“ಶಿವಾನುಭವ” ಅಂದರೇನು?

“ಶಿವಾನುಭವ” ಅಂದರೇನು?

ಶಿವಾನುಭವವೆಂದರೆ ಅದೊಂದು ಪತ್ರಿಕೆಯೆಂದು ಬಹು ಜನರಿಗೆ ಗೊತ್ತು. ಆದರೆ ಶಿವನೂ ಅವನ ಅನುಭವವೂ ಕಲ್ಪನಾ ಸೃಷ್ಟಿಯೊಳಗಿನ ಮಾತೇ ಎಂದು ಕಲಿತವರು ಕೈಯೆತ್ತಿ ಹೇಳುವರು. ಶಿವಾನುಭವವು ಒಂದು ಸಿದ್ಧಿಯಾಗಿದ್ದು ಅದನ್ನು ಸಾಧಿಸಿದರೆ ಅದ್ಭುತ ಶಕ್ತಿಗಳು ಲಭಿಸುವವೆಂದೂ ಅವುಗಳಿಂದ ಸಾಮಾಜಿಕ, ರಾಜನೈತಿಕ ಕ್ರಾಂತಿಗಳನ್ನು ಸಹ ಸಾಧಿಸಬಹುದೆಂದೂ ಕೆಲವರು ನಂಬಿದಂತೆ ತೋರುತ್ತದೆ. “ಶಿವಾನುಭವ” ಪತ್ರಿಕೆಯು ೧೪ ವರುಷಗಳಿಂದ ಹೇಳುತ್ತ ಬಂದ ರಾಮಾಯಣವನ್ನೆಲ್ಲ ಕೇಳಿದರೂ ನಾವಿಂದು “ಸೀತೆ ರಾಮನಿಗೇನಾಗಬೇಕು?” ಎಂಬ ಪ್ರಶ್ನೆಯನ್ನು ಉಳಿಸಿಕೊಂಡೇ ಕುಳಿತಿದ್ದೇವೆ. ಆ ಪ್ರಶ್ನೆಯನ್ನು ನನ್ನ ಮಟ್ಟಿಗೆ ಹೀಗೆ ಬಿಡಿಸಿಕೊಳ್ಳಬಹುದು.

