ಪುಂಸ್ತ್ರೀ – ೧೧

ಪುಂಸ್ತ್ರೀ – ೧೧

ಕುವರಿ ಮಿಂದಳು ನೈಜ ಪ್ರೀತಿಯಲಿ

ಸರೋವರದ ಬಲಪಾರ್‍ಶ್ವದಲ್ಲೊಂದು ಪುಟ್ಟ ಗುಡ್ಡ. ಅದರಲ್ಲಿ ಅಲ್ಲಲ್ಲಿ ಗುಡಿಸಲುಗಳನ್ನು ಕಂಡ ಅಂಬೆಗೆ ತೀವ್ರ ನಿರಾಶೆಯಾಯಿತು. ಋಷ್ಯಾಶ್ರಮವಿರಬಹುದೆಂದು ಭಾವಿಸಿ ಬಂದವಳಿಗೆ ಚಿತ್ರವಿಚಿತ್ರ ವೇಷಭೂಷಣಗಳ ಜನರು ಕಾಣಿಸಿದರು. ಅವಳು ಒಂದು ಕ್ಷಣ ನಿಂತಳು. ಹಿಂದಕ್ಕೆ ಹೋಗುವುದೇ ಅಥವಾ ಮುನಿ ವಸತಿಯನ್ನು ಹುಡುಕಿಕೊಂಡು ಮುಂದುವರಿಯುವುದೆ? ಅವಳ ಮನಸ್ಸು ತುಯ್ದಾಡತೊಡಗಿತು.

ಅಂಬೆ ಗೊಂದಲದಲ್ಲಿ ಮುಳುಗಿ ಹಿಂದಕ್ಕೂ ಹೋಗದೆ, ಮುಂದಕ್ಕೂ ಹೋಗದೆ ಸ್ಥಾವರಳಾಗಿ ಬಿಟ್ಟಾಗ ಗುಡ್ಡೆಯಿಂದ ಮಕ್ಕಳು ‘ಹೋ’ ಎಂದು ಬೊಬ್ಬಿಡುತ್ತಾ ಬಂದು ಅವಳನ್ನು ಸುತ್ತುವರಿದು ವಿಚಿತ್ರವಾಗಿ ನೋಡತೊಡಗಿದರು. ಕಪ್ಪು ಕಪ್ಪು ದೇಹದ ಮಕ್ಕಳು. ಬಾಯಿ ಬಿಟ್ಟಾಗ ಫಳಕ್ಕನೆ ಮಿಂಚುವ ದೊಡ್ಡ ದೊಡ್ಡ ಹಳದಿ ಹಲ್ಲುಗಳು. ಮೂಗಿನಿಂದ ಸುರಿಯುವ ಹಳದಿ ದ್ರವ. ಕೆಲವರು ಅದನ್ನು ಸರಕ್ಕನೆ ಮೇಲೆಳೆದುಕೊಳ್ಳುತ್ತಿದ್ದರು. ಇನ್ನು ಕೆಲವರು ನಾಲಿಗೆಯಿಂದ ನಿವಾರಿಸಿಕೊಳ್ಳಲು ಯತ್ನಿಸುತ್ತಿದ್ದರು. ಎಳೆಯವಳಿದ್ದಾಗ ಅವಳೂ ಹಾಗೆ ಮಾಡಿದವಳೇ! ಅದು ನೆನಪಾಗಿ ಅಂಬೆಗೆ ಒಮ್ಮೆಲೇ ನಗುವುಕ್ಕಿ ಬಂತು. ಕಾಶಿಯಿಂದ ಹೊರಟಲ್ಲಿಂದ ಇಲ್ಲಿಯ ವರೆಗೆ ಒಂದೇ ಒಂದು ಸಲ ಮುಕ್ತವಾಗಿ ನಗಲು ಸಾಧ್ಯವಾಗದ್ದು ನೆನಪಾಯಿತು. ನಾಗರಿಕತೆಯ ಸೋಂಕೇ ಇಲ್ಲದ ಮಕ್ಕಳನ್ನು ನೋಡಿ ಅವಳಿಗೆ ಎಳವೆಯ ದಿನಗಳು ಮತ್ತೆ ಮತ್ತೆ ನೆನಪಾದವು. ತುಂಬಾ ನಗಬೇಕನಿಸಿತು.

ಒಂದಿಬ್ಬರು ಮಕ್ಕಳ ಮೂಗನ್ನು ಹಿಂಡುತ್ತಾ ಅವಳು ನಗತೊಡಗಿದಳು. ಅವಳ ನಗು ಮಕ್ಕಳಲ್ಲಿ ನಗುವುಕ್ಕಿಸಿತು. ಕಾಶಿಯ ರಾಜಭವನದಲ್ಲಿ ಮುಕ್ತವಾಗಿ ನಗಲು ಆಗುತ್ತಿರಲಿಲ್ಲ. ಹಸ್ತಿನಾವತಿಯಲ್ಲಿ ಮತ್ತು ಸೌಭದಲ್ಲಿ ನಗು ಬರಲು ಸಾಧ್ಯವಿರಲಿಲ್ಲ. ಇಲ್ಲಿ ಎಷ್ಟು ಬೇಕಾದರೂ ನಗಬಹುದು. ನಗುವಿಗಿರುವ ಶಕ್ತಿಯನ್ನು ಕಂಡುಕೊಂಡ ಅಂಬೆ ಮುಕ್ತವಾಗಿ ನಕ್ಕು ಹಗುರಾದಳು.

ಮಕ್ಕಳ ಗದ್ದಲ ಕೇಳಿ ಹಿರಿಯರು ಕೆಲವರು ಗುಡ್ಡವಿಳಿದು ಬಂದರು. ಅವರಾಡುತ್ತಿದ್ದ ಭಾಷೆ ಅಂಬೆಗೆ ಅರ್ಥವೇ ಆಗುತ್ತಿರಲಿಲ್ಲ. ಅವರು ತನ್ನನ್ನು ಎಲ್ಲಿಯವಳೆಂದು ಕೇಳುತ್ತಿರಬಹುದೆಂದು ಭಾವಿಸಿ ಉತ್ತರದ ಕಡೆ ಕೈ ತೋರಿಸಿ ಕಾಶಿ, ಕಾಶಿ ಎಂದು ಎರಡು ಸಲ ಹೇಳಿದಳು. ಅವಳನ್ನು ಸುತ್ತುವರಿದ ಹೆಂಗಸರು ಅವಳ ಕೈ ಹಿಡಿದುಕೊಂಡು ಗುಡ್ಡದತ್ತ ನಡೆದರು. ಇರುವುದರಲ್ಲಿ ದೊಡ್ಡದಾದ ಮನೆಯೊಂದಕ್ಕೆ ಅವಳನ್ನು ಕರೆದೊಯ್ದರು.

ಮನೆಯೊಳಗಿನಿಂದ ವೃದ್ಧ ದಂಪತಿ ಹೊರಗಡೆ ಬಂದರು. ಅವರು ಸ್ವಲ್ಪ ಸುಸಂಸ್ಕೃತರಂತೆ ಕಾಣುತ್ತಿದ್ದರು. ಆ ವೃದ್ಧ ಕೇಳಿದ್ದೇನೆಂದು ಅವಳಿಗೆ ಅರ್ಥವಾಗದೆ ಮತ್ತೆ ಮತ್ತೆ ಕಾಶಿ ಎಂದಾಗ ವೃದ್ಧನ ಮುಖದಲ್ಲಿ ನಗು ಮೂಡಿತು. ಅವನಿಗೆ ಕಾಶಿ ಗೊತ್ತಿರಬೇಕು. ಅವನು ಉಳಿದವರೊಡನೆ ಏನನ್ನೋ ಹೇಳಿದ. ಆ ಮಾತುಗಳಲ್ಲಿ ಗಿರಿನಾಯಕ ಎಂಬ ಹೆಸರು ಅವಳ ಮನಸ್ಸಿನಲ್ಲುಳಿದು ಬಿಟ್ಟಿತು. ಅವಳೊಬ್ಬಳು ಅಲ್ಲಿರುವುದನ್ನೇ ಮರೆತಂತೆ ಅವರೆಲ್ಲಾ ತಮ್ಮತಮ್ಮಲ್ಲೇ ಮಾತುಕತೆಯಲ್ಲಿ ತಲ್ಲೀನರಾಗಿಬಿಟ್ಟರು.

ಕಾಶಿಯಲ್ಲಿ ಅವಳು ವೇಷಪಲ್ಲಟ ಮಾಡಿ ನಗರವನ್ನು ಸುತ್ತುತ್ತಿದ್ದಳು. ಉಪವನಗಳಲ್ಲಿ ಸಂಚರಿಸುತ್ತಿದ್ದಳು. ಜನವಸತಿಗಳನ್ನು ದೂರದಿಂದಲೇ ಕಂಡು ಅವುಗಳ ಬಗ್ಗೆ ಅವಳದೇ ಆದ ಕಲ್ಪನೆಗಳನ್ನು ಬೆಳೆಸಿಕೊಂಡಿದ್ದಳು. ಅವುಗಳ ಒಳಹೊಕ್ಕು ಹೆಚ್ಚು ತಿಳಿದುಕೊಳ್ಳ ಬೇಕೆಂದು ಅವಳಿಗೆ ಒಮ್ಮೆಯೂ ಅನ್ನಿಸಿದ್ದಿಲ್ಲ. ಇಂದು ಹಸ್ತಿನಾವತಿಯ ರಥದಿಂದಿಳಿದು ಸರೋವರದ ದಂಡೆಯನ್ನು ಬಳಸಿ ಎತ್ತರದ ಈ ಗಿರಿಪ್ರದೇಶಕ್ಕೆ ಬರುತ್ತಿರುವಾಗ ಎಲ್ಲವನ್ನೂ ಗಮನಿಸಲು ಅವಳಿಗೆ ಸಾಧ್ಯವಾಯಿತು. ಗಿರಿಯ ಜನರಿಗೆ ಪ್ರಾಣಿಪಕ್ಷಿಗಳ ಮೇಲಿರುವ ಅಗಾಧ ಪ್ರೀತಿಯ ಅರಿವಾಯಿತು. ಅವಳನ್ನವರು ಕರೆತಂದದ್ದು ಅವರ ನಾಯಕನ ಮನೆಗಿರಬೇಕೆಂದುಕೊಂಡಳು. ಅದು ಅನುಕೂಲಸ್ಥರ ಮನೆಯಂತಿತ್ತು. ಆದರೆ ಅಲ್ಲಿ ಕೋಳಿಗಳು, ಬಾತುಕೋಳಿಗಳು, ನಾಯಿಗಳು, ಬೆಕ್ಕುಗಳು ಸ್ವಚ್ಛಂದವಾಗಿ ಮನೆಯೊಳಗೆ ಎಲ್ಲಿ ಬೇಕೆಂದರಲ್ಲಿ ಓಡಾಡಿಕೊಂಡಿದ್ದವು. ಮನೆಯೊಳಗೇ ಆಡು, ಕುರಿ, ಎತ್ತು, ದನಕರು, ಎಮ್ಮೆ ಕೋಣಗಳನ್ನು ಕಟ್ಟಿಹಾಕಿದ್ದರು. ಆದರೂ ಮನೆ ಶುಭ್ರವಾಗಿತ್ತು.

