ಮಳೆ ಬರಲಿ ಪ್ರೀತಿಯ ಬನಕೆ
ಅರಳಲಿ ಹೂ ಗಿಡ ಲತೆ ಮರಕೆ

ಅತ್ತು ಕರೆದು ಆಡುವ ಮಾತು
ಬತ್ತಿದ ತೊರೆಯಾಯಿತು ಸೋತು
ಎಷ್ಟು ಉತ್ತಿ ಬಿತ್ತಿದರೇನು
ಸತ್ತ ಬೀಜ ಮೊಳೆವುದೆ ತಾನು?

ಭಾವತೇವವಿಲ್ಲದ ಎದೆಯು
ಹೂವಿಲ್ಲದ ಮುಳ್ಳಿನ ಪೊದೆಯು
ಕಾರಿರುಳಲಿ ನರಳುವ ಬಾನು
ಭಯಗಳು ಹೆಡೆಯಾಡುವ ಕಾನು

ಹಸಿರು ಹೂವ ಹಾಸಿಗೆಯಲ್ಲು
ಕೆರಳದೇನು ದುಂಬಿಯ ಸಿಳ್ಳು?
ಅರಳದೇನು ಜೀವದ ಹೂವು
ಎರೆಯಲೆದೆಗ ಪ್ರೀತಿಯ ಕಾವು

ಬಾನಿನಲ್ಲೆ ಹಾಯಲು ಬಹುದು
ಭೂಮಿ ತೂಕ ಮೀರಲುಬಹುದು
ಪ್ರೀತಿ ನೀತಿ ಒಂದೇ ಇರಲು
ಮಾನವನೆದೆ ಜೇನಿನ ಕಡಲು

***

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)