ನಿತ್ಯೋತ್ಸವ ನಡೆಯಲಿ ಜಗ ಚೈತನ್ಯ ದೇಹಿಗೆ
ದಿಟ್ಟ ದೃಷ್ಟಿ ದಿಟ್ಟಿಗಳಿರಲಿ ವೈಶ್ವಿಕತೆಯೆಡೆಗೆ |

ಗಡಿ ಗಡಿಗಳಾಚೀಚೆ ಗೊಡವೆಗಳು ಸಾಕಿನ್ನು
ನವ ಶತಮಾನದಲಿ ನವ ನೇಹದರುಣೋದಯ,
ಇತಿಹಾಸ ಗುರುತಿಸಲು ಬಿಡ ದ್ವೇಷ ಹೆಜ್ಜೆಗಳ
ವರ್ತಮಾನ ದೀಕ್ಷೆಯಲಿ ಭವಿತವ್ಯ ನೋಟವಿರಲಿ, |

ಜಗವೆಂದರೆ ಬರಿಗೋಳ ನಕ್ಷೆ ದೇಶಗಳಲ್ಲ
ದೇಹ- ಗೇಹ ಸಮನ್ವಯ ಸಮರಸಕೆ ಶ್ರೀರಕ್ಷೆ,
ಕುಲ- ಮತ ಪಂಥವಿರದ ಧರ್ಮವಿರಲೆಲ್ಲೆಡೆಯು
ನಿಲ್ಲಲೀ ಗಲೆ ಧರ್ಮದಂಧಾನುಕರಣಾನುಸರಣ |

ನವನವೋತ್ಕ್ರಾಂತಿಯುತ್ಕ್ರಾಂತಿಗಳು
ಅನವರತ ಸಂಕ್ರಮಿಸೆ ಜ್ಞಾನ ವಿಜ್ಞಾನದಲಿ,
ಹಲವು ಪರಿಧಿಗಳಾಚೆ ನೀನಾಗು ಹರಿಕಾರ
ಅನ್ವೇಷಿಜಾಡಿನಲಿ ನಿನ್ನರಿವಿರಲಿ ಸಮಸಾರ |

ಪೌರ್ವಾತ್ಯವೊ-ಪಾಶ್ಚಾತ್ಯವೊ ಹೆಕ್ಕಿ ತೆಗಿ ಸಾರ,
ನೇಪಥ್ಯಕೆ ಇನ್ನಾದರೂ ಸರಿಸು ಮೌಢ್ಯ ಕಂದಾಚಾರ,
ಶಸ್ತ್ರಾಸ್ತ್ರಗಳೇಕಿನ್ನೂ ಮಾನವತೆ ಬೆಸೆವ ಸೊಗಸಿನಲಿ,
ಹಳೇ ಬೇರ ಹೊಸ ಚಿಗುರ ಜೀವನ ಚೈತ್ರ ನಳನಳಿಸಲಿ |
*****

ಗಿರಿಜಾಪತಿ ಎಂ ಎನ್
Latest posts by ಗಿರಿಜಾಪತಿ ಎಂ ಎನ್ (see all)