ಜೀವನದ ಸಮಯವನ್ನೆಲ್ಲಾ ಹಾರೋ ಹಕ್ಕಿಯ ರೆಕ್ಕೆ ಎಣಿಸಲು ಒಬ್ಬ ಸಾಧಕ ಶಿಷ್ಯ ಶ್ರಮಿಸಿದ. ಎಣಿಸುವದರಲ್ಲಿ ಹಾರಿ ಹೋಗುವ ಹಕ್ಕಿಯ ಕಂಡು ಜಿಗುಪ್ಸೆಗೊಂಡ. ನೀರಿನಲ್ಲಿ ಮುಳುಗಿ ಮೀನುಗಳ ಹಿಂದೆ ಹೋಗಿ ಹೆಜ್ಜೆ ಏಣ್ಣಿಸುವ ಎಂಬ ನಿರ್ಧಾರ ಕೈಗೊಂಡ. ಎಷ್ಟು ವರ್ಷ ಪ್ರಯತ್ನಿಸಿದರೂ ಸಾಧಿಸಲಾಗಲಿಲ್ಲ. ಕೊನೆಗೆ ಭೂಮಿ ಆಳದಲ್ಲಿ ಮನೆಮಾಡಿರುವ ಕ್ರಿಮಿಗಳ ಹೆಜ್ಜೆ ಎಣ್ಣಿಸಲು ಹವಣಿಸಿ ಅದರಲ್ಲೂ ಸೋತು, ಕೊನೆಗೆ ಗುರುವಿನಲ್ಲಿಗೆ ಬಂದ.

ಗುರುಗಳು ಹೇಳಿದರು- “ಶಿಷ್ಯಾ! ನಿನ್ನ ಒಂದು ಒಂದು ಹೆಜ್ಜೆಯ ಎಣಿಸಿಕೊ. ನೆನಪಿನಿಂದ ಹೆಜ್ಜೆಯನ್ನು ಮುಂದಿಡು, ಅಲ್ಲಿ ನಿನ್ನ ಬಾಳ್ವೆಯ ಸಾರ್ಥಕತೆ ಇದೆ. ಪಾದವಿಲ್ಲದ ಮೀನಿಗೆ ನೀರಿನಲ್ಲಿ ಹೆಜ್ಜೆ ಎಲ್ಲಿ? ಕ್ರಿಮಿಕೀಟ ಭೂಮಿಯಲ್ಲಿ ಹುದಿಗಿದಾಗ, ನೀ ಹೆಜ್ಜೆ ಹುಡುಕಿ ಏನು ಪ್ರಯೋಜನ? ಹೆಜ್ಜೆ ಹಿಂದೆ ಹೋಗುವ ಬದಲು ನಿನ್ನ ಹೆಜ್ಜೆಯ ಗಮನ ನಿನಗಿರಲಿ” ಎಂದಾಗ ಗುರುಗಳ ಮಾತು ಶಿಷ್ಯನ ಕಣ್ಣು ತೆರೆಯಿತು.
*****