ಅವಳಿಗೆ ಕಾಶಿಯ ನೆನಪಾಯಿತು. ಅಲ್ಲಿ ಧಿಮಿಗುಡುವ ಯಾತ್ರಿಕರಿಂದಾಗಿ ಎಲ್ಲೆಲ್ಲೂ ಕೊಳಕೇ ಕೊಳಕು. ಪವಿತ್ರ ಗಂಗಾನದಿ ತಟದುದ್ದಕ್ಕೆ ಮಾನವ ವಿಸರ್ಜನೆಗಳ ದುರ್ನಾತ. ಅವಳು ಶುದ್ಧ ಗಾಳಿ ಸೇವನೆಗೆಂದೇ ಉಪವನಕ್ಕೆ ಹೋಗುತ್ತಿದ್ದಳು. ಗಂಗಾನದಿಯಲ್ಲಿ ಆಗಾಗ ಹೆಣಗಳು ತೇಲಿಹೋಗುವುದನ್ನು ಕಂಡ ಮೇಲೆ ಉಪವನದ ಸರೋವರದಲ್ಲಿ ಈಜತೊಡಗಿದಳು. ಪರಿಸರ ಪಾವಿತ್ರ್ಯವಿಲ್ಲದಲ್ಲಿ ದೇವರು ಇರಲು ಸಾಧ್ಯವಿಲ್ಲ. ಇವರು ಭಾಗ್ಯಶಾಲಿಗಳು. ದಿನಾ ಶುದ್ಧ ಗಾಳಿ ಮತ್ತು ನೀರು ಸೇವಿಸುತ್ತಾರೆ. ಸರೋವರದ ದಂಡೆಯಲ್ಲಿ ಎಲ್ಲೂ ಮಾನವ ವಿಸರ್ಜನೆ ಕಾಣಲಿಲ್ಲ. ದುರ್ನಾತ ಮೂಗಿಗೆ ಅಪ್ಪಳಿಸಲಿಲ್ಲ. ನೋಡಿದರೆ ಇವರಲ್ಲಿ ಯಾರೂ ಶಿಕ್ಷಿತರಿಲ್ಲ. ಇವರು ದೇವರನ್ನು ಅರ್ಥ ಮಾಡಿಕೊಂಡಿದ್ದಾರೆ. ಪ್ರಕೃತಿಯೇ ದೇವರು! ಇವರು ಪ್ರಕೃತಿಯನ್ನು ಪ್ರೀತಿಸುತ್ತಾರೆ; ಪ್ರಕೃತಿಯಿಂದ ಕಲಿಯುತ್ತಾರೆ. ಹಾಗೆ ಕಲಿತವರು ಪ್ರಕೃತಿಯನ್ನು ಪ್ರೀತಿಯಿಂದ ಸಂರಕ್ಷಿಸಲು ಕಲಿತಿರುತ್ತಾರೆ.

‘ಗಿರಿನಾಯಕ, ಗಿರಿನಾಯಕ’ ಎಂದು ಅಲ್ಲಿದ್ದವರ ಅಭಿಮಾನಪೂರ್ವಕ ಕರೆ ಕೇಳಿ ಅಂಬೆ ಅತ್ತ ನೋಡಿದಳು. ಎತ್ತರದ, ಸದೃಢ ಶರೀರದ, ಗಿರಿನಾಯಕ ಬರುತ್ತಿದ್ದ. ಅವಳನ್ನು ನೋಡಿ ನಗುತ್ತಾ ಗೌರವದಿಂದ ನಮಸ್ಕರಿಸಿದ: “ನಿಮ್ಮನ್ನು ಇಲ್ಲಿ ನೋಡಿ ನನಗೆ ಆಶ್ಚರ್ಯವಾಗುತ್ತಿದೆ. ನೀವು ಎಲ್ಲೋ ದಾರಿ ತಪ್ಪಿ ಈ ಗಿರಿಗೆ ಬಂದಂತಿದೆ. ಒಬ್ಬಂಟಿಯಾಗಿ ನಿಮ್ಮಂಥ ಸುಕೋಮಲೆ ಈ ಕಾಡಿಗೆ ಬಂದದ್ದಾದರೂ ಹೇಗೆ? ಹ್ಹೊ! ಕ್ಷಮಿಸಿ. ಮರೆತೇ ಬಿಟ್ಟೆ. ಮುಖ ನೋಡಿದರೆ ಹೊಟ್ಟೆ ಖಾಲಿಯಾಗಿದೆಯೆಂದು ಗೊತ್ತಾಗುತ್ತದೆ. ಮನೆಯೊಳಗೆ ಏನೇನಿದೆಯೋ ಗೊತ್ತಿಲ್ಲ. ಇರುವುದನ್ನು ತಿಂದೇ ಮಾತಾಡುವಿರಂತೆ.”

ಅವನು ಸಂಸ್ಕೃತದಲ್ಲಿ ಮಾತಾಡಿದ್ದ. ಶಾಸ್ತ್ರ ಶಿಕ್ಷಣದಿಂದಾಗಿ ಅವಳಿಗದು ಚೆನ್ನಾಗಿ ಬರುತ್ತಿತ್ತು. ಅದನ್ನು ಶೂದ್ರರು ಮತ್ತು ಸ್ತ್ರೀಯರು ಕಲಿಯಬಾರದೆಂಬ ನಿರ್ಬಂಧವಿತ್ತು. ಆರ್ಯರ ಮೂಲಭಾಷೆ ಅದೆಂದು ಹೇಳುವುದನ್ನು ಅವಳು ಕೇಳಿದ್ದಳು. ದಸ್ಯುಗಳನ್ನು ದಕ್ಷಿಣಕ್ಕೆ ಓಡಿಸಿ, ಸಮಸ್ತ ಉತ್ತರಾಪಥವನ್ನು ಆರ್ಯಾವರ್ತವಾಗಿ ಪರಿವರ್ತಿಸಿದ ಮೇಲೆ ಆರ್ಯರಿಗೆ ಏಕಭಾಷೆಯನ್ನು ಉಳಿಸಿಕೊಳ್ಳಲಾಗದೆ ಸಂಸ್ಕೃತದ ಮಹತ್ತ್ವ ಕಡಿಮೆಯಾಯಿತೆಂದು ಅವಳಿಗೆ ಶಾಸ್ತ್ರಾಭ್ಯಾಸ ಮಾಡಿಸುತ್ತಿದ್ದ ಪುರೋಹಿತ ಹೇಳುತ್ತಿದ್ದುದು ನೆನಪಾಯಿತು. ಶೂದ್ರರು ಮತ್ತು ಸ್ತ್ರೀಯರು ಸಂಸ್ಕೃತ ಕಲಿಯಬಾರದೆಂಬ ನಿರ್ಬಂಧದಿಂದಾಗಿ ಸ್ಥಳೀಯ ಭಾಷೆಗಳು ಮೇಲುಗೈ ಸಾಧಿಸಿದವು. ಕಾಶಿಯಲ್ಲಿ ಸಂಸ್ಕೃತ ಭೂಯಿಷ್ಠ ಸ್ಥಳೀಯ ಭಾಷೆ ಆಡು ಭಾಷೆಯಾಗಿತ್ತು. ಇಡೀ ಆರ್ಯಾವರ್ತದಲ್ಲಿ ಒಂದೇ ಭಾಷೆಯಿರುತ್ತಿದ್ದರೆ ಸಂವಹನಕ್ಕೆ ಸುಲಭವಾಗುತ್ತಿತ್ತು ಎಂದು ಆ ಪುರೋಹಿತ ಆಗಾಗ ಹೇಳುತ್ತಿದ್ದ. ಆದರೆ ಮಣ್ಣಿನ ಸೊಗಡು ಸೇರಿಕೊಂಡಾಗ ಭಾಷೆಗೆ ಜೀವ ಬರುವುದನ್ನು ಅವಳು ಗಮನಿಸಿದ್ದಳು. ಭಾಷೆಯ ಮೂಲಕ ಸಂಸ್ಕೃತಿಯ ಒಳಪ್ರವೇಶ ಸಾಧ್ಯವಾಗುತ್ತದೆನ್ನುವುದು ಅವಳ ಅನುಭವವಾಗಿತ್ತು. ಅರಮನೆಯ ಸೇವಕ ವರ್ಗದೊಡನೆ ಅವಳು ಅವರ ಭಾಷೆಯಲ್ಲೇ ಮಾತಾಡುತ್ತಿದ್ದಳು. ಆಗ ಅಂತಸ್ತು ಅಳಿಸಿಹೋಗುತ್ತಿತ್ತು. ಇಲ್ಲೂ ಹಾಗೇ ಆಯಿತು. ಸಂಸ್ಕೃತದಲ್ಲಿ ಮಾತಾಡಿ ಗಿರಿನಾಯಕ ಒಂದೇ ಸಲಕ್ಕೆ ಅವಳಿಗೆ ಹತ್ತಿರಾಗಿಬಿಟ್ಟ.

