ನಾಳೆ ಕೊಯ್ಲಾಗುವುದು
ಹಕ್ಕಿಗಳಿಗೆ
ಹುತ್ತರಿ ಹಾಡು
ವಿದಾಯ ಹೇಳುವುದು

ತೆನೆಗಳೊಡನೆ
ಆಟವಾಡಲು ಬರುವ
ಸುಳಿಗಾಳಿ ನಿರಾಶೆಯಿಂದ
ಮರಳಬೇಕಾಗುವುದು

ಇನ್ನಿಲ್ಲಿ ನರಿ ಊಳಿಡದು
ಇಲಿ ಬಿಲ ತೋಡದು
ಕವಣೆ ಬೀಸುವ
ಹುಡುಗರಿಗಿನ್ನು ಕೆಲಸವಿರದು

ಬೆದರು ಬೊಂಬೆಯೂ
ನಾಳೆ ತನ್ನ
ವೇಷ ಕಳಚಿಡುವುದು
ಸದ್ದುಗದ್ದಲ ಸಂಭ್ರಮ
ತನಗೆ ತಾನೆ
ಇಲ್ಲವಾಗುವುದು

ಘನವಾದ ಮೌನ
ಇಡೀ ಹೊಲವ
ಆವರಿಸುವುದು.
*****