ಪ್ರಭುದೃಷ್ಟಿ ಹರಿದು ಗಿರಿತುದಿಗೆ ಹೆಮ್ಮೆಯನೆರೆದು,
ಹೊನ್ನ ತುಟಿಯೊತ್ತಿ ಹಸಿರೆದೆಗೆ ಮುತ್ತನು ಸುರಿದು,
ಮಂಕುತೊರೆಮೈಗೆ ಬಂಗಾರ ರಸವನು ಬಳಿದು,
ಹೊಳೆವ ಬೆಳಗಿನ ಚೆಲುವ ನೋಡಿರುವೆ ಮೈಮರೆದು.
ಥಟ್ಟನೇಳುವುವು ಕೆಳಗಲೆವ ಕಾರ್ಮೋಡಗಳು
ದಿವ್ಯಮುಖ ಮರೆಸಿ ಕರಿತೆರೆಯಾಗಿ ತೇಲುವುವು,
ಪಶ್ಚಿಮಕೆ ಸರಿಯುವುದು ನೊಂದು ಅವಮಾನದೊಳು
ಸದ್ದಿರದೆ ರವಿಬಿಂಬ ಒಂಟಿ ಇಳೆಯನ್ನುಳಿದು.
ನನ್ನ ಬಾಳಿನಲು ಹಿಂದೊಮ್ಮೆ ಭಾಸ್ಕರನುದಿಸಿ
ಜ್ವಲಿಸಿ ಬೆಳಗಿದ ನನ್ನ ಮುಖಕೆ ಕಾಂತಿಯನೆರೆದು;
ಅದರೊಂದೇ ಗಳಿಗೆ ಮಾತ್ರ, ಮತ್ತೆಲ್ಲಿ ? ಮಸಿ
ಮುಗಿಲು ನಿಂತಿದೆ ನಡುವೆ ಸಂಬಂಧವನೆ ಹರಿದು.
ನನ್ನೊಲುಮೆ ಇದರಿಂದ ಕಣದಷ್ಟೂ ಅಲುಗಿಲ್ಲ ;
ದಿವದ ರವಿಗೇ ಗ್ರಹಣ, ಇಳೆಯ ರವಿಗೇಕಿಲ್ಲ ?
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 33
Full many a glorious morning have I seen