ಗಿರಿನಾಯಕ ಹೊಟ್ಟೆಯನ್ನು ನೆನಪಿಸಿದಾಗ ಹಸಿವು ಭುಗಿಲ್ಲೆಂದಿತು. ಬೆಳಗ್ಗಿನಿಂದ ಅವಳ ಹೊಟ್ಟೆಗೆ ಏನೂ ಬಿದ್ದಿರಲಿಲ್ಲ. ಅಸಲು ಅವಳಿಗೊಂದು ಹೊಟ್ಟೆಯಿರುವುದನ್ನೇ ಅವಳು ಮರೆತಿದ್ದಳು. ಹಸ್ತಿನಾವತಿಯಲ್ಲಿ ಭೀಷ್ಮರಿಗೆ ಅವರ ಪ್ರತಿಜ್ಞೆಯೇ ದೊಡ್ಡದೆನಿಸಿತು. ಸೌಭದಲ್ಲಿ ಸಾಲ್ವಭೂಪತಿಗೆ ಅವನ ಪ್ರತಿಷ್ಟೆ ಮುಖ್ಯವಾಯಿತು. ಈ ಗಿರಿನಾಯಕನನ್ನು ಅನ್ಯರ ಹೊಟ್ಟೆಯ ಪ್ರಶ್ನೆ ಕಾಡಿತು. ನಿಜಕ್ಕೂ ಕಾಡುಮನುಷ್ಯರು ಯಾರು?

ಒಳಗಿನಿಂದ ಗಿರಿನಾಯಕನ ತಾಯಿ, ಬೇಯಿಸಿದ ಕಾಡಗೆಣಸನ್ನು ಎಲೆಯಲ್ಲಿ ತಂದಿತ್ತಳು. ದೊನ್ನೆಯಲ್ಲಿ ಹಾಲಿತ್ತು. ಅಂಬೆ ಅವಳನ್ನು ಪರಿಶೀಲನೆಯ ದೃಷ್ಟಿಯಿಂದ ನೋಡಿದಳು. ಆಕೆ ನಗುತ್ತಾ ಕಾಡುಗೆಣಸನ್ನು ತೋರಿಸಿ ಏನನ್ನೋ ಹೇಳಿದಳು. ಆಕೆ ಹಲ್ಲುಗಳಿಗೆ ಅದೇನೋ ಕಪ್ಪು ಹಚ್ಚಿಕೊಂಡಿದ್ದಳು. ಸೀರೆ ಉಟ್ಟು ಅದರ ಮೇಲ್ತುದಿಗಳನ್ನು ಎರಡೂ ಭುಜಗಳಿಗೆ ಗಂಟು ಹಾಕಿ ಸಿಕ್ಕಿಸಿದ್ದಳು. ಮೇಲುಭಾಗಕ್ಕೆ ಏನನ್ನೂ ತೊಟ್ಟಿರಲಿಲ್ಲ. ಆಕೆಯ ಕೃಷ್ಣವರ್ಣದ ಸ್ತನಗಳನ್ನು ಸೀರೆ ಪೂರ್ತಿ ಮುಚ್ಚಿರಲಿಲ್ಲ. ಅರುವತ್ತರ ಸನಿಹದಲ್ಲಿರಬಹುದು. ಸ್ತನಗಳು ಜೋತು ಬಿದ್ದಿರಲಿಲ್ಲ! ನಾನಾ ಬಣ್ಣದ ಮಣಿಗಳ ಮತ್ತು ಕಾಯಿಗಳ ಮಾಲೆ ತೊಟ್ಟಿದ್ದಳು. ಮೂಗಿನ ಎರಡು ಹೊಳ್ಳೆಗಳಿಗೆ ದೊಡ್ಡ ವೃತ್ತಾಕಾರದ ಆಭರಣ ಸಿಕ್ಕಿಸಿಕೊಂಡಿದ್ದಳು. ಚಿತ್ರ ವಿಚಿತ್ರ ಆಭರಣಗಳ ಭಾರಕ್ಕೆ ಕಿವಿ ಜೋತು ಬಿದ್ದಿತ್ತು. ಇಂಥವನ್ನೆಲ್ಲಾ ಕಾಶಿಯಲ್ಲಿ ಕಂಡಿರದ ಅಂಬೆ ಆಕೆಯ ವೇಷಭೂಷಣ ನೋಡುತ್ತಾ ಮೈಮರೆತಿರುವಾಗ ಗಿರಿನಾಯಕನೆಂದ: “ನೀವು ಪಟ್ಟಣದವರು. ಈ ಕಾಡಗೆಣಸು ಮತ್ತು ಆಡಹಾಲು ನಿಮಗೆ ಸೇರುತ್ತದೆಯೋ ಇಲ್ಲವೋ ಎಂದು ಅಮ್ಮ ಸಂಕೋಚಪಟ್ಟುಕೊಳ್ಳುತ್ತಿದ್ದಾಳೆ. ರಾತ್ರಿಗೆ ಬೇರೇನನ್ನಾದರೂ ಮಾಡಿಕೊಡುತ್ತಾಳಂತೆ.”

ಅಂಬೆಗೆ ಆಶ್ಚರ್ಯವಾಯಿತು. ಅಮ್ಮನೇ ಅಡುಗೆ ಮಾಡುತ್ತಾಳೆಂದರೆ ಈ ಗಿರಿನಾಯಕನಿಗೆ ಇನ್ನೂ ಮದುವೆಯಾಗಿಲ್ಲವೆಂದ ಹಾಗಾಯಿತು. ಇವನು ಇನ್ನೂ ಮದುವೆಯಾಗಿಲ್ಲವೆಂದರೆ ಇವನ ಹಿಂದೆ ಅದೇನು ಕತೆಯಿದೆಯೊ? ಅವಳು ಜೀವನದಲ್ಲಿ ಒಮ್ಮೆಯೂ ಆಡಿನ ಹಾಲು ಕುಡಿದವಳಲ್ಲ. ಕಾಶಿಯಲ್ಲಿ ಮರಗೆಣಸು ಮತ್ತು ಬಳ್ಳಿಗೆಣಸು ಮಾರಾಟಕ್ಕೆ ಸಿಗುತ್ತಿದ್ದವು. ಬಳ್ಳಿ ಗೆಣಸು ವಾಯು ಪ್ರಕೋಪವನ್ನುಂಟು ಮಾಡುತ್ತದೆಂದೂ, ಮರಗೆಣಸು ಅತ್ಯಂತ ಪೌಷ್ಟಿಕ ಆಹಾರವೆಂದೂ ರಾಜವೈದ್ಯರು ಅವಳಿಗೆ ತಿಳಿಸಿದ್ದರು. ಅವಳಿಗೆ ಎರಡೂ ಗೆಣಸುಗಳ ರುಚಿ ನೋಡಬೇಕೆಂಬ ಆಸೆ ಆಗಾಗ ಮೂಡುತ್ತಿತ್ತು. ಆದರೆ ಅವನ್ನು ಅರಮನೆಗೆ ತರಿಸಲು ಅಪ್ಪ ಒಪ್ಪುತ್ತಿರಲಿಲ್ಲ. ಅದು ಗತಿಗೆಟ್ಟವರ ಆಹಾರವೆಂದು ಅವಳ ಬೇಡಿಕೆಯನ್ನು ತಳ್ಳಿ ಹಾಕಿದ್ದ. ಆಹಾರವು ಅಂತಸ್ತನ್ನು ನಿರ್ಧರಿಸುತ್ತದೆಂದು ಅವಳಿಗೆ ಗೊತ್ತಾದದ್ದೇ ಅಂದು!

ಗಿರಿನಾಯಕನ ಅಮ್ಮ ಕೊಟ್ಟ ಗೆಣಸನ್ನು ತಿನ್ನುತ್ತಾ ಅಂಬೆಯೆಂದಳು: “ಜೀವನದಲ್ಲಿ ಮೊದಲ ಬಾರಿ ನಾನು ಗೆಣಸನ್ನು ತಿನ್ನುತ್ತಿದ್ದೇನೆ. ನನಗಿದು ತುಂಬಾ ಹಿಡಿಸಿದೆ. ನಾವು ಪಟ್ಟಣಿಗರು ಪೊಳ್ಳು ಅಂತಸ್ತಿನ ಹೆಸರಲ್ಲಿ ಎಷ್ಟೋ ಅನುಭೋಗಗಳಿಂದ ಮತ್ತು ಅನುಭವಗಳಿಂದ ವಂಚಿತರಾಗುತ್ತೇವೆ. ನಿಮ್ಮನ್ನೆಲ್ಲಾ ನೋಡಿದ ಮೇಲೆ ನಾವು ಜೀವನದಲ್ಲಿ ಕಳಕೊಂಡದ್ದೇ ಹೆಚ್ಚು ಎಂದೆನ್ನಿಸುತ್ತದೆ. ಪಟ್ಟಣದಲ್ಲಿ ನಮ್ಮದು ಕೃತ್ರಿಮ ಬದುಕು. ಮುಕ್ತ ಮಾತಿಲ್ಲ; ನಗುವಿಲ್ಲ. ಶುದ್ಧವಾದ ಗಾಳಿ, ನೀರು ಯಾವುದೂ ಇಲ್ಲ. ಪ್ರಕೃತಿಯ ಮಕ್ಕಳಾಗಿ ಸಹಜವಾಗಿ ಬಾಳುವುದೇ ಭಾಗ್ಯ. ಆದರೆ ಈ ಪ್ರಾಣಿ ಪಕ್ಷಿಗಳನ್ನೆಲ್ಲಾ ಮನೆಯೊಳಗೇ ಬಿಟ್ಟುಕೊಂಡಿದ್ದೀರಲ್ಲಾ? ಅವುಗಳ ವಿಸರ್ಜನೆ ಅಸಹ್ಯವಾಗುವುದಿಲ್ಲ?”

