ಮಳೆ ಬರುವ ಕಾಲಕ್ಕ
ಒಳಗ್ಯಾಕ ಕೂತೇವೊ
ಇಳೆಯೊಡನೆ ಜಳಕ ಮಾಡೋಣ
ನಾವೂನು, ಮೋಡಗಳ ಆಟ, ನೋಡೋಣ.

ಮರಿಗುಡುಗು ಕೆಲೆವಾಗ
ಮಳೆಗಾಳಿ ಸೆಳೆವಾಗ
ಮರಗಿಡಗಳನ್ನು ಎಳೆವಾಗ
ನಾವ್ಯಾಕ, ಮನೆಯಲ್ಲಿ ಅವಿತು ಕೂತೇವೊ.

ಕೋಲ್ಮಿಂಚು ಇಣಿಕಿಣಿಕಿ
ಕಣ್ಕುಣಿಸಿ ಕೆಣಕೆಣಕಿ
ಬಾ ಗೆಣೆಯ ಹೊರಗೆ ಎನುವಾಗ
ಒಳಸೇರಿ ಹರೆ ಮೀರಿದ್ಹಾಂಗ ಕುಳಿತೇವೊ.
*****