ದುರಾದೃಷ್ಟ ಅದೃಷ್ಟಗಳ ನಡುವೆ
ಬೇಯುತ್ತಿರುವ ‘ಸ್ವಾತಂತ್ರ್ಯ’
ಗೋರಿ ಕಟ್ಟಕೊಳ್ಳುವ ಸ್ವಾಮಿಗಳ
ಮಹಾಪೂರ, ಭೂಕಂಪಗಳಡಿ
ಕೊಳೆಯುವ ಸಹನೀಯರ
ಕನವರಿಕೆಯ ವೃತ್ತಪತ್ರಿಕೆಗಳ
ಅಜ್ಜಿಯ ತೇಲುಗಣ್ಣು
ಮಕ್ಕಳ ವರ್ಷಾಂತ್ಯ ಪರಿಣಾಮ-
ಸ್ವಾತಂತ್ರ್ಯದಡಿಯಲ್ಲಿ ಸಾಯುವ ವಧು
ಕೊಲೆ ಶೀಲ ಹರಣ –
ಕತ್ತಲೆಯೊಳಗೆ ಏಳುವ ಕೊತ್ತಳಗಳು
ಬಿಸಿಲಿನಡಿ ಅಂಧಕಾರದ ಭವಿಷ್ಯ
ಕಣ್ಣಿನ ಗೂಡು, ಒಡಲಾಳು
ಬೊಜ್ಜು ಡಯಟ್‌ಗಳ ಪಟ್ಟಿ
ನಿಂತ ನೀರು, ಹರಿಯುವ ಹೊಳೆ
ಅಳುವು ನಗುವು
ಅಭಿಮಾನ ದುರಭಿಮಾನದ
ಸ್ವಾತಂತ್ರ್ಯದಡಿ ಅನಾಮಿಕರ
ಮುಗ್ಧರ ನೆತ್ತರ ಹರಿಸುವ
ರಾಜಕೀಯ ಮೊಳಕೆಗಳು
ಚಿವುಟಿದಷ್ಟು ನಾಲ್ಕಾಗಿ ಚಿಗಿಯುತ್ತವೆ
ಆಕಾಶಕ್ಕೇರದ ಪ್ರಪಾತಕ್ಕೆ ಬೀಳದ
ತ್ರಿಶಂಕು.
*****