ಶಿವಾನುಭವವೆಂದರೆ ಜೀವನು ಶಿವನನ್ನು ಅನುಭವಿಸುವುದು. ಆದರೆ ಜೀವನಿಗೆ ಶಿವನು ಎಲ್ಲಿ ಸಿಗಬೇಕು? ಎಲ್ಲಿಯೂ ಸಿಗುವದಿಲ್ಲ; ಅದಕ್ಕಾಗಿ ಎಲ್ಲಿಗೂ ಹೋಗುವ ಕಾರಣವಿಲ್ಲ; ಯಾವನೂ ಎಲ್ಲಿಗೂ ಹೋಗಲಾರನು. ಸನ್ಯಾಸಿಯೂ ಸಹ ಸಂಸಾರವನ್ನು ತೊರೆದು ಹೋಗುವನೇ ಹೊರತು ಜೀವನವನ್ನು ತೊರೆಯಲಾರನು. ಆದುದರಿಂದ ಜೀವನದಲ್ಲಿಯೇ ಶಿವನನ್ನು ಅನುಭವಿಸಬೇಕೆಂದಾಯ್ತು. ಸಂಸಾರದ ಜಂಜಾಟವನ್ನೆಲ್ಲ ಬಿಟ್ಟುಕೊಟ್ಟು ಕೇವಲ ಶಿವನಿಗಾಗಿಯೇ ಕೈತೊಳಕೊಂಡು ಬೆನ್ನು ಹತ್ತಿದ ಸನ್ಯಾಸಿಗಳಿಗೆ, ಆತನ ಅನುಭವವು ಮುಗಿಲಮಲ್ಲಿಗೆ ಆಗುತ್ತಿರುವಾಗ, ಅರ್ಥ-ಕಾಮಾದಿ ವ್ಯವಹಾರಗಳಲ್ಲಿ ನಿರತರಾದ ಸಂಸಾರಿಗಳಿಗೆ ಶಿವನು ಸಿಗುವನೇ? ಅವರಿಗೆ ಆತನ ಅನುಭವ ಲಭಿಸಬಲ್ಲದೇ? ಶಿವನು ಇರುವನೋ, ಇಲ್ಲವೋ? ಇರಬೇಕೋ, ಇರಬಾರದೋ? ಮೊದಲಾದ ಯಾವ ತೊಡಕುಗಳ ಗೊಂದಲವೂ ನಮಗೆ ಬೇಡ. ಯಾವ ಮನಸ್ಸಿನಿಂದ ಮಾಡಿದ ಕೆಲಸಗಳು ಉಲ್ಲಾಸಪ್ರೇರಿತವೂ, ಉತ್ಸವಪೂರಿತವೂ ಆಗುವವೋ ಅಂಥ ಮನಸ್ಸು ಲಭಿಸಿದರೆ ಸಾಕು. ಅದು ಹೇಳುವಷ್ಟು ಸುಲಭವಲ್ಲವಾದರೂ ಅಂಥ ಏಕಾಗ್ರವಾದ ಮನಸ್ಸೇ ಹಿಗ್ಗಿನ ನೆಲೆ; ಆನಂದದ ಸೆಲೆ; “ಸಂಸಾರ ದಂದುಗ ಹಿಂಗಿ ಪರಮ ಸಂತೋಷದಲ್ಲಿಹುದು.” ಅಲ್ಲಿ ಶಿವನಿಲ್ಲದಿದ್ದರೂ ಶಿವನ ಉಸಿರಿದೆ. ಆ ಉಸಿರಿನಲ್ಲಿ “ಎಲ್ಲರೂ ಒಂದೇ, ನಾವೆಲ್ಲರೂ ಒಂದೇ” ಎಂಬ ಏಕನಾದವಿದೆ. “ತತ್ರಕೋ ಮೋಹಃ ಕಶ್ಶೋಕ ಏಕತ್ವಮನುಪಶ್ಯತೀ” ಎಂಥ ದಿವ್ಯೌಷಧೀ ಸತ್ವವಿದೆ. “ಈಸಬೇಕು ಇದ್ದು ಜೈಸಬೇಕು” ಎನ್ನುವ ತತ್ವವಿದೆ. ನಮ್ಮ ನಿತ್ಯದ ನೂರಾರು ವ್ಯವಹಾರಗಳಿಗೆ ಆ ಉಸಿರು ತಗುಲಿದರೆ, ನಮ್ಮ ಜೀವನವು ಉತ್ತಮಗೊಳ್ಳುವದು; ನಮ್ಮ ಕೃತಿಗಳೆಲ್ಲ ಕಲಾರೂಪಗಳಾಗುವವು. ಕಾಯಕವು ಕೈಲಾಸವಾಗುವದು. ಆ ಮಹಾ ಉಸಿರು ನಮ್ಮ ಶರೀರದ ಕಾಲುಚಂಡನ್ನು ತುಂಬಿಕೊಂಡಾಗ ಅದೆಷ್ಟು ಉಲ್ಲಾಸ ! ಅದೆಷ್ಟು ಉತ್ಸವ! ಅದೆಂಥ ಕಾರ್ಯಶಕ್ತಿ!! ಆಗ ಪ್ರಪಂಚವು ಕ್ರೀಡಾಂಗಣವೇ ಸೈ. ಆ ಅನುಭವವೇ ಶಿವಾನುಭವದ ಮೊದಲ ಹೆಜ್ಜೆ.

ಸತ್ತು ಹುಟ್ಟಿ ಕೆಟ್ಟವರೆಲ್ಲರೂ ದೇವಲೋಕಕ್ಕೆ ಹೋದರೆಂಬ ಬಾಲಭಾಷೆಯ ಕೇಳಲಾಗದು. ಸಾಯದ ಮುನ್ನ ಸ್ವಯವನರಿದಡೆ ದೇವನೊಲಿವ ನಮ್ಮ ಗುಹೇಶ್ವರ.”