ಗಿರಿನಾಯಕ ನಕ್ಕ: ನಿಮಗೆ ಪಟ್ಟಣಿಗರಿಗೆ ಕಾಡು ಖುಷಿ ಕೊಡುತ್ತದೆ. ಇಲ್ಲಿನ ಅರಣ್ಯ ವಾಸಿಗಳಲ್ಲಿ ಪಟ್ಟಣವಾಸದ ಕನಸನ್ನು ಕಾಣುವವರು ತುಂಬಾ ಮಂದಿ ಇದ್ದಾರೆ. ಇರುವುದನ್ನು ನಿರ್ಲಕ್ಷಿಸಿ ಇಲ್ಲದೆ ಇರುವುದರ ಬಗ್ಗೆ ತುಡಿಯುವುದು ಮಾನವ ಸಹಜ ಗುಣ. ನೀವಂದ ಹಾಗೆ ಇಲ್ಲಿನ ಗಾಳಿ, ನೀರು ಶುದ್ಧವಾಗಿವೆ. ಹಾಗೆಯೇ ಮಾನವ ಹೃದಯಗಳೂ. ಮತ್ತೆ ಪ್ರಾಣಿ ಪಕ್ಷಿಗಳನ್ನು ಒಳಗೇ ಬಿಟ್ಟುಕೊಳ್ಳುವುದೇಕೆ ಗೊತ್ತೆ? ಅವನ್ನು ಹೊರಗೆ ಬಿಡುವಾಗ ಯಾರನ್ನಾದರೂ ಕಾವಲಿಗಿರಿಸಲೇಬೇಕು. ಇಲ್ಲದಿದ್ದರೆ ಕೋಳಿಗಳು ಮತ್ತು ಬಾತುಗಳು ಕಾಡುಬೆಕ್ಕುಗಳ, ನರಿಗಳ ಪಾಲಾಗುತ್ತವೆ. ಕಿರುಬ, ಚಿರತೆ ಮತ್ತು ಹುಲಿಗಳು ನಮ್ಮ ಆಡು, ದನಕರುಗಳನ್ನು ತಿಂದುಬಿಡುತ್ತವೆ. ಮಧ್ಯಾಹ್ನದವರೆಗೆ ಇವನ್ನು ಹೊರಗೊಯ್ದು ಮೇಯಿಸುತ್ತೇವೆ. ಸಂಜೆಯ ಬಳಿಕವಷ್ಟೇ ಇವುಗಳಿಗೆ ಗೃಹಬಂಧನ. ಮತ್ತೆ ಇವುಗಳ ವಿಸರ್ಜನೆ ಅಸಹ್ಯವಾಗುವುದಿಲ್ಲವೇ ಎಂದು ಕೇಳಿದಿರಿ. ನಿಜ ಹೇಳಬೇಕೆಂದರೆ ಮಾನವ ವಿಸರ್ಜನೆಯಷ್ಟು ಪ್ರಾಣಿಗಳ ವಿಸರ್ಜನೆ ಅಸಹ್ಯವಾಗಿರುವುದಿಲ್ಲ.”

ಅಂಬೆಗೆ ತಡೆಯಲಾಗದಷ್ಟು ನಗು ಬಂತು. ಅವಳಿಗೆ ಕಾಶಿಯ ಪರಿಸರ ನೆನಪಾಯಿತು. ತಮ್ಮ ಈಗಿನ ಸ್ಥತಿಗೆ ಸಂಚಿತ ಪಾಪಗಳೇ ಕಾರಣವೆಂದು ಭಾವಿಸುವ ಭಾವುಕರು ಕರ್ಮಫಲ ವಿಮುಕ್ತಿಗೆಂದೇ ಎಲ್ಲೆಲ್ಲಿಂದಲೋ ಅಲ್ಲಿಗೆ ಬರುತ್ತಿರುತ್ತಾರೆ. ವಿದ್ಯಾಪೀಠವೊಂದಿರುವುದರಿಂದ ಪಂಡಿತರ ಮತ್ತು ವಿದ್ಯಾರ್ಥಿಗಳ ಸಂಖ್ಯೆಯೂ ಸಾಕಷ್ಟಿದೆ. ಅವರು ಎಲ್ಲೆಲ್ಲೋ ವಿಸರ್ಜನೆ ಮುಗಿಸಿ ಗಂಗೆಯಲ್ಲಿ ಮುಳುಗು ಹಾಕಿ ಪಾಪ ಪರಿಹಾರವಾಯಿತೆಂದು ಭಾವಿಸುತ್ತಾರೆ. ನದಿ ದಂಡೆಯಲ್ಲಿ ಸಂಚರಿಸುವಾಗ ಆ ವಾಸನೆ ಅಷ್ಟು ದೂರಕ್ಕೇ ಮೂಗಿಗೆ ರಾಚಿ ಹೊಟ್ಟೆ ತೊಳಸಿದಂತಾಗಿ ವಾಂತಿ ಬರುತ್ತದೆ. ದನಕರುಗಳ ವಿಸರ್ಜನೆಯನ್ನು ಯಾರೂ ಅಸಹ್ಯಿಸುವುದಿಲ್ಲ. ಭಾವುಕರು ಅವನ್ನು ತೀರ್ಥಪ್ರಸಾದದಂತೆ ಸೇವಿಸುತ್ತಾರೆ. ನಾಯಿಗಳ ವಿಸರ್ಜನೆಯೂ ಮಾನವ ವಿಸರ್ಜನೆಯಷ್ಟು ಕೊಳಕಲ್ಲ. ಅದನ್ನು ನೆನೆದು ಅಂಬೆ ಮತ್ತೊಮ್ಮೆ ನಕ್ಕಳು.

ಗಿರಿನಾಯಕ ಅವಳ ನಗುವಿನಲ್ಲಿ ಪಾಲ್ಗೊಂಡು ಹೇಳಿದ: “ನಾನಾರೆಂಬುದು ನಿಮಗೀಗ ಗೊತ್ತಾಗಿರಬೇಕು. ಈ ಗಿರಿನಗರಿಯ ನಾಯಕ ನಾನು. ಏಕಲವ್ಯನೆನ್ನುವುದು ನನ್ನ ನಿಜ ನಾಮಧೇಯ. ಅದು ನನ್ನ ಅಜ್ಜನಿಂದ ನನಗೆ ಬಂದ ಹೆಸರಂತೆ. ಅದನ್ನೇ ನನ್ನ ಮೊಮ್ಮಗನಿಗಿಡಬೇಕಂತೆ. ನನ್ನ ನಿಜ ಹೆಸರು ನನಗೀಗ ಮರೆತೇ ಹೋಗಿದೆ. ಎಲ್ಲರೂ ನನ್ನನ್ನು ಗಿರಿನಾಯಕಾ ಎಂದು ಕರೆಯುತ್ತಾರೆ. ನನ್ನ ಮೂಲ ಹೆಸರು ನೆನಪಾಗಬೇಕಾದರೆ ನಿಮ್ಮಂಥವರು ಯಾರಾದರೂ ಬರಬೇಕು. ನಿಮ್ಮನ್ನು ನೋಡಿದರೆ ದೊಡ್ಡವರ ಮನೆಯ ಹೆಣ್ಣುಮಗಳ ಹಾಗೆ ಕಾಣಿಸುತ್ತೀರಿ. ಇಲ್ಲಿಗೆ ಯಾಕೆ ಬಂದಿರೊ?”

ಅವಳಾಗ ಎಲ್ಲವನ್ನೂ ಹೇಳಲೇಬೇಕಾಯಿತು. ಶೌರ್ಯವನ್ನು ಪಣವಾಗಿರಿಸಿ ಅಪ್ಪ ಸ್ವಯಂವರವನ್ನು ಏರ್ಪಡಿಸಿದ್ದು, ಸರೋವರದಲ್ಲಿ ಅನೂಹ್ಯವಾಗಿ ಸಾಲ್ವಭೂಪತಿಯನ್ನು ಭೇಟಿಯಾಗಿ ಪ್ರೀತಿ ಮೊಳಕೆಯೊಡೆದದ್ದು, ಸ್ವಯಂವರ ಮಂಟಪದಲ್ಲಿ ಸಾಲ್ವಭೂಪತಿ ಎಲ್ಲರನ್ನೂ ಸೋಲಿಸಿದಾಗ ಭೀಷ್ಮರು ಬಿರುಗಾಳಿಯಂತೆ ನುಗ್ಗಿ ಬಂದದ್ದು, ತಂಗಿಯಂದಿರೊಡನೆ ಭೀಷ್ಮರ ರಥವೇರಿ ಹಸ್ತಿನಾವತಿಗೆ ಹೋದದ್ದು, ಭೀಷ್ಮರು ಪ್ರತಿಜ್ಞೆಯಿಂದಾಗಿ ಮತ್ತು ಸಾಲ್ವಭೂಪತಿ ಪ್ರತಿಷ್ಠೆಯಿಂದಾಗಿ ಅವಳನ್ನು ನಿರಾಕರಿಸಿದ್ದು, ಕೊನೆಗೆ ಇನ್ನೇನೂ ತೋಚದೆ ಎಲ್ಲಾದರೂ ಋಷಿಮುನಿಗಳ ಆಶ್ರಮದಲ್ಲಿ ಶೇಷಾಯುಷ್ಯವನ್ನು ಕಳೆಯಲು ನಿರ್ಧರಿಸಿ ಈ ಕಡೆಗೆ ಬಂದದ್ದು.

