ ಕರುಳ ಕುಡಿಗಳ ಸಂಸಾರ ಕಂಡ ರತ್ನಮ್ಮ ಈ ಲೋಕದಿಂದಲೇ ಕಳೆದುಹೋಗಿದ್ದರು. ಸೂಕ್ಷ್ಮ ಮನಸ್ಸಿನ ರತ್ನಮ್ಮ ತಮ್ಮ ಮಕ್ಕಳ ಸಾವನ್ನು ನಂಬಲಾರದೆ ಅವರಿನ್ನೂ ಬದುಕಿಯೇ ಇರುವ ಭ್ರಮೆಯಲ್ಲಿಯೇ ಇದ್ದಾರೆ.

ಪ್ರತೀ ರಜೆಯಲ್ಲಿ ತಮ್ಮನ ಮನೆಗೆ ಸಂಸಾರದೊಂದಿಗೆ ಬರುತ್ತಿದ್ದ ಹೆಣ್ಣುಮಕ್ಕಳು ಈ ಬಾರಿಯೂ ಬಂದಿದ್ದರು. ರಜೆಯ ಸವಿ ಸವಿಯುವುದರೊಂದಿಗೆ ತವರಿನ ತಂಪಿನಲ್ಲಿ ಕೆಲವು ದಿನ ಕಳೆದು, ಮಕ್ಕಳ ಆಸೆ ಈಡೇರಿಸಲು ಪ್ರವಾಸ ಹೊರಟಿದ್ದರು. ಹಾಗೆ ಹೊರಟ ಮಗಳು, ಅಳಿಯ, ಮೊಮ್ಮಕ್ಕಳು…. ಹೀಗೆ ಮೂರು ಮಕ್ಕಳ ಸಂಸಾರವೂ ಅಪಘಾತಕ್ಕೆ ಸಿಲುಕಿ ಒಬ್ಬರೂ ಉಳಿಯದಂತೆ ಸಾವನ್ನಪ್ಪಿದ್ದರು.

ಇದು ರತ್ನಮ್ಮನ ಸಂಸಾರ ಕಂಡ ಘೋರ ದುರಂತ. ಅಂದಿನಿಂದಲೇ ಪ್ರಾರಂಭವಾಗಿತ್ತು ರತ್ನಮ್ಮನ ವಿಚಿತ್ರ ನಡೆ-ನುಡಿ, ಇದ್ದಕ್ಕಿದ್ದಂತೆ ಮಗಳ ಮನೆಗೆ ಹೋಗಬೇಕೆಂದು ಹಟ ಹಿಡಿದು ಕುಳಿತುಬಿಟ್ಟಿದ್ದರು. ಬಟ್ಟೆ-ಬರೆ ಜೋಡಿಸಿಕೊಂಡು, ಮಗ ಆಫೀಸಿಗೆ ಹೊರಡುವ ಸಮಯಕ್ಕೆ ಸರಿಯಾಗಿ ಹೊರಟು ನಿಂತು ಮಗಳ ಊರಿಗೆ ಹೋಗುವ ಬಸ್ಸು ಹತ್ತಿಸುವಂತೆ ಕಾಡುತ್ತಿದ್ದರು. ಅವರನ್ನು ಒಳ ಕರೆದೊಯ್ದು ತಿಳಿಹೇಳುವಷ್ಟರಲ್ಲಿ ಸಾಕಾಗಿ ಹೋಗುತ್ತಿತ್ತು. ಆಮೇಲೆ ಎಳೆ ಮಕ್ಕಳಂತೆ ಅಳಲು ಪ್ರಾರಂಭಿಸಿಬಿಡುತ್ತಿದ್ದರು. ಇಲ್ಲದ ಮಗಳ ಮನೆಗೆ ಹೇಗೆ ಕರೆದುಕೊಂಡು ಹೋಗಲು ಸಾಧ್ಯ? ಮನೋವೈದ್ಯರಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾಯಿತು. ಏನೂ ಪ್ರಯೋಜನ ಕಾಣುತ್ತಿಲ್ಲ.