ಸತ್ತ ಮೇಲೆ ಸಿಗಬಹುದಾದ ಸ್ವರ್ಗಸುಖದ ಜೀವವಿಮೆಯನ್ನು ಶಿವಶರಣರು ನಂಬಿಲ್ಲ. ಕುಳಿತಲ್ಲಿಯೇ ಕೈಲಾಸದ ಕಿರಣವೊಂದು ಶಕ್ಯವಾದರೆ ಬಂದು ಒಂದು ಸಣ್ಣ ಕೈಲಾಸ ಕಟ್ಟುವಂತೆ ವೈಯುಕ್ತಿಕ ಈಶ್ವರನಾದ ಮಾನವನು ಯತ್ನಿಸತಕ್ಕದ್ದು, ಸಮಾಜ ಪುರುಷನ ಅಸ್ತವ್ಯಸ್ತ ಅಂಗೋಪಾಂಗಗಳನ್ನು ಸಾಂಗ ಸುಂದರವಾಗುವಂತೆ ರಚಿಸಿ ಅದರಲ್ಲಿ ನೀತಿಯ ರಕ್ತ ಸಂಚಾಲನೆಯನ್ನು ಹುಟ್ಟಿಸಿದರು. ಮನಸ್ಸಿನ ತುಟ್ಟತುದಿಗೆ ಮಾತ್ರ ನಿಲುಕುವ ಆ ಚಿತ್ಕಳೆಯನ್ನು ಅತಿ ಪ್ರಯಾಸದಿಂದ ತಮ್ಮೊಳಗೆ ಅಳವಡಿಸಿ ಕೊಂಡರು. ಅದು ಸಮಾಜ ಪುರುಷನ ಜೀವಕಳೆಯಾಯ್ತು. “ಮುಗಿಲಲ್ಲಿ ಹಾರಿದರೂ ಬುವಿಯಲ್ಲಿ ಜಾರು”ವ ಸೌಲಭ್ಯವಿದ್ದ ಜೀವನವು ಮಾತ್ರ ಎಲ್ಲರಿಗೂ ಗ್ರಾಹ್ಯವಷ್ಟೇ!

“ಕಾಗೆ ಒಂದಗುಳ ಕಂಡರೆ ಕರೆಯದೇ ತನ್ನ ಬಳಗವೆಲ್ಲವನು?” ಎನ್ನುವಲ್ಲಿ ಬಳಗವನ್ನು ಕರೆದುಕೊಂಡು ತಿನ್ನಬೇಕೆಂದು ಹೇಳಿದ್ದೇ ಹೊರತು, ಒಂದಗುಳದಲ್ಲಿಯೇ ಎಲ್ಲರೂ ತೃಪ್ತರಾಗಿರಿ; ಬೇರೆ ತುತ್ತು ದೊರಕಿಸುವ ಸಾಹಸ ಬೇಡಿರೆಂದು ಹೇಳಿದ್ದಲ್ಲ. ಬದುಕುವದಕ್ಕಾಗಿ ತಿನ್ನುವುದೂ, ತಿನ್ನುವದಕ್ಕಾಗಿ ಗಳಿಸುವುದೂ ಕಾಯಕದ ಉದ್ದೇಶವಲ್ಲ.

“ಜಂಗಮಕ್ಕೆ ಸವಿಸುವಾತ ಜಾಣನು” ಈ ನುಡಿಗೆ ಜಂಗಮರು ಹೊರೆಯೇರಲಾಗದು. “ಬೇಡುವಾತ ಜಂಗಮನಲ್ಲ”. ಇದರಿಂದ ಭಕ್ತರು ತಪ್ಪಿಸಿಕೊಳ್ಳಲಾರರು- “ಬೇಡಿಸಿ ಕೊಳ್ಳುವವ ಭಕ್ತನಲ್ಲ.” ಎಂದು ಬೇರೆ ಹೇಳಿದ್ದಾರೆ.

“ಕಾಯವೇ ಕೈಲಾಸ, ಕಾಯಕವೇ ಕೈಲಾಸ”

“ಕಾಯಕದಲ್ಲಿ ನಿರತನಾದರೆ ಗುರುದರ್ಶನವಾದರೂ ಮರೆಯಬೇಕು; ದೇವಪೂಜೆಯಾದರೂ ತೊರೆಯಬೇಕು.”

“ತೊರೆಯ ಮೀವಣ್ಣಗಳಿರಾ ತೊರೆಯಿರೋ ಪರಧನ-ಪರಸ್ತ್ರೀಯರ”

“ಪರಸ್ತ್ರೀ ಪಾರ್‍ವತಿಯಂತೆ.”

