ಆಕಾಶದೊಂ(ನೊಂ)ದಿಗೆ
ಮಾತಿಗಿಳಿಯಬೇಕೆನ್ನುತ್ತೇನೆ-
ಅವನೇ ಮಾತಿಗಿಳಿಯುತ್ತಾನೆ
ಪ್ರಶ್ನೆಗಳೆಲ್ಲ ಗೊತ್ತು
ಸುಮ್ಮನೆ ನೋಡುತ್ತಿರು ಉತ್ತರ ಗೊತ್ತಾದೀತು
ಬಾಯಿ ಮುಚ್ಚಿಸಿದ

ತೆರೆದ ಕಣ್ಣು ಅವನೆದೆಯ ಮೇಲೆ ನೆಟ್ಟದ್ದಷ್ಟೇ
ಒಂದಗಳು ಕಂಡ ಅವನು
ಕರೆದ ತನ್ನ ಕಾಗೆ ಬಳಗ
ಚಂದ್ರ ಚುಕ್ಕೆ ಸಪ್ತರ್ಷಿಗಳ ಲೋಕ
ಮೋಹಕ ಹೆಸರಿನ
ಗ್ರಹಗತಿಗಳೆಲ್ಲ ಒಕ್ಕರಿಸಿ
ಕಥೆ ಬಿತ್ತರಿಸತೊಡಗಿದಂತೆ
ಮೋಡ ಮಳೆ ಕಾಮನಬಿಲ್ಲಿನ
ಬಾಹುಬಂದನಕೆ ಸಿಲುಕಿಸಿ ನಕ್ಕ

ನಾನು ನಜ್ಜುಗುಜ್ಜಾಗಿ
ಅವನಿಗೆ ಬೈ ಹೇಳಿ
ಕಿಡಿಕಿ ಎಳೆದು ಕರ್ಟನ್ ಸರಿಸಿ
ಕರೆದೆ ಗಗನಸಖಿಗೆ
ಕಾಫಿ ಪ್ಲೀಸ್
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)