ಮತ್ತೊಂದು ವಿಚಿತ್ರವೆಂದರೆ, ಕೃಶವಾಗಿ ಕಾಣುವ ರತ್ನಮ್ಮ ಇತ್ತೀಚೆಗೆ ತಿನ್ನುವುದರಲ್ಲಿ ಬಕಾಸುರನ ವಂಶಸ್ಥಳೇ ಆಗುತ್ತಿರುವುದು. ಎಷ್ಟು ಕೊಟ್ಟರೂ ಸಾಲದು, ಎಷ್ಟು ತಿಂದರೂ ಹೊಟ್ಟೆ ತುಂಬದು, ತಿಂದು ತಿಂದು ಕೊನೆಗೆ ಅಜೀರ್ಣವಾಗಿ, ಹೊಟ್ಟೆ ಕೆಟ್ಟು ಭೇದಿ ಪ್ರಾರಂಭವಾಗಿಬಿಡುತ್ತಿತ್ತು. ವೈದ್ಯರ ಸಲಹೆಯ ಮೇರೆಗೆ ಊಟ-ತಿಂಡಿಯಲ್ಲಿ ಹಿಡಿತ ಮಾಡುತ್ತಿದ್ದ ಸೊಸೆಯನ್ನು ದೂರುತ್ತ ಕದ್ದು ತಿನ್ನುವ ಚಾಳಿ ಬೇರೆ ಪ್ರಾರಂಭವಾಗಿತ್ತು. ಅಪ್ಪಿತಪ್ಪಿ ಮರೆಯಾದರೆ ಸಾಕು ತುಪ್ಪ, ಹಾಲು, ಮೊಸರು ಒಂದೇ ಗುಟುಕಿಗೆ ಸ್ವಾಹಾ ಆಗುತ್ತಿತ್ತು. ಸದಾ ತಿನ್ನಲು ಹೊಂಚು ಹಾಕುವುದೇ ಕೆಲಸವಾಗಿತ್ತು.

ಮನೆಗೆ ಯಾರಾದರೂ ಬಂದರೆ ಸಾಕು ಅವರ ಜತೆ ಕುಳಿತುಬಿಡುವುದು. ಅವರ ಎದುರಿಗೆ ಅತಿಥಿಗಳಿಗೆ ತಿನ್ನಲು ಕೊಟ್ಟಾಗ ತನಗೂ ಕೊಡುವಂತೆ ಕೇಳುವುದು, ಕೊಟ್ಟಿದ್ದನ್ನು ಒಂದೇ ಉಸುರಿಗೆ ತಿಂದು, ಅತಿಥಿಗಳಿಗೆ ಕೊಟ್ಟಿದ್ದನ್ನು ತಾನೇ ಕಬಳಿಸುವುದು, ಅವರು ಸಂಕೋಚದಿಂದ ಬಿಟ್ಟಿದ್ದರೆ ಗಬಕ್ಕನೇ ಅದನ್ನು ತಿನ್ನುವುದು. ಹೀಗೆಲ್ಲ ಮಾಡಿ ಬಂದವರ ಮುಂದೆ ತಲೆತಗ್ಗಿಸುವಂತೆ ಮಾಡಿಬಿಡುತ್ತಿದ್ದರು ರತ್ನಮ್ಮ. ತಿನ್ನೋಕೆ ಕೊಡದಿದ್ದರೆ ತಿನ್ನುವವರನ್ನೇ ಆಸೆಬುರುಕತನದಿಂದ ನೋಡುತ್ತ ಕುಳಿತುಕೊಳ್ಳುವುದು, ಬಂದವರು ಕನಿಕರದಿಂದ ತಾನು ತಿನ್ನುತ್ತಿದ್ದುದನ್ನೇ ಕೊಡುವುದು. ಇದನ್ನು ನೋಡಿ ಸೊಸೆಗೆ ಇರಿಸುಮುರಿಸು ಉಂಟಾಗುವುದು. ಯಾಕಪ್ಪಾ ಮನೆಗೆ ಜನ ಬರುತ್ತಾರೆ ಎನಿಸಿಬಿಡುತ್ತಿತ್ತು. ಸೊಸೆ ಒಳ್ಳೆಯವಳೇ ಆದರೂ ಎಷ್ಟೂಂತ ಸಹಿಸುತ್ತಾಳೆ? ಮನೆಯಲ್ಲಿ ಕಿರಿಕಿರಿ ಶುರುವಾಗಿ ಅದು ಜಗಳದ ಹಂತಕ್ಕೆ ತಲುಪುತ್ತಿತ್ತು. ಅತ್ತೆ ಎಂದು ಗೌರವ ಕೊಟ್ಟು, ಮಗಳಂತೆ ನೋಡಿಕೊಂಡರೂ ಈ ರೀತಿ ಬಂದವರ ಮುಂದೆಲ್ಲ ಅವಮಾನ ಮಾಡುತ್ತಾರಲ್ಲ ನೋಡಿದವರೆಲ್ಲ ಏನೆಂದುಕೊಂಡಾರು? ಅತ್ತಗೆ ಸೊಸೆ ತಿನ್ನಲು ಏನೂ ಕೊಡುವುದೇ ಇಲ್ಲ ಎಂದುಕೊಳ್ಳುವುದಿಲ್ಲವೇ? ನನ್ನಿಂದ ಇದೆಲ್ಲ ಸಹಿಸಲು ಆಸಾಧ್ಯ ಎಂದುಬಿಟ್ಟಳು.

ಇದಿಷ್ಟು ಸಾಲದೆಂಬಂತೆ ಬೆಳಗ್ಗೆ ತಿಂಡಿ ತಿಂದು ಮಲಗುವುದು. ಎದ್ದಾಗ ಈಗ ಬೆಳಗ್ಗೆ ಎಂದು ತಿಳಿದುಕೊಂಡ ರತ್ನಮ್ಮ ಎದ್ದು ಎಷ್ಟು ಹೊತ್ತಾದರೂ ತಿಂಡಿ ಕೊಡದೆ ಅನ್ನ, ಸಾರು ಕೊಡುತ್ತಾಳೆ ಎಂದು ಸೊಸೆಯೊಂದಿಗೆ ಜಗಳಕ್ಕೆ ನಿಲ್ಲುತ್ತಾರೆ. ಕಾಫಿ ಕೊಟ್ಟಿಲ್ಲ, ತಿಂಡಿ ಕೊಡದೆ ಅನ್ನ, ಸಾರು ಕೊಡುತ್ತಾಳೆ ಎಂದು ಸೊಸೆಯೊಂದಿಗೆ ಜಗಳಕ್ಕೆ ನಿಲ್ಲುತ್ತಾರೆ. ರಾತ್ರಿ ಯಾವಾಗ, ಮಧ್ಯಾಹ್ನ ಯಾವಾಗ, ಬೆಳಗ್ಗೆ ಯಾವಾಗ ಅನ್ನುವ ಪರಿವೆಯೂ ಇರುವುದಿಲ್ಲ. ಇದ್ದಕ್ಕಿದ್ದಂತೆ ರಾತ್ರಿ ರೇಷ್ಮೆ ಸೀರೆ ಉಟ್ಟು ಸಿದ್ದವಾಗಿ ಮೊಮ್ಮಗಳ ಮದುವೆಗೆ ಹೋಗೋಣ, ಕರ್ಕೊಂಡು ಹೋಗು ಎಂದು ಕುಳಿತುಬಿಡುತ್ತಾರೆ. ಯಾವ ಮೊಮ್ಮಗಳ ಮದುವೆ ಅಮ್ಮಾ ಎಂದರೆ, ಸತ್ತುಹೋದ ಮಗಳ ಹೆಸರು ಹೇಳಿ, ಕರೆಯೋಕೆ ಬಂದಿದ್ದರಲ್ಲ ಹೋಗೋಣ ನಡಿ ಅಂತ ಪೀಡಿಸಲಾರಂಭಿಸುತ್ತಾರೆ. ಅವರನ್ನು