ಸಂಭ್ರಮದಲಿ ಬೆಳಕ್ಕಿ ಸಾಲು
ರೆಕ್ಕೆ ಬಿಚ್ಚಿ ಬಾನು ತುಂಬ ಹಾರಾಡಿ
ತಣಿ ತಣಿದು ಊರ ಹೊಲಗದ್ದೆಗಳ
ಸ್ಪರ್ಶಿಸಿ ಬೆಟ್ಟದ ಮೇಲೆ ನೆರಳು ಹಾಯಿಸಿದವು.
ಎಲ್ಲಾ ಜೀವಿಗಳ ನಿಟ್ಟುಸಿರು ಹೊತ್ತ
ಮೋಡಗಳು ಮಳೆ ಬೀಜ ಬಿತ್ತಿವೆ
ಆಷಾಢದ ಸಂಭ್ರಮ ಸಜ್ಜಾಗಿದೆ
ಗಡಿಯಾರದ ಮುಳ್ಳುಗಳು ಹಾಗೆ ಸರಿದುಹೋಗುತ್ತದೆ.
ರಸ್ತೆಯಲಿ ಜನ ಜಾತ್ರೆ ಹಬ್ಬ ಮದುವೆ
ಮುಂಜಾವಿಗೆ ಹಾಗೆ ಒಟ್ಟೊಟ್ಟಿಗೆ ಸಾಗಿ
ಸಂವತ್ಸರದ ನಡುವೆ ಪ್ರಾರಂಭಿಸಿದಾಗ
ಅನುಭವದ ಕಣ್ಣಿನೊಳಗೆ ಹಸ್ತ ಚಿತ್ತ ಸ್ವಾತಿ ಅರಳಿವೆ.
ಹಾಗೆ ಉಳಿದ ದಾರಿ ತೋಟಗದ್ದೆ
ಪಕ್ಷಿ ಸಂಕುಲ ತಮ್ಮ ಹಾಡು ಹಾಡಿವೆ
ತಾಯಿ ಒಡಲ ತುಂಬ ಶಕ್ತಿ ಹರಿದು
ಹರಸಿವೆ ಬಿಗುಬಿನ್ನಾಣಗಳಿರದೆ ಚಿಮ್ಮಿದೆ ಪ್ರೀತಿ.
ಸಾಲು ಸಾಲು ಹಂತೀ ಕಟ್ಟಿ
ಊರಿದ ಬೀಜಗಳು ಮೊಳೆತು ಚಿಗಿತು
ಒಡಲ ತುಂಬ ಹಸಿರು ನವಿಲು ನಾಟ್ಯ
ಕವಿತೆ ಬದುಕು ಎರಡೂ ಖುಷಿಯಿಂದ ಅರಳಿವೆ.
*****