ಗಿರಿನಾಯಕ ಎಲ್ಲವನ್ನೂ ಗಂಭೀರವಾಗಿ ಆಲಿಸಿ ನಿಟ್ಟುಸಿರು ಬಿಟ್ಟು ಹೇಳಿದ: “ನಿಮ್ಮನ್ನು ನೋಡಿದಾಗ ರಾಜಕುಮಾರಿಯೇ ಇರಬೇಕೆಂದುಕೊಂಡಿದ್ದೆ. ನನ್ನೂಹೆ ನಿಜವಾಗಿದೆ. ಆದರೆ ನಿಮ್ಮ ಹಿಂದೆ ಇಷ್ಟೊಂದು ಕತೆಯಿರುತ್ತದೆಂದು ನಾನಂದುಕೊಂಡಿರಲಿಲ್ಲ. ಭೀಷ್ಮ ಮತ್ತು ಸಾಲ್ವ ತಾವೇ ನೇದುಕೊಂಡ ಬಲೆಗಳಲ್ಲಿ ಸಿಕ್ಕಿ ಹಾಕಿಕೊಂಡು ಒದ್ದಾಡುತ್ತಿದ್ದಾರೆ. ಈ ಎಳೆಯ ವಯಸ್ಸಲ್ಲಿ ನಿಮಗೆ ಹೀಗಾಗಬಾರದಿತ್ತು. ನಿಮ್ಮ ರೂಪ, ಯೌವ್ವನ, ಧೈರ್ಯ ವ್ಯರ್ಥವಾಗಬಾರದು. ನನ್ನಿಂದ ನಿಮಗೇನಾದರೂ ಸಹಾಯವಾದೀತೇನೊ?”

ಅಂಬೆಗೆ ನಗದಿರಲು ಸಾಧ್ಯವಾಗಲಿಲ್ಲ: “ಗಿರಿನಾಯಕಾ, ನಿನ್ನ ಮಾತಿಗೆ ನಕ್ಕದ್ದಕ್ಕೆ ಕ್ಷಮಿಸು. ಆರ್ಯಾವರ್ತದ ಅತಿಬಲಿಷ್ಠ ಸಾಮ್ರಾಜ್ಯದ ಸಂರಕ್ಷಕ ಭೀಷ್ಮರಿಂದ ನನ್ನ ಸಮಸ್ಯೆಗೆ ಪರಿಹಾರ ದೊರೆಯಲಿಲ್ಲ. ಸ್ವಾಭಿಮಾನದಿಂದ ಸೌಭದೇಶವನ್ನು ಕಟ್ಟಿದ ದಸ್ಯುರಾಜ ಸಾಲ್ವಭೂಪತಿಗೆ ನನ್ನ ಸಮಸ್ಯೆಯನ್ನು ಪರಿಹರಿಸಲಾಗಲಿಲ್ಲ. ಇನ್ನು ಈ ಗಿರಿಪ್ರದೇಶದ ಹತ್ತೋ, ಇಪ್ಪತ್ತೋ ಕುಟುಂಬಗಳ ನಾಯಕನಿಂದ ನನ್ನ ಸಮಸ್ಯೆ ಪರಿಹಾರವಾಗುವುದುಂಟೆ? ಕಳೆದು ಹೋದ ದಿನಗಳನ್ನು ಮರೆಯಲೆಂದೇ ಇಲ್ಲಿಗೆ ಬಂದವಳು ನಾನು. ಮತ್ತೆ ಅದನ್ನು ಜ್ಞಾಪಿಸಬೇಡ. ಅದಿರಲಿ. ನಿನಗೆ ಇಷ್ಟು ಚೆನ್ನಾಗಿ ಸಂಸ್ಕೃತ ಬರುತ್ತದಲ್ಲಾ? ಅದು ಹೇಗೆ?”

ಅಂಬೆಯ ಪ್ರಶ್ನೆಗೆ ಗಿರಿನಾಯಕ ಉತ್ತರಿಸಿದ: “ನೀವು ನಕ್ಕದ್ದಕ್ಕೆ ನನಗೆ ಬೇಸರವೇನಿಲ್ಲ ರಾಜಕುಮಾರಿ. ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡುವುದನ್ನು ಧರ್ಮವೆಂದು ತಿಳಿದು ಕೊಂಡಿರುವವನು ನಾನು. ನನ್ನಿಂದ ನಿಮ್ಮ ಸಮಸ್ಯೆಯನ್ನು ಪರಿಹರಿಸಲಾಗದಿದ್ದರೂ ಕ್ಷೇಮವಾಗಿ ನಿಮ್ಮನ್ನು ಕಾಶಿಗೆ ತಲುಪಿಸಬಲ್ಲೆ. ಕಾಶಿ ನನಗೆ ಪರಿಚಿತ ನಗರ. ನಾನು ಸಂಸ್ಕೃತ ಕಲಿತದ್ದೇ ಕಾಶಿಯಲ್ಲಿ.”

ಆಶ್ಚರ್ಯದಿಂದ ಅಂಬೆಯೆಂದಳು: “ಗಿರಿನಾಯಕಾ, ನೀನು ಕಾಶಿಗೆ ಹೋಗಿ ಸಂಸ್ಕೃತ ಕಲಿತದ್ದು ಬಹುದೊಡ್ಡ ಸಾಧನೆ. ಆದರೆ ನೀನು ಅಷ್ಟು ದೂರಕ್ಕೆ ಹೋಗಿ ಕಲಿಯಬೇಕಾಗಿ ಬಂದ ಪ್ರಮೇಯವೇನು?”

ಗಿರಿನಾಯಕ ಮುಂದುವರಿಸಿದ: “ಸ್ವಲ್ಪ ದೂರದಲ್ಲಿ ಮುನಿ ವಸತಿಯೊಂದಿದೆ. ಅಲ್ಲಿನ ಋಷಿಗಳೊಬ್ಬರನ್ನು ಎಳವೆಯಲ್ಲಿ ಭೇಟಿಯಾಗಿದ್ದೆ. ಅವರು ನನ್ನನ್ನು ಸಂಸ್ಕೃತ ಕಲಿಯೆಂದು ಪ್ರೇರೇಪಿಸಿದರು. ಹುಟ್ಟಿನಿಂದ ಜಾತಿಯಾಗಲೀ, ವರ್ಣವಾಗಲೀ ನಿರ್ಣಯವಾಗುವುದಿಲ್ಲ. ಮಾನವರೆಲ್ಲರಿಗೂ ವಿದ್ಯೆ ಕಲಿಯುವ ಹಕ್ಕಿದೆಯೆಂದು ಹೇಳಿ ನನ್ನ ಬಾಳಿಗೊಂದು ಅರ್ಥವನ್ನು ಕಲ್ಪಿಸಿದರು. ಶಾಸ್ತ್ರವಿದ್ಯಾ ಪಾರಂಗತನಾಗಬೇಕೆಂಬ ಹಂಬಲ ಅವರಿಂದಾಗಿ ನನ್ನಲ್ಲಿ ಮೂಡಿತು. ಅವರ ಕಾಲಿಗೆ ಬಿದ್ದು ವಿದ್ಯಾದಾನ ಮಾಡಿರೆಂದು ಬೇಡಿಕೊಂಡೆ. ಅವರು ಸದಾ ತಪಸ್ಸಿನಲ್ಲಿ ಮುಳುಗಿರುವವರು. ಬದುಕಿಗೆ ಅನಿವಾರ್ಯವೆನಿಸುವಷ್ಟು ಮಾತ್ರ ಲೌಕಿಕದಲ್ಲಿ ಆಸಕ್ತರು. ಅವರಿಗೆ ವಿದ್ಯಾದಾನದಲ್ಲಿ ಆಸಕ್ತಿಯಿರಲಿಲ್ಲ. ಆದರೆ ನನ್ನ ಬೆನ್ನು ತಟ್ಟಿ ‘ಲೋಕ ವಿಶಾಲವಾಗಿದೆ. ನಿನಗೆ ತಕ್ಕ ಗುರು ಸಿಕ್ಕೇ ಸಿಗುತ್ತಾರೆ’ ಎಂದು ಆಶೀರ್ವದಿಸಿದರು. ನಾನು ಕಾಡಿನ ಗೆಣಸು, ಜೇನು ಇತ್ಯಾದಿಗಳನ್ನು ಸಂಗ್ರಹಿಸಿ ಹಸ್ತಿನಾವತಿಯ ಪಂಡಿತರುಗಳಿಗೆ ಸಮರ್ಪಿಸಿ, ಸಾಷ್ಟಾಂಗ ವಂದಿಸಿ ವಿದ್ಯಾದಾನ ಮಾಡಿರೆಂದು ಬೇಡಿಕೊಂಡೆ. ನನ್ನ ಮೂಲ ಗೊತ್ತಾದ ಮೇಲೆ ಅವರು ವಿದ್ಯಾದಾನ ಮಾಡಲು ನಿರಾಕರಿಸಿದರು. ಕೊನೆಗೆ ಕಾಶಿಯನ್ನು ಸೇರಿದೆ. ಅತ್ಯಂತ ದೀನಾವಸ್ಥೆಯಲ್ಲಿರುವ ಪಂಡಿತರೊಬ್ಬರನ್ನು ಭೇಟಿಯಾಗಿ ಇರುವಷ್ಟು ಹೊನ್ನನ್ನು ಕೊಟ್ಟು ವಂದಿಸಿ ನನ್ನ ಉದ್ದೇಶವನ್ನು ತಿಳಿಸಿದೆ. ನನ್ನ ಹರಕು ಮುರುಕು ಭಾಷೆ ಅವರಿಗರ್ಥವಾಯಿತು.”