ಸಮಾಧಾನಿಸಿ, ಸುಧಾರಿಸುವಷ್ಟರಲ್ಲಿ ಸಾಕಾಗಿ ಹೋಗುತ್ತಿತ್ತು. ಮನೆಯವರು ಎಲ್ಲಿಗೂ ಹೊರಡುವಂತಿರಲಿಲ್ಲ. ಎಲ್ಲರಿಗಿಂತ ಮೊದಲು ಸಿದ್ದವಾಗಿ ಬಂದು ಕುಳಿತುಬಿಡುತ್ತಿತ್ತು. ನನ್ನೂ ಕರ್ಕೊಂಡು ಹೋಗಿ ಅಂತ ಹಟ ಹಿಡಿಯುತ್ತಿತ್ತು. ಮೊದಲೇ ವಯಸ್ಸಾಗಿದೆ, ನಡೆಯಲು ಶಕ್ತಿ ಸಾಲದು, ಎಲ್ಲಾ ಕಡೆ ಹೇಗಮ್ಮಾ ನಿನ್ನ ಕರ್ಕೊಂಡು ಹೋಗುವುದು ಎಂದರೆ, ನನ್ನನ್ನೇನು ಹೊತ್ಕೊಂಡು ಹೋಗ್ತಿರಾ? ಕಾರಿನಲ್ಲಿ ತಾನೇ ಹೋಗುವುದು ಎಂದು ಜೋರು ಮಾಡುತ್ತಿದ್ದರು. ರತ್ನಮ್ಮ ಕಾರಿನಲ್ಲಿಯೇ ಹೋದರೂ ಅಲ್ಲಿ ಹೋದ ಮೇಲೆ ನಡೆದಾಡುವುದು ಬೇಡವೇ? ಕೈಹಿಡಿದು ನಡೆಸುವ ಸಹನೆ ಯಾರಿಗಿರುತ್ತೆ? ಒಂದೆರಡು ಬಾರಿಯಾದರೆ ಪರವಾಗಿಲ್ಲ. ಆದರೆ ಪ್ರತಿ ಬಾರಿಯೂ ನಿಗಾ ತೆಗೆದುಕೊಳ್ಳುತ್ತಾರೆ? ತೊಂದರೆ ಕೊಡಬಾರದೆಂಬ ಅರಿವು ರತ್ನಮ್ಮನಿಗಿಲ್ಲ. ಅವರನ್ನು ಸಹಿಸಿಕೊಳ್ಳುವ ತಾಳ್ಮೆ ಮನೆಯವರಿಗಿಲ್ಲ. ಹಾಗಾಗಿ ಕಂದಕ ಜಾಸ್ತಿಯಾಗುತ್ತಲೇ ಹೋಯಿತು. ಇತ್ತೀಚೆಗಂತೂ ಹಾಸಿಗೆಯಲ್ಲಿಯೇ ಮಲ-ಮೂತ್ರವಾಗಿ ಬಿಡುತ್ತಿತ್ತು. ಸೊಸೆ, ಮಗ ಇಬ್ಬರೂ ಕೆಲಸಕ್ಕೆ ಹೋಗುವವರೇ. ಅಜ್ಜಿಯ ನಿಗಾ ನೋಡುವವರಿಲ್ಲದೆ ಮನೆ ಅಶಾಂತಿಯ ಗೂಡಾಗಿತ್ತು. ಅದು ಸಾಲದೆಂಬಂತೆ ರತ್ನಮ್ಮನಿಗೆ ಔಷಧಿ, ಮಾತ್ರೆಗಳ ಹುಚ್ಚು ಹಿಡಿದುಬಿಟ್ಟಿತು. ಕೆಲವು ತಿಂಗಳುಗಳಿಂದ ಔಷಧಿ, ಮಾತ್ರೆಗಳು ಎಲ್ಲೆ ಕಂಡರೂ ಕುಡಿದುಬಿಡುತ್ತಿತ್ತು. ಕೈಗೆ ಸಿಗದಂತೆ ಸದಾ ಎಚ್ಚರಿಕೆ ವಹಿಸಬೇಕಾಗಿರುತ್ತಿತ್ತು.