ಮೊದಲಾದ ನುಡಿಗಳಲ್ಲಿ ಸ್ವರ್ಗಲೋಕಕ್ಕೆ ಹೊರಡುವ ಎತ್ತುಗಡೆಗಿಂತ ಸ್ವರ್ಗವನ್ನು ಜೀವನದಲ್ಲಿ ಕಟ್ಟುವ ಹೋರಾಟವೇ ಮಿಗಿಲಾದದ್ದು ಕಂಡುಬರುತ್ತದೆ. ಸಂಸಾರವೆಂಬುದು ಗಾಳಿಯ ಸೊಡರೆಂದೂ, ಸಿರಿಯೆಂಬುದು ಸಂತೆಯ ಮಂದಿಯೆಂದೂ ಅವರಿಗೆ ಗೊತ್ತಿಲ್ಲದಿಲ್ಲ. ಆದರೆ ಕೂಡಲಸಂಗನ ಪೂಜೆಗೆ ಅವಕಾಶವಿರುವ ಈ ಜೀವನವನ್ನು ಅವ್ಯರ್ಥವನ್ನಾಗಿ ಮಾಡಿಕೊಳ್ಳುವ ಸಾಹಸ ಮಾಡಿದ್ದಾರೆ.

“ಸ್ವರ್ಗಲೋಕ ಮರ್ತ್ಯಲೋಕ ಬೇರಿಲ್ಲ ಕಾಣಿರೊ, ಸತ್ಯ ನುಡಿವುದೇ ಸ್ವರ್ಗ. ಮಿಥ್ಯ ನುಡಿವುದೇ ನರಕ” ಎಂದು ಸ್ವರ್ಗ ನರಕಗಳನ್ನು ಬೆರಳು ಮಾಡಿ ತೋರಿಸಿದ್ದಾರೆ. ಸ್ವರ್ಗವಾಗಲಿ, ನರಕವಾಗಲಿ ಇದ್ದುದೇ ಆದರೆ ಅದು ನಮಗೆ ಸಿಗುವ ಬಗೆ ಹೇಗೆ? ಸಂಸಾರ ನೀಗಿಸಲಾರದವನು ಸ್ವರ್ಗವನ್ನೇನು ತೂಗಿಸುವನು? ಅಂತೇ ಶರಣರು.

“ಇಲ್ಲಿ ಸಲ್ಲುವವನು ಅಲ್ಲಿಯೂ ಸಲ್ಲುವನು” ಎಂದಿದ್ದಾರೆ.

ನಮ್ಮ ಮೈ, ಮೈಮೇಲಿನ ಬಟ್ಟೆ, ನಿದ್ರಿಸುವ ಮನೆ ಇವನ್ನು ಸರಿಯಾಗಿ ಬಳಸಿ ಕೊಳ್ಳಲಿಕ್ಕಾಗದಿದ್ದರೆ, ಸಂಸಾರವೇ ಸಾವಿರ ಮೈಲು ದೂರ ಉಳಿಯುವಾಗ ಕೈಲಾಸವು ಇನ್ನೆಷ್ಟು ಕೋಟಿ ಮೈಲು ದೂರ ಓಡಬೇಕು? ಆದ್ದರಿಂದ ಶರಣರ ಮನೆಗಳಂತೆ- “ಮನೆ ನೋಡಾ ಬಡವರದು; ಮನ ನೋಡಾ ಘನ” ಆಗಿರಬೇಕು. ಬಡವರು, ದುಡ್ಡಿಲ್ಲ, ಒಂಟಿಗರು ಎನ್ನುವ ಕಾರಣಗಳು ಮನಸ್ಸಿಲ್ಲದ ಮಾಟ; ಆಲಸಿಯ ಕುಂಟುನೆವ.

“ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜತುಂಬಿ
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?
ತನುವಿನಲಿ ಹುಸಿತುಂಬಿ, ಮನದೊಳಗೆ ವಿಷಯ
ತುಂಬಿ, ಮನೆಯೊಳಗೆ ಮನೆಯೊಡೆಯನಿಲ್ಲ
ಕೂಡಲಸಂಗಮದೇವಾ”

ಮನದಲ್ಲಿ ಮನೆಯಲ್ಲಿ ದೇವನನ್ನು ಬರಮಾಡಿಕೊಳ್ಳಬೇಕಾದರೆ ಸ್ವಚ್ಛತೆಬೇಕು. ಸ್ವಚ್ಛತೆಯಿದ್ದಲ್ಲಿ ಸ್ವರ್ಗ; ಸ್ವಚ್ಛತೆಯ ಸುಖಭೋಗವೇ ಶಿವಾನುಭವ. ಇಂಥ ಮನೆ- ಮನಗಳ ಸ್ವಚ್ಛತೆಯಲ್ಲಿದ್ದವನು- “ಬ್ರಹ್ಮಪದವಿಯನೊಲ್ಲೆ; ವಿಷ್ಣು ಪದವಿಯನ್ನೊಲ್ಲೆ: ಶರಣರ ಸಂಗವೇಲೇಸೆಂದು” ಹೇಳುವದರಲ್ಲಿ ಆಶ್ಚರ್ಯವೇನು?

ಮನ-ಮನೆಗಳಾದರೆ ತೀರಿತೆ? ಮನೆಯವಳ ಮಾತು ಮರೆಯೋಣವೇ? ದಂಪತಿಗಳು ಎರಡು ಕಣ್ಣು ಇದ್ದ ಹಾಗೆ. ಇಚ್ಚೆಯ ಹೆಂಡತಿಯಿದ್ದರೆ ಸಾಲದು; ಜೊತೆಗೆ ಬೆಚ್ಚನ್ನ ಮನೆಯೂ, ವೆಚ್ಚಕ್ಕೆ ಹಣವೂ ಸೇರಿದರೆ ಸ್ವರ್ಗಕ್ಕೆ ಕಿಚ್ಚು ಹಾಕೆನ್ನುವ ಕೆಚ್ಚು (ಅವಿವಾಹಿತ ಸರ್ವಜ್ಞನಂತೆ) ಬರಬಲ್ಲದು. ಆದರೆ ಅದಕ್ಕೂ ಒಂದಡಿ ಮುಂದೆ ಹೋದರೆ ಉಭಯ ದೃಷ್ಟಿಯಿಂದ ದೃಷ್ಟವ ಕಾಂಬಂತೆ ದಂಪತಿಗಳು ಏಕಭಾವವಾಗಿ ನಿಂದಲ್ಲಿ ಗುಹೇಶ್ವರಲಿಂಗಕ್ಕೆ ಅರ್ಪಿತವಾಯ್ತು. ಸಂಗನಬಸವಣ್ಣ” ಎನ್ನುವದರಲ್ಲಿ ಸ್ವರ್ಗೀಯ ದಾಂಪತ್ಯ ಜೀವನದ ಜೀವಾಳವಾಗಿದೆ.

ಇಂಥ ದಂಪತಿಗಳೂ, “ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಲದೇ?” ಎಂದು ಕೇಳುವ ಪ್ರಭಾವಶಾಲಿಗಳೂ, ‘ಆಯುಷ್ಯ ತೀರಿದಲ್ಲದೆ ಮರಣವಿಲ್ಲ. ಅಂಜಲೇಕೋ ಲೋಕವಿಗುರ್ಭಣೆಗೆ?’ ಎನ್ನುವ ಅಭಯ ಕುಮಾರರೂ ಇರುವ ಲೋಕವೂ ಮರ್ತ್ಯ ಲೋಕವೆಂದೆನ್ನಲು ಯಾರಿಗೆ ಧೈರ್ಯವಿದೆ. ಅದು ಸ್ವರ್ಗವೇ ಸರಿ, ಅಂಥವರಿರುವ ಕಾಲವೇ ನಿಜವಾದ ಕಲಿ(ಗಳ) ಯುಗವಲ್ಲವೇ? ಸುತ್ತುಮುತ್ತು ಎತ್ತ ನೋಡಿದರೂ ಕಾಣಿಸುವುದು ಜನಜಂಗುಳಿಯಲ್ಲ; ಜಂಗಮ-ಲಿಂಗ-ಕೂಡಲಸಂಗರು.

“ಬಸವ ಬಾರಯ್ಯಾ! ಮರ್ತ್ಯಲೋಕದೊಳಗೆ ಭಕ್ತರುಂಟೇ ಹೇಳಯ್ಯಾ! ಮತ್ತಾರೂ ಇಲ್ಲಯ್ಯಾ! ಮತ್ತಾರೂ ಇಲ್ಲಯ್ಯಾ! ನಾನೊಬ್ಬನೇ ಭಕ್ತನು ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ ಜಂಗಮಲಿಂಗ ನೀನೇ ಅಯ್ಯ – ಕೂಡಲಸಂಗಯ್ಯ.”