ಉಕ್ಕಿ ಬಂದ ನಗುವಿನಿಂದ ಗಿರಿನಾಯಕನ ಮಾತು ನಿಂತಿತು. ಇದರಲ್ಲಿ ನಗುವುದಕ್ಕೇನಿದೆ ಯೆಂದು ಅಂಬೆ ಹುಬ್ಬನ್ನು ಮೇಲೇರಿಸಿದಳು. ಗಿರಿನಾಯಕ ನಗುತ್ತಾ ಮುಂದುವರಿಸಿದ: “ಕಾಶಿಯ ಆರಂಭದ ದಿನಗಳ ನೆನಪಾಗಿ ನಗು ತಡೆಯಲಾಗಲಿಲ್ಲ ರಾಜಕುಮಾರಿ. ನನಗೆ ವಿದ್ಯಾದಾನ ಮಾಡಿದ ಕಾಶಿಯ ಆ ಪಂಡಿತರು ಸಮದರ್ಶಿಗಳಾಗಿದ್ದರು. ಅವರು ನನಗೆ ಜನಿವಾರ ತೊಡಿಸಿ ‘ಇದು ನಿನ್ನ ಎರಡನೆಯ ಜನ್ಮ. ನೀನೀಗ ದ್ವಿಜನಾದೆ. ನಿನಗೆ ಬ್ರಹ್ಮದತ್ತನೆಂದು ನಾಮಕರಣ ಮಾಡುತ್ತಿದ್ದೇನ್’ ಎಂದು ಹೇಳಿ ಒಂದಷ್ಟು ಮಂತ್ರಗಳನ್ನು ಕಲಿಸಿದರು. ಕಾಶಿ ವಿದ್ಯಾಪೀಠದಲ್ಲಿ ಬ್ರಹ್ಮದತ್ತನೆಂಬ ಹೆಸರಲ್ಲಿ ನಾಲ್ಕು ವರ್ಷ ಕಲಿತೆ. ನನಗಿಂತಲೂ ಕಪ್ಪಿನ ವಿದ್ಯಾರ್ಥಿಗಳು ಅಲ್ಲಿದ್ದರು. ಬಿಳಿ ಬಣ್ಣದವರು ನಮ್ಮನ್ನು ‘ಆರ್ಯ-ದಸ್ಯು ಸಂಮಿಶ್ರಣ ಸಂತತಿ’ ಎಂದು ಗೇಲಿ ಮಾಡುತ್ತಿದ್ದರು. ನಮ್ಮ ಕಪ್ಪು ಕಪ್ಪು ದೇಹಗಳಲ್ಲಿ ಬಿಳಿ ಬಿಳಿ ಜನಿವಾರಗಳು ಮಿರಿ ಮಿರಿ ಮಿಂಚುತ್ತಿದ್ದುದನ್ನು ನೆನೆದೇ ನಾನು ಆಗ ನಕ್ಕದ್ದು. ಕಾಶಿಯಲ್ಲಿದ್ದಾಗ ಒಮ್ಮೆಯೂ ನಿಮ್ಮನ್ನಾಗಲೀ, ಪ್ರತಾಪಸೇನ ಮಹಾರಾಜರನ್ನಾಗಲೀ ಕಂಡವನಲ್ಲ. ರಾಜಕಾರಣದಲ್ಲಿ ಮುಳುಗಿರುವ ನೀವು ನಮ್ಮಂಥವರ ಕಣ್ಣಿಗೆ ಬೀಳಲು ಹೇಗೆ ಸಾಧ್ಯ? ನಿಮ್ಮ ಅನುಪಮ ಸೌಂದರ್ಯ, ಪುರುಷ ಸದೃಶ ಧೈರ್ಯ ಸಾಮಥ್ರ್ಯಗಳ ಬಗ್ಗೆ ಕೇಳಿದ್ದೆ. ಆಗ ನಿಮ್ಮನ್ನು ನೋಡಬೇಕೆಂಬ ಹಂಬಲ ಮೂಡಿತ್ತು. ಅದು ಹೀಗೆ ಈಡೇರೀತೆಂದು ನಾನು ಕನಸಲ್ಲೂ ಎಣಿಸಿದವನಲ್ಲ. ಕಾಶಿಯ ಮಹಾರಾಜನ ಮಗಳು ನೀವು. ನಿಮಗೆ ಕಾಡಗೆಣಸು ಕೊಟ್ಟೆ. ಆಡ ಹಾಲು ಕೊಟ್ಟೆ. ಮನ್ನಿಸಬೇಕು. ನಿಮ್ಮನ್ನು ಹೇಗೆ ಉಪಚರಿಸಬೇಕೆಂದೇ ತಿಳಿಯುತ್ತಿಲ್ಲ.”

ಅಂಬೆ ಸಂತೈಸುವ ಸ್ವರದಲ್ಲೆಂದಳು: “ಗಿರಿನಾಯಕಾ, ನಾನು ರಾಜಕುಮಾರಿಯಾಗಿ ಆತಿಥ್ಯ ಸ್ವೀಕರಿಸಲು ನಿನ್ನಲ್ಲಿಗೆ ಬಂದವಳಲ್ಲ. ಇಷ್ಟು ನೀಡಿದ್ದೇ ನಿನ್ನ ದೊಡ್ಡತನ. ಹಸಿದವರ ಹೊಟ್ಟೆ ತುಂಬಿಸುವುದಕ್ಕಿಂತ ದೊಡ್ಡ ಧರ್ಮ ಇನ್ನೊಂದಿಲ್ಲ. ಬರಗಾಲದಲ್ಲಿ, ತಿನ್ನಲು ಬೇರೇನೂ ಸಿಗದೆ ಹೋದಾಗ ಬ್ರಹ್ಮರ್ಷಿ ವಿಶ್ವಾಮಿತ್ರರು ಶ್ವಾನಮಾಂಸ ತಿಂದು ಬದುಕಿದರಂತೆ. ಅದು ಆಪಧರ್‍ಮ. ಅದಿರಲಿ. ಈಗ ನಿನ್ನಿಂದ ನನಗೊಂದು ಸಹಾಯವಾಗಬೇಕು. ನಾನು ಯೋಗಿನಿಯಾಗಿ ಶೇಷಾಯುಷ್ಯವನ್ನು ಕಳೆಯಲು ನಿರ್ಧರಿಸಿದವಳು. ವ್ಯವಸ್ಥೆಯನ್ನು ಎದುರಿಸುವ ಶಕ್ತಿಯನ್ನು ನಾನು ಮನೋನಿಗ್ರಹದಿಂದ ಗಳಿಸಿಕೊಳ್ಳಬೇಕಾಗಿದೆ. ನನ್ನ ಪರಿಸ್ಥತಿಯನ್ನು ಅರ್ಥ ಮಾಡಿಕೊಂಡು ಮಾರ್ಗದರ್ಶನ ಮಾಡಬಲ್ಲ ಪರಮ ತಪೋಧನರ ಹುಡುಕಾಟದಲ್ಲಿದ್ದೇನೆ. ನಿನ್ನವರಿಗೆ ನನ್ನ ಪರಿಚಯವನ್ನು ತಿಳಿಸು. ನನ್ನ ಕತೆಯನ್ನು ಮಾತ್ರ ಹೇಳಿ ಬಿಡಬೇಡ. ಇಲ್ಲೇ ಸಮೀಪದ ಆಶ್ರಮದ ತಪಸ್ವಿಯೊಬ್ಬರನ್ನು ಭೇಟಿಯಾಗಲು ಬಂದವಳೆಂದು ಹೇಳು.”

ಗಿರಿನಾಯಕ ಅವರ ಭಾಷೆಯಲ್ಲಿ ಅದೇನೇನೋ ಹೇಳಿದ. ಅದರಲ್ಲಿ ಕಾಶಿ, ಪ್ರತಾಪಸೇನ, ಅಂಬೆ ಎಂಬ ಹೆಸರುಗಳು ಬಂದವು. ಅವನು ಹೇಳುತ್ತಿದ್ದಂತೆ ಅಲ್ಲಿದ್ದವರ ಮುಖಚರ್ಯೆ ಬದಲಾಗುತ್ತಾ ಹೋಯಿತು. ಆಶ್ಚರ್ಯ ಸ್ಥಾಯಿಯಾಯಿತು. ಇವನು ಮಾತು ನಿಲ್ಲಿಸಿದಾಗ ಗಿರಿನಾಯಕನ ತಂದೆ ತಾಯಂದಿರೂ ಸೇರಿದಂತೆ ಎಲ್ಲರೂ ಅಂಬೆಗೆ ಸಾಷ್ಟಾಂಗ ವಂದಿಸಿದರು. ಅಂಬೆ ಆಕ್ಷೇಪಣೆಯ ಭಾವದಲ್ಲಿ ಹೇಳಿದಳು: “ಇದು, ಇದುವೇ ನನಗೆ ಇಷ್ಟವಾಗದ್ದು. ನಾನು ರಾಜಕುಮಾರಿಯಾಗಿರುವುದಕ್ಕೆ ಹೀಗೂ ವಂದಿಸುವುದೆ? ನಿನ್ನ ತಂದೆ-ತಾಯಿ ನನ್ನ ಪ್ರಾಯವನ್ನಾದರೂ ನೋಡಬೇಡವೆ? ಹುಟ್ಟಿನ ಕಾರಣಕ್ಕೆ, ಹಿರಿಯರು ಎಂಬ ಕಾರಣಕ್ಕೆ ನಾವು ಯಾರನ್ನೂ ಗೌರವಿಸಬೇಕಾಗಿಲ್ಲ. ಸಾಧನೆಯನ್ನು ಮಾತ್ರ ಗೌರವಿಸಬೇಕು. ನಿಮ್ಮೊಳಗಿನ ಕೀಳರಿಮೆ ನಿಮ್ಮಿಂದ ಇದನ್ನೆಲ್ಲಾ ಮಾಡಿಸುತ್ತಿದೆ. ಅದರಿಂದಾಗಿಯೇ ನೀನು ಕೇವಲ ಗಿರಿನಾಯಕನಾಗಿ ಉಳಿದು ಬಿಟ್ಟದ್ದು. ಆ ಸಾಲ್ವಭೂಪತಿಯನ್ನು ನೋಡು. ಅವನೊಂದು ಸ್ವತಂತ್ರ ರಾಜ್ಯವನ್ನೇ ಕಟ್ಟಿಬಿಟ್ಟ. ಅದು! ಅದು ನೀವು ದಸ್ಯುಗಳು ಆರ್ಯರಿಗೆ ತೋರಿಸಿ ಕೊಡಬೇಕಾದದ್ದು.”

ಗಿರಿನಾಯಕನಿಗೆ ಅವಳ ಮಾತಿನಿಂದ ಬೇಸರವೇನಾಗಲಿಲ್ಲ: “ರಾಜಕುಮಾರೀ, ಇವರ್ಯಾರೂ ವಿದ್ಯಾ ಪಾರಂಗತರಲ್ಲ. ರಾಜರುಗಳು ದೈವಾಂಶ ಸಂಭೂತರೆಂಬ ನಂಬಿಕೆಯಿಂದ ಹಾಗೆ ಮಾಡಿದ್ದಾರೆ. ನಾನು ನಿಮಗೆ ಅಡ್ಡಬಿದ್ದೆನೆ? ಆದರೆ ರಾಜಕುಂಅರೀ, ನಿಮಗೆ ಲೋಕಾನುಭವ ಏನೇನೂ ಸಾಲದು. ಮೇಲು ವರ್ಗದವರ ಕಾಲು ಹಿಡಿಯದೆ ಕೆಳವರ್ಗದವರು ಬದುಕುವುದು ತೀರಾ ಕಷ್ಟ. ಎಲ್ಲರೂ ಸಮಾನರಾಗಬೇಕಾದರೆ ಶಾಸ್ತ್ರ ನಿರ್ಮಾತೃಗಳು ಸಮಾನತೆಯನ್ನು ಜೀವನ ಮೌಲ್ಯವೆಂದು ಒಪ್ಪಿಕೊಳ್ಳಬೇಕು. ಅದಕ್ಕೆ ಪೂರಕ ಆಧಾರ ಶ್ಲೋಕಗಳನ್ನು ರಚಿಸಿ ಶಾಸ್ತ್ರಗಳಿಗೆ ಸೇರ್ಪಡೆಗೊಳಿಸಬೇಕು. ರಾಜರುಗಳ ಮೂಲಕ ಅದನ್ನು ರೂಢಿಗೆ ತರಬೇಕು. ಧರ್ಮಎನ್ನುವುದು ಶಾಸ್ತ್ರದಲ್ಲಿರುವುದಿಲ್ಲ; ಆಚರಣೆಯಲ್ಲಿರುತ್ತದೆ.”

ಅಂಬೆ ತಲೆದೂಗಿದಳು: “ನೀನು ಹೇಳುತ್ತಿರುವುದೇನೋ ಸರಿಯೇ. ಆದರೆ ನೀನು ಏನನ್ನು ಸೂಚಿಸಬಯಸುತ್ತಿ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ.”

ಗಿರಿನಾಯಕ ವಿವರಣೆಗೆ ತೊಡಗಿದ: “ರಾಜಕುಮಾರೀ, ಆರ್ಯಾವರ್ತದ ರಾಜ ಮಹಾರಾಜರುಗಳು ಮತ್ತು ಇದಮಿತ್ಥಂವೆಂದು ಧರ್ಮಕ್ಕೆ ವ್ಯಾಖ್ಯಾನ ನೀಡುವ ಪುರೋಹಿತರುಗಳು ಸಮಾನತೆಯನ್ನು ಜೀವನ ಮೌಲ್ಯವಾಗಿ ಎಂದಾದರೂ ಸ್ವೀಕರಿಸಲು ಸಾಧ್ಯವೆ? ಇವರ ಧರ್ಮದ ಅಸ್ತಿವಾರವೇ ಅಸಮಾನತೆ. ಆರ್ಯಾವರ್ತದ ರಾಜರುಗಳನ್ನು ಮತ್ತು ಪುರೋಹಿತರುಗಳನ್ನು ಪ್ರಜೆಗಳು ಹೆದರಿಕೆ ಯಿಂದ ಗೌರವಿಸುತಿದ್ದಾರೆ. ವಿದ್ಯೆಯಿಲ್ಲದ ಸ್ತ್ರೀಯರು, ಶೂದ್ರರು ಮತ್ತು ದಸ್ಯುಗಳು ರಾಜರ ಮತ್ತು ಪುರೋಹಿತರ ಅಡಿಯಾಳುಗಳಾಗಿ ಬದುಕುತ್ತಿದ್ದಾರೆ. ಶೋಷಣೆಯನ್ನು ಕರ್ಮಫಲ, ಗ್ರಹಚಾರ, ಹಣೆಬರಹ ಎಂದು ಷಂಡರಾಗಿ ಒಪ್ಪಿಕೊಂಡಿದ್ದಾರೆ. ಧರ್ಮ ಉಳಿಸಿ, ಸದಾ ಭಗವನ್ನಾಮ ಸಂಕೀರ್ತನೆ ಮಾಡಿ ಎಂದು ಹೇಳುತ್ತಿರುವ ಪುರೋಹಿತರುಗಳು ಮತ್ತು ರಾಜರುಗಳು ಹುಟ್ಟಿನ ಕಾರಣದ ಅಸಮಾನತೆಯನ್ನು ಯಾಕೆ ಒಮ್ಮೆಯೂ ಖಂಡಿಸುವುದಿಲ್ಲ? ಖಂಡಿಸಿದರೆ ಅವರ ಭೋಗ ವಿಲಾಸಗಳಿಗೆ ತತ್ವಾರ ಬರುತ್ತದೆ. ಅಸಮಾನತೆಯ ನಿವಾರಣೆಗೆ ಜ್ಞಾನ ಮಾರ್ಗವನ್ನು ಹಿಡಿದವನು ನಾನು. ನನ್ನನ್ನು ಸಾಲ್ವಭೂಪತಿಯೊಡನೆ ಹೋಲಿಸಬೇಡಿ. ಅವನು ಬಾಹುಬಲದಲ್ಲಿ ವಿಶ್ವಾಸವಿಟ್ಟವನು. ಆರ್ಯಾವರ್ತದಲ್ಲೊಂದು ದಸ್ಯುರಾಜ್ಯವಿರುವುದು ಅಸಾಧಾರಣ ಸಾಧನೆಯೆಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ರಾಜನಾದವನು ಯಾವುದೇ ಜಾತಿಯವನಾದರೂ, ಕಾಲಕ್ರಮೇಣ ಕ್ಷತ್ರಿಯನಾಗುತ್ತಾನೆ. ಅವನ ಸುತ್ತ ಪುರೋಹಿತರುಗಳು ಹುತ್ತ ಕಟ್ಟುತ್ತಾರೆ. ಕೊನೆಗವನು ಪುರೋಹಿತರುಗಳು ಪ್ರತಿಪಾದಿಸುವ ರೂಢಧರ್ಮದ ಪ್ರಸಾರಕನಾಗುತ್ತಾನೆ. ಹಾಗಾಗಬಾರದೆಂದೇ ನಾನು ಜ್ಞಾನಮಾರ್ಗವನ್ನು ಆಯ್ದುಕೊಂಡದ್ದು. ಭೀಷ್ಮಾಚಾರ್ಯನನ್ನು ಬಿಟ್ಟರೆ ಆರ್ಯಾವರ್ತದ ಎಲ್ಲಾ ರಾಜರುಗಳನ್ನು ತರ್ಕದಲ್ಲಿ ಸೋಲಿಸಬಲ್ಲೆ. ಇದನ್ನು ಅಹಂ ಎಂದು ಭಾವಿಸಬೇಡಿ. ಆತ್ಮ ಸಂತೃಪ್ತಿಯಿದು. ಜ್ಞಾನ ಗಳಿಕೆಯಲ್ಲಿರುವಷ್ಟು ಸುಖ ಸಂತೋಷ ಬೇರಾವುದರಲ್ಲೂ ಇರಲು ಸಾಧ್ಯವಿಲ್ಲ. ಜ್ಞಾನಕ್ಕೆ ಸಮಾನವಾದುದು ಈ ಲೋಕದಲ್ಲಿ ಏನಿದೆ? ರಾಜ್ಯ ಕಟ್ಟುವುದು, ಅದನ್ನು ಸಾಮ್ರಾಜ್ಯ ವಾಗಿಸಲು ರಕ್ತಪಾತ ನಡೆಸುವುದು, ಸದಾ ಅಪನಂಬಿಕೆಯ, ವಿದ್ವೇಷದ ವಾತಾವರಣದಲ್ಲಿ ಆತ್ಮ ವಂಚನೆಯ ಅನಿಶ್ಚಿತ ಬದುಕನ್ನು ಸಾಗಿಸುವುದು ಇವೆಲ್ಲಾ ಯಾರಿಗೆ ಬೇಕು? ಮಾನವ ಗೋರಿಗಳ ಮೇಲೆ ನಿರ್ಮಿತವಾಗುವ ಯಾವುದೇ ರಾಜ್ಯ ಎಷ್ಟು ದಿನ ಉಳಿದೀತು?”

ಅಂಬೆಗೆ ಗಿರಿನಾಯಕನ ಜೀವನ ದೃಷ್ಟಿಕೋನ ಇಷ್ಟವಾಯಿತು. ಅವಳು ಇಷ್ಟಪಟ್ಟಿದ್ದ ಏಕೈಕ ಪುರುಷ ಸಾಲ್ವಭೂಪತಿಯಲ್ಲಿ ಶೌರ್ಯವಿತ್ತು; ಸುಸಂಸ್ಕೃತ ನಡವಳಿಕೆಯಿತ್ತು. ಆದರೆ ಜ್ಞಾನದ ಕೊರತೆಯಿತ್ತು. ಅವನು ಜ್ಞಾನಿಯಾಗಿರುತ್ತಿದ್ದರೆ ಅವನ ಪ್ರತಿಷ್ಟೆಗಾಗಿ ತನ್ನನ್ನು ತಿರಸ್ಕರಿಸುತ್ತಿರಲಿಲ್ಲವೆಂದು ಅಂಬೆಗನ್ನಿಸಿತು. ಅವನಿಗೆ ಆರ್ಯರ ಹೆಣ್ಣು ಸಿಗಲು ಸಾಧ್ಯವಿಲ್ಲ. ಅದರಲ್ಲೂ ಶಸ್ತ್ರ ಶಾಸ್ತ್ರ ಶಿಕ್ಷಣ ಪಡೆದವಳು ಹೇಗೆ ಸಿಗಲು ಸಾಧ್ಯ? ಪ್ರತಿಷ್ಠೆ ಅನ್ನುವುದು ಮೂರ್ಖರ ಭ್ರಮೆ? ಸಾಲ್ವಭೂಪತಿ ಪರಮ ಮೂರ್ಖ.

ಆ ಭೀಷ್ಮರಲ್ಲಿ ದೇಹ, ಬುದ್ಧಿ, ಮನೋಬಲವಿದೆ. ಅವಿದ್ದೂ ಏನು ಪ್ರಯೋಜನವೆಂದು ಅಂಬೆ ಪ್ರಶ್ನಿಸಿಕೊಂಡಳು. ತಾರುಣ್ಯದ ಮದ ತುಂಬಿ ತುಳುಕುತ್ತಿರುವ ಅರಗುವರಿಯನ್ನು ಷಂಡ ತಮ್ಮನಿಗೆ ತಂದು ಕಟ್ಟುವ ನಿರ್ದಯಿ ಅವರು. ವಾಸ್ತವಪ್ರಜ್ಞೆ ಮತ್ತು ದೂರದೃಷ್ಟಿ ಇಲ್ಲದವರು ಎಂಥ ಆಚಾರ್ಯರು? ಸಾಲ್ವಭೂಪತಿ ಮತ್ತು ಭೀಷ್ಮರನ್ನು ಬೇಕೆಂದೇ ಅಪ್ಪ ದೂರವಿರಿಸಿದ್ದ. ಅಹಂಕಾರ, ಶೌರ್ಯ, ಮದೋನ್ಮತ್ತರಾದ ಇವರು ಅಪ್ಪ ಆಜೀವ ಪರ್ಯಂತ ಕೊರಗಿ ಕರಗ ಬೇಕೆಂದಲ್ಲವೇ ಕಾಶಿಗೆ ಬಂದದ್ದು? ಅಪ್ಪನ ಬಳಿಕ ವಿರೋಧವೇ ಇಲ್ಲದೆ ಕುರುಸಾಮ್ರಾಜ್ಯದೊಳಗೆ ಕಾಶಿ ಸೇರಿಬಿಡುತ್ತದೆ. ಆ ಸಾಲ್ವ ಮತ್ತು ಈ ಭೀಷ್ಮ ತಮ್ಮ ಪ್ರತಿಷ್ಠೆಗಾಗಿ ಇತರರಿಗೆ ನೋವನ್ನುಂಟು ಮಾಡುವವರು. ಜ್ಞಾನದಾಹಿಯಾದ ಈ ಗಿರಿನಾಯಕ ತನ್ನಿಂದಾಗಿ ಯಾರೂ ನೋವುಣ್ಣಬಾರದೆಂದು ಬಯಸುವವನು. ಲೋಕಾ ಸಮಸ್ತಾಃ ಸುಖಿನೋಭವಂತು ದೃಷ್ಟಿಕೋನದವನು. ಅಹಂಕಾರಿಗಳಾದ ಭೀಷ್ಮ, ಸಾಲ್ವರಿಗೆ ಇದೇ ದೃಷ್ಟಿಕೋನವಿರುತ್ತಿದ್ದರೆ ತನಗೆ ಇದೇ ಪಾಡು ಬರುತ್ತಿರಲಿಲ್ಲವೆಂದು ಅಂಬೆ ಅಂದುಕೊಂಡಳು.

“ಗಿರಿನಾಯಕಾ, ನಿನ್ನ ಜೀವನ ದೃಷ್ಟಿಕೋನ ಅತ್ಯುನ್ನತವಾದುದು. ಅದು ನಿನಗೆ ಸಂತೃಪ್ತಿಯನ್ನು ಉಂಟು ಮಾಡಬಹುದು. ಆದರೆ ಒಟ್ಟು ವ್ಯವಸ್ಥೆಯ ಬದಲಾವಣೆಗೆ ಅದರಿಂದಾಗುವ ಪ್ರಯೋಜನ ಅಷ್ಟರಲ್ಲೇ ಇದೆ. ಅಧಿಕಾರವಿಲ್ಲದವರು ತಮ್ಮ ಆಶಯಗಳನ್ನು ಸಾರ್ವತ್ರೀಕರಣ ಗೊಳಿಸಲಾರರು. ಈ ಆರ್ಯಾವರ್ತದ ಕ್ಷತ್ರಿಯರ ಕತೆ ನೋಡು. ಅವರು ದಸ್ಯುಗಳನ್ನು ದಕ್ಷಿಣಕ್ಕೆ ಅಟ್ಟಿದ್ದನ್ನು ದೊಡ್ಡ ಸಾಹಸವೆಂದು ಈಗಲೂ ನೆನಪಿಸಿಕೊಂಡು ಪುಳಕಿತರಾಗುತ್ತಿದ್ದಾರೆ. ಅಲ್ಲಿ ನೀರು ಕಡಿಮೆಯಂತೆ. ನೆಲ ಇಲ್ಲಿನಷ್ಟು ಫಲವತ್ತಾಗಿಲ್ಲವಂತೆ. ಇವರಿಗೆ ಫಲವತ್ತಾದ ನದಿ ಬಯಲೆಲ್ಲಾ ತಮ್ಮದಾಗಬೇಕು; ರೂಪ ಯೌವ್ವನಭರಿತ ಅನಾಘ್ರಾತ ಪುಷ್ಪಗಳು ತಮ್ಮ ಸೊತ್ತಾಗಬೇಕೆಂಬ ವಿಕೃತ ದಾಹ. ಜೂಜನ್ನು, ಮೃಗಬೇಟೆಯನ್ನು ರಾಜಧರ್ಮವೆಂದು ಭಾವಿಸುವ ಅಧರ್ಮಿಗಳಿವರು. ಶ್ರೇಷ್ಠತೆಗೆ ಹುಟ್ಟನ್ನೇ ಆಧಾರವಾಗಿರಿಸಿಕೊಂಡಿರುವ ಅವಿವೇಕಿಗಳು. ಪ್ರತಿಷ್ಠೆಯನ್ನು ಜೀವನ ಮೌಲ್ಯವೆಂದು ಭಾವಿಸುವವರು ಎಂದಾದರೂ ಸಮಾನತೆಯ ಬಗ್ಗೆ ಚಿಂತಿಸುವುದುಂಟೆ? ನಿನ್ನ ಜ್ಞಾನದಿಂದ ನಿನಗೆ ಅಸಮಾನತೆಯ ಅರಿವು ಉಂಟಾಗಿರಬಹುದು. ಅದಕ್ಕಿಂತ ಹೆಚ್ಚಿನದ್ದು ಅದೇನು ಪ್ರಯೋಜನವಾಗಿದೆ ಹೇಳು? ಪಾಪ, ಇಲ್ಲಿ ನಮ್ಮ ಮಾತುಗಳನ್ನು ಅರ್ಥವಾಗದಿದ್ದರೂ ಶ್ರದ್ಧಾ ಭಕ್ತಿಗಳಿಂದ ಕೇಳಿಸಿಕೊಳ್ಳುತ್ತಿರುವವರಿಗೆ ವಿದ್ಯೆಯಿಲ್ಲದ ಅಸಮಾನತೆಯ ಅರಿವೂ ಇಲ್ಲ. ವಿದ್ಯೆ ದಕ್ಕಿದ್ದರೆ ಅಸಮಾನತೆಯ ವಿರುದ್ಧ ಹೋರಾಡಲು ದೊಡ್ಡ ಶಕ್ತಿಯೊಂದರ ಉದಯವಾಗುತ್ತಿತ್ತು. ಈಗ ನಿನ್ನ ಜ್ಞಾನದ ಪ್ರಯೋಜನ ವೈಯಕ್ತಿಕ ಮಟ್ಟಕ್ಕಷ್ಟೇ ಸೀಮಿತವಾಗಿದೆ.

ಗಿರಿನಾಯಕ ಅವಳ ವಾದವನ್ನು ಅಲ್ಲಗಳೆಯಲಿಲ್ಲ. ಅವನ ಮೌನದ ಅರ್ಥವಾಗಿ ಅಂಬೆ ಕಿರು ನಗೆ ಬೀರಿ ಹೇಳಿದಳು: “ಗಿರಿನಾಯಕಾ, ಬಹಳ ಮಾತಾಡಿಬಿಟ್ಟೆ ಎಂದು ಕಾಣುತ್ತದೆ. ಇಲ್ಲಿ ನಾಲ್ಕು ದಿನ ನಿಮ್ಮೆಲ್ಲರೊಂದಿಗೆ ಹಾಯಾಗಿ ಕಳೆಯುವ ಆಸೆ ಮೂಡಿದೆ. ಇಂಥದ್ದೊಂದು ಅನುಭವ ಮುಂದೆ ಜೀವನದಲ್ಲಿ ದೊರಕುತ್ತದೆಯೋ ಇಲ್ಲವೊ? ದಯವಿಟ್ಟು ಉಳಕೊಳ್ಳಲು ನನಗೊಂದು ತಾತ್ಕಾಲಿಕ ವ್ಯವಸ್ಥೆ ಮಾಡುತ್ತೀಯಾ?”
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೇಬು
Next post ಪ್ರಭುದೃಷ್ಟಿ ಹರಿದು ಗಿರಿತುದಿಗೆ ಹೆಮ್ಮೆಯನೆರೆದು

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…