ಮನೆ ಎಂದ ಮೇಲೆ ಮುನ್ನೆಚ್ಚರಿಕೆಯಾಗಿ ಕೆಲವು ಮಾತ್ರೆ ತಂದಿಟ್ಟುಕೊಂಡಿದ್ದರೆ ಅದೆಲ್ಲವೂ ರತ್ನಮ್ಮ ಸ್ವಾಹಾ ಮಾಡಿಬಿಟ್ಟಿರುತ್ತಿತ್ತು. ಅಲ್ಲದೆ, ಯಾರಿಗೆ ಹುಷಾರಿಲ್ಲದೆ ತಂದಿಟ್ಟ ಮಾತ್ರೆ, ಟಾನಿಕ್‌ಗಳನ್ನು ಬಿಡುತ್ತಿರಲಿಲ್ಲ. ಯಾವುದೇ ಔಷಧಿ, ಮಾತ್ರೆ ಸಿಗದಿದ್ದರೆ, ಕಾಯಿಲೆಯ ನೆವ ಮಾಡಿ ಸುಳ್ಳು ಸುಳ್ಳೇ ಜ್ವರ, ಕಡಿತ, ಹೊಟ್ಟೆನೋವು ಅಂತ ಹೇಳಿ ಆಸ್ಪತ್ರೆಗೆ ಕರೆದೊಯುವಂತೆ ಹಟ ಮಾಡಿ, ಕರೆದುಕೊಂಡು ಹೋಗದಿದ್ದರೆ ಅತ್ತು ಕರೆದು ರಂಪ ಮಾಡಿ ಅಕ್ಕ-ಪಕ್ಕದವರ ಮುಂದೆ ತಲೆತಗ್ಗಿಸುವಂತೆ ಮಾಡುತ್ತಿತ್ತು ರತ್ನಮ್ಮ.

ಒಮ್ಮೆ ಅಂತೂ ನಾನೇ ಅಡುಗೆ ಮಾಡಿಕೊಳ್ತೀನಿ ಅಂತ ಗ್ಯಾಸ್ ಹಚ್ಚಿ, ಆಫ್ ಮಾಡದೆ ಮನೆಯನ್ನೇ ದುರಂತಮಯವಾಗಿಸುವ ಸನ್ನಾಹ ನಡೆಸಿತ್ತು. ಅಕ್ಕಪಕ್ಕದ ಮನೆಯವರು ಗ್ಯಾಸ್ ವಾಸನೆ ಕಂಡುಹಿಡಿದು, ಕಿಟಕಿ-ಬಾಗಿಲುಗಳನ್ನೆಲ್ಲ ತೆರೆದು ಮಗ-ಸೊಸೆ ಬರುವ ವೇಳೆಗೆ ಅಪಾಯದಿಂದ ಪಾರುಮಾಡಿದ್ದರು. ಅಂದಿನಿಂದ ಅಡುಗೆ ಮನೆಗೆ ಬೀಗ ಹಾಕಿ ಹೋಗುತ್ತಿದ್ದರು.

ಯಾರೇ ಬಂದರೂ ವಿಚಾರಿಸದೆ ಒಳ ಕರೆದು ಮಾತನಾಡಿಸುತ್ತ ಕುಳಿತುಬಿಡುತ್ತಿತ್ತು. ಅಪರಿಚಿತರು, ಪರಿಚಿತರು ಎಂಬುದನ್ನು ತಿಳಿಯದ ರತ್ನಮ್ಮ ಹಾಗೆ ಕರೆದು, ಕೂರಿಸಿಕೊಂಡೇ ಒಮ್ಮೆ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳೆಲ್ಲ ಕಳ್ಳತನವಾಗುವಂತೆ ಮಾಡಿತ್ತು. ಹೊರಗಿನಿಂದ ಬಾಗಿಲು ಹಾಕಿಕೊಂಡು ಹೋದರೆ ಬಾಗಿಲು ಬಡಿದು ಗಲಾಟೆ ಮಾಡುತ್ತಿತ್ತು. ಕೊನೆಗೆ ಇದೆಲ್ಲ ಸಹಿಸಲಾರದೆ ಸೊಸೆ ನಾನೇ ಮನೆ ಬಿಟ್ಟು ಹೋಗುತ್ತೇನೆ ಎಂದು ಹಟ ಹಿಡಿದು ಕುಳಿತುಬಿಟ್ಟಿದ್ದಳು. ವಿಧಿ ಇಲ್ಲದೆ ಇಲ್ಲಿಗೆ ಕರೆತಂದಿರುವುದಾಗಿ ಮಗ ಹೇಳಿದಾಗ ದೊಡ್ಡ ಕಥೆ ಕೇಳಿದವರಂತೆ ಉಸಿರು ಬಿಟ್ಟ ವೆಂಕಟೇಶ್.

“ಸರಿ, ನಿಮಿಷ್ಟ, ಈ ಆಶ್ರಮ ಇರುವುದೇ ಇಂಥವರಿಗಾಗಿ ತಾನೇ? ಇಲ್ಲಿ ಎಲ್ಲಾ ಅವರ ವಯಸ್ಸಿನವರೇ ಆಗಿರುವುದರಿಂದ ಇಲ್ಲಿ ಅವರು ಸಂತೋಷವಾಗಿರಬಹುದು. ತಿಂಗಳಿಗೆ ಸರಿಯಾಗಿ ಹಣ ಕಟ್ಟಿ, ಯಾವಾಗ್ಲೂ ಭೇಟಿಯಾಗೋಕೆ ಸಾಧ್ಯ ಇಲ್ಲ. ವಿಸಿಟರ್ಸ್ ಟೈಮ್‌ನಲ್ಲಿ ಮಾತ್ರ ನೀವು ಭೇಟಿಯಾಗಬಹುದು. ಅನಾರೋಗ್ಯವಾದರೆ ಅದಕ್ಕೆ ಇಲ್ಲೇ ಡಾಕ್ಟರ್ ಇದ್ದಾರೆ. ಅದಕ್ಕೆ ನೀವು ಪ್ರತ್ಯೇಕವಾಗಿ ಹಣ ಕಟ್ಟಬೇಕು. ಇಲ್ಲಿನ ರೂಲ್ಸಿಗೆ ತಕ್ಕಂತೆ ನಡ್ಕೊಬೇಕು. ಹಣ ಕಟ್ಟಿ ನಿಮ್ಮ ತಾಯಿನ ಬಿಟ್ಟುಹೋಗಿ” ಎಂದು ತಿಳಿಸಿ ಆಯಾಳನ್ನು ಕರೆದು, ರತ್ನಮ್ಮನನ್ನು ರೂಮಿಗೆ ಕರೆದುಕೊಂಡು ಹೋಗಲು ಹೇಳಿದರು.

ಎಲ್ಲವನ್ನೂ ಕೇಳಿಸಿಕೊಂಡ ರಿತು ಗಂಭೀರವಾಗಿ ಒಳಬಂದಳು. ಅವಳ ಗಂಭೀರತೆ ನೋಡಿದ ವೆಂಕಟೇಶ್, “ಯಾಕಮ್ಮಾ ರಿತು, ಈ ರತ್ನಮ್ಮನ ಕಥೆ ಕೇಳಿ ಸಂಕಟವಾಯ್ತೇ? ಏನು ಮಾಡುವುದಮ್ಮಾ, ಈ ವೃದ್ದಾಪ್ಯ ಎನ್ನುವುದು ಶಾಪ ಕಣಮ್ಮ, ಇವೆಲ್ಲ ಶಾಪಗ್ರಸ್ತರು ಇವರೆಲ್ಲರೂ ಈ ರೀತಿ ಅಲಕ್ಷ್ಯಕ್ಕೆ ಒಳಗಾಗಿದ್ದಾರೆ ಅಂತಾನೇ ಆ ದೇವತೆ ಇಂಥವರಿಗಾಗಿ ಈ ಆಶ್ರಮ ಪ್ರಾರಂಭಿಸಿ ನನ್ನೂ, ನನ್ನ ಮಗನ್ನೂ ಈ ಸೇವೆಗೆ ಎಳೆದುಕೊಂಡುಬಿಟ್ಟಳು. ನಮ್ಮ ವಿಕ್ರಮ್ ಕೂಡ ರಿಟೈರ್ ಆದ ಮೇಲೆ ಇಲ್ಲಿಗೆ ಬಂದುಬಿಡ್ತಾನೆ, ಫ್ಯಾಮಿಲಿ ಸಮೇತ. ಆಮೇಲೆ ಈ ಎಲ್ಲದರ ಜವಾಬ್ದಾರಿ ಅವನದೇ. ನನ್ ಕೈಲೂ ಈಗ ಏನೂ ಸಾಗ್ತಾ ಇಲ್ಲ. ಎಲ್ಲಾ ನಮ್ಮ ಮೇಲೆ ಬಿಟ್ಟು ಅವಳು ಮಾತ್ರ ಮೇಲೆ ಹೋಗಿಬಿಟ್ಟಳು. ಈ ವೃದ್ದಾಪ್ಯದ ಶಾಪವನ್ನು ದೂರಾಗಿಸಿಕೊಂಡ ದೇವತೆ ಅವಳು” ಹೆಂಡತಿಯ ನೆನಪಿನೊಂದಿಗೆ ಕಣ್ಣು ಮಂಜಾದವು.

ಈ ಇಳಿವಯಸ್ಸಿನಲ್ಲಿಯೂ ಕೈಹಿಡಿದಾಕೆಯನ್ನು ಪ್ರೇಮದಿಂದ ನೆನೆಸಿಕೊಳ್ಳುವ ವೆಂಕಟೇಶ್‌ರನ್ನು ಅಭಿಮಾನದಿಂದ ನೋಡಿದಳು ರಿತು.

“ರಿತು, ನೀನು ಬಂದಾಗಿನಿಂದ ನನ್ನ ರಿಸ್ಕ್ ಎಷ್ಟೋ ಕಡಿಮೆ ಆಯ್ತಮ್ಮ. ನೀನಿದ್ದಿಯಾ ಅಂದ್ರೆ ನಾನು ಅಲ್ಲಿ ಇರೋದೇ ಬೇಡ. ನಿನ್ನನ್ನ ನೋಡ್ತಾ ಇದ್ರೆ ನಂಗೆ ವಸುವಿನದೇ ನೆನಪಾಗುತ್ತೆ. ಇತ್ತೀಚೆಗೆ ಯಾಕೋ ಅವಳ ನೆನಪು ಬಹಳ ಕಾಡ್ತಾ ಇದೆ. ಅವಳ ಥರಾನೇ ನೀನು, ಇಲ್ಲಿರುವ ವೃದ್ದರಿಗೆಲ್ಲ ಪ್ರೀತಿ ಹಂಚ್ತಾ ಇದ್ದೀಯಾ. ನಿನ್ನ ರಕ್ತದಲ್ಲಿಯೇ ಅಸಹಾಯಕರಿಗೆ ಮರುಗುವ ಗುಣ ಬೆರೆತುಹೋಗಿದೆ ರಿತು. ಈ ಆಶ್ರಮದಲ್ಲಿ ನಿಸ್ವಾರ್ಥತೆಯಿಂದ ಕೆಲಸ ಮಾಡೋ ವ್ಯಕ್ತಿಗಳೇ ಸಿಗಲ್ಲವೇನೋ ಅಂತ ತುಂಬಾ ನಿರಾಶೆಯಾಗಿತ್ತು ನನಗೆ. ಯಾರೇ ಬಂದ್ರೂ ಅವರ ಸ್ವಾರ್ಥ ನೋಡ್ಕೊತಿದ್ದರೇ ವಿನಾ ಇಲ್ಲಿರುವ ಜೀವಿಗಳಿಗೂ ಮನಸ್ಸಿದೆ, ಭಾವನೆಗಳಿವೆ ಅನ್ನುವುದನ್ನೇ ಮರೆತುಬಿಡುತ್ತಿದ್ದರು. ವಸುವಿನ ಮನಸ್ಥಿತಿ ಇರೋ ಜೀವಿಗಳೇ ಇಲ್ವೇನೋ ಅಂದುಕೊಳ್ಳುವ ಹಾಗಾಗುತ್ತಿತ್ತು. ಆದರೆ, ಅದನ್ನು ಸುಳ್ಳು ಮಾಡಿಬಿಟ್ಟೆ ರಿತು. ನಾನು ಕೂಡ ಮೊದಮೊದಲು ನನ್ನದೇ ಹೆಚ್ಚು ಅನ್ನುವ ಮನೋಭಾವನೆಯವನೇ ಆಗಿದ್ದೆ. ನನ್ನ ಮನೆ, ನನ್ನ ಸಂಸಾರ ಇವಿಷ್ಟೇ ನನ್ನ ಪ್ರಪಂಚವಾಗಿತ್ತು. ಆದರೆ ನನ್ನ ಬದಲಾಯಿಸಿದವಳು ನನ್ನ ವಸು, ಆ ದೇವತೆ ನನ್ನನ್ನ, ನನ್ನ ಮಗ ಸೊಸೆನಾ ತನ್ನ ಪರಿಧಿಯೊಳಗೆ ಎಳೆದುಕೊಂಡುಬಿಟ್ಟಳು. ಅದಕ್ಕಾಗಿ, ಅವಳು ಎಲ್ಲರನ್ನೂ ಎಲ್ಲವನ್ನೂ ಬಿಡೋಕೆ ಸಿದ್ದವಾಗಿದ್ದಳು. ತನ್ನ ಆದರ್ಶಗಳಿಗೆ ತಲೆಬಾಗುತ್ತಿದ್ದಳೇ ವಿನಾ ಯಾರ ಒತ್ತಡಕ್ಕೂ ಮಣಿಯುತ್ತಿರಲಿಲ್ಲ. ಅಂಥ ಧೀಮಂತ ವ್ಯಕ್ತಿತ್ವ ಅವಳದು ರಿತು. ಅವಳು ಹೋದ ಮೇಲೆ ಅಂಥ ಗುಣಗಳನ್ನು ನಾನು ನೋಡೇ ಇಲ್ಲ ಅಂತ ಹೇಳಬೇಕು. ಆದರೆ ಈಗ ನೋಡ್ತಾ ಇದ್ದೀನಿ. ವಸುವೇ ಇನ್ನೊಂದು ಜನ್ಮ ಎತ್ತಿಕೊಂಡು ಬಂದುಬಿಟ್ಟಿದ್ದಾಳೇನೋ ಅನ್ನಿಸುವಷ್ಟು ಸಾಮ್ಯವನ್ನು ನಿನ್ನಲ್ಲಿ ನಾನು ಕಾಣ್ತಾ ಇದ್ದೀನಿ” ವೆಂಕಟೇಶ್‌ಗೆ ಹೆಂಡತಿಯ ಬಗ್ಗೆ ಹೇಳ್ತಾ ಇದ್ದರೆ ಸಮಯದ ಪ್ರಜ್ಞೆಯೇ ಇರುತ್ತಿರಲಿಲ್ಲ.

“ಸಾರ್, ವಸು ವಸು ಅಂತ ಹೇಳ್ತೀರೇ ವಿನಾ ಅವರ ಬಗ್ಗೆ ನಂಗೆ ಏನೂ ಹೇಳೇ ಇಲ್ಲವಲ್ಲ ಸಾರ್. ನಂಗೂ ಆ ದೇವತೆ ಬಗ್ಗೆ ತಿಳ್ಕೊಬೇಕು ಅನ್ನೋ ಆಸೆ ಅವತ್ತಿನಿಂದ್ಲೂ ಕಾಡ್ತಾ ಇದೆ. ಪ್ಲೀಸ್ ಹೇಳಿ ಸರ್.”

“ಹೇಳ್ತೀನಿ, ನನ್ನ ವಸು ಬಗ್ಗೆ ಎಲ್ಲಾ ಹೇಳೀನಿ, ಕೇಳು ರಿತು” ಹೇಳಲಾರಂಭಿಸಿದರು. ವೆಂಕಟೇಶ್ ೬೦ ವರ್ಷಗಳ ಹಿಂದಕ್ಕೆ ಹೋದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದೆರಡು ಮಾಸಿದ ಬಳೆಗಳು
Next post ನಾಳೆ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…