ಹೀಗೆ ಜೀವನವನ್ನು ಉತ್ತಮಗೊಳಿಸುವ ಒಂದು ಉತ್ಕೃಷ್ಟವಾದ ರಸಾಯನವನ್ನು ಶರಣರು ಸಂಶೋಧಿಸಿದರು ಅದುವೇ ಶಿವಾನುಭವವು. ಯಾರು ಪ್ರತ್ಯಕ್ಷವಾಗಿ ಉತ್ಪಾದಕ ಕಾಯಕವನ್ನು ಕೈಕೊಂಡಿದ್ದಾರೆಯೋ, ಯಾರು ಕಾಯಕಷ್ಟದಿಂದ ಬದುಕುತ್ತಿದ್ದಾರೆಯೋ, ಯಾರ ಬಾಳು ಕಷ್ಟ-ನಷ್ಟ ರೋಗ ರುಜಿನಗಳ ಬೆಂಕಿಯಲ್ಲಿ ಬೇಯುತ್ತಿದೆಯೋ ಅವರಿಗೆ ಈ ಶಿವಾನುಭವ ರಸಾಯನವು ನೆಮ್ಮದಿಯನ್ನುಂಟು ಮಾಡಬಲ್ಲದು. ಎಂಥವನಾದರೂ “ಸಂಕಟದಲ್ಲಿ ವೆಂಕಟರಮಣ” ಎನ್ನುವುದು ಸಹಜ. ಆದರೆ ಸಾಮಾನ್ಯ ಜನರು ಮೈಮುರಿದು ದುಡಿದರೂ ತಿನ್ನಲುಡಲಿಕ್ಕಿಲ್ಲದೆ ನಿರಾಹಾರ ವ್ರತ ತೊಟ್ಟಿರುವಾಗ “ಶಿವಾ| ಶಿವಾ! ಹಾದಿ ತೋರಿಸು” ಎನ್ನದೆ ಗತ್ಯಂತರವೇ ಇಲ್ಲ. ಅಂಥ ಆರ್ತರಿಗೆ ಶಿವಾನುಭವವು – “ಮಾತೇ ವ್ಯಥಾ ಮಾಚಾ ವಿಮೂಢ ಭಾವೋ” ಇತ್ಯಾದಿಯಾಗಿ ಸಾಂತ್ವನಗೊಳಿಸಬಲ್ಲದು. ಆದರೆ “ತಿತ್ತಿರಿ ತುಂಬಿದ ಕೂಳಿನಕೋಟೆ”ಯಲ್ಲಿ ಕುಳಿತು “ಹಾಡುವ ಸಭೆಯಲ್ಲಿ ನರಳುವುದು” ಕೇಳಿಸಲಾರದು. ಬಾಳಿಗೆ ಪ್ರತ್ಯಕ್ಷ ಸಂಬಂಧಿಸಿದ ನಿರಾಶ್ರಿತ ಜೀವಿಗಳ ಬಾಳಿನಲ್ಲಿಯೇ ರಶಿಯದ ಟಾಲ್‌ಸ್ಟಾಯ್‌ರು ಹಳಕು ಕಾಣಲಿಲ್ಲವೇ? ಅಂಥ ನಿರಾಶ್ರಿತ ಜೀವಿಗಳಿಗೆ ಜೀವಶಕ್ತಿಯನ್ನು ಕೊಡಬಲ್ಲ ಆಮೋಘ ಶಕ್ತಿದಾಯಿಯೆಂದರೆ ಶಿವಾನುಭವ. ಅದು ಬಡವರ ಧರ್‍ಮ; ಹಳ್ಳಿಗರ ಧರ್‍ಮ; ಅಶಿಕ್ಷಿತರ ಧರ್‍ಮ. ಅಂತೇ ಅದು ಕರ್ನಾಟಕದ ಸೊತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನು ಬೇಡಲಿ ಹರಿಯೆ!
Next post ಹಸಿರು ಎಲೆಯಲಿ